ETV Bharat / state

ವೈಕುಂಠ ಏಕಾದಶಿ: ಶ್ರೀನಿವಾಸನ ದರ್ಶನ ಪಡೆದ ಮಹಾನಗರ ಭಕ್ತಸಾಗರ

author img

By

Published : Jan 2, 2023, 10:50 PM IST

Updated : Jan 2, 2023, 11:04 PM IST

vaikuntha-ekadashi-bhaktasagara-the-great-city-where-srinivas-had-darshan
ವೈಕುಂಠ ಏಕಾದಶಿ: ಶ್ರೀನಿವಾಸನ ದರ್ಶನ ಪಡೆದ ಮಹಾನಗರ ಭಕ್ತಸಾಗರ

ವಿಶೇಷ ದಿನದಂದು ವೆಂಕಟೇಶನ ದರ್ಶನ ಪಡೆದ ಭಕ್ತಾಧಿಗಳು- ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯವ್ಯಕ್ತಿಗಳಿಂದ ದೇವರಿಗೆ ಪೂಜೆ-ಕೆಲವು ದೇವಾಲಯದಲ್ಲಿ ಸಾಮನ್ಯ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು.

ಬೆಂಗಳೂರು: ಇಂದು ನಗರದೆಲ್ಲೆಡೆ ಅತ್ಯಂತ ಶ್ರದ್ಧಾ, ಭಕ್ತಿಯಿಂದ ವೈಕುಂಠ ಏಕಾದಶಿ ಆಚರಣೆ ಮಾಡಲಾಯಿತು. ವಿಶೇಷ ಪೂಜೆ, ಪುಷ್ಪಾಲಂಕಾರ, ಭಕ್ತರ ಸಂಭ್ರಮ, ಸಡಗರ, ಪೂಜಾ ವಿಧಿ ವಿಧಾನಗಳು ಹಾಗೂ ವಿವಿಧ ದೇವಾಲಯಗಳಲ್ಲಿ ಅಪಾರ ಸಂಖ್ಯೆಯಲ್ಲಿ ತುಂಬಿದ್ದ ಭಕ್ತರಿಂದ ನಗರ ಕಂಗೊಳಿಸಿತು. ವೈಕುಂಠ ಏಕಾದಶಿ ಜೊತೆಗೆ, ಗೀತಾ ಜಯಂತಿಯೂ ಇದ್ದುದರಿಂದ ದೇಗುಲಗಳಲ್ಲಿ ಸಂಭ್ರಮ ಇನ್ನಷ್ಟು ಹೆಚ್ಚಾಗಿತ್ತು.

ಕೋವಿಡ್ ಹಿನ್ನೆಲೆ ಕಳೆದ ಎರಡು ವರ್ಷದಿಂದ ಅಷ್ಟೊಂದು ವಿಜೃಂಭಣೆ, ಭಕ್ತರ ಗುಂಪುಗೂಡುವಿಕೆಯಿಂದ ಗಮನ ಸೆಳೆಯದ ಹಬ್ಬ, ಈ ಸಾರಿ ಅಪಾರ ಸಂಖ್ಯೆಯ ಭಕ್ತರ ಆಗಮನದಿಂದ ಕಳೆಗಟ್ಟಿತ್ತು. ವಿಶೇಷವೆಂದರೆ ಕೋವಿಡ್‌ ಮಾರ್ಗಸೂಚಿಯನ್ವಯ ಅಂತರ ಕಾಪಾಡಲು ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಕೆಲ ದೇವಾಲಯಗಳಲ್ಲಿ ಸಾಮಾನ್ಯರಿಗೆ, ಹಿರಿಯ ನಾಗರಿಕರಿಗೆ, ಗಣ್ಯರು, ಅತಿ ಗಣ್ಯರಿಗೆ ಪ್ರತ್ಯೇಕ ಸಾಲುಗಳನ್ನು ಮಾಡಲಾಗಿತ್ತು.

ನಗರದೆಲ್ಲೆಡೆ ಹತ್ತಾರು ಶ್ರೀನಿವಾಸ ದೇವಾಲಯಗಳಲ್ಲಿ ಸಾಕಷ್ಟು ಸಂಖ್ಯೆಯ ಭಕ್ತರು ದರ್ಶನ ಪಡೆದರು, ಪೂಜೆ ಮಾಡಿಸಿದರು. ಎಲ್ಲಿಯೂ ಅಹಿತಕರ ಘಟನೆ, ನೂಕು ನುಗ್ಗಲು ಉಂಟಾದ ಬಗ್ಗೆ ಮಾಹಿತಿ ಇಲ್ಲ.

ಎಲ್ಲೆಲ್ಲಿ ಪೂಜೆ : ಇಸ್ಕಾನ್, ಕೋಟೆ ವೆಂಕಟರಮಣಸ್ವಾಮಿ, ಜೆ.ಪಿ. ನಗರದ ತಿರುಮಲಗಿರಿ ದೇವಸ್ಥಾನ ಸೇರಿದಂತೆ ಕೆಲವು ದೊಡ್ಡ ದೇಗುಲಗಳಲ್ಲಿ ಈ ಬಾರಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಹೀಗಾಗಿ ಇತರೆಡೆ ಇರುವ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಸಾಕಷ್ಟು ದೇವಾಲಯಗಳಲ್ಲಿ ಭಕ್ತರು, ರಾಜಕೀಯ ನಾಯಕರು ಭಕ್ತರಿಗೆ ಸರದಿ ಸಾಲಲ್ಲಿ ಇರುವಾಗಲೇ ಲಡ್ಡು ವಿತರಿಸಿದರು. ಮತ್ತೆ ಕೆಲವರು ಹೊಸ ವರ್ಷದ ಕ್ಯಾಲೆಂಡರ್ ಗಳನ್ನು ವಿತರಿಸಿದರು.

ವಿಶೇಷ ನಂಬಿಕೆ : ಧನುರ್ಮಾಸದಲ್ಲಿ ಬರುವ ಈ ಏಕಾದಶಿಯು ವಿಷ್ಣುವು ಯೋಗ ನಿದ್ರೆಯಿಂದ ಎಚ್ಚರಗೊಳ್ಳುವ ದಿನ ಎಂದು ಉಲ್ಲೇಖ ಇದೆ. ದಕ್ಷಿಣ ಭಾರತದಲ್ಲಿ ವೈಕುಂಠ ಏಕಾದಶಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಅದರಂತೆ, ವಿಷ್ಣುವಿನ ದೇಗುಲಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆದವು. ವಿಷ್ಣು ಅಥವಾ ವೆಂಕಟೇಶ್ವರ ದೇವಾಲಯಗಳಲ್ಲಿ ವೈಕುಂಠ ದ್ವಾರ ನಿರ್ಮಿಸಿ, ಆ ಮೂಲಕ ಶ್ರೀಮನ್ನಾರಾಯಣ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಇಸ್ಕಾನ್ ದೇವಾಲಯದಲ್ಲಿ ಇಂದು ಪೂಜೆ ಇದ್ದರೂ, ಸಾಮಾನ್ಯ ಭಕ್ತರಿಗೆ ಪ್ರವೇಶಾವಕಾಶ ಇರಲಿಲ್ಲ. ವಿಶೇಷವಾಗಿ ವೈಕುಂಠ ದ್ವಾರ ನಿರ್ಮಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೈಯ್ಯಾಲಿಕಾವಲ್​ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಸಚಿವ ಡಾ. ಕೆ. ಸುಧಾಕರ್, ಆರ್. ಅಶೋಕ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ , ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌ ಮತ್ತಿತರರು ಇಸ್ಕಾನ್ ಗೆ ಭೇಟಿ ನೀಡಿದ್ದರು.

ರಾಜಾಜಿನಗರದ ಕೈಲಾಸ ವೈಕುಂಠ ಮಹಾಕ್ಷೇತ್ರಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಹಾಲಕ್ಷ್ಮಿ ಬಡಾವಣೆಯ ವೆಂಕಟೇಶ್ವರ ದೇಗುಲಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸೇರಿದಂತೆ ಹಲವು ಸಚಿವರು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.

25 ಸಾವಿರ ಲಡ್ಡು ವಿತರಣೆ: ರಾಜರಾಜೇಶ್ವರಿ ನಗರದ ಕೆಂಗುಂಟೆಯ ಲಕ್ಷೀವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ 25 ಸಾವಿರ ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಲಾಯಿತು. ಮುದ್ದನಪಾಳ್ಯ ವೆಂಕಟೇಶ್ವರ ದೇವಾಲಯ, ಬೆಟ್ಟನಪಾಳ್ಯದ ಕಂಬದ ರಂಗನಾಥಸ್ವಾಮಿ, ಅರೇಹಳ್ಳಿಯ ಹನುಮಗಿರಿಯ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಇಸ್ಕಾನ್ ವಿಶೇಷ : ಇಂದು ರಾಜ್ಯದೆಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ .ಹೀಗಾಗಿ ಇಸ್ಕಾನ್​ನಲ್ಲಿ ಅದ್ಧೂರಿಯಾಗಿ ವೈಕುಂಠ ಏಕಾದಶಿ ಆಚರಣೆ ಮಾಡಲಾಗಿದೆ. ಇಸ್ಕಾನ್ ದೇವಸ್ಥಾನದಲ್ಲಿ ರಾತ್ರಿ 3ಗಂಟೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆದಿವೆ. ಇಂದು ರಾತ್ರಿ 11 ರವರಗೂ ಇಸ್ಕಾನ್​ನಲ್ಲಿ ವಿಶೇಷ ಪೂಜೆಗಳು ನಡೆಯಲಿದೆ.

ಇದನ್ನೂ ಓದಿ: ಕೃತಕ ಆಮ್ಲಜನಕದ ವ್ಯವಸ್ಥೆ: ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೆಲ್ತ್ ಬುಲೆಟಿನ್

Last Updated :Jan 2, 2023, 11:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.