ETV Bharat / state

ಪ್ರಚಾರದಲ್ಲಿ ಭಾಗವಹಿಸದಂತೆ ಶೋಭಾ ಕರಂದ್ಲಾಜೆಗೆ ಸೂಚಿಸುವಂತೆ ಚುನಾವಣಾ ಆಯೋಗಕ್ಕೆ ಸಿದ್ದರಾಮಯ್ಯ ಒತ್ತಾಯ

author img

By

Published : Apr 27, 2023, 6:05 PM IST

Etv Bharat
Etv Bharat

ಶೋಭಾ ಕರಂದ್ಲಾಜೆ ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸದಂತೆ ಸೂಚಿಸುವಂತೆ ಚುನಾವಣಾ ಆಯೋಗಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಬೆಂಗಳೂರು : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಯಾವುದೇ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸದಂತೆ ತಡೆಯಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿ ಚುನಾವಣೆ ನಡೆಸುತ್ತಿರುವುದು ಚುನಾವಣಾ ಆಯೋಗವೋ? ಭಾರತೀಯ ಜನತಾ ಪಕ್ಷವೋ? ಪಕ್ಷದ ಪದಾಧಿಕಾರಿಗಳು ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳನ್ನು ನಿರ್ಧರಿಸುವುದಾ? ಬಿಜೆಪಿ ಪರ ಮತ್ತು ವಿರೋಧಿ ಮತದಾರರು ಇರುವ ಮತಗಟ್ಟೆಗಳನ್ನು ಗುರುತಿಸುವುದಾ? ಎಂದು ಪ್ರಶ್ನಿಸಿದ್ದಾರೆ.

ತಮ್ಮ ಪಕ್ಷದ ಪರವಾಗಿಲ್ಲದ ಮತದಾರರು ಇರುವ ಮತಗಟ್ಟೆಗಳಲ್ಲಿ‌ ಭದ್ರತೆಯ ನೆಪದಲ್ಲಿ ಕೇಂದ್ರ ಸೇನಾಪಡೆಗಳನ್ನು ನಿಯೋಜಿಸಿ ಮತದಾರರನ್ನು ಬೆದರಿಸಿ ಅವರು ಮತದಾನ ಮಾಡದಂತೆ ತಡೆಯುವುದು ಈ ಪತ್ರದ ದುರುದ್ದೇಶವಾಗಿದೆ. ಚುನಾವಣಾ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮತ್ತು ವಿಡಿಯೋ ರೆಕಾರ್ಡಿಂಗ್ ಮಾಡುವ ಹೊಣೆ ಚುನಾವಣಾ ಆಯೋಗದ್ದಲ್ಲವೇ? ಇದನ್ನು ನಡೆಸಲು ರಾಜಕೀಯ ಪಕ್ಷಕ್ಕೆ ಅನುಮತಿ ಕೊಟ್ಟವರು ಯಾರು? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೇ ಈ ಪತ್ರ ಬರೆದಿರುವುದನ್ನು ನೋಡಿದರೆ ಕೇಂದ್ರ ಸರ್ಕಾರವೇ ಈ ಅಕ್ರಮ ಚಟುವಟಿಕೆಯಲ್ಲಿ ಶಾಮೀಲಾಗಿರುವುದು ಸ್ಪಷ್ಟವಾಗಿದೆ. ಕೇಂದ್ರ ಚುನಾವಣಾ ಆಯುಕ್ತರು ತಕ್ಷಣ ಮಧ್ಯೆಪ್ರವೇಶಿಸಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ವಿಚಾರಣೆಗೊಳಪಡಿಸಿ ಅವರು ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸದಂತೆ ನಿಷೇಧಿಸಬೇಕು. ಅವರು ಪಕ್ಷದ ನಾಯಕರು ಮತ್ತು ಅಭ್ಯರ್ಥಿಗಳಿಂದ ಪಡೆದಿರುವ ಮಾಹಿತಿಯನ್ನು ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ಸಿದ್ಧಾಂತವು 'ಹಾವು ಇದ್ದಂತೆ' ಎಂದಿದ್ದೇನೆಂದ ಖರ್ಗೆ: ಪ್ರಧಾನಿಯವರ ಕ್ಷಮೆ ಕೇಳುವಂತೆ ಬಿಜೆಪಿ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.