ETV Bharat / state

ಶನಿವಾರ ಮಧ್ಯಾಹ್ನ ನೂತನ ಸಚಿವರಿಗೆ ಪ್ರಮಾಣವಚನ: 20 ಸಚಿವರ ಪಟ್ಟಿ ಸಿದ್ಧ, ಶೀಘ್ರವೇ ಘೋಷಣೆ!?

author img

By

Published : May 25, 2023, 10:46 PM IST

Updated : May 25, 2023, 11:02 PM IST

saturday-afternoon-swearing-in-of-new-ministers-announcement-new-ministers-soon
ಶನಿವಾರ ಮಧ್ಯಾಹ್ನ ನೂತನ ಸಚಿವರಿಗೆ ಪ್ರಮಾಣವಚನ: 20 ಸಚಿವರ ಪಟ್ಟಿ ಸಿದ್ದ, ಶೀಘ್ರವೇ ಘೋಷಣೆ!?

ಒಟ್ಟು 24 ಸ್ಥಾನಗಳಿಗೆ 80ಕ್ಕೂ ಹೆಚ್ಚು ಶಾಸಕರು ಆಕಾಂಕ್ಷಿಗಳಾಗಿದ್ದು, ಪಕ್ಷದ ನಾಯಕರ ಮೇಲೆ ತೀವ್ರವಾದ ಒತ್ತಡ ಹಾಕುತ್ತಿದ್ದಾರೆ. ಈ ಹಿನ್ನೆಲೆ ಅಳೆದು ತೂಗಿ ಸಚಿವ ಸಂಪುಟ ವಿಸ್ತರಣೆಗೆ ಪಟ್ಟಿ ಸಿದ್ಧಪಡಿಸಿದ್ದಾರೆ ಎಂಬ ಮಾಹಿತಿ ಇದೆ.

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ದೆಹಲಿಯಲ್ಲಿ ಸಿಎಂ ಹಾಗೂ ಡಿಸಿಎಂ ನಡೆಸಿದ ಕಸರತ್ತು ಫಲಪ್ರದವಾಗಿದ್ದು ಶನಿವಾರ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ರಾಜಕೀಯ ಚಟುವಟಿಕೆ ಗರಿ ಗೆದರಿದ್ದು, ನೂತನ ಸಚಿವರ ಪಟ್ಟಿ ಫೈನಲ್ ಆಗಿದೆ ಎಂಬ ಮಾಹಿತಿ ಇದೆ.

ಎರಡು ದಿನಗಳ ಪ್ರವಾಸ ಪ್ರಯುಕ್ತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಿನ್ನೆ ಡೆಲ್ಲಿಗೆ ತೆರಳಿದ್ದು ರಾಷ್ಟ್ರೀಯ ನಾಯಕರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿ ಸಚಿವ ಸಂಪುಟ ವಿಸ್ತರಣೆಗೆ ಪಟ್ಟಿ ಅಂತಿಮಗೊಳಿಸಿದ್ದಾರೆ ಎಂಬ ಮಾಹಿತಿ ಇದೆ. ದಿನವಿಡೀ ವಿವಿಧ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಚರ್ಚಿಸಿರುವ ಸಿಎಂ ಹಾಗೂ ಡಿಸಿಎಂ ಪಟ್ಟಿಯನ್ನು ಅಂತಿಮಗೊಳಿಸಿಕೊಂಡಿದ್ದು, ಗುರುವಾರ ರಾತ್ರಿ ಇಲ್ಲವೇ ಶುಕ್ರವಾರ ಬೆಳಗ್ಗೆ ಅಧಿಕೃತ ಬಿಡುಗಡೆ ಆಗುವ ಸಾಧ್ಯತೆ ಇದೆ.

ಈಗಾಗಲೇ ಸರ್ಕಾರದಿಂದ ಸಚಿವ ಸಂಪುಟ ವಿಸ್ತರಣೆ ಸಂಬಂಧ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್​​ರಿಗೆ ಮಾಹಿತಿ ರವಾನೆ ಆಗಿದ್ದು, ಮೇ 27 ಅಂದರೆ ಶನಿವಾರ ಬೆಳಗ್ಗೆ 11:45ಕ್ಕೆ ನೂತನ ಸಚಿವರ ಪದಗ್ರಹಣ ಸಮಾರಂಭ ರಾಜಭವನದ ಒಳಗೆ ನಡೆಯಲಿದೆ. ಒಟ್ಟು 34 ಸ್ಥಾನಗಳ ಪೈಕಿ ಈಗಾಗಲೇ ಸಿಎಂ ಡಿಸಿಎಂ ಹಾಗೂ 8 ಸಚಿವರು ಸೇರಿದಂತೆ ಒಟ್ಟು 10 ಸ್ಥಾನಗಳು ಭರ್ತಿ ಆಗಿವೆ. ಉಳಿದಿರುವ 24 ಸ್ಥಾನಗಳ ಪೈಕಿ 20 ಸ್ಥಾನಗಳನ್ನ ಭರ್ತಿ ಮಾಡಿಕೊಂಡು ಉಳಿದ ನಾಲ್ಕು ಸ್ಥಾನವನ್ನು ಕಾಯ್ದಿರಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.

ಒಟ್ಟು 24 ಸ್ಥಾನಗಳಿಗೆ 80ಕ್ಕೂ ಹೆಚ್ಚು ಶಾಸಕರು ಆಕಾಂಕ್ಷಿಗಳಾಗಿದ್ದು, ಪಕ್ಷದ ನಾಯಕರ ಮೇಲೆ ತೀವ್ರವಾದ ಒತ್ತಡ ಹಾಕುತ್ತಿದ್ದಾರೆ. ಈ ಹಿನ್ನೆಲೆ ಅಳೆದು ತೂಗಿ ಸಚಿವ ಸಂಪುಟ ವಿಸ್ತರಣೆಗೆ ಪಟ್ಟಿ ಸಿದ್ಧಪಡಿಸಿರುವ ನಾಯಕರು ಇದಾದ ಬಳಿಕ ಉಂಟಾಗುವ ಅಸಮಾಧಾನ ಶಮನಕ್ಕೆ ನಾಲ್ಕು ಸ್ಥಾನವನ್ನು ಖಾಲಿ ಇರಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಶಾಸಕರ ಅಸಮಾಧಾನದ ಬಿಸಿ ಆಧರಿಸಿ ಆ ನಾಲ್ಕು ಸ್ಥಾನಗಳಿಗೆ ಸೂಕ್ತ ವ್ಯಕ್ತಿಗಳನ್ನ ಸೇರಿಸಿಕೊಳ್ಳುವ ಚಿಂತನೆ ಕಾಂಗ್ರೆಸ್ ನಡೆಸಿದೆ.

ಸಿಎಂ ಹಾಗೂ ಡಿಸಿಎಂ ರಾಷ್ಟ್ರೀಯ ನಾಯಕರ ಜೊತೆ ನಡೆಸಿದ ಸಭೆಯಲ್ಲಿ ಈ ಮಾಹಿತಿಯನ್ನು ವಿವರಿಸಿದ್ದು, ಇವರ ಮಾತಿಗೆ ಹೈಕಮಾಂಡ್ ನಾಯಕರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜ್ಯಪಾಲರು ಪ್ರವಾಸದಲ್ಲಿದ್ದು ಶನಿವಾರ ಬೆಳಗ್ಗೆ 11:45ರ ಒಳಗೆ ಬೆಂಗಳೂರಿಗೆ ತಲುಪುವಂತೆ ಸರ್ಕಾರದ ಪರವಾಗಿ ಮನವಿ ಸಲ್ಲಿಸಲಾಗಿದೆ. ರಾಜ್ಯಪಾಲರು ಸಹ ಒಪ್ಪಿದ್ದು 20 ಸಚಿವರಿಗೆ ಅಂದು ಪ್ರಮಾಣವಚನ ಬೋಧಿಸಲಿದ್ದಾರೆ.

ಶುಕ್ರವಾರ ಮಧ್ಯಾಹ್ನದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಗರಕ್ಕೆ ಆಗಮಿಸಲಿದ್ದು, ರಾಜಕೀಯ ಚಟುವಟಿಕೆ ಗರಿಗೆದರಲಿದೆ. ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣದ ಹಲವು ಶಾಸಕರು ತಮ್ಮದೇ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದು ಇದರಲ್ಲಿ ಯಾರಿಗೆ ಯಶಸ್ಸು ಸಿಕ್ಕಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದರ ಹೊರತಾಗಿ ಸಚಿವರಿಗೆ ಖಾತೆ ಹಂಚಿಕೆ ಸಹ ಆಗಬೇಕಿದ್ದು, ಈ ವಿಚಾರದಲ್ಲಿಯೂ ಸಾಕಷ್ಟು ಹಗ್ಗ ಜಗ್ಗಾಟ ನಡೆಯುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜನರಿಗೆ ಕಾಂಗ್ರೆಸ್ ಸರ್ಕಾರ ಬಂದರೆ ಈಡೇರಿಸುವುದಾಗಿ ಐದು ಗ್ಯಾರಂಟಿಗಳನ್ನ ಘೋಷಿಸಿದ್ದ ಕಾಂಗ್ರೆಸ್ ತನ್ನ ಮಾತಿಗೆ ಬದ್ಧವಾಗಿ ನಡೆದುಕೊಳ್ಳಬೇಕಿದೆ. ಪೂರ್ಣಪ್ರಮಾಣದ ಸಚಿವ ಸಂಪುಟ ರಚನೆ ಆಗುತ್ತಿದ್ದಂತೆ ಸಚಿವ ಸಂಪುಟ ಸಭೆ ಕರೆದು ಎಲ್ಲಾ ಗ್ಯಾರಂಟಿಗಳಿಗೆ ಅಧಿಕೃತ ಕಾನೂನು ಮುದ್ರೆ ಒತ್ತಬೇಕಿದೆ.

ಯಾರಿಗೆ ಅವಕಾಶ?: ಶನಿವಾರ ಬೆಳಗ್ಗೆ 11.45ಕ್ಕೆ ಪ್ರಮಾಣ ವಚನ ನಡೆಯಲಿದೆ. ಅಂದು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ಸ್ವೀಕರಿಸುವ ಸಾಧ್ಯತೆ. ಸಂಭಾವ್ಯ ಸಚಿವರ ಪಟ್ಟಿ ಇಂತಿದೆ.

  1. ಲಕ್ಷ್ಮೀ ಹೆಬ್ಬಾಳ್ಕರ್​​
  2. ಈಶ್ವರ ಖಂಡ್ರೆ
  3. ಶಿವಾನಂದ ಪಾಟೀಲ್
  4. ಬಸವರಾಜ್ ರಾಯರೆಡ್ಡಿ
  5. ಶರಣಬಸಪ್ಪ ದರ್ಶನಾಪೂರ
  6. ಡಾ.ಹೆಚ್.ಸಿ.ಮಹದೇವಪ್ಪ
  7. ಶಿವರಾಜ್ ತಂಗಡಗಿ
  8. ಬೈರತಿ ಸುರೇಶ್​
  9. ಕೃಷ್ಣ ಬೈರೇಗೌಡ
  10. ಕೆ.ವೆಂಕಟೇಶ್
  11. ಎಸ್.ಎಸ್.ಮಲ್ಲಿಕಾರ್ಜುನ್
  12. ರಹಿಂ ಖಾನ್
  13. ಡಾ.ಅಜಯ್ ಸಿಂಗ್
  14. ಸಿ.ಪುಟ್ಟರಂಗಶೆಟ್ಟಿ
  15. ಹೆಚ್.ಕೆ.ಪಾಟೀಲ್ಎಂ
  16. ಎಂ.ಪಿ.ನರೇಂದ್ರಸ್ವಾಮಿ
  17. ಎಂ.ಸಿ.ಸುಧಾಕರ್
  18. ಡಿ.ಸುಧಾಕರ್
  19. ಬಿ.ನಾಗೇಂದ್ರ ಅಥವಾ ಕೆ.ಎನ್.ರಾಜಣ್ಣ
  20. ದಿನೇಶ್ ಗುಂಡೂರಾವ್
  21. ಆರ್.ವಿ.ದೇಶಪಾಂಡೆ
  22. ಬಿ.ಕೆ.ಹರಿಪ್ರಸಾದ್
  23. ಡಾ.ಶರಣಪ್ರಕಾಶ್ ಪಾಟೀಲ್ಲ
  24. ಲಕ್ಷ್ಮಣ ಸವದಿ

ಇಷ್ಟು ಜನ ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂಬ ಮಾತು ಬಲವಾಗಿ ಕೇಳಿಬಂದಿದೆ.

ಇದನ್ನೂ ಓದಿ: ಟೆಂಡರ್ ಪ್ರಕ್ರಿಯೆಗೆ ಗುತ್ತಿಗೆದಾರರ ನಿರಾಸಕ್ತಿ: ಜೂನ್ 1ರಿಂದ ಬಿಬಿಎಂಪಿ ಶಾಲೆಗಳಲ್ಲಿ ಹೊರಗುತ್ತಿಗೆ ಶಿಕ್ಷಕರು ಗೈರಾಗುವ ಆತಂಕ

Last Updated :May 25, 2023, 11:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.