ETV Bharat / state

ಟೆಂಡರ್ ಪ್ರಕ್ರಿಯೆಗೆ ಗುತ್ತಿಗೆದಾರರ ನಿರಾಸಕ್ತಿ: ಜೂನ್ 1ರಿಂದ ಬಿಬಿಎಂಪಿ ಶಾಲೆಗಳಲ್ಲಿ ಹೊರಗುತ್ತಿಗೆ ಶಿಕ್ಷಕರು ಗೈರಾಗುವ ಆತಂಕ

author img

By

Published : May 25, 2023, 8:25 PM IST

ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರ ನೇಮಕಾತಿ ನಿಯಮಾವಳಿ ಪ್ರಕಾರ ಶಿಕ್ಷಕರನ್ನು ನೀಡುತ್ತೇವೆ. ಆದರೆ, ನಾಲ್ಕು ವಲಯವಾರು ಟೆಂಡರ್ ಕೈ ಬಿಡಬೇಕು. ಇದರಿಂದ ಸಕಾಲಕ್ಕೆ ಶಿಕ್ಷಕರಿಗೆ ವೇತನ ಪಾವತಿ ಆಗುತ್ತಿಲ್ಲ ಎಂದು ಗುತ್ತಿಗೆದಾರರೊಬ್ಬರು ಆರೋಪಿಸಿದ್ದಾರೆ.

Brihat Bangalore Mahanagara Corporation
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಬೆಂಗಳೂರು: ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರು ಪಾಲ್ಗೊಳ್ಳದ ಹಿನ್ನೆಲೆ ರಾಜಧಾನಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಜೂನ್1ರಿಂದ ಗೈರಾಗುವ ಆತಂಕ ಎದುರಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಶಾಲಾ, ಕಾಲೇಜುಗಳಿಗೆ 728 ಶಿಕ್ಷಕ, ಶಿಕ್ಷಕಿಯರ ಹೊರಗುತ್ತಿಗೆ ನೇಮಕಾತಿ ಟೆಂಡರ್ ಕರೆಯಲಾಗಿತ್ತು. ಆದರೆ, ಹಲವು ದಿನಗಳಿಂದ ಟೆಂಡರ್ ಕರೆದರೂ ಗುತ್ತಿಗೆದಾರರು ಭಾಗವಹಿಸದಿರುವ ಕಾರಣ ಮರು ಟೆಂಡರ್ ಕರೆಯಲಾಗಿದೆ. ಈ ಪ್ರಕ್ರಿಯೆ ಮುಗಿಯುವರೆಗೂ ಶಿಕ್ಷಕರ ಕೊರತೆ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.

ಹೊರಗುತ್ತಿಗೆ ಶಿಕ್ಷಕರ ಟೆಂಡರ್ ಪ್ರಕ್ರಿಯೆಯಲ್ಲಿ ಹಲವಾರು ನ್ಯೂನತೆಗಳು ಇರುವುದರಿಂದ ಗುತ್ತಿಗೆದಾರ ಸಂಸ್ಥೆಗಳು ಭಾಗವಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ನಾಲ್ಕು ವಲಯಗಳಲ್ಲಿ ಟೆಂಡರ್ ಕರೆಯದಿರುವುದರಿಂದ ವಲಯವಾರುಗಳಲ್ಲಿ ಬಿಲ್ ಸಂದಾಯ ಮಾಡಿ, ಶಿಕ್ಷಕರಿಗೆ ವೇತನ ನೀಡಲು ವಿಳಂಬವಾಗುತ್ತದೆ. ಒಂದು ವಲಯ ವ್ಯಾಪ್ತಿಯಲ್ಲಿ ಸಕಾಲಕ್ಕೆ ಸಂಬಳ ಪಾವತಿ ಆಗಿದ್ದರೆ, ಇನ್ನೂಂದು ವಲಯ ವ್ಯಾಪ್ತಿ ವೇತನ ವಿಳಂಬವಾಗಿ ಅರ್ಧ ಶಿಕ್ಷಕರಿಗೆ ಸಂಬಳ ನೀಡುವುದು, ಇನ್ನೂಬ್ಬರಿಗೆ ನೀಡದಂತೆ ಆಗುತ್ತದೆ ಎಂದು ಗುತ್ತಿಗೆದಾರರೊಬ್ಬರು ಮಾಹಿತಿ ನೀಡಿದ್ದಾರೆ.

ವಲಯವಾರು ಟೆಂಡರ್ ಕೈ ಬಿಡಲಿ: ಅಧಿಕಾರ ಕೇಂದ್ರೀಕರಣ ಒಂದೇ ಕಡೆ ಬಿಲ್​ ಪಾವತಿ ಮಾಡಿ, ಒಂದೇ ಕಡೆ ವೇತನ ಪಾವತಿ ಮಾಡುವುದರಿಂದ ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಎಲ್ಲ ಶಿಕ್ಷಕರಿಗೂ ಸಕಾಲಕ್ಕೆ ವೇತನ ಪಾವತಿ ಹಾಗೂ ಏಕಕಾಲಕ್ಕೆ ಆಗುತ್ತದೆ. ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರ ನೇಮಕಾತಿ ಬೇಕಾದ ನಿಯಮವಳಿ ಪ್ರಕಾರ ಶಿಕ್ಷಕರನ್ನು ನೀಡುತ್ತೇವೆ. ಆದರೆ, ವಲಯವಾರು ಟೆಂಡರ್ ಕೈ ಬಿಡಬೇಕು ಎಂದು ಮನವಿ ಮಾಡಿದ್ದಾರೆ.

ಟೆಂಡರ್ ನಿಯಾಮವಳಿ ಸರಳೀಕರಣ ಅಗತ್ಯ: ಟೆಂಡರ್ ಅಂತಿಮವಾಗದೇ ಹೋದರೆ ಜೂನ್ ತಿಂಗಳ ಆರಂಭವಾಗುವ ಶಾಲೆ, ಕಾಲೇಜು ಹೊರಗುತ್ತಿಗೆ ಶಿಕ್ಷಕರು ಇರುವುದಿಲ್ಲ. ಟೆಂಡರ್ ನಿಯಾಮವಳಿ ಸರಳೀಕರಣ ಮಾಡಿರುವ ಕಾರಣದಿಂದ ಯಾರು ಬೇಕಾದರೂ ಭಾಗವಹಿಸಬಹುದು. ಇದರಿಂದ ಉತ್ತಮ ಗುಣಮಟ್ಟದ ಶಿಕ್ಷಕರನ್ನ ನೀಡಲು ಆಸಾಧ್ಯವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಟಿಇಟಿ ಉಲ್ಲೇಖಿಸಿ ಶಿಕ್ಷಕರನ್ನು ಹೊರ ಹಾಕುತ್ತಿರುವುದಕ್ಕೆ ವಿರೋಧ:ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿ ಟಿಇಟಿ ಅರ್ಹತೆ ಉಲ್ಲೇಖಿಸಿ ಹಲವು ಶಿಕ್ಷಕರನ್ನು ಹೊರ ಕಳುಹಿಸುತ್ತಿರುವ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಹೊರಗುತ್ತಿಗೆ ಶಿಕ್ಷಕರ ಹಿತ ಕಾಪಾಡಬೇಕೆಂದು ಹಲವು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ಸದ್ಯ ಬಿಬಿಎಂಪಿ ಅಡಿ 163 ಶಾಲಾ, ಕಾಲೇಜುಗಳಿದ್ದು 840 ಬೋಧಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ 110 ಕಾಯಂ ಬೋಧಕರಿದ್ದರೆ, 720 ಹೊರಗುತ್ತಿಗೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಇದೀಗ ಟಿಇಟಿ ಪರೀಕ್ಷೆ ನೆಪ ಹೇಳಿ ಕಳೆದ ಒಂದು ದಶಕಗಳಿಂದ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಬಿಬಿಎಂಪಿ ಮನೆಗೆ ಕಳುಹಿಸಲು ಮುಂದಾಗಿರುವುದು ಸರಿಯಲ್ಲ ಎಂದು ಶಿಕ್ಷಕರ ವರ್ಗ ಅಸಮಾಧಾನ ವ್ಯಕ್ತಪಡಿಸಿದೆ.

ಕಡಿಮೆ ಫಲಿತಾಂಶದ ಕಾರಣ ನೀಡಿ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ವಜಾಗೊಳಿಸಿ ಅವರ ಬದುಕನ್ನು ದುಃಸ್ಥಿತಿಗೆ ತಳ್ಳಲು ಹೊರಟಿದೆ. ಕಡಿಮೆ ಫಲಿತಾಂಶಕ್ಕೆ ಹೊರಗುತ್ತಿಗೆ ನೌಕರರೇ ಕಾರಣ ವೆಂಬ ಆರೋಪ ಸರಿಯಲ್ಲ. ಈ ವರೆಗೂ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶಾಲಾ ಶಿಕ್ಷಕಿಯೊಬ್ಬರು ಮಾತನಾಡಿ, ವರ್ಷದಲ್ಲಿ 11 ತಿಂಗಳು ಮಾತ್ರ ಗೌರವ ಧನ ನೀಡುತ್ತಾರೆ. ಅತೀ ಕಡಿಮೆ ಸಂಬಳ. ಅದು ಸಹ ತಿಂಗಳಿಗೆ ಸರಿಯಾಗಿ ಕೊಡದೇ ಮೂರು ತಿಂಗಳಿಗೊಮ್ಮೆ ನೀಡಲಾಗುತ್ತಿದೆ. ಇದರಿಂದ ಬದುಕು ಸಾಗಿಸುವುದು ಕಷ್ಟಕರವಾಗಿದೆ. ಈ ಹಿಂದೆ ಇದನ್ನು ಬಿಬಿಎಂಪಿ ಆಯುಕ್ತರ ಗಮನಕ್ಕೆ ತಂದರೂ, ಯಾವುದೇ ಬದಲಾವಣೆ ಕಂಡಿಲ್ಲ ಎಂದು ಆಪಾದನೆ ಮಾಡಿದ್ದಾರೆ.

ಇನ್ನು ಪ್ರೌಢಶಾಲೆಗಳಲ್ಲಿ ಗುಮಾಸ್ತರು ಇಲ್ಲ. ಹೀಗಾಗಿ, ಈ ಕೆಲಸವನ್ನು ಶಿಕ್ಷಕರೇ ನಿರ್ವಹಿಸಬೇಕು. ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಶಿಕ್ಷಕರನ್ನು ಒಒಡಿ ಕೆಲಸಕ್ಕೆ ನಿಯೋಜಿಸಿ ವಾರದಲ್ಲಿ ಎರಡು ಮೂರು ಶಾಲೆಗಳಿಗೆ ಸುತ್ತಾಡಿಸುತ್ತಾರೆ. ಪ್ರತಿಶಾಲೆಗೂ ಒಬ್ಬ ದೈಹಿಕ ಶಿಕ್ಷಕರು ಇರುವುದು ಕಡ್ಡಾಯ. ಆದರೆ ಎಷ್ಟೊ ಬಿಬಿಎಂಪಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲ. ಇದನ್ನು ನಾವೇ ಮಾಡಬೇಕು ಎಂದು ಆರೋಪಿಸಿದ್ದಾರೆ.
ಬಿಬಿಎಂಪಿಯ ನಿಜವಾದ ಉದ್ದೇಶ ಗುಣಮಟ್ಟದ ಶಿಕ್ಷಣ ಫಲಿತಾಂಶ ಗಳಿಸುವುದು ಆಗಿದ್ದರೆ ಈಗಿರುವ ಎಲ್ಲ ನೌಕರರನ್ನು ಪೂರ್ಣ ಪ್ರಮಾಣದ ಕಾಯಂ ನೌಕರರನ್ನಾಗಿ ನೇಮಿಸಿಕೊಳ್ಳಲಿ. ಜತೆಗೆ, ಸೂಕ್ತ ತರಬೇತಿ ನೀಡಲಿ ಎಂದು ಆಗ್ರಹಿಸಿದ್ದಾರೆ.

ಇದನ್ನೂಓದಿ:ಅಂತಾರಾಷ್ಟ್ರೀಯ ಮಟ್ಟದಲ್ಲಿ‌ ಮಿಂಚುತ್ತಿರುವ ಪ್ರತಿಭೆಗೆ ಬೇಕಾಗಿದೆ ಆರ್ಥಿಕ‌ ನೆರವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.