ETV Bharat / state

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತ್ತೆ ಮುನ್ನೆಲೆಗೆ ಬಂದ ಶೋಭಾ ಕರಂದ್ಲಾಜೆ ಹೆಸರು

author img

By ETV Bharat Karnataka Team

Published : Oct 23, 2023, 10:16 PM IST

ಕೇಂದ್ರ ಸಚಿವೆ ಶೋಭ ಕರಂದ್ಲಾಜೆ
ಕೇಂದ್ರ ಸಚಿವೆ ಶೋಭ ಕರಂದ್ಲಾಜೆ

ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಚರ್ಚೆ ನಡೆಯುತ್ತಲೇ ಇದ್ದು ಇದೀಗ ಮತ್ತೆ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಹೆಸರು ಮುನ್ನೆಲೆಗೆ ಬಂದಿದೆ.

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತ್ತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಮುನ್ನೆಲೆಗೆ ಬಂದಿದೆ. ಹೈಕಮಾಂಡ್ ನಾಯಕರು ಕಟ್ಟಾ ಸಂಘಟನಾತ್ಮಕ ವರ್ಚಸ್ವಿ ನಾಯಕನ ಹುಡುಕಾಟದಲ್ಲಿದ್ದು ರಾಜ್ಯದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಹಾಗು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಇಬ್ಬರಿಗೂ ಒಪ್ಪಿತ ವ್ಯಕ್ತಿಯ ಆಯ್ಕೆ ಮಾಡಬೇಕಾಗಿದೆ.

ಹಾಗಾಗಿ ರಾಜ್ಯಾಧ್ಯಕ್ಷರ ಆಯ್ಕೆ ವಿಳಂಬವಾಗುತ್ತಿದ್ದು ಶೋಭಾ ಕರಂದ್ಲಾಜೆ ಸೂಕ್ತ ವ್ಯಕ್ತಿ ಎನ್ನುವ ಚಿಂತನೆ ಹೈಕಮಾಂಡ್ ಮಟ್ಟದಲ್ಲಿ ನಡೆದಿದೆ. ಹಾಗಾಗಿಯೇ ಕರಂದ್ಲಾಜೆ ಹೆಸರು ಮತ್ತೆ ಚಾಲ್ತಿಗೆ ಬಂದಿದೆ. ಹಾಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಹೊಸ ಅಧ್ಯಕ್ಷರ ಹುಡುಕಾಟ ನಡೆಯುತ್ತಿದೆ. ಸಾಕಷ್ಟು ನಾಯಕರು ರಾಷ್ಟ್ರ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮೂರು ವರ್ಷ ಸೇವೆ ಸಲ್ಲಿಸಿ ರಾಜ್ಯಕ್ಕೆ ವಾಪಸಾಗಿರುವ ಸಿ.ಟಿ.ರವಿ ಪ್ರಬಲ ಆಕಾಂಕ್ಷಿಯಾಗಿದ್ದು, ಹಿರಿಯ ನಾಯಕ ವಿ.ಸೋಮಣ್ಣ ಬಹಿರಂಗವಾಗಿಯೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಾಜಿ ಡಿಸಿಎಂ ಅಶ್ವತ್ಥನಾರಾಯಣ್, ಯುವಕರಿಗೆ ಆದ್ಯತೆ ನೀಡಬೇಕು ಎನ್ನುವ ದನಿ ಎಬ್ಬಿಸಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕೂಡ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟಿದ್ದಾರೆ. ಆದರೆ ಈ ಯಾವ ಹೆಸರನ್ನು ಹೈಕಮಾಂಡ್ ಪರಿಗಣಿಸಲು ಉತ್ಸುಕವಾಗಿಲ್ಲ ಎನ್ನಲಾಗಿದೆ.

ವಿಧಾನಸಭಾ ಚುನಾವಣೆ ಸಮಯದಲ್ಲೇ ಶೋಭಾ ಕರಂದ್ಲಾಜೆ ಹೆಸರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿತ್ತು. ಆದರೆ ಚುನಾವಣೆಯಲ್ಲಿ ಪಕ್ಷ ದಯನೀಯವಾಗಿ ಸೋತ ನಂತರ ರಾಜ್ಯ ಘಟಕದ ಕಡೆ ಗಮನ ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾವುದೇ ಹೆಸರನ್ನು ಅಂತಿಮಗೊಳಿಸದೆ ಮತ್ತಷ್ಟು ಸಮಯ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.

ಈಗ ಮತ್ತೆ ಶೋಭಾ ಕರಂದ್ಲಾಜೆ ಅವರ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಮುಖ್ಯ ಕಾರಣ ಹೈಕಮಾಂಡ್ ನಿರೀಕ್ಷೆ ಮಾಡುತ್ತಿರುವ ಗುಣಗಳನ್ನು ಹೊಂದಿರುವುದು. ಉತ್ತರ ಪ್ರದೇಶ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಕ್ರಿಯಾಶೀಲತೆಯಿಂದ ಕೆಲಸ ಮಾಡಿ ವರಿಷ್ಠರ ಮೆಚ್ಚುಗೆ ಗಳಿಸಿದ್ದಾರೆ. ರಾಜ್ಯದ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕರಾಗಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಇದು ಕೂಡ ಹೈಕಮಾಂಡ್ ನಾಯಕರ ಗಮನ ಸೆಳೆದಿದೆ.

ಶೋಭಾ ಕರಂದ್ಲಾಜೆ ಆಯ್ಕೆಗೆ ಮುಂದಾದಲ್ಲಿ ರಾಜ್ಯದ ಹಿರಿಯ ನಾಯಕ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸುವುದಿಲ್ಲ. ಅಲ್ಲದೆ ಶೋಭಾ ಕರಂದ್ಲಾಜೆ ರಾಜಕೀಯ ಬೆಳವಣಿಗೆಗೆ ಯಡಿಯೂರಪ್ಪ ಕೊಡುಗೆ ಸಾಕಷ್ಟು ಇದ್ದು ರಾಜ್ಯಾಧ್ಯಕ್ಷ ಸ್ಥಾನ ನಿರ್ವಹಿಸಲು ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿಯೂ ಹೆಚ್ಚಾಗಿ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ. ಇದರ ಜೊತೆಗೆ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕೂಡ ಶೋಭಾ ಕರಂದ್ಲಾಜೆ ಹೆಸರಿಗೆ ವಿರೋಧ ವ್ಯಕ್ತಪಡಿಸಲ್ಲ. ಇತ್ತೀಚಿನ ದಿನಗಳಲ್ಲಿ ಸಂತೋಷ್ ಜೊತೆ ಒಡನಾಟ ಉತ್ತಮಗೊಂಡಿದ್ದು, ಕೇಂದ್ರದ ರಾಜಕಾರಣಕ್ಕೆ ಹೋದ ನಂತರ ಸಂಘಟನಾತ್ಮಕ ಚಟುವಟಿಕೆಯಲ್ಲಿ ತೋರಿದ ಸಾಧನ ಕಾರಣದಿಂದ ಬಿ.ಎಸ್.ಸಂತೋಷ್ ಕೂಡ ಶೋಭಾ ಕರಂದ್ಲಾಜೆ ಬೆಂಬಲಕ್ಕೆ ನಿಲ್ಲಲಿದ್ದಾರೆ ಎನ್ನಲಾಗಿದೆ.

ಇಷ್ಟೆಲ್ಲಾ ಕಾರಣಗಳಿಂದಾಗಿ ಹೈಕಮಾಂಡ್ ಮಟ್ಟದಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಹೆಸರು ಪರಿಗಣಿಸುವ ಕುರಿತು ಚಿಂತನೆ ನಡೆದಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶೋಭಾ ಕರಂದ್ಲಾಜೆ ಹೆಸರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದ ಹಿನ್ನಲೆಯಲ್ಲಿ ಬಹುತೇಕ ಬಿಜೆಪಿ ನಾಯಕರು ವಿಶೇಷವಾಗಿ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷೆ ಸ್ಥಾನ ನೀಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಕೇಂದ್ರ ಸಚಿವೆಯಾಗಿಯೇ ಸಂತೋಷವಾಗಿದ್ದೇನೆ ಎಂದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ವಿಚಾರದ ಕುರಿತು ಪಕ್ಷದ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಶೋಭಾ ಕರಂದ್ಲಾಜೆ ಹೆಸರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದ ವಿಚಾರದ ಕುರಿತು ಮಾಹಿತಿ ಇಲ್ಲ. ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ಜತೆಗೆ ಇತ್ತೀಚೆಗೆ ಹೆಚ್ಚಾಗಿ ಪಕ್ಷದಲ್ಲಿ ಗುರುತಿಸಿಕೊಳ್ಳುತ್ತಿರುವ ಡಿ.ವಿ.ಸದಾನಂದ ಗೌಡ ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಬೆಂಗಳೂರಲ್ಲಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಕಚೇರಿಯಲ್ಲಿ ಕಟೀಲ್‌ ನೇತೃತ್ವದಲ್ಲಿ ಆಯುಧ ಪೂಜೆ: ಬಿಡದಿ ತೋಟದ ಮನೆಯಲ್ಲಿ ಹೆಚ್​ಡಿಕೆ ಕುಟುಂಬದಿಂದ ದಸರಾ ಆಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.