ETV Bharat / state

Cylinder Blast: ಬೆಳಗಾವಿಯಲ್ಲಿ ಎಲ್​ಪಿಜಿ ಸಿಲಿಂಡರ್ ಸ್ಫೋಟ: ನಾಲ್ವರಿಗೆ ಗಂಭೀರ ಗಾಯ

author img

By

Published : Jul 1, 2023, 12:31 PM IST

Updated : Jul 1, 2023, 3:00 PM IST

ಸಿಲಿಂಡರ್​ ಸ್ಪೋಟಗೊಂಡ ಸ್ಥಳ
ಸಿಲಿಂಡರ್​ ಸ್ಪೋಟಗೊಂಡ ಸ್ಥಳ

ಬೆಳಗಾವಿಯ ಅಡುಗೆ ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಮನೆಯ 4 ಸದಸ್ಯರು ಗಂಭೀರ ಗಾಯಗೊಂಡಿದ್ದಾರೆ.

ಘಟನೆ ಕುರಿತು ಸ್ಥಳೀಯರ ವಿವರ

ಬೆಳಗಾವಿ: ಇಲ್ಲಿನ ಗಾಂಧಿ ನಗರದ ಸುಭಾಷ್​ ಗಲ್ಲಿಯ ಮನೆಯೊಂದರಲ್ಲಿ ಬೆಳಗ್ಗೆ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಗಾಂಧಿ ನಗರದ ಸುಭಾಷ್ ಗಲ್ಲಿಯ ಮಂಜುನಾಥ ನರಸಪ್ಪ ಅಥಣಿ (42), ಪತ್ನಿ ಲಕ್ಷ್ಮೀ (36), ವೈಷ್ಣವಿ (13), ಪುತ್ರ ಸಾಯಿಪ್ರಸಾದ (10) ಗಂಭೀರ ಗಾಯಾಳುಗಳು.

ಮನೆಯಲ್ಲಿದ್ದ ಬಹುತೇಕ ವಸ್ತುಗಳು ಬೆಂಕಿಗಾಹುತಿಗಾಗಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದವು. ಸುಭಾಷ್​ ಗಲ್ಲಿಯ ಕಟ್ಟಡದ ಮೊದಲ ಮಹಡಿಯಲ್ಲಿ ಬಾಡಿಗೆ ಮನೆಯಲ್ಲಿ ಮಂಜುನಾಥ ಕುಟುಂಬ ವಾಸವಿತ್ತು. ಗಾಯಾಳು ಮಂಜುನಾಥ ಅವರು ಬೆಳಗಾವಿಯ ಕೆಎಸ್ ಆರ್.ಟಿಸಿ ಮೊದಲನೇ ಘಟಕದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಬೆಳಗಿನ ಜಾವ ಡ್ಯೂಟಿಗೆ ಹೊರಟಾಗ, ಪತ್ನಿ ಲಕ್ಷ್ಮೀ ಚಹಾ ಮಾಡಲು ಸಿಲಿಂಡರ್ ಗ್ಯಾಸ್ ಉರಿಸಲು ಲೈಟರ್ ಆನ್ ಮಾಡಿದ್ದರು. ಈ ವೇಳೆ ಸಿಲಿಂಡರ್ ಸ್ಫೋಟವಾಗಿ ಪರಿಣಾಮ ಬೆಂಕಿ ಆವರಿಸಿದೆ.

ಘಟನೆಯ ಭೀಕರತೆ ಬಿಚ್ಚಿಟ್ಟಿರುವ ಸ್ಥಳೀಯರು ಬೆಳಗ್ಗೆ 6 ಗಂಟೆ ಸುಮಾರಿಗೆ ಸ್ಫೋಟದ ಸದ್ದು ಕೇಳಿ ಬಂತು. ಹೊರಗೆ ಬಂದು ನೋಡಿದಾಗ ಮನೆ ಕಿಟಕಿ ಗಾಜು ಒಡೆದಿದ್ದವು. ಮನೆಯಲ್ಲಿದ್ದ ಮಹಿಳೆ ಹೊರಗೆ ಬಂದಾಗ ಮೈಯಲ್ಲಿದ್ದ ಬಟ್ಟೆಯಲ್ಲ ಸುಟ್ಟು ಹೋಗಿತ್ತು. ಮನೆಯಲ್ಲಿದ್ದ ನಾಲ್ವರ ಮೈ ಮೇಲೆ ಸುಟ್ಟ ಗಾಯಗಳಾಗಿವೆ ಎಂದಿದ್ದಾರೆ.

ಬಳಿಕ ಮನೆ ಮಾಲೀಕರು 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದಾಗ, ಆಂಬುಲೇನ್ಸ್​ನಲ್ಲಿ ಗಾಯಾಳುಗಳನ್ನು ನಗರದ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗ್ಗೆ ಇಲ್ಲಿಯ ಪರಿಸ್ಥಿತಿ ನೋಡಿ ನಮಗೆಲ್ಲಾ ಕಣ್ಣಲ್ಲಿ ನೀರು ಬಂತು. ಪತಿ ಪತ್ನಿ ಇಬ್ಬರಿಗೂ ಸುಮಾರು ಶೇ. 75ರಷ್ಟು ಸುಟ್ಟ ಗಾಯಗಳಾಗಿವೆ. ಇಬ್ಬರು ಮಕ್ಕಳಿಗೆ ಸುಮಾರು ಶೇಕಡ 40ರಷ್ಟು ಗಾಯಗಳಾಗಿವೆ. ಘಟನೆ ಬಗ್ಗೆ ತನಿಖೆ ಮಾಡಿ ರೇಣುಕಾ ಗ್ಯಾಸ್ ಏಜೆನ್ಸಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಗಾಯಾಳು ಮಂಜುನಾಥ ಕೆಎಸ್‌ಆರ್‌ಟಿಸಿಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಬಡ ಕುಟುಂಬ ಇದ್ದು ಅವರ ಸಹಾಯಕ್ಕೆ ಸಾರಿಗೆ ಇಲಾಖೆ ಮತ್ತು ಸರ್ಕಾರ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪಕ್ಕದ ಮನೆಯ ಪ್ರದೀಪ ಪಾಟೀಲ ಅವರು ಈಟಿವಿ ಭಾರತ ಜೊತೆಗೆ ಮಾತನಾಡಿ, ನಾವು ಬಂದು ನೋಡಿದಾಗ ಬೆಂಕಿ ಹತ್ತಿತ್ತು. ನಿನ್ನೆ ಗ್ಯಾಸ್ ಬಂದಿತ್ತು, ಮನೆಯಲ್ಲಿ ಇಟ್ಟಾಗ ಸೀಲ್ ಲೀಕ್ ಆಗಿ ರಾತ್ರಿ ಎಲ್ಲಾ ರೂಮ್ ಎಲ್ಲಾ ಆವರಿಸಿದೆ‌. ಬೆಳಗ್ಗೆ ಆರು ಗಂಟೆಗೆ ಗ್ಯಾಸ್​ ಉರಿಸಿದಾಗ ಈ ಘಟನೆ ನಡೆದಿದೆ. ಮುಂದಿನ ಮನೆಯ ರೂಮಿನ ಕಿಟಕಿ ಗ್ಲಾಸ್ ಕೂಡ ಒಡಿದಿವೆ ಎಂದು ವಿವರಿಸಿದರು.

ಬೆಂಕಿ ಕಾಣಿಸಿಕೊಂಡ ಮನೆ ಮಾಲೀಕರ ಸಂಬಂಧಿ ಸ್ವರ ಎಂಬುವವರು ಮಾತನಾಡಿ, ನಿನ್ನೆ ಎಚ್.ಪಿ‌. ಗ್ಯಾಸ್ ಕೊಟ್ಟು ಹೋಗಿದ್ದರು. ಲಿಕೇಜ್ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡದೇ ಕೊಟ್ಟು ಹೋಗಿದ್ದಾರೆ ಎಂದು ಆರೋಪಿಸಿದರು. ಯಾರಾದಾದರೂ ಜೀವಕ್ಕೆ ಹಾನಿಯಾದರೆ ಹೇಗೆ..? ನಿನ್ನೆ ಬಂದಿದ್ದ ಗ್ಯಾಸ್ ನಿಂದ ಹೀಗೆ ಅನಾಹುತ ಆಗಿದೆ. ಅದರಲ್ಲಿ ಏನಾದರೂ ದೋಷ ಇದ್ದಿದ್ದಕ್ಕೆ ಈ ರೀತಿ ಅವಘಡ ಆಗಿದೆ ಎಂದು ದೂರಿದರು.

ಒಂದೆಡೆ ಸ್ಥಳೀಯರು ಈ ರೀತಿ ಆರೋಪಿಸುತ್ತಿದ್ದರೆ, ಮತ್ತೊಂದೆಡೆ ಗ್ಯಾಸ್ ಲಿಕೇಜ್ ಆಗಿಲ್ಲ ಎಂದು ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹೇಳುತ್ತಿದ್ದಾರೆ. ರೇಣುಕಾ ಗ್ಯಾಸ್ ಏಜೆನ್ಸಿ ಮ್ಯಾನೇಜರ್ ಶಿವಕುಮಾರ್ ಮಾಧ್ಯಮಗಳ ಜೊತೆಗೆ ಮಾತನಾಡಿ, ನಿನ್ನೆಯೇ ಮನೆಗೆ ಸಿಲಿಂಡರ್ ಡೆಲಿವರಿ ಮಾಡಿದ್ದ ಮಾಹಿತಿ ಇದ್ದು ಪರಿಶೀಲಿಸಬೇಕು. ಗ್ಯಾಸ್ ಲೀಕೇಜ್ ಆಗಿ ಸ್ಫೋಟ ಅಂತೂ ಆಗಿಲ್ಲ. ಗ್ಯಾಸ್ ಸೋರಿಕೆ ಆಗಿದ್ರೆ ಸಿಲಿಂಡರ್‌, ರೆಗ್ಯುಲೇಟರ್‌ಗೆ ಬೆಂಕಿ ಹತ್ತಬೇಕಿತ್ತು. ಸಿಲಿಂಡರ್ ಸ್ಫೋಟಗೊಂಡಿದ್ದರೆ ಇಡೀ ಬಿಲ್ಡಿಂಗ್​ಗೆ ಹಾನಿಯಾಗಬೇಕಿತ್ತು. ಆದರೆ, ಆ ರೀತಿ ಏನೂ ಆಗಿಲ್ಲ. ತನಿಖೆಯಾದ ಬಳಿಕವಷ್ಟೇ ಏನಾಗಿದೆ ಎಂದು ಗೊತ್ತಾಗುತ್ತೆ ಎಂದರು.

ಇನ್ನು ಸ್ಥಳಕ್ಕೆ ರೇಣುಕಾ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಾಳಮಾರುತಿ ಠಾಣೆ ಪೊಲೀಸರು ಕೂಡ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅದ್ಯಾವ ಕಾರಣಕ್ಕೆ ಬೆಂಕಿ ಹತ್ತಿದೆ ಎಂಬುದು ಪೊಲೀಸರ ತನಿಖೆಯಿಂದಲೇ ಗೊತ್ತಾಗಬೇಕಿದೆ.

ಇದನ್ನೂ ಓದಿ: Bus burnt: ರಸ್ತೆ ಅಪಘಾತದಿಂದ ಬಸ್​ಗೆ ಬೆಂಕಿ ಹೊತ್ತಿಕೊಂಡು 25 ಪ್ರಯಾಣಿಕರು ಸಜೀವ ದಹನ.. 8 ಮಂದಿ ಪಾರಾಗಿದ್ದು ಹೇಗೆ?

Last Updated :Jul 1, 2023, 3:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.