ETV Bharat / state

ದೇಶದ ಸಾರ್ವಭೌಮತ್ವ, ಅಖಂಡತೆ ಬಲಿಷ್ಠಗೊಳಿಸುವ ಸಂಕಲ್ಪ ಮಾಡೋಣ: ರಾಜ್ಯಪಾಲ ಗೆಹ್ಲೋಟ್

author img

By

Published : Jan 26, 2023, 10:49 AM IST

Updated : Jan 26, 2023, 12:33 PM IST

Governor Thawar Chand Gehlot speaking at the Republic Day function
ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

74ನೇ ಗಣರಾಜ್ಯೋತ್ಸವ ಸಮಾರಂಭದ ಅಂಗವಾಗಿ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಾಡಿನ ಜನತೆಯನ್ನು ಉದ್ದೇಶಿಸಿ ರಾಜ್ಯಪಾಲರ ಗೆಹ್ಲೋಟ್ ಭಾಷಣ ಮಾಡಿದರು.

ಬೆಂಗಳೂರಿನ ಮಾಣಿಕ್‌ ಶಾ ಪರೇಡ್‌ ಮೈದಾನದಲ್ಲಿ ಗಣರಾಜ್ಯೋತ್ಸವ ಸಮಾರಂಭ

ಬೆಂಗಳೂರು: "ಮೂಲಸೌಕರ್ಯ, ಆರೋಗ್ಯ, ವಸತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ನಾವೆಲ್ಲರೂ ಸೇರಿ ಕರ್ನಾಟಕ ರಾಜ್ಯವನ್ನು ಸ್ವಸ್ಥ ಮತ್ತು ಸಮೃದ್ಧವಾಗಿಸೋಣ. ದೇಶದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಬಲಿಷ್ಠಗೊಳಿಸುವ ಸಂಕಲ್ಪ ಮಾಡೋಣ" ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ಕೊಟ್ಟರು. ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 74ನೇ ಗಣರಾಜ್ಯೋತ್ಸವ ಸಮಾರಂಭದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಯನ್ನುದ್ದೇಶಿಸಿ ಅವರು ಮಾತನಾಡಿದರು.

"ದೇಶದ ಪ್ರಗತಿಪರ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದೆ. ರಾಜ್ಯದ ಸರ್ವಾಂಗೀಣ ನಿರಂತರ ಅಭಿವೃದ್ಧಿ ಉದ್ದೇಶದೊಂದಿಗೆ ಮೂಲಭೂತ ಸೇವೆಗಳನ್ನು ಒದಗಿಸಲು ವಿಭಿನ್ನ, ನವೀನ ಮತ್ತು ಸರ್ವರನ್ನು ಒಳಗೊಂಡ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ನಾವು ಅಗ್ರಗಣ್ಯ ಸ್ಥಾನದಲ್ಲಿದ್ದೇವೆ. “ನವಭಾರತಕ್ಕಾಗಿ ನವ ಕರ್ನಾಟಕ" ಎಂಬ ಧೈಯದೊಂದಿಗೆ “ಆಜಾದಿ ಕಾ ಅಮೃತ್ ಮಹೋತ್ಸವ" ಕಾರ್ಯಕ್ರಮದಡಿಯಲ್ಲಿ ಅಮೃತ ಶಾಲೆಗಳ ಯೋಜನೆ, ಅಮೃತ ಆರೋಗ್ಯ, ಮೂಲಸೌಕರ್ಯ ಉನ್ನತೀಕರಣ ಯೋಜನೆ, ಅಮೃತ ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆ, ಅಮೃತ ಸ್ವ-ಸಹಾಯ ಗುಂಪುಗಳ ಯೋಜನೆ, ಅಮೃತ ನವೋದ್ಯಮ ಯೋಜನೆ, ಅಮೃತ ಕ್ರೀಡಾ ದತ್ತು ಯೋಜನೆ ಇತ್ಯಾದಿಗಳನ್ನು ಒಳಗೊಂಡಂತೆ 14 ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ವಿವಿಧ ಹಂತಗಳಲ್ಲಿ ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ" ಎಂದರು.

"2020-21ರ ಎಸ್‌ಡಿಜಿ ಸೂಚ್ಯಂಕ ವರದಿಯ ಪ್ರಕಾರ, ಕರ್ನಾಟಕ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯಾದ್ಯಂತ ಇರುವ ಸಣ್ಣ, ಅತಿ ಸಣ್ಣ, ಮಧ್ಯಮ ಹಾಗೂ ದೊಡ್ಡ ಹಿಡುವಳಿದಾರರನ್ನು ಗುರುತಿಸಲು ದಿನಾಂಕ: 01/10/2022 ರಿಂದ 11 ನೇ ಕೃಷಿ ಗಣತಿಯ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೂ. 6478.76 ಕೋಟಿ ವೆಚ್ಚ ಮಾಡಲಾಗಿದ್ದು, 2022ನೇ ವರ್ಷದ ಜನವರಿ ತಿಂಗಳಿನಿಂದ ಡಿಸೆಂಬರ್ ಅಂತ್ಯದವರೆಗೆ ಒಟ್ಟು 13.47 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆ ಮಾಡಿ, 29.03 ಲಕ್ಷ ಕುಟುಂಬಗಳ 52.71 ಲಕ್ಷ ಜನರಿಗೆ ಉದ್ಯೋಗ ಒದಗಿಸಲಾಗಿದೆ. ಒಟ್ಟು ರೂ.4110 ಕೋಟಿಗಳ ಕೂಲಿ ಮೊತ್ತವನ್ನು ಕೂಲಿಕಾರರ ಖಾತೆಗಳಿಗೆ ನೇರವಾಗಿ ಪಾವತಿಸಲಾಗಿದೆ. ಡಿಸೆಂಬರ್ 2022 ರ ಅಂತ್ಯದವರೆಗೆ ರೂ.2314.34 ಕೋಟಿ ವೆಚ್ಚದಲ್ಲಿ 13.35 ಲಕ್ಷ ಮನೆಗಳಿಗೆ ಸಕ್ರಿಯ ನಲ್ಲಿ ಸಂಪರ್ಕಗಳನ್ನು ಒದಗಿಸಲಾಗಿದೆ" ಎಂದು ತಿಳಿಸಿದರು.

"ಜಲ ಶಕ್ತಿ ಮಂತ್ರಾಲಯ, ಕೇಂದ್ರ ಸರ್ಕಾರ ಇವರು ಆಯೋಜಿಸಿದ ಸುಜಲಾಮ್​2.0 ಮತ್ತು ಸ್ವಚ್ಛತಾ ಹೀ ಸೇವಾ - 2022 ಆಂದೋಲನಗಳ ಅಡಿಯಲ್ಲಿ ಕರ್ನಾಟಕ ರಾಜ್ಯವು ಮೊದಲ ಪ್ರಶಸ್ತಿ ಪಡೆದಿದ್ದು, ಸ್ವಚ್ಛಭಾರತ ಅಭಿಯಾನದಡಿಯಲ್ಲಿ ಕರ್ನಾಟಕವು ರಾಷ್ಟ್ರದಲ್ಲಿ ಮಹತ್ವಾಕಾಂಕ್ಷಿ ಗ್ರಾಮಗಳ ಘೋಷಣೆಯಲ್ಲಿ 2ನೇ ಸ್ಥಾನವನ್ನು ಗಳಿಸಿದೆ. 2022-23ನೇ ಸಾಲಿಗೆ ಒಟ್ಟು 20.19 ಲಕ್ಷ ರೈತರಿಗೆ ಕೃಷಿ ಸಾಲ ಯೋಜನೆಯಡಿಯಲ್ಲಿ, ರೂ.15,066 ಕೋಟಿಗಳಷ್ಟು ಬೆಳೆ ಸಾಲವನ್ನು ಡಿಸೆಂಬರ್ 2022 ರ ಅಂತ್ಯದವರೆಗೆ ನೀಡಲಾಗಿದೆ. ಮಹಿಳಾ ಸ್ವಸಹಾಯ ಗುಂಪುಗಳಿಗೆ ರೂ 5.00 ಲಕ್ಷಗಳವರೆಗಿನ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ವಿತರಿಸಲಾಗಿದೆ. ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ಯೋಜನೆಯಡಿಯಲ್ಲಿ ದಿನಾಂಕ:17-01-2023ರ ಅಂತ್ಯಕ್ಕೆ 32.32 ಲಕ್ಷ ಸದಸ್ಯರನ್ನು ನೋಂದಾಯಿಸಲಾಗಿದೆ" ಎಂದು ಮಾಹಿತಿ ನೀಡಿದರು.

"ಅಗ್ರಿಕಲ್ಚರ್​ ಟುಡೇ ಮ್ಯಾಗ್​ಜಿನ್​ ತನ್ನ 13ನೇ ಕೃಷಿ ನಾಯಕ ಸಮಾವೇಶ ಮತ್ತು ಪ್ರಶಸ್ತಿ ಕಾರ್ಯಕ್ರಮ-2022 ರಲ್ಲಿ ತೋಟಗಾರಿಕೆ ಅಭಿವೃದ್ಧಿ ಮತ್ತು ಉತ್ಪನ್ನಗಳ ಪ್ರೋತ್ಸಾಹಕ್ಕಾಗಿ ಕರ್ನಾಟಕ ರಾಜ್ಯವನ್ನು “ಉತ್ತಮ ತೋಟಗಾರಿಕಾ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ತೋಟಗಾರಿಕಾ ಇಲಾಖೆಯು 4,663 ಹೆಕ್ಟೇರ್ ಪ್ರದೇಶವನ್ನು ಆಧುನಿಕ ಕೃಷಿ ಪದ್ಧತಿಗೆ ಒಳಪಡಿಸಿದೆ. 26.21 ಲಕ್ಷ ಹೆಕ್ಟೇರ್ ಗಳನ್ನು ತೋಟಗಾರಿಕಾ ನೀರಾವರಿಗೆ ಒಳಪಡಿಸಿದ್ದು, ಅದರಲ್ಲಿ 953 ಹೆಕ್ಟೇರ್ ಪುದೇಶವು ಹಸಿರು ಮನೆಗೆ ಒಳಪಡಿಸಿದೆ. ರೈತ ಸಮುದಾಯಕ್ಕೆ 60 ಲಕ್ಷ ಉತ್ಕೃಷ್ಟ ಮೊಳಕೆ ಸಸಿಗಳನ್ನು, 400 ಟನ್ ಜೈವಿಕ ಗೊಬ್ಬರ ಮತ್ತು 23,000 ಲೀ. ಅರ್ಕಾ ಮೈಕ್ರೋಬಿಯಲ್ ಕನ್ಸೋರ್ಟಿಯಂ ಅನ್ನು ಒದಗಿಸಲಾಗಿದೆ."

"ರಾಜ್ಯ ಸರ್ಕಾರವು ವಿವಿಧ ವಸತಿ ಯೋಜನೆಗಳಡಿಯಲ್ಲಿ 2098.85 ಕೋಟಿ ರೂಗಳ ವೆಚ್ಚದಲ್ಲಿ 1,57,244 ಮನೆಗಳನ್ನು ಪೂರ್ಣಗೊಳಿಸಿದೆ ಮತ್ತು ಒಂದು ಲಕ್ಷ ಬಹು ಮಹಡಿ ಯೋಜನೆಯಡಿಯಲ್ಲಿ ಒಟ್ಟು 59,476 ಬಹು ಮಹಡಿ ಮನೆಗಳ ನಿರ್ಮಾಣವನ್ನು ಕೈಗೊಳ್ಳಲಾಗುತ್ತಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ - ಸರ್ವರಿಗೂ ಸೂರು ಯೋಜನೆಯಡಿಯಲ್ಲಿ ರೂ.2,804.01 ಕೋಟಿಗಳ ವೆಚ್ಚದಲ್ಲಿ 44,452 ಮನೆಗಳನ್ನು ಪೂರ್ಣಗೊಳಿಸಿದೆ. ನನ್ನ ಸರ್ಕಾರವು ಸರ್ಕಾರಿ ಮಾಲೀಕತ್ವದಲ್ಲಿ ಇರುವ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ 3.36 ಲಕ್ಷ ಕುಟುಂಬಗಳಿಗೆ ಭೂ ಮಾಲೀಕತ್ವದ ಹಕ್ಕುಪತ್ರ ನೀಡುವ ಐತಿಹಾಸಿಕ ನಿರ್ಣಯ ಕೈಗೊಂಡಿದ್ದು, ಇಲ್ಲಿಯವರೆಗೆ ಈ ಕೊಳಗೇರಿ ಪ್ರದೇಶಗಳಲ್ಲಿ ಸಮೀಕ್ಷೆ ಕೈಗೊಂಡು ಇದುವರೆಗೂ 1,14,604 ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿದೆ" ಎಂದರು.

"ಸಮಾಜದ ದುರ್ಬಲ ವರ್ಗದ ಮಕ್ಕಳಿಗೆ ಸಹಾಯ ಮಾಡುವ ಸಲುವಾಗಿ ಸರ್ಕಾರ 6/19 ವರ್ಷ ರೈತ ವಿದ್ಯಾನಿಧಿ ಯೋಜನೆಯನ್ನು ಪ್ರಾರಂಭಿಸಿದೆ. ಇದುವರೆಗೆ ಒಟ್ಟು ರೂ.483.62 ಕೋಟಿ ರೂ.ಗಳ ವಿದ್ಯಾರ್ಥಿ ವೇತನವನ್ನು ರೈತರ ಮಕ್ಕಳಿಗೆ ವಿತರಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಫಲಾನುಭವಿಗಳನ್ನು ಒಳಗೊಂಡಿರುವ ಮೀನುಗಾರರು, ನೇಕಾರರು, ಕೃಷಿ ಕಾರ್ಮಿಕರು, ಟ್ಯಾಕ್ಸಿ ಚಾಲಕರು ಮುಂತಾದ ವಿವಿಧ ವರ್ಗಗಳಿಗೆ ಯೋಜನೆಯನ್ನು ವಿಸ್ತರಿಸಲಾಗಿದೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ 8101 ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣ ಮತ್ತು 978 ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕಾಗಿ ಅನುದಾನವನ್ನು ನೀಡಲಾಗಿದೆ. ಸರ್ಕಾರವು 4244 ಹೊಸ ಅಂಗನವಾಡಿ ಕೇಂದ್ರಗಳ ಪ್ರಾರಂಭಕ್ಕೆ ಅನುಮೋದನೆ ನೀಡಲಾಗಿದೆ."

"ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ 83 ರಿಂದ 69 ಕ್ಕೆ ಇಳಿದಿದೆ. ಸಾವಿರ ಕೋಟಿ ವೆಚ್ಚದಲ್ಲಿ ಆಸ್ಪತ್ರೆಗಳ ಮೇಲ್ದರ್ಜೆಗೇರಿದಲಾಗುತ್ತಿದೆ, ಬಿಪಿಎಲ್ ಕುಟುಂಬಕ್ಕೆ 5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. 75.76 ಲಕ್ಷ ಫಲಾನುಭವಿಗಳಿಗೆ ಮಾಸಿಕ ಪಿಂಚಣಿ ನೀಡಲಾಗುತ್ತಿದೆ.ನೀತಿ ಆಯೋಗದ ಸೂಚ್ಯಾಂಕದಂತೆ ರಾಜ್ಯಕ್ಕೆ ಪ್ರಥಮ ಶ್ರೇಣಿ ಸಿಕ್ಕಿದೆ‌, ಸ್ಟಾರ್ಟ್ ಅಪ್ ರ‌್ಯಾಂಕಿಂಗ್ ನಲ್ಲಿ ಕರ್ನಾಟಕವನ್ನು ಅತ್ಯುತ್ತಮ ಕಾರ್ಯನಿರ್ವಹಣೆಯ ರಾಜ್ಯ ಎಂದು ಘೋಷಸಲಾಗಿದೆ,ಈಸ್ ಆಫ್ ಡೂಯಿಂಗ್ ಬಿಸಿನೆಸ್ ನಲ್ಲಿ ಕರ್ನಾಟಕ ಶ್ರೇಷ್ಠ ಸಾಧಕ ರಾಜ್ಯವಾಗಿ ಹೊರಹೊಮ್ಮಿದೆ. ಹೂಡಿಕೆದಾರರ ಸಮಾವೇಶದ ಮೂಲಕ 9.81 ಲಕ್ಷ ಕೋಟಿ ಬಂಡವಾಳ ಆಕರ್ಷಿಸಿದೆ. ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿದೆ" ಎಂದು ರಾಜ್ಯದ ಸಾಧನೆಯನ್ನು ರಾಜ್ಯಪಾಲರು ವಿವರಿಸಿದರು.

"50 ಸಾವಿರ ಮಹಿಳಾ ಸ್ವಸಹಾಯ ಸಂಘಗಳಿಗೆ 1.5 ಲಕ್ಷ ಪ್ರಾರಂಭಿಕ ಧನ ನೀಡಿದ್ದು ಉತ್ತಮ ರಸ್ತೆ ಜಾಲ ನಿರ್ಮಾಣಕ್ಕೆ 5140 ಕೋಟಿ ಮಂಜೂರಾತಿ ನೀಡಲಾಗಿದೆ. ಅಮರ ಜ್ಯೋತಿ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿದ ಎಸ್ಸಿ ಎಸ್ಟಿ ಕುಟುಂಬಕ್ಕೆ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್, ಸಣ್ಣ, ಮಧ್ಯಮ ಕಾಫಿ ಬೆಳೆಗಾರರ 10 ಹೆಚ್ಪಿ ನೀರಾವರಿ ಪಂಪ್ ಸೆಟ್ ಸ್ಥಾವರಗಳ ವಿದ್ಯುತ್ ಶುಲ್ಕ ಮರುಪಾವತಿ, ಭತ್ತ,ರಾಗಿ, ಬಿಳಿ ಜೋಳಕ್ಕೆ ಬೆಂಬಲ ಬೆಲೆಯಡಿ ಖರೀದಿ ಮಾಡಲಾಗಿದೆ".

"ಘಟಪ್ರಭಾ ನದಿಯಿಂದ ಏತ ನೀರಾವರಿ ಮೂಲಕ ನೀರನ್ನು ಐದು ಬ್ಯಾರೇಜ್ ಗಳಲ್ಲಿ ತುಂಬಿಸುವ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದು, ಚಾಮರಾಜನಗರ, ಕೊಡಗು, ಬೀದರ್,ಹಾವೇರಿ, ಕೊಪ್ಪಳ,ಬಾಗಲಕೋಟೆ, ಹಾಸನದಲ್ಲಿ ಸ್ವಾಯತ್ತ ವಿವಿ ಸ್ಥಾಪನೆ,ಐಐಟಿ ಮಾದರಿಯಲ್ಲಿ ಏಳು ಕಾಲೇಜು ಮೇಲ್ದರ್ಜೆಗೆ ಕ್ರಮ ಕೈಗೊಳ್ಳಲಾಗಿದೆ."

"ಪರಿಶಿಷ್ಟ ಜಾತಿ ಮೀಸಲಾತಿ ಶೇ‌15 ರಿಂದ 17 ಕ್ಕೆ, ಪರಿಶಿಷ್ಟ ಪಂಗಡದ ಮೀಸಲಾತಿ ಶೇ.3 ರಿಂದ 7 ಕ್ಕೆ ಹೆಚ್ಚಿಸಲಾಗಿದೆ, ಸಮಾಜ ಕಲ್ಯಾಣ ಇಲಾಖೆ ಅಡಿ ಕಾರ್ಯಕ್ರಮಗಳಲ್ಲಿನ ಗುರಿಯಲ್ಲಿ ಎಸ್ಸಿ, ಎಸ್ಟಿ ಮಹಿಳೆಯರಿಗೆ ಶೇ.25 ರಷ್ಟು ಕಾಯ್ದಿರಿಸಲಾಗಿದೆ. ಐದು ಶೈಕ್ಷಣಿಕ ವಲಯದಲ್ಲಿ 1000 ವಿದ್ಯಾರ್ಥಿಗಳ ಸಾಮಾರ್ಥ್ಯದ ಪಂಡಿತ್ ದೀನದಯಾಳ್ ಉಪಾಧ್ಯಾಯ ವಸತಿ ಶಾಲೆ, ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ 100 ಅಂಬೇಡ್ಕರ್ ವಸತಿ ನಿಲಯ ಮತ್ತು ಹಿಂದುಳಿದ ವರ್ಗಗಳಿಗೆ 50 ಕನಕದಾಸ ವಸತಿ ನಿಲಯಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಎಸ್ಸಿ ಎಸ್ಟಿ ಸಮುದಾಯಕ್ಕೆ ಭೂ ಒಡೆತನ ಯೋಜನೆಯ ವೆಚ್ಚ 15 ರಿಂದ 20 ಲಕ್ಷಕ್ಕೆ ಹೆಚ್ಚಳ, ವಸತಿ ಯೋಜನೆ ಸಹಾಯಧನ 2 ಲಕ್ಷಕ್ಕೆ ಹೆಚ್ಚಳ ಮಾಡಿದ್ದು, ಪೌರ ಸೇವಕರ ಸೇವಾ ಖಾಯಮಾತಿಗೆ ಕ್ರಮ ವಹಿಸಲಾಗಿದೆ" ಎಂದು ರಾಜ್ಯ ಸರ್ಕಾರದ ಯೋಜನೆಗಳನ್ನು ರಾಜ್ಯಪಾಲರು ವಿವರಿಸಿದರು.

ಇದನ್ನೂ ಓದಿ: ದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ: ನೇರ ಪ್ರಸಾರ

Last Updated :Jan 26, 2023, 12:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.