ETV Bharat / state

ಬಿಜೆಪಿ ಸಿದ್ಧಾಂತವು 'ಹಾವು ಇದ್ದಂತೆ' ಎಂದಿದ್ದೇನೆಂದ ಖರ್ಗೆ: ಪ್ರಧಾನಿಯವರ ಕ್ಷಮೆ ಕೇಳುವಂತೆ ಬಿಜೆಪಿ ಆಗ್ರಹ

author img

By

Published : Apr 27, 2023, 4:55 PM IST

Updated : Apr 27, 2023, 10:30 PM IST

ಪ್ರಧಾನಿ ನರೇಂದ್ರ ಮೋದಿ ಕುರಿತಾದ ಹೇಳಿಕೆ ಬಗ್ಗೆ ಎಐಸಿಸಿ ಆಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ನಡುವೆ ಖರ್ಗೆ ಅವರು ಪ್ರಧಾನಿ ಮೋದಿಯವರ ಕ್ಷಮೆ ಕೇಳುವಂತೆ ಬಿಜೆಪಿ ಆಗ್ರಹಿಸಿದೆ.

mallikarjun-kharge-carination-on-statement-on-pm-modi
ಬಿಜೆಪಿ ಸಿದ್ಧಾಂತದ 'ಹಾವು ಇದ್ದಂತೆ' ಎಂದಿದ್ದೇನೆಂದ ಖರ್ಗೆ: ಪ್ರಧಾನಿ ಕ್ಷಮೆ ಕೇಳುವಂತೆ ಬಿಜೆಪಿ ಆಗ್ರಹ

ಬಿಜೆಪಿ ಸಿದ್ಧಾಂತವು 'ಹಾವು ಇದ್ದಂತೆ' ಎಂದಿದ್ದೇನೆಂದ ಖರ್ಗೆ

ಗದಗ/ಬೆಂಗಳೂರು: ನಾನು ಬಿಜೆಪಿಯ ಸಿದ್ಧಾಂತದ ಕುರಿತಂತೆ 'ಹಾವು ಇದ್ದಂತೆ' ಎಂದು ಅರ್ಥೈಸಿ ಹೇಳಿದ್ದೇನೆ. ನಾನು ಪ್ರಧಾನಿ ಮೋದಿಯವರನ್ನು ಕುರಿತಂತೆ ವೈಯಕ್ತಿಕವಾಗಿ ಹೇಳಿಲ್ಲ, ಅವರ ಸಿದ್ಧಾಂತ ಹಾವಿನಂತಿದೆ ಮತ್ತು ಅದನ್ನು ಮುಟ್ಟಲು ಪ್ರಯತ್ನಿಸಿದರೆ ನಿಮ್ಮ ಸಾವು ಖಚಿತ ಎಂದಿದ್ದೇನೆ ಎಂದು ಎಐಸಿಸಿ ಅಧ್ಯಕ್ಷ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್‌ ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಖರ್ಗೆ, ಪ್ರಧಾನಿ ಮೋದಿ ವಿಷಕಾರಿ ಹಾವು ಇದ್ದಂತೆ. ಅದು ವಿಷವೋ, ಅಲ್ಲವೋ ಎಂಬುದನ್ನು ನೀವೂ ಯೋಚನೆ ಮಾಡಬೇಕು. ಅದನ್ನು ನೆಕ್ಕಿದರೆ ನೀವು ಸತ್ತಂತೆ ಎಂದು ಹೇಳಿದ್ದರು. ರೋಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಿಎಸ್‌ ಪಾಟೀಲ್‌ ಪರ ಮಲ್ಲಿಕಾರ್ಜುನ ಖರ್ಗೆ ಮತಯಾಚನೆ ನಡೆಸಿದ್ದರು.

ಈ ಚುನಾವಣೆಯು ಮಹತ್ವ್ದದ್ದಾಗಿದ್ದು, ಕರ್ನಾಟಕದಲ್ಲಿ ನಾವು ಗೆದ್ದರೆ ದೇಶ ಗೆಲ್ಲುತ್ತೇವೆ ಎಂದು ಹೇಳಲು ಬಯಸುತ್ತೇನೆ. ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಿ ರಸ್ತೆ ಮೇಲೆ ಹಾಕಿದ್ದಾರೆ. ಹಿಂದೆ 1977ರಲ್ಲಿ ಇಂದಿರಾ ಗಾಂಧಿ ಅವರನ್ನು ಸಹ ಅನರ್ಹಗೊಳಿಸಲಾಗಿತ್ತು. 1979ರಲ್ಲಿ ಚಿಕ್ಕಮಗಳೂರಿನಿಂದ ಚುನಾವಣೆಯಲ್ಲಿ ಗೆದ್ದು ಇಡೀ 1989ರಲ್ಲಿ ಕಾಂಗ್ರೆಸ್​ ದೇಶದಲ್ಲಿ ಸಂಪೂರ್ಣ ಬಹುಮತ ಪಡೆಯಿತು. ಅದೇ ರೀತಿ 2024ರಲ್ಲಿ ಕಾಂಗ್ರೆಸ್​ಗೆ ಭಾರಿ ಬಹುಮತ ಬರಲಿದ್ದು, ಬಿಜೆಪಿಯು ಸೋಲಲಿದೆ ಎಂದು ಖರ್ಗೆ ಹೇಳಿದ್ದರು.

ಕರ್ನಾಟಕ ರಾಜ್ಯದ ಚುನಾವಣೆ ಗೆಲ್ಲುವುದು ಮುಖ್ಯ, ಯಾಕೆಂದರೆ ಜಿ.ಎಸ್ ಪಾಟೀಲ್ ಗೆದ್ದರೆ, ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ರಾಜ್ಯದಲ್ಲಿ ಅಧಿಕಾರ ಬಂದರೆ ದೇಶದಲ್ಲಿ ಬದಲಾವಣೆ ಆಗಲಿದೆ. ಜಿ.ಎಸ್ ಪಾಟೀಲ್​ಗೆ ಏನಾಗಿತ್ತು? ಇಷ್ಟೊಂದು ಜನ ಬಂದಿದ್ದು, ಬಿಸಿಲಲ್ಲಿ ನಿಂತಿದ್ದಾರೆ. ಇನ್ನೊಂದು 20 ಸಾವಿರ ಖರ್ಚು ಮಾಡಿದರೆ ಇವರೆಲ್ಲರಿಗೂ ನೆರಳಾಗುತ್ತಿತ್ತು. ನಾವು ನೆರಳಲ್ಲಿ, ಜನರು ಬಿಸಿಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

ರಾಜ್ಯದಲ್ಲಿ ಈಗಿರುವುದು 40% ಕಮೀಷನ್ ಸರಕಾರ. ಇವರಿಗೆ ಪಾಠ ಕಲಿಸಬೇಕು. ಮನ್ ಕಿ ಬಾತ್, ಘರ್ ಕಿ ಬಾತ್​ನಲ್ಲಿ ಹೆಣ್ಮಕ್ಕಳ ಬಗ್ಗೆ ಆತ್ಮಹತ್ಯೆ ಮಾಡಿಕೊಳ್ಳುವವರ ಬಗ್ಗೆ ಪ್ರಧಾನಿ ಮಾತನಾಡುಡ್ತಾರೆ. ಆದರೆ, ಲಂಚ ತೆಗೆದುಕೊಳ್ಳುವವವರ ಬಗ್ಗೆ ಮಾತನಾಡಲ್ಲ. ರಾಜ್ಯದಲ್ಲಿ ಇಷ್ಟೊಂದು ಲಂಚ ಹೊಡೆಯುತ್ತಿದ್ದಾರೆ. ರಾಷ್ಟ್ರಪತಿ, ರಾಜ್ಯಪಾಲರಿಗೆ ಪ್ರಧಾನಿಗೆ ಬರವಣಿಗೆ ಮೂಲಕ ಪತ್ರ ಬರೆದರೂ ಕ್ರಮ ಕೈಗೊಂಡಿಲ್ಲ. 70 ವರ್ಷದಿಂದ ಕಾಂಗ್ರೆಸ್ ಏನ್ ಮಾಡಿದೆ ಅಂತಾರೆ. 70 ವರ್ಷದಿಂದ ನಾವು ಪ್ರಜಾಪ್ರಭುತ್ವಕ್ಕೆ ಭದ್ರಬುನಾದಿ ಹಾಕಿದ್ದಕ್ಕೆ ನಿಮ್ಮಂತ ಚಹ ಮಾರುವವನು ಪ್ರಧಾನಿಯಾಗಿದ್ದಾನೆ. ನನ್ನಂತ ಕೂಲಿ ಕಾರ್ಮಿಕನ ಮಗ ವಿರೋಧ ಪಕ್ಷದ ನಾಯಕನಾಗಿದ್ದೇನೆ. ಗಾಂಧಿಜಿಯವರನ್ನು ಇಡೀ ಜಗತ್ತು ಪ್ರೀತಿಸಿದರೆ, ನೀವು ಗೋಡ್ಸೆಯನ್ನು ಪ್ರೀತಿ ಮಾಡುತ್ತೀರಿ ಎಂದು ವಾಗ್ದಾಳಿ ನಡೆಸಿದ್ದರು.

ಮೋದಿ ದೊಡ್ಡ ಸುಳ್ಳುಗಾರ. ಕೆಲವರು ಮೋದಿ ಮೋದಿ ಅಂತಾರೆ. ಕರ್ನಾಟಕಕ್ಕೆ ಏನು ಮಾಡಿದ್ದಾರೆ ಹೇಳಿ? ಲಕ್ಷಾಂತರ ಎಕರೆ ನೀರಾವರಿ ಮಾಡಿದ್ದೇವೆ. 70 ವರ್ಷದಿಂದ 70% ಶಿಕ್ಷಣವಂತರಾಗಿದ್ದಾರೆ. ಅದರಲ್ಲಿ ಮೋದಿ, ಯೋಗಿ, ಬೋಗಿನೂ ಇದ್ದೀರಿ. ಇಂದಿರಾ ಗಾಂಧಿ ಮೊದಲ ಬಾರಿಗೆ ರಾಕೆಟ್ ಹಾರಿಸಿದ್ದರು. ಈಗ ಎಲ್ಲಿಯಾದರೂ ರಾಕೆಟ್ ಹಾರಿದರೆ ಏ ಮೇರಾ ಕಾಮ್ ಹೈ ಅಂತ ಸುಳ್ಳು ಹೇಳೋ ಚಟ ಇವರದು. ಅದಾನಿಗೆ ಎಲ್ಲ ರೀತಿಯ ಬೆಂಬಲ ಸಿಗುತ್ತಿದೆ, 2014ರಲ್ಲಿ ಅವರ ಸಂಪತ್ತು 50 ಸಾವಿರ ಕೋಟಿ ಇತ್ತು. 2020ರಲ್ಲಿ‌ 2 ಲಕ್ಷ ಕೋಟಿ ಆಯ್ತು. 2023ರಲ್ಲಿ‌12 ಲಕ್ಷ ಕೋಟಿ ಆಯ್ತು, ಇಷ್ಟೊಂದು ಹಣ ಮಾಡಬೇಕಾದರೆ ಎಷ್ಟು ಸರ್ಕಾರಿ ದುಡ್ಡು ಹೊಡೆದಿರಬೇಕು? ಎಂದು ಆರೋಪಿಸಿದ್ದರು.

ಪ್ರಧಾನಿ ಬಳಿ ಕ್ಷಮೆ ಕೇಳುವಂತೆ ಬಿಜೆಪಿ ಆಗ್ರಹ: ಪ್ರಧಾನಿ ಬಗ್ಗೆ ಹೇಳಿಕೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ ಕೂಡಲೇ ಪ್ರಧಾನಿ ಮೋದಿ ಹಾಗೂ ರಾಜ್ಯದ ಜನತೆಯ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿಯೂ ಆಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಪ್ರಧಾನಮಂತ್ರಿ ಕೇವಲ ಒಂದು ಪಕ್ಷದ ಪ್ರತಿನಿಧಿಯಲ್ಲ. ಪ್ರಧಾನಿ 140 ಕೋಟಿ ಜನರನ್ನು ಪ್ರತಿನಿಧಿಸುತ್ತಾರೆ. ಇಡೀ ದೇಶವೇ ನಮ್ಮತ್ತ ನೋಡುತ್ತಿದೆ. ಕೆಲವರು ವಿಶ್ವಾಸದಿಂದ ನೋಡಿದರೆ, ಕೆಲವರು ಬೇರೆಯ ರೀತಿ ನೋಡುತ್ತಾರೆ. ಮಹಾಭಾರತದಲ್ಲಿ ಪಾಂಡವರು ಐದು ಜನ. ಕೌರವರು 105 ಜನ ಇದ್ದರು. ಆದರೂ ಶತ್ರುಗಳು ಬಂದಾಗ ಒಟ್ಟಾಗಿ ಯುದ್ಧ ಮಾಡಬೇಕು ಎಂದು ಪಾಂಡವರು ನಿರ್ಧಾರ ಮಾಡುತ್ತಾರೆ. ವಿದೇಶಕ್ಕೆ ಮೋದಿ ಹೋದಾಗ ಕೇವಲ ಪ್ರಧಾನಿ ಅಂತ ಹೋಗಲ್ಲ, ದೇಶದ ಪ್ರತಿನಿಧಿಯಾಗಿ ಹೋಗುತ್ತಾರೆ. ಒಂಟಿಯಾಗಿ ದೇಶದ ಸೇವೆ ಮಾಡುತ್ತಿದ್ದಾರೆ. ಯಾವ ಕುಟುಂಬದವರನ್ನೂ ಸೇರಿಸದೆ ಕೆಲಸ ಮಾಡ್ತಿದ್ದಾರೆ. ಅಂತಹ ಪ್ರಧಾನಿಯನ್ನ ಪದೇ ಪದೆ ಅವಮಾನ ಮಾಡ್ತಿದ್ದಾರೆ. ಕಾಂಗ್ರೆಸ್ ಮನಸ್ಥಿತಿ ಹೇಗಿದೆ ಅಂದ್ರೆ ಪ್ರಧಾನಿ ಸ್ಥಾನ ಅನ್ನೋದು ತಮ್ಮದು ಮಾತ್ರ ಆಗಿರಬೇಕು. ಬೇರೆ ಯಾರಾದರೂ ಆ ಸ್ಥಾನದಲ್ಲಿ ಕುಳಿತರೆ ಸಹಿಸಲ್ಲ ಎನ್ನುವಂತಿದೆ ಎಂದು ಟೀಕಿಸಿದರು.

  • … अपितु जिस विचारधारा का वो प्रतिनिधित्व करते हैं, उसके लिए था।

    प्रधानमंत्री मोदी जी के साथ हमारी लड़ाई निजी लड़ाई नहीं है। वैचारिक लड़ाई है।

    मेरा इरादा किसी की भावना आहत करने का नहीं था और अगर ज़ाने अनजाने में किसी की भावना आहत हुई तो ये मेरी मंशा कदापि नहीं थी…

    — Mallikarjun Kharge (@kharge) April 27, 2023 " class="align-text-top noRightClick twitterSection" data=" ">

ಭಾವನೆಗಳಿಗೆ ನೋವುಂಟು ಮಾಡುವುದು ಉದ್ದೇಶವಿಲ್ಲ ಎಂದ ಖರ್ಗೆ: ಬಳಿಕ ಈ ಕುರಿತಂತೆ ಟ್ವೀಟ್​ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ನಾನು ಮಾತನಾಡಿರುವುದು ಅವರ ಸಿದ್ಧಾಂತದ ಬಗ್ಗೆ, ಪ್ರಧಾನಿ ಮೋದಿ ಅವರೊಂದಿಗಿನ ನಮ್ಮ ಹೋರಾಟ ವೈಯಕ್ತಿಕ ಹೋರಾಟವಲ್ಲ, ಸೈದ್ಧಾಂತಿಕವಾಗಿ ಇದೆ. ಯಾರ ಭಾವನೆಗಳಿಗೂ ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ತಿಳಿದೋ ತಿಳಿಯದೆಯೋ ಯಾರದೋ ಭಾವನೆಗೆ ಧಕ್ಕೆಯಾದರೂ ಸಹ ಅದುವೇ ನನ್ನ ಉದ್ದೇಶವಾಗಿರಲಿಲ್ಲ. ನಾನು ಯಾವಾಗಲೂ ಸ್ನೇಹಿತರು ಮತ್ತು ವಿರೋಧಿಗಳ ಬಗ್ಗೆ ರಾಜಕೀಯಬದ್ಧ ಹಾಗೂ ಸಂಪ್ರದಾಯ ಅನುಸರಣೆ ಮಾದಿದ್ದೇನೆ. ನನ್ನ ಜೀವನದ ಕೊನೆಯ ಉಸಿರಿನವರೆಗೂ ಅದನ್ನೇ ಮುಂದುವರೆಸುತ್ತೇನೆ. ನಾನು ಬಡವರು, ದೀನದಲಿತರ ನೋವು, ಸಂಕಟಗಳನ್ನು ನೋಡಿದ್ದೇನೆ ಹಾಗೂ ಅನುಭವಿಸಿದ್ದೇನೆ. ಐದು ದಶಕಗಳಿಂದಲೂ ಬಿಜೆಪಿ ಮತ್ತು ಆರ್​​ಎಸ್​ಎಸ್​​ ಹಾಗೂ ಅದರ ನಾಯಕರ ವಿಭಜನಾ ಸಿದ್ಧಾಂತವನ್ನು ವಿರೋಧಿಸುತ್ತಲೇ ಬಂದಿದ್ದೇನೆ ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

Last Updated :Apr 27, 2023, 10:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.