ETV Bharat / state

ಬಾಡಿಗೆಗೆ ಮನೆ ಕೇಳುವ ನೆಪ: ಮನೆಯೊಡತಿಯ ಸರ ದೋಚಿ ಪರಾರಿಯಾದ ಮಹಿಳೆಯರು

author img

By

Published : May 26, 2023, 6:20 PM IST

ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಬಂದ ಮಹಿಳೆಯರಿಬ್ಬರು, ಮನೆಯೊಡತಿಯ ಮೇಲೆ ಹಲ್ಲೆ ಮಾಡಿ ಸರ ದೋಚಿ ಪರಾರಿಯಾದ ಘಟನೆ ನಡೆದಿದೆ.

two-women-robbed-house-owner-chain-and-escaped-in-bengaluru
ಬಾಡಿಗೆಗೆ ಮನೆ ಕೇಳುವ ನೆಪ: ಮನೆಯೊಡತಿಯ ಸರ ದೋಚಿ ಪರಾರಿಯಾದ ಮಹಿಳೆಯರು

ಬೆಂಗಳೂರು: ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಬಂದ ಮಹಿಳೆಯರಿಬ್ಬರು, ಮನೆಯೊಡತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಸರ ಕಿತ್ತುಕೊಂಡು ಪರಾರಿಯಾದ ಘಟನೆ ಇಂದು ಬೆಳಗ್ಗೆ ನಂದಿನಿ ಲೇಔಟ್​​ ಠಾಣಾ ವ್ಯಾಪ್ತಿಯ ಲಗ್ಗೆರೆಯ ಪಾರ್ವತಿ ನಗರದಲ್ಲಿ ನಡೆದಿದೆ. ಮನೆ ಮಾಲಕಿ ಶಾಂತಮ್ಮ ಎಂಬುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪಿಗಳು ಅವರ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಕೋವಿಡ್ ನಿಂದ ಪತಿ ಮೃತಪಟ್ಟಿದ್ದ ಬಳಿಕ ಶಾಂತಮ್ಮ ಮನೆಯಲ್ಲಿ ಒಬ್ಬರೇ ವಾಸವಿದ್ದರು. ನಾಲ್ಕು ಬಾಡಿಗೆ ಮನೆಗಳ ಪೈಕಿ ಎರಡು ಮನೆಗಳು ಖಾಲಿ ಇತ್ತು. ಇಂದು ಮಧ್ಯಾಹ್ನ ಮನೆ ಬಳಿ ಇಬ್ಬರು ಮಹಿಳೆಯರು ಬಾಡಿಗೆಗೆ ಮನೆ ಕೇಳಿಕೊಂಡು ಬಂದಿದ್ದರು. ಮನೆ ತೋರಿಸಲು ಶಾಂತಮ್ಮ ಒಳ ಹೋದಾಗ ಅಲ್ಲಿಯೇ ಇದ್ದ ಕಟ್ಟಿಗೆ ತುಂಡುಗಳಿಂದ ಆಕೆಯ ತಲೆ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಶಾಂತಮ್ಮ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಅವರ ಸರ ಕಿತ್ತುಕೊಂಡು‌ ಪರಾರಿಯಾಗಿದ್ದಾರೆ.

ಸದ್ಯ ಗಾಯಾಳು ಶಾಂತಮ್ಮರನ್ನ ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಸ್ಥಳಕ್ಕೆ ನಂದಿನಿ ಲೇಔಟ್ ಪೊಲೀಸರು ಭೇಟಿ ನೀಡಿದ್ದಾರೆ. ಅಕ್ಕಪಕ್ಕದ ಮನೆಯವರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ‌. ಒಬ್ಬ ಆರೋಪಿ ಮಹಿಳೆ ಕೆಲ ದಿನಗಳ ಹಿಂದೆ ಬಾಡಿಗೆ ಮನೆ ಕೇಳಿಕೊಂಡು ಬಂದಿರುವುದು ಪ್ರಾಥಮಿಕ ವಿಚಾರಣೆ ವೇಳೆ ಕಂಡು ಬಂದಿದ್ದು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಮಹಿಳಾ KAS ಅಧಿಕಾರಿಗೆ ಸಹೋದರನಿಂದಲೇ ಜೀವ ಬೆದರಿಕೆ: ಪ್ರಕರಣ ದಾಖಲು

ಐಪಿಎಲ್ ಬೆಟ್ಟಿಂಗ್ ದಂಧೆಗೆ ಎಳನೀರು ವ್ಯಾಪಾರಿ ಬಲಿ: ಇಂಡಿಯನ್​ ಪ್ರೀಮಿಯರ್ ಲೀಗ್​ (ಐಪಿಎಲ್) ಬೆಟ್ಟಿಂಗ್ ವಿಚಾರದಲ್ಲಿ ಹಣಕ್ಕಾಗಿ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ನಡೆದಿತ್ತು. ಇಲ್ಲಿಯ ಚಿಕ್ಕರಸಿನಕೆರೆ ಗ್ರಾಮದ ನಿವಾಸಿ ಪುನೀತ್ (25) ಕೊಲೆಯಾದ ದುರ್ದೈವಿಯಾಗಿದ್ದು, ಈತ ಎಳನೀರು ವ್ಯಾಪಾರ ಮಾಡುತ್ತಿದ್ದ ಎಂದು ತಿಳಿದುಬಂದಿತ್ತು.

ಐಪಿಎಲ್​ ಬೆಟ್ಟಿಂಗ್​ ಹಣ ಪಡೆಯಲೆಂದು ಬುಧವಾರ ಪುನೀತ್​ ತನ್ನ ಕೆಲ ಸ್ನೇಹಿತರೊಂದಿಗೆ ಹುಲಿಗೆರೆಪುರ ಗ್ರಾಮಕ್ಕೆ ತೆರಳಿದ್ದ. ಆದರೆ, ಈ ಸಂದರ್ಭದಲ್ಲಿ ಸೌಮ್ಯ ಬಾರ್ ಹಿಂಭಾಗ ಕಾಲುವೆ ಬಳಿ ಬಂದಾಗ ಹಣದ ವಿಚಾರಕ್ಕೆ ತನ್ನ ಬೇರೆ ಸ್ನೇಹಿತರ ಜೊತೆ ಗಲಾಟೆ ನಡೆದಿತ್ತು. ಆಗ ಪುನೀತ್​ ತಲೆಭಾಗಕ್ಕೆ ಆಯುಧದಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು.

ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಪುನೀತ್​ನನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಪುನೀತ್ ಗುರುವಾರ ಮೃತಪಟ್ಟಿದ್ದ. ಇದೀಗ ಈ ಘಟನೆ ಸಂಬಂಧ ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ, ಹಣ ನೀಡುವುದಾಗಿ ಹೇಳಿ ಪುನೀತ್​ ತಾವಿದ್ದ ಸ್ಥಳಕ್ಕೆ ಆರೋಪಿಗಳು ಕರೆಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಸದ್ಯ ಈ ಬಗ್ಗೆ ತನಿಖೆ ಆರಂಭಿಸಿರುವ ಪೊಲೀಸರು ಐದಾರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.