ETV Bharat / state

ರೈತರಿಗೆ ನೆರವಾಗುವ ಯೋಜನೆಗಳನ್ನೇ ಸ್ಥಗಿತಗೊಳಿಸಿ ರೈತರ ವಿರುದ್ದ ಸೇಡು ತೀರಿಸಿಕೊಳ್ಳುತ್ತಿದ್ದೀರಾ?: ಸಿದ್ದರಾಮಯ್ಯ

author img

By

Published : Feb 6, 2023, 7:05 PM IST

ಪ್ರಧಾನಿಗೆ ಸಿದ್ದರಾಮಯ್ಯ ಪ್ರಶ್ನೆ
ಪ್ರಧಾನಿಗೆ ಸಿದ್ದರಾಮಯ್ಯ ಪ್ರಶ್ನೆ

ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿರುವ ಹಿನ್ನೆಲೆ ಮಾಧ್ಯಮ ಪ್ರಕಟಣೆ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಧಾನಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ.

ಬೆಂಗಳೂರು: ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಲವು ಪ್ರಶ್ನೆ ಕೇಳಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜ್ಯದ ಜನತೆಯ ಪರವಾಗಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದೇ ಸಂದರ್ಭದಲ್ಲಿ ರಾಜ್ಯದ ಜನತೆಯ ಪರವಾಗಿ ಒಂದಿಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದೇನೆ.

ಈ ಪ್ರಶ್ನೆಗಳಿಗೆ ತಮ್ಮ ಭಾಷಣದಲ್ಲಿ ಉತ್ತರ ನೀಡುವಿರಿ ಎಂದು ನಂಬಿದ್ದೇನೆ. ತಮಗೆ ತಿಳಿದಿರುವಂತೆ ಬಡಜನರ ಹಸಿದ ಹೊಟ್ಟೆಯನ್ನು ತಣಿಸಲು ಯುಪಿಎ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿಗೆ ತಂದು 80 ಕೋಟಿ ಜನರಿಗೆ ಆಹಾರಧಾನ್ಯ ವಿತರಿಸಿತ್ತು. ಆದರೆ, ನಿಮ್ಮ ಸರ್ಕಾರ ಇತ್ತೀಚೆಗಷ್ಟೇ ಮಂಡಿಸಿದ ಬಜೆಟ್​ನಲ್ಲಿ ಆಹಾರ ಸಬ್ಸಿಡಿಯನ್ನು ಶೇಕಡಾ 31ರಷ್ಟು ಕಡಿತಗೊಳಿಸಿ ಬಡವರ ಹೊಟ್ಟೆಗೆ ಕಲ್ಲು ಹಾಕಿದೆ, ಯಾಕೆ? ಎಂದಿದ್ದಾರೆ.

ರಸಗೊಬ್ಬರದ ಮೇಲಿನ ಸಬ್ಸಿಡಿ ಕಡಿತ: ರೈತರ ಆದಾಯ ದುಪ್ಪಟ್ಟುಗೊಳಿಸುತ್ತೇನೆ ಎಂದು ರೈತರಿಗೆ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿದ್ದೀರಿ. ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ರೂ.50,121 ಕೋಟಿಯಷ್ಟು ಕಡಿಮೆ ಮಾಡಿದ್ದೀರಿ. ರೈತರ ಬೆಳೆಗಳ ಬೆಲೆ ಕುಸಿತ ತಡೆಯಲು ಬೆಂಬಲ ಬೆಲೆ ನೀಡುವ ಮೂಲಕ ಮಾರುಕಟ್ಟೆ ಮಧ್ಯಪ್ರವೇಶಿಸಲು ನೀಡಲಾಗುತ್ತಿದ್ದ ಅನುದಾನವನ್ನು ರೂ.1500 ಕೋಟಿಗಳಿಂದ ರೂ. ಒಂದು ಲಕ್ಷಕ್ಕೆ ಇಳಿಸಿದ್ದೀರಿ, ಬೆಲೆ ಕುಸಿತ ಮತ್ತು ಬೀಜ-ಗೊಬ್ಬರದ ಬೆಲೆ ಏರಿಕೆಯಿಂದಾಗಿ ಹತ್ತಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹೀಗಿದ್ದರೂ ಹತ್ತಿ ನಿಗಮದ ಬೆಂಬಲ ಬೆಲೆಯ ಅನುದಾನವನ್ನು ರೂ.782 ಕೋಟಿಯಿಂದ ರೂ.1 ಲಕ್ಷಕ್ಕೆ ಇಳಿಸಿದ್ದೀರಿ. ರೈತರಿಗೆ ನೆರವಾಗುವ ಯೋಜನೆಗಳನ್ನೇ ಸ್ಥಗಿತಗೊಳಿಸಿ ರೈತರ ವಿರುದ್ದ ಸೇಡು ತೀರಿಸಿಕೊಳ್ಳುತ್ತಿದ್ದೀರಾ? ಎಂಬ ಪ್ರಶ್ನೆ ಕೇಳಿದ್ದಾರೆ.

ನರೇಗಾ ಸಹಾಯಧನ ಕಡಿತ: ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳ ಪಾಲಿನ ಸಂಜೀವಿನಿ ನರೇಗಾ ಯೋಜನೆಯನ್ನು ಜಾರಿಗೆ ತಂದಿರುವುದು ಯುಪಿಎ ಸರ್ಕಾರ. ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ನರೇಗಾಕ್ಕೆ ನೀಡಲಾಗುವ ಸಹಾಯಧನವನ್ನು ಶೇಕಡಾ 21.66ರಷ್ಟು (ರೂ.60,000 ಕೋಟಿ) ಕಡಿಮೆ ಮಾಡಲಾಗಿದೆ. ನಿಮ್ಮ ಆಡಳಿತಾವಧಿಯಲ್ಲಿ ನಿರುದ್ಯೋಗದ ಪ್ರಮಾಣದ ಹೆಚ್ಚಳ ಹೊಸ ದಾಖಲೆ ನಿರ್ಮಿಸಿದೆ. ಈಗ ಗ್ರಾಮೀಣ ಜನತೆಯಿಂದಲೂ ಉದ್ಯೋಗವನ್ನು ಕಸಿದುಕೊಂಡು ಏನನ್ನು ಸಾಧಿಸಲು ಹೊರಟಿದ್ದೀರಿ?

ಎಲ್​ಪಿಜಿ ಸಿಲಿಂಡರ್ ಬೆಲೆ ದುಪ್ಪಟ್ಟು: ಉಚಿತ ಎಲ್​ಪಿಜಿ ಸಿಲಿಂಡರ್ ಎಂಬ ಪೊಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿರಿ, ಕಳೆದ ಎಂಟು ವರ್ಷಗಳಿಂದ ಎಲ್​ಪಿಜಿ ಸಿಲಿಂಡರ್ ಬೆಲೆ ದುಪ್ಪಟ್ಟಾಗಿದೆ. ಹಳ್ಳಿಯಬಡವರು ಮತ್ತೆ ಉರುವರಲು ಹಾಕಿ ಒಲೆ ಉರಿಸಿ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಇದರ ಹೊರತಾಗಿಯೂ ಎಲ್​ಪಿಜಿ ಮೇಲಿನ ಸಬ್ಸಿಡಿಯನ್ನು ಶೇಕಡಾ 75ರಷ್ಟು (ರೂ.2,257 ಕೋಟಿ) ಕಡಿಮೆ ಮಾಡಲಾಗಿದೆ. ಅಸಹಾಯಕ ಬಡವರ ಮೆಲೆ ಯಾಕೆ ನಿಮಗಿಷ್ಟು ದ್ವೇಷ? ಎಂದು ಕೇಳಿದ್ದಾರೆ.

ನಿಮ್ಮ ಖಾಸಾ ಸ್ನೇಹಿತರಾದ ಗೌತಮ್ ಅದಾನಿ ಉದ್ಯಮ ಸಾಮ್ರಾಜ್ಯದ ಕಳ್ಳಾಟಗಳನ್ನು ಹಿಂಡನ್ ಬರ್ಗ್ ವರದಿ ಬೆತ್ತಲೆ ಮಾಡಿದೆ. ಈ ಕಳ್ಳಾಟದಿಂದ ಭಾರತದ ಆರ್ಥಿಕತೆ ಕುಸಿದುಹೋಗುವ ಅಪಾಯ ಎದುರಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಸುದ್ದಿಯಾಗಿ ಭಾರತದ ಮಾನ ಹರಾಜಾಗುತ್ತಿದೆ. ಬ್ಯಾಂಕುಗಳಲ್ಲಿ ಠೇವಣಿ ಇಟ್ಟವರು, ಎಲ್​ಐಸಿಯಲ್ಲಿ ಪಾಲಿಸಿ ಖರೀದಿಸಿದವರು ಆತಂಕದಲ್ಲಿದ್ದಾರೆ. ಪ್ರತಿಪಕ್ಷಗಳ ನಾಯಕರು ಕೂತರೂ ನಿಂತರೂ ಸುಳ್ಳು ಆರೋಪಗಳನ್ನು ಹೊರಿಸಿ ಜೈಲಗಟ್ಟುತ್ತಿರುವ ಕೇಂದ್ರ ಸರ್ಕಾರ ಉದ್ಯಮಿ ಅದಾನಿ ಬಾನಗಡಿ ಬಗ್ಗೆ ತನಿಖೆ ಮಾಡಲು ಹಿಂಜರಿಯುತ್ತಿರುವುದೇಕೆ?

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ವೆಚ್ಚದ ಶೇಕಡಾ 50ರಷ್ಟನ್ನು ಕೇಂದ್ರ ಸರ್ಕಾರವೇ ಈ ಬಜೆಟ್​ನಲ್ಲಿ ಕೊಟ್ಟಿರುವುದು ಕೇವಲ ರೂ.2,300 ಕೋಟಿ. ಯೋಜನೆ ಮುಗಿಯುವುದು 2050ಕ್ಕೋ? ಬೆಂಗಳೂರು ಉಪನಗರ ರೈಲ್ವೆ ಯೋಜನೆ ಮತ್ತು ಬೆಂಗಳೂರು ಮೆಟ್ರೋ ಯೋಜನೆಗಳನ್ನು ಪ್ರಸಕ್ತ ಸಾಲಿನ ಕೇಂದ್ರ ಬಜೆಟ್​ನಲ್ಲಿ ಸಂಪೂರ್ಣ ನಿರ್ಲಕ್ಷಿಸಲಾಗಿದೆ. ನರೇಂದ್ರಮೋದಿಯವರಿಗೆ ಕನ್ನಡಿಗರ ಮೇಲೆ ಯಾಕಿಷ್ಟು ದ್ವೇಷ? ಎಂಬ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಜಾಗತಿಕ ಉದ್ಯಮಿಗಳು ಹಸಿರು ಇಂಧನ ಅನ್ವೇಷಣೆಯಲ್ಲಿ ತೊಡಗಿಕೊಳ್ಳಿ: ಮೋದಿ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.