ETV Bharat / state

ದೇಶ ಸೇವೆಗೆ ಸನ್ನದ್ಧರಾದ ಅಗ್ನಿವೀರರು: ತರಬೇತಿಯಲ್ಲಿ ಕ್ಷಮತೆ ತೋರಿದ ವೀರರಿಗೆ ಸಿಕ್ತು ಏರ್ ಮಾರ್ಷಲ್ ಕಡೆಯಿಂದ ಬಹುಮಾನ

author img

By

Published : Jun 3, 2023, 5:18 PM IST

ತರಬೇತಿ ಪೂರ್ಣಗೊಂಡ ಅಗ್ನಿವೀರರನ್ನು ಅದ್ಧೂರಿ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು.

Award distribution to heroes by Air Marshal
ವೀರರಿಗೆ ಏರ್ ಮಾರ್ಷಲ್ ಕಡೆಯಿಂದ ಬಹುಮಾನ ವಿತರಣೆ

ವೀರರಿಗೆ ಏರ್ ಮಾರ್ಷಲ್ ಕಡೆಯಿಂದ ಬಹುಮಾನ ವಿತರಣೆ

ಬೆಳಗಾವಿ: ಬೆಳಗಾವಿ ಏರ್​ಮನ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದ ಅಗ್ನಿವೀರರನ್ನು ಅದ್ಧೂರಿಯಾಗಿ ಬೀಳ್ಕೊಡಲಾಯಿತು. ಅಗ್ನಿಪಥ್ ಯೋಜನೆಯಡಿ ದೇಶದಲ್ಲೇ ತರಬೇತಿ ಪೂರ್ಣಗೊಳಿಸಿದ ಮೊದಲ ಅಗ್ನವೀರರು ಎಂಬ ಖ್ಯಾತಿಗೆ ಈ ಶಿಬಿರಾರ್ಥಿಗಳು ಪಾತ್ರರಾಗಿದ್ದಾರೆ. ಸಾಂಬ್ರಾದಲ್ಲಿನ ಏರ್​ಮನ್ ತರಬೇತಿ ಶಾಲೆಯಲ್ಲಿ 22 ವಾರಗಳ‌ ಕಾಲ ತರಬೇತಿ ಪಡೆದ 2675 ಅಗ್ನಿವೀರರ ಬೀಳ್ಕೊಡುಗೆ ಕಾರ್ಯಕ್ರಮ ಶನಿವಾರ ಅದ್ಧೂರಿಯಾಗಿ ನೆರವೇರಿತು.

ತರಬೇತಿ ಅವಧಿಯಲ್ಲಿ ತಾವು ಪಡೆದ ವಿವಿಧ ಕೌಶಲ್ಯಗಳನ್ನು ಅಗ್ನಿವೀರರು ಪ್ರದರ್ಶಿಸಿ, ತಮ್ಮ ಸಾಮರ್ಥ್ಯ ಸಾಬೀತು ಮಾಡಿದರು. ಅಗ್ನಿ ಅವಘಡ ವೇಳೆ ರಕ್ಷಣಾ ಕಾರ್ಯಾಚರಣೆ, ತ್ವರಿತವಾಗಿ ಟೆಂಟ್ ನಿರ್ಮಾಣ, ತುರ್ತಾಗಿ ಬಂದೂಕು ಶಸ್ತ್ರಾಸ್ತ್ರಗಳ ಜೋಡಣೆ, ವಿವಿಧ ಶಸ್ತ್ರಾಸ್ತ್ರಗಳ ಬಳಕೆ, ತುರ್ತು ಕಾರ್ಯಾಚರಣೆ ಶೈಲಿ, ಎದುರಾಳಿಗಳ ಕೈಗೆ ಸಿಕ್ಕಿ ಬಿದ್ದಾಗ ಅವರನ್ನು ಸದೆ ಬಡಿದು ಪಾರಾಗುವುದು ಹೇಗೆ ಎಂಬುದು ಸೇರಿದಂತೆ ಕಠಿಣ ಸಂದರ್ಭಗಳನ್ನು ನಿಭಾಯಿಸುವ ಬಗ್ಗೆ ಅಗ್ನಿವೀರರು ನಡೆಸಿದ ಅಣಕು ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

2022ರ ಡಿಸೆಂಬರ್ 30ರಂದು ಈ ತರಬೇತಿ ಪ್ರಾರಂಭವಾಗಿತ್ತು. 22 ವಾರಗಳ ಕಠಿಣ ತರಬೇತಿ ಪಡೆದ ಅಗ್ನಿವೀರರನ್ನು ಹೃತ್ಪೂರ್ವಕವಾಗಿ ಬೀಳ್ಕೊಟ್ಟು ದೇಶದ ವಾಯುಸೇನೆಗೆ ಸಮರ್ಪಿಸಲಾಯಿತು. ಅಗ್ನಿವೀರರ ತಂದೆ-ತಾಯಿ, ಕುಟುಂಬಸ್ಥರು ಕೂಡ ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಮಕ್ಕಳ ಕೌಶಲ್ಯ, ಸಾಹಸ ಪ್ರದರ್ಶನ ಕಣ್ತುಂಬಿಕೊಂಡು ಪುಳಕಿತರಾದರು. ಬಳಿಕ ನಡೆದ ಆಕರ್ಷಕ ಪಥಸಂಚಲನದಲ್ಲಿ ನಾಲ್ಕೂವರೇ ಕೆಜಿ ತೂಕದ ಬಂದೂಕುಗಳನ್ನು ಲೀಲಾಜಾಲವಾಗಿ ಕೈಯಲ್ಲಿ ಗಿರಕಿ ಹೊಡೆಸಿದ ಅಗ್ನಿವೀರರು ತಮ್ಮ ತೋಳ್ಬಲದ ಮೂಲಕ ಕೈ ಚಳಕ ಪ್ರದರ್ಶಿಸಿದರು.

ತರಬೇತಿ ಅವಧಿಯಲ್ಲಿ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅಗ್ನಿವೀರರಿಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಏರ್ ಮಾರ್ಷಲ್ ಆರ್. ರಾಧೀಶ್ ಅವರು ಪ್ರಶಸ್ತಿ ವಿತರಿಸಿದರು. ಬಳಿಕ ಮಾತನಾಡಿದ ಅವರು, ಮೊದಲ ಬಾರಿ ತರಬೇತಿ ಪೂರ್ಣಗೊಳಿಸಿ ಅಗ್ನಿವೀರರ ತಂಡ ದೇಶ ಸೇವೆಗೆ ಅಣಿಯಾಗಿದೆ. ಈ ಯುವ ತಂಡ ನೋಡಿ ನನಗೆ ಹೆಮ್ಮೆ ಎನಿಸುತ್ತಿದೆ. 2022ರಲ್ಲಿ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆ ಘೋಷಣೆ ಮಾಡಿತ್ತು. ಇದರಡಿ ವಾಯುಸೇನೆಗೆ ಸೇರಲು ದೇಶಾದ್ಯಂತ 7 ಲಕ್ಷ ಯುವ ಜನರು ಮುನ್ನುಗ್ಗಿದ್ದರು. ಇದು ದೇಶದ ಯುವಕರು ವಾಯುಸೇನೆ ಜೊತೆಗೆ ಹೊಂದಿರುವ ಅಭಿಮಾನ ತೋರಿಸುತ್ತದೆ ಎಂದರು.

ಇಲ್ಲಿ ತರಬೇತಿ ಪಡೆದ ಅಗ್ನಿವೀರರಿಗೆ ನಾಲ್ಕು ವರ್ಷ ಸೇವಾವವಧಿ ಇರುತ್ತದೆ. ಎರಡು ಹಂತದಲ್ಲಿ ಇವರಿಗೆ ನಾವು ತರಬೇತಿ ನೀಡಿದ್ದೆವು. ಇದರಲ್ಲಿ ಕೌಶಲ್ಯವೃದ್ಧಿ, ವ್ಯಕ್ತಿತ್ವ ವಿಕಸನ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸುವುದು, ಕ್ಷಮತೆ, ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ, ಸಮನ್ವಯದಿಂದ ಕೆಲಸ ಮಾಡುವುದು ಸೇರಿ ಇನ್ನಿತರ ವಿಷಯಗಳ ಬಗ್ಗೆ ತರಬೇತಿ ನೀಡಲಾಗಿದೆ. ಯೋಗ ಧ್ಯಾನ, ವ್ಯಾಯಾಮಗಳ ಮೂಲಕ ಮಾನಸಿಕ ಮತ್ತು ದೈಹಿಕವಾಗಿ ಅವರನ್ನು ಹುರಿಗೊಳಿಸಲಾಗಿದೆ.

ಇದರ ಪರಿಣಾಮ ಸೇವಾವಧಿ ಮುಗಿದ ನಂತರವೂ ಈ ಯುವ ಪಡೆ ಸಮಾಜಕ್ಕೆ ಉತ್ತಮ ಕಾಣಿಕೆ ಆಗಲಿದೆ. ವಾಯುಪಡೆಯಲ್ಲಿ ಸೇವೆ ಮುಗಿದ ಬಳಿಕ ನಿಮಗೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳು ತೆರೆದುಕೊಳ್ಳುತ್ತೇವೆ. ಇಂತಹ ಸಶಕ್ತ ಯುವ ಪಡೆಯನ್ನು ದೇಶಕ್ಕೆ ನೀಡಿದ ಪಾಲಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಒಂದೇ ಭಾರತ ಶ್ರೇಷ್ಠ ಭಾರತ ಎಂಬ ಕನಸನ್ನು ಸಾಕಾರಗೊಳಿಸಲು ಮತ್ತು ಭಾರತೀಯ ಸೇನೆಯನ್ನು ಇನ್ನಷ್ಟು ಯುವ ಹುಮ್ಮಸ್ಸು ತುಂಬಲು ಅಗ್ನಿವೀರರು ಅಗತ್ಯವಾಗಿದ್ದಾರೆ ಎಂದು ಆರ್.ರಾಧೀಶ್ ಹೇಳಿದರು. ಪ್ರಾಸ್ತಾವಿಕವಾಗಿ ಎರ್ ಆಫೀಸರ್ ಕಮಾಂಡಿಂಗ್ ಎಸ್.ಶ್ರೀಧರ ಮಾತನಾಡಿದರು. ವಾಯುಸೇನೆ ತರಬೇತಿ ಶಾಲೆಯ ವಿವಿಧ ಅಧಿಕಾರಿಗಳು ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ: ಸಮುದ್ರದಲ್ಲಿ ಹೋರಾಟಕ್ಕೆ ಅಗ್ನಿವೀರ್ ಮಹಿಳೆಯರು ಸಜ್ಜು​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.