ETV Bharat / state

ಸುರಿಯುವ ಮಳೆಯಲ್ಲೂ ಬೆಳಗಾವಿ ಅಗ್ನಿವೀರರ ಆಕರ್ಷಕ ಪಥಸಂಚಲನ

author img

By

Published : Aug 5, 2023, 4:23 PM IST

Updated : Aug 5, 2023, 4:47 PM IST

Even in drizzling Belgaum Agniveers Marchpast
ಸುರಿಯುವ ಮಳೆಯಲ್ಲೂ ಬೆಳಗಾವಿ ಅಗ್ನಿವೀರರ ಆಕರ್ಷಕ ಪಥಸಂಚಲನ

ಜ್ಯೂನಿಯರ್ ಲೀಡರ್ಸ್ ವಿಂಗ್ ಕಮಾಂಡರ್ ಮೇಜರ್ ಜನರಲ್ ಆರ್. ಎಸ್. ಗುರಯ್ಯ ಅವರಿಗೆ ಅಗ್ನಿವೀರರು ಗೌರವವಂದೆನ ಸಲ್ಲಿಸಿದರು.

ಸುರಿಯುವ ಮಳೆಯಲ್ಲೂ ಬೆಳಗಾವಿ ಅಗ್ನಿವೀರರ ಆಕರ್ಷಕ ಪಥಸಂಚಲನ

ಬೆಳಗಾವಿ: ನಗರದ ಮರಾಠಾ ಲಘು ಪದಾತಿ ದಳದಲ್ಲಿ (ಎಂಎಲ್ಐಆರ್​ಸಿ) ತರಬೇತಿ ಪೂರ್ಣಗೊಳಿಸಿದ 'ಅಗ್ನಿವೀರ' ಮೊದಲ ತಂಡದ ನಿರ್ಗಮನ ಪಥಸಂಚಲನ ಶನಿವಾರ ಸುರಿಯುತ್ತಿರುವ ಮಳೆಯ ನಡುವೆಯೇ ಆಕರ್ಷಕವಾಗಿ ನೆರವೇರಿತು. 31 ವಾರ ತರಬೇತಿ ಪಡೆದ 111 ಪ್ರಶಿಕ್ಷಣಾರ್ಥಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಅಣಿಯಾದರು. ಮಳೆ ನಡುವೆಯೂ ಶಿಬಿರಾರ್ಥಿಗಳ ಆಕರ್ಷಕ ಪಥಸಂಚಲನ ಎಲ್ಲರ ಗಮನ ಸೆಳೆಯಿತು.

ತರಬೇತಿ ವೇಳೆ ತಾವು ಕಲಿತ ವಿವಿಧ ಕೌಶಲಗಳು ಹಾಗೂ ಸಾಹಸ‌ ಕಲೆಗಳನ್ನು ಪ್ರದರ್ಶಿಸಿ ತಮ್ಮ ಸಾಮರ್ಥ್ಯವನ್ನು ಪ್ರಶಿಕ್ಷಣಾರ್ಥಿಗಳು ಸಾಬೀತು ಪಡಿಸಿದರು. ಪ್ರತಿಭಾವಂತ ಅಗ್ನಿವೀರರಿಗೆ ಇದೇ ವೇಳೆ ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಲಾಯಿತು. ಅಕ್ಷಯ ಧೀರೆ ಅವರಿಗೆ ನಾಯ್ಕ ಯಶವಂತ್ ಗಾಡಗೆ ವಿಕ್ಟೋರಿಯಾ ಕ್ರಾಸ್ ಮೆಡಲ್ ಪ್ರದಾನ ಮಾಡಲಾಯಿತು.

ಪ್ರಶಿಕ್ಷಣಾರ್ಥಿಗಳಿಂದ ಗೌರವವಂದನೆ ಸ್ವೀಕರಿಸಿ ಮಾತನಾಡಿದ ಜ್ಯೂನಿಯರ್ ಲೀಡರ್ಸ್ ವಿಂಗ್ ಕಮಾಂಡರ್ ಮೇಜರ್ ಜನರಲ್ ಆರ್. ಎಸ್. ಗುರಯ್ಯ ಅವರು, ಭಾರತೀಯ ಸೈನ್ಯದ ಅತ್ಯಂತ ಹಳೆಯ ಪದಾತಿ ದಳ‌ ಇದಾಗಿದೆ. ಇದಕ್ಕೆ ವೈಭವದ ಇತಿಹಾಸವಿದೆ. ಶಿಸ್ತು ಮತ್ತು ದೈಹಿಕ ಸಾಮರ್ಥ್ಯ ಸೈನಿಕರ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ತರಬೇತಿಯು ಶಿಬಿರಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದೆ. ದೇಶಕ್ಕಾಗಿ ಸಮರ್ಪಿತ ಸೇವೆಯೇ ನಮ್ಮ ಜೀವನವಾಗಬೇಕು ಎಂದು ಕರೆ ನೀಡಿದರು.

ದೇಶದ ವಿವಿಧೆಡೆ ತರಬೇತಿ ಪಡೆದ 38 ಸಾವಿರ ಅಗ್ನಿವೀರರು ದೇಶಸೇವೆ ಮಾಡುವುದಾಗಿ ಇಂದು ಪ್ರತಿಜ್ಞೆಗೈಯುತ್ತಿದ್ದಾರೆ. ದೇಶದ ಅನೇಕ ಯುದ್ಧಗಳಲ್ಲಿ ನಮ್ಮ ಹಿರಿಯರು ತ್ಯಾಗ ಬಲಿದಾನದ ಮೂಲಕ ಭಾರತದ ಹೆಸರನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ನೀವೂ ಭಾರತೀಯ ಪರಂಪರೆ ಎತ್ತಿ ಹಿಡಿಯಿರಿ. ಈ ತರಬೇತಿ ನಾಲ್ಕು ವರ್ಷಗಳ ಕೆಲಸಕ್ಕಷ್ಟೇ ನಿಮ್ಮನ್ನು ಸಿದ್ಧಗೊಳಿಸಿಲ್ಲ. ಇಡೀ ಭವಿಷ್ಯಕ್ಕೆ ಉತ್ತಮ ನಾಗರಿಕರಾಗಿ ನಿಮ್ಮನ್ನು ಸಿದ್ಧಗೊಳಿಸಿದೆ. ನಿಮ್ಮ ಯೂನಿಟ್​ಗಳಲ್ಲಿ ನಿಯೋಜನೆ ಆಗ್ತೀರಿ. ಅಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಈ ರೆಜಿಮೆಂಟ್ ಕೀರ್ತಿ ಎತ್ತಿ ಹಿಡಿದು, ಉತ್ತಮ ಸೈನಿಕರಾಗಿ ಹೊರಹೊಮ್ಮಿ ಎಂದು ಕಮಾಂಡರ್ ಮೇಜರ್​ ಜನರಲ್ ಆರ್. ಎಸ್. ಗುರಯ್ಯ ಕಿವಿಮಾತು ಹೇಳಿದರು.

ಎಂಎಲ್​ಐಆರ್​ಸಿ ಬ್ರಿಗೇಡಿಯರ್ ಜಯದೀಪ್ ಮುಖರ್ಜಿ ಸೇರಿದಂತೆ ಹಿರಿಯ ಅಧಿಕಾರಿಗಳು, ಶಿಬಿರಾರ್ಥಿಗಳ ಕುಟುಂಬಸ್ಥರು ಹಾಜರಿದ್ದರು. ಇದೇ ಆವರಣದಲ್ಲಿರುವ ಹುತಾತ್ಮರ ಸ್ಮಾರಕಗಳಿಗೆ ಗೌರವ ಸಮರ್ಪಿಸಲಾಯಿತು.

ಇದನ್ನೂ ಓದಿ: ದೇಶ ಸೇವೆಗೆ ಸನ್ನದ್ಧರಾದ ಅಗ್ನಿವೀರರು: ತರಬೇತಿಯಲ್ಲಿ ಕ್ಷಮತೆ ತೋರಿದ ವೀರರಿಗೆ ಸಿಕ್ತು ಏರ್ ಮಾರ್ಷಲ್ ಕಡೆಯಿಂದ ಬಹುಮಾನ

Last Updated :Aug 5, 2023, 4:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.