ETV Bharat / state

ರಾಜ್ಯದ ಹಳ್ಳಿಗೆ ವಿಮೆ ಮಾಡಿಸುತ್ತಿರುವ ಮಹಾರಾಷ್ಟ್ರ ಸರ್ಕಾರದ ಕ್ರಮ ಉದ್ಧಟತನದಿಂದ ಕೂಡಿದೆ: ಸಿದ್ದರಾಮಯ್ಯ ಆಕ್ರೋಶ

author img

By

Published : Apr 5, 2023, 11:09 AM IST

siddaramaiah
ಸಿದ್ದರಾಮಯ್ಯ

ಮಹಾರಾಷ್ಟ್ರ ಸರ್ಕಾರ ಆಗಾಗ ಗಡಿ ತಂಟೆಯನ್ನು ಕೆದಕುವ ಕಿಡಿಗೇಡಿತನ ಮಾಡುತ್ತಿದೆ. ಕನ್ನಡಿಗರು ಇದನ್ನು ಸಹಿಸುವುದಿಲ್ಲ. ಜೊತೆಗೆ ರಾಜ್ಯದ ಗಡಿಯೊಳಗಿರುವ 865 ಹಳ್ಳಿಗಳಿಗೆ ಆರೋಗ್ಯ ವಿಮೆ ಜಾರಿ ಮಾಡಿರುವುದನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರು : ಕನ್ನಡಿಗರ ತೀವ್ರ ವಿರೋಧದ ಹೊರತಾಗಿಯೂ ರಾಜ್ಯದ ಗಡಿಯೊಳಗಿರುವ 865 ಹಳ್ಳಿಗಳಿಗೆ ಆರೋಗ್ಯ ವಿಮೆ ಜಾರಿ ಮಾಡಿರುವ ಮಹಾರಾಷ್ಟ್ರ ಸರ್ಕಾರದ ಕ್ರಮ ಉದ್ಧಟತನದಿಂದ ಕೂಡಿದೆ. ಇದನ್ನು ಸಹಿಸಲು ಸಾಧ್ಯವೇ ಇಲ್ಲ. ಈ ಆದೇಶವನ್ನು ತಕ್ಷಣ ವಾಪಸ್ ಪಡೆಯದೇ ಇದ್ದರೆ ಪರಿಣಾಮ ನೆಟ್ಟಗಾಗದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿ ಆರೋಗ್ಯ ವಿಮೆ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭರವಸೆ ನೀಡಿದ್ದರು. ಇವರಿಬ್ಬರ ಮಾತಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ರಾಜ್ಯದ ಗಡಿಯೊಳಗೆ ಆರೋಗ್ಯ ವಿಮೆ ಜಾರಿಗೆ ಮಹಾರಾಷ್ಟ್ರ ಸರ್ಕಾರ ಯತ್ನಿಸಿದಾಗಲೇ ನಾವು ವಿರೋಧಿಸಿದ್ದೆವು. ಅಲ್ಲಿಯ ವರೆಗೆ ತೆಪ್ಪಗಿದ್ದ ರಾಜ್ಯದ ಮುಖ್ಯಮಂತ್ರಿಗಳು ನಮ್ಮ ಒತ್ತಡಕ್ಕೆ ಮಣಿದು ವೀರಾವೇಶದ ಮಾತುಗಳನ್ನಾಡಿದ್ದರು. ಆ ಆವೇಶ, ಬದ್ಧತೆಯನ್ನು ತೋರಿಸಬೇಕಾದ ಕಾಲ ಈಗ ಬಂದಿದೆ ಎಂದು ಹೇಳಿದ್ದಾರೆ.

ಗಡಿ ವಿವಾದ ಇತ್ಯಾರ್ಥಗೊಳ್ಳುವ ವರೆಗೆ ಎರಡೂ ರಾಜ್ಯಗಳು ವಿವಾದವನ್ನು ಕೆದಕಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಾಕೀತು ಮಾಡಿ ಎರಡೂ ರಾಜ್ಯಗಳ ಸದಸ್ಯರನ್ನೊಳಗೊಂಡ ಸಲಹಾ ಸಮಿತಿ ರಚಿಸಿದ್ದರು. ಆ ಸೂಚನೆಯನ್ನೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಧಿಕ್ಕರಿಸಿದ್ದಾರೆ. ಬೆಳಗಾವಿ ಗಡಿ ವಿವಾದ ನ್ಯಾಯಾಲಯದ ಕಟಕಟೆಯಲ್ಲಿದೆ. ಕನ್ನಡಿಗರಿಗೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ನಮಗೆ ಇದೆ. ಈ ನಡುವೆ ರಾಜಕೀಯ ಲಾಭದ ದುರುದ್ದೇಶದಿಂದ ಮಹಾರಾಷ್ಟ್ರ ಆಗಾಗ ಗಡಿ ತಂಟೆಯನ್ನು ಕೆದಕುವ ಕಿಡಿಗೇಡಿತನ ಮಾಡುತ್ತಿರುವುದು ಖಂಡನೀಯ. ಕನ್ನಡಿಗರು ಇದನ್ನು ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದ ಮತ್ತು ಕನ್ನಡಿಗರ ಹಿತ ಕಾಪಾಡುವಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ವಿಫಲ: ಸಿದ್ದರಾಮಯ್ಯ

ಇದೇ ವರ್ಷದ ಮಾರ್ಚ್​ ತಿಂಗಳಿನಲ್ಲಿ ಸಹ ಮಹಾರಾಷ್ಟ್ರ ಸರ್ಕಾರ ಜ್ಯೋತಿಬಾ ಫುಲೆ ಜನ ಆರೋಗ್ಯ ವಿಮೆಯನ್ನು ಕರ್ನಾಟಕ ರಾಜ್ಯದ ಬೆಳಗಾವಿ ಹಾಗೂ ನಿಪ್ಪಾಣಿ ಭಾಗದ ಗಡಿ ಜನರಿಗೆ ಅನ್ವಯಿಸುವಂತೆ ಹೆಚ್ಚುವರಿ 54 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿತ್ತು. ಮಹಾರಾಷ್ಟ್ರದ ಗಡಿಗೆ ಹೊಂದಿರುವ ಕರ್ನಾಟಕ ಹಲವು ಗ್ರಾಮದ ಜನರಿಗೆ ಅನ್ವಯಿಸುವಂತೆ ಶಿಫಾರಸು ಮಾಡಿ ಆದೇಶ ಹೊರಡಿಸಿತ್ತು. ಈ ಕುರಿತು ಅಂದು ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದ ಸಿದ್ದರಾಮಯ್ಯ, "ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಒಡ್ಡುತ್ತಿರುವ ಮಹಾರಾಷ್ಟ್ರದ ಏಕನಾಥ್‌ ಶಿಂಧೆ ಸರ್ಕಾರವನ್ನು ಕೇಂದ್ರ ಬಿಜೆಪಿ ಸರ್ಕಾರ ಕೂಡಲೇ ವಜಾ ಮಾಡಬೇಕು. ರಾಜ್ಯದ ಹಿತ ಕಾಯುವಲ್ಲಿ ವಿಫಲವಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮತ್ತು ಮಹಾರಾಷ್ಟ್ರ ಸರ್ಕಾರವು ಕರ್ನಾಟಕದ ಗಡಿಯೊಳಗಿರುವ 865 ಹಳ್ಳಿಗಳಿಗೆ ಮಹಾತ್ಮ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆ ಎಂಬ ಕಾರ್ಯಕ್ರಮವನ್ನು ನೀಡಲು ಹೊರಟಿರುವುದು ನಾಡಿನ ಸಾರ್ವಭೌಮತೆ ಮತ್ತು ಒಕ್ಕೂಟ ವ್ಯವಸ್ಥೆಗೆ ಹಾಕಿರುವ ಸವಾಲು" ಎಂದು ಹೇಳಿದ್ದರು.

ಇದನ್ನೂ ಓದಿ: ಗಡಿ ಭಾಗದ 865 ಗ್ರಾಮಗಳಲ್ಲಿ ಮಹಾರಾಷ್ಟ್ರದ ಯೋಜನೆ ಜಾರಿ; ಸಿಎಂ ರಾಜೀನಾಮೆ ನೀಡಲಿ: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.