ETV Bharat / state

ರಾಜ್ಯದ ಸಹಕಾರಿ ಬ್ಯಾಂಕ್​, ಸೊಸೈಟಿಯಲ್ಲಿ ಸಾವಿರಾರು ಕೋಟಿ ಅಕ್ರಮ: ಗೌರವ್ ವಲ್ಲಭ್

author img

By

Published : Apr 12, 2023, 9:41 PM IST

Updated : Apr 12, 2023, 10:11 PM IST

ಸಹಕಾರಿ ಬ್ಯಾಂಕುಗಳು ಹಾಗೂ ಸೊಸೈಟಿಗಳಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಆರೋಪಿಸಿದರು.

Gaurav Vallabha
ಗೌರವ್ ವಲ್ಲಭ್

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಮಾತನಾಡಿದರು.

ಬೆಂಗಳೂರು: ''ರಾಜ್ಯದಲ್ಲಿ ಸಹಕಾರಿ ಬ್ಯಾಂಕುಗಳು ಹಾಗೂ ಸಹಕಾರಿ ಸೊಸೈಟಿಗಳ ಮೂಲಕ ಸಾವಿರಾರು ಕೋಟಿ ಅಕ್ರಮ ಹಣಕಾಸಿನ ವ್ಯವಹಾರ ನಡೆಯುತ್ತಿವೆ'' ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ತಿಳಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿಂದು ಜಂಟಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

''ಗುತ್ತಿಗೆದಾರರು ಪೂರ್ಣಗೊಂಡ ಕಾಮಗಾರಿಗೆ ಕರ್ನಾಟಕ ಸರ್ಕಾರದಿಂದ ಡಿಡಿ ಪಡೆದು, ಅದನ್ನು ಕೋಆಪರೇಟಿವ್ ಬ್ಯಾಂಕ್‌, ಸಹಕಾರಿ ಸೊಸೈಟಿಗೆ ಸಲ್ಲಿಸಿ, ಸೊಸೈಟಿಯು ಆ ಚೆಕ್‌ಗೆ ಹಣವನ್ನು ನೀಡಿದೆ. ಈ ಹಣವನ್ನು ಯಾವ ಕಾರಣಕ್ಕೆ ಬೇಕಾದರೂ ಬಳಸಬಹುದು. ಇದು ಕಪ್ಪು ಹಣವಾಗಿದ್ದು, ತೆರಿಗೆ ಪಾವತಿಯಾಗದ ಹಣವಾಗಿದೆ. ಸಹಕಾರಿ ಬ್ಯಾಂಕುಗಳೆಲ್ಲವೂ ಕರ್ನಾಟಕ ಸರ್ಕಾರದ ಸಹಕಾರಿ ಸಂಘಗಳ ಉಸ್ತುವಾರಿಯಲ್ಲಿ ಬರಲಿದ್ದು, ಈ ವಿಚಾರವಾಗಿ ಸರ್ಕಾರ ಉತ್ತರ ನೀಡಬೇಕು. ಸಾವಿರ ಕೋಟಿ ಹಣದ ಮೂಲವನ್ನು ಮರೆಮಾಚಲಾಗಿದೆ. ಸಿಬಿಡಿಟಿ ಪ್ರಕಾರ ಸಹಕಾರಿ ಬ್ಯಾಂಕುಗಳಲ್ಲಿ ಸಾವಿರ ಕೋಟಿ ರೂ.ನಷ್ಟು ಹಣ ಅಕ್ರಮವಾಗಿ ವ್ಯವಹಾರ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಸರ್ಕಾರಕ್ಕೆ ಐದು ಪ್ರಮುಖ ಪ್ರಶ್ನೆಗಳನ್ನು ಕೇಳಬಯಸುತ್ತದೆ'' ಎಂದರು.

ಶೇ 40 ಕಮಿಷನ್ ಪಡೆಯಲು ಅಕ್ರಮ- ಆರೋಪ: ಸಹಕಾರಿ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಅಕ್ರಮ ಹಣದ ವ್ಯವಹಾರ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕೂತಿರುವುದೇಕೆ? ಶೇ 40ರಷ್ಟು ಸರ್ಕಾರ ಈ ವಿಚಾರದಲ್ಲಿ ಜಾಣಕುರುಡುತನ ಪ್ರದರ್ಶಿಸುತ್ತಿರುವುದೇಕೆ? ಮೌನವಾಗಿರುವುದೇಕೆ? ಇಷ್ಟು ದೊಡ್ಡ ಅಕ್ರಮ ನಡೆದಿದ್ದರೂ ಇದುವರೆಗೂ ಸಿಬಿಡಿಟಿ ಯಾಕೆ ಸಹಕಾರಿ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿಲ್ಲ? ಸಿಬಿಡಿಟಿ ಇದುವರೆಗೂ ಯಾಕೆ ತನಿಖೆ ಮಾಡಿಲ್ಲ? ಈ ರೀತಿ ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳಲು ಸಿಬಿಡಿಟಿಗೆ ನಿರ್ದೇಶನ ನೀಡಿರುವವರು ಯಾರು? 40% ಕಮಿಷನ್ ಪಡೆಯುವ ಉದ್ದೇಶದಿಂದ ಈ ಅಕ್ರಮ ಹಣದ ವ್ಯವಹಾರದ ಮೂಲವನ್ನು ಮರೆಮಾಚಲಾಗಿದೆಯೇ? ಈ ಹಣ ಎಲ್ಲಿಗೆ ಹೋಗುತ್ತಿದೆ? 2023ರ ಫೆಬ್ರವರಿಯಲ್ಲಿ ಸಹಕಾರಿ ಸಚಿವರಿಗೆ ಸಹಕಾರಿ ಬ್ಯಾಂಕುಗಳಲ್ಲಿನ ಹಣಕಾಸು ಅವ್ಯವಹಾರದ ಬಗ್ಗೆ ಪ್ರಶ್ನೆ ಕೇಳಿದಾಗ, ಈ ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸುವುದಾಗಿ ತಿಳಿಸಲಾಗಿತ್ತು. ಈ ಆಶ್ವಾಸನೆ ನೀಡಿ 2 ತಿಂಗಳು ಕಳೆದರೂ ಇದುವರೆಗೂ ತನಿಖೆ ಹಸ್ತಾಂತರವಾಗಿಲ್ಲ ಯಾಕೆ? ತನಿಖೆ ಹಸ್ತಾಂತರವಾಗಿದ್ದರೆ ತನಿಖೆ ಯಾವ ಹಂತದಲ್ಲಿದೆ? ಎಂದು ಪ್ರಶ್ನಿಸಿದರು.

ಬಿಜೆಪಿ ವಿರುದ್ಧ ಗೌರವ್ ವಲ್ಲಭ್ ಗರಂ: ಕಳೆದ 3ರಿಂದ 4 ವರ್ಷಗಳಿಂದ ಸಹಕಾರಿ ಬ್ಯಾಂಕುಗಳಲ್ಲಿ ಅಕ್ರಮ ನಡೆಯುತ್ತಿದ್ದು, ಇದು ಬಿಜೆಪಿಯ ಪ್ರಾಯೋಜಕತ್ವ ಹಾಗೂ ಸಹಭಾಗಿತ್ವದಲ್ಲಿ ನಡೆಯುತ್ತಿದೆಯೇ? ಸಹಕಾರಿ ಬ್ಯಾಂಕು ಹಾಗೂ ಸೊಸೈಟಿಗಳಲ್ಲಿ ಚೆಕ್ ಹಾಗೂ ಡಿಡಿ ನಗದೀಕರಣವಾಗುವಾಗ ಕೆವೈಸಿ ನಿಯಮಾವಳಿಗಳ ಪಾಲನೆಯಾಗಿಲ್ಲ. ಆದರೂ ರಾಜ್ಯ ಸರ್ಕಾರ ಮೌನವಾಗಿದೆ. ಈ ಸರ್ಕಾರದ ಅಕ್ರಮದ ಬಗ್ಗೆ ದಿನನಿತ್ಯ ಒಂದಲ್ಲೊಂದು ಅಕ್ರಮ ಬೆಳಕಿಗೆ ಬರುತ್ತಲೇ ಇದೆ. ಈ 40% ಕಮಿಷನ್ ಸರ್ಕಾರಕ್ಕೆ ರಾಜ್ಯದ ಜನ ತಕ್ಕ ಪಾಠ ಕಲಿಸಲಿದ್ದು, ಬಿಜೆಪಿ ಮುಂದಿನ ಚುನಾವಣೆಯಲ್ಲಿ 40ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವುದಿಲ್ಲ ಎಂದರು.

ರೋಹನ್ ಗುಪ್ತಾ ಮಾತನಾಡಿ, ''ಈ ಸರ್ಕಾರ 40% ಸರ್ಕಾರವಾಗಿದ್ದು, ರಾಜ್ಯದ ಜನ ಬೇಸತ್ತಿದ್ದಾರೆ. ದಿನನಿತ್ಯ ಒಂದಲ್ಲಾ ಒಂದು ಕ್ಷೇತ್ರದಲ್ಲಿ ಅಕ್ರಮ ನಡೆಯುತ್ತಲೇ ಇವೆ. ಇಂದು ಸಹಕಾರಿ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಹಣ ಅಕ್ರಮ ನಡೆದಿದ್ದು, ಸರ್ಕಾರ ಈ ವಿಚಾರವಾಗಿ ಮೌನವಾಗಿದೆ. ಕಳೆದ 3-4 ವರ್ಷಗಳಿಂದ ಅನೇಕ ಇಂತಹ ಪ್ರಕರಣ ನಡೆದಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಚಾರವಾಗಿ ಸದನದಲ್ಲಿ ಶಾಸಕರು ಪ್ರಶ್ನಿಸಿದಾಗ ಸರ್ಕಾರ ಈ ಕುರಿತ ತನಿಖೆಯನ್ನು ಸಿಬಿಐಗೆ ನೀಡುವುದಾಗಿ ಹೇಳಿತ್ತು. ಆದರೆ ನೀಡಲಿಲ್ಲ. ಪ್ರತಿ ಪಕ್ಷದ ನಾಯಕರ ವಿರುದ್ಧ ಸಣ್ಣ ಆರೋಪ ಬಂದರೂ ಈ ತನಿಖಾ ಸಂಸ್ಥೆಗಳು ಕಾಲಹರಣ ಮಾಡದೇ ತನಿಖೆ ಆರಂಭಿಸುತ್ತವೆ. ಇಲ್ಲಿ ವರ್ಷಾನುಗಟ್ಟಲೆಯಾದರೂ ಯಾವುದೇ ಕ್ರಮವಿಲ್ಲ. ಇದು ಬಿಜೆಪಿ ಸರ್ಕಾರದ ಪ್ರಾಯೋಜಕತ್ವದಲ್ಲೇ ನಡೆಯುತ್ತಿದ್ದು, ಈ ಭ್ರಷ್ಟ ಸರ್ಕಾರವನ್ನು ರಾಜ್ಯದ ಜನ ಕಿತ್ತೊಗೆಯಲಿದ್ದಾರೆ'' ಎಂದು ಕಿಡಿಕಾರಿದರು.

ಭಾಸ್ಕರ್ ರಾವ್-ಸುನಿಲ್ ನಡುವೆ ವ್ಯತ್ಯಾಸ ಕಾಣುತ್ತಿಲ್ಲ: ''ಬಿಜೆಪಿ ಚಾಮರಾಜಪೇಟೆ ಅಭ್ಯರ್ಥಿ ನಿವೃತ್ತ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ರೌಡಿ ಶೀಟರ್ ಸೈಲೆಂಟ್ ಸುನೀಲನ ಬೆಂಬಲ ಕೋರುವುದಾಗಿ ಹೇಳಿರುವ ಬಗ್ಗೆ ಕೇಳಿದಾಗ ಅದಕ್ಕೆ ಉತ್ತರಿಸಿದ ರಮೇಶ್ ಬಾಬು ಅವರು, ‘ಕರ್ನಾಟಕ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಓರ್ವ ಐಎಎಸ್ ಹಾಗೂ ಓರ್ವ ಐಪಿಎಸ್ ಅಧಿಕಾರಿಗಳನ್ನು ಕಣಕ್ಕಿಳಿಸಿದೆ. ಈಗಾಗಲೇ ಕೊರಟಗೆರೆಯಿಂದ ಸ್ಪರ್ಧಿಸುತ್ತಿರುವ ಮಾಜಿ ಅಧಿಕಾರಿ ಅನೀಲ್ ಕುಮಾರ್ ಅವರ ವಿರುದ್ಧ ಸಾವಿರಾರು ಕೋಟಿ ಅಕ್ರಮದ ಆರೋಪವಿದೆ. ಇನ್ನು ಚಾಮರಾಜಪೇಟೆಯಲ್ಲಿ ಸ್ಪರ್ಧಿಸುತ್ತಿರುವ ಮಾಜಿ ಪೊಲೀಸ್ ಆಯುಕ್ತರು ರೌಡಿ ಶೀಟರ್ ಬೆಂಬಲ ಕೋರಲು ಅವರ ಮನೆಗೆ ಹೋಗುತ್ತಿರುವುದನ್ನು ನೋಡಿದರೆ ಅವರಿಬ್ಬರ ಮಧ್ಯೆ ಯಾವುದೇ ವ್ಯತ್ಯಾಸ ನಮಗೆ ಕಾಣುತ್ತಿಲ್ಲ'' ಎಂದು ರೋಹನ್ ಗುಪ್ತಾ ಆರೋಪಿಸಿದರು.

ಬಿಜೆಪಿ ಕ್ರಿಮಿನಲ್​ಗಳಿಗೆ ಟಿಕೆಟ್ ನೀಡುವ ತಂತ್ರ: ''ಕಳ್ಳರು ಕಳ್ಳರು ಸಂತೆಗೆ ಹೋದರು ಎಂಬ ಕನ್ನಡದ ಗಾದೆ ಮಾತಿನಂತೆ ಒಬ್ಬ ಕಳ್ಳರು ಮತ್ತೊಬ್ಬ ಕಳ್ಳರ ಬಳಿ ಹೋಗಿದ್ದಾರೆ. ಇನ್ನು ಬಿಟಿಎಂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಇರುವ ಕ್ರಿಮಿನಲ್ ಕೇಸ್ ಹಾಗೂ ಅವುಗಳ ಆರೋಪಪಟ್ಟಿಯನ್ನು ನಾನು ಮಾಧ್ಯಮಗಳ ಮುಂದೆ ನೀಡಿದ್ದೆ. ಆದರೂ ಅವರಿಗೇ ಟಿಕೆಟ್ ನೀಡಲಾಗಿದೆ. ಈ ಹಿಂದೆ ಬಿಜೆಪಿಯ ಶೇ.35ರಷ್ಟು ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣಗಳಿದ್ದವು. ಈಗ ಚಿತ್ತಾಪುರದಲ್ಲಿ ರೌಡಿಶೀಟರ್​ಗೆ ಟಿಕೆಟ್ ನೀಡಿದ್ದಾರೆ. ಮಧುಗಿರಿಯಲ್ಲಿ ಐಎಂಎ ಕೇಸ್​ನಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಗೆ ಟಿಕೆಟ್ ನೀಡಲಾಗಿದೆ. ಇನ್ನು ಅದೇ ಪ್ರಕರಣದಲ್ಲಿ ಆರೋಪ ಹೊತ್ತಿದ್ದ ರೋಷನ್ ಬೇಗ್ ಅವರನ್ನು ಬಿಜೆಪಿಗೆ ಕರೆದುಕೊಂಡು ಹೋಗಲಾಗಿದೆ. ಬಿಜೆಪಿ ಕ್ರಿಮಿನಲ್​ಗಳಿಗೆ ಟಿಕೆಟ್ ನೀಡುವ ತಂತ್ರ ಅನುಸರಿಸುತ್ತಿದೆ. ಹೀಗಾಗಿ ಬಿಜೆಪಿ ಇದನ್ನು ಬಹಿರಂಗವಾಗಿ ಹೇಳಿದರೆ ಮತ ಯಾರಿಗೆ ಹಾಕಬೇಕು ಎಂದು ಜನ ತೀರ್ಮಾನ ಮಾಡುತ್ತಾರೆ’ ಎಂದು ರೋಹನ್ ಗುಪ್ತಾ ತಿಳಿಸಿದರು.

ಇದನ್ನೂ ಓದಿ: ಫ್ಯಾಮಿಲಿ ಪಾಲಿಟಿಕ್ಸ್: 20ಕ್ಕೂ ಹೆಚ್ಚು ರಕ್ತ ಸಂಬಂಧಿ ಅಭ್ಯರ್ಥಿಗಳಿಗೆ ಬಿಜೆಪಿ ಮಣೆ

Last Updated :Apr 12, 2023, 10:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.