ETV Bharat / state

ವೇದಗಳನ್ನು ಬಿಟ್ಟು ಜ್ಞಾನಿಗಳಾಗುವುದು ಕಷ್ಟ ಸಾಧ್ಯ: ರಾಮಕೃಷ್ಣ ಮಠದ ವೀರೇಶಾನಂದ ಸ್ವಾಮೀಜಿ

author img

By ETV Bharat Karnataka Team

Published : Dec 16, 2023, 10:17 AM IST

veereshananda swamiji
ವೀರೇಶಾನಂದ ಸ್ವಾಮೀಜಿ

ವೇದಗಳು ಮತ್ತು ಉಪನಿಷತ್ತುಗಳು ಪ್ರಕೃತಿಗನುಗುಣವಾಗಿ ರಚಿಸಲ್ಪಟ್ಟ ಗ್ರಂಥಗಳಾಗಿದ್ದು, ಅವುಗಳನ್ನು ಬಿಟ್ಟು ಜ್ಞಾನಿಗಳಾಗುವುದು ಕಷ್ಟ ಸಾಧ್ಯ ಎಂದು ರಾಮಕೃಷ್ಣ ಮಠದ ವಿರೇಶಾನಂದ ಸ್ವಾಮೀಜಿ ಹೇಳಿದರು.

ಬೆಂಗಳೂರು : ವೇದಗಳು ಎಂದರೆ ಜ್ಞಾನಗಳ ಭಂಡಾರ, ಅದನ್ನು ಬಿಟ್ಟು ಜ್ಞಾನಿಗಳಾಗುವುದು ಕಷ್ಟ ಸಾಧ್ಯ. ಅವುಗಳು ಹಿಂದೆ, ಇಂದು, ಮುಂದೆಯೂ ಸತ್ಯವಾಗಿರುವಂತಹದ್ದು. ಇವಕ್ಕೆ ಎಂದಿಗೂ ಸಾವಿಲ್ಲ. ಋಷಿಗಳು ಮಂತ್ರಗಳಿರುವ ನಾಲ್ಕು ವೇದಗಳನ್ನು ನಮ್ಮ ಸಂಸ್ಕೃತಿಗೆ ಕೊಡುಗೆಯಾಗಿ ಕೊಟ್ಟು ಹೋಗಿದ್ದಾರೆ ಎಂದು ರಾಮಕೃಷ್ಣ ಮಠದ ವೀರೇಶಾನಂದ ಸ್ವಾಮೀಜಿ ಹೇಳಿದರು.

ಅರಬಿಂದೋ ವೇದ ಸಂಸ್ಕೃತಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿರುವ ವೇದಗಳ ಕುರಿತಾದ ಮೂರು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪ್ರಾಚೀನ ಸಂಸ್ಕೃತಿಯ ಪಂಡಿತರು ವೇದಗಳನ್ನು ಇಂದ್ರಿಯಗಳಿಗೆ ನಿಲುಕದ ಆದರೂ ಸತ್ಯವಾಗಿರುವ ವಸ್ತುನಿಷ್ಠ ಗ್ರಂಥಗಳು ಎಂದು ಬಣ್ಣಿಸಿದ್ದಾರೆ. ಆದ್ದರಿಂದ ಆಧ್ಯಾತ್ಮಿಕ ಸಾಧನೆಗೆ ಮತ್ತು ಮೋಕ್ಷ ಪ್ರಾಪ್ತಿಗೆ ಅವುಗಳ ಅಧ್ಯಯನ ಮತ್ತು ಜೀವನದಲ್ಲಿ ಸಾರದ ಅಳವಡಿಕೆ ಬಹುಮುಖ್ಯವಾಗಿದೆ ಎಂದು ವ್ಯಾಖ್ಯಾನಿಸಿದರು.

ವೇದಗಳ ಶಬ್ಧಾರ್ಥವನ್ನು ಯಥಾವತ್ತಾಗಿ ಅರ್ಥೈಸುವುದು ಕಷ್ಟಸಾಧ್ಯವಾಗಿದೆ. ಒಂದೊಂದು ಶಬ್ಧ ಮತ್ತು ವಾಕ್ಯಗಳಿಗೆ ಸಂದರ್ಭಕ್ಕೆ ತಕ್ಕನಾಗಿ ವ್ಯಾಖ್ಯಾನಿಸುವ ಪಾಂಡಿತ್ಯದ ಅವಶ್ಯಕತೆಯಿದೆ. ನಂತರ ಬರೆಯಲ್ಪಟ್ಟ ಉಪನಿಷತ್ತುಗಳು ವೇದಗಳ ಸತ್ಯ ಸಾರವನ್ನು ಇನ್ನಷ್ಟು ಸರಳ ರೀತಿಯಲ್ಲಿ ಅರ್ಥೈಸಲು ಮತ್ತು ಪ್ರಚುರಪಡಿಸಲು ಪ್ರಯತ್ನಿಸಿವೆ. ವೇದಗಳು ಮತ್ತು ಉಪನಿಷತ್ತುಗಳು ಪ್ರಕೃತಿಗನುಗುಣವಾಗಿ ರಚಿಸಲ್ಪಟ್ಟ ಗ್ರಂಥಗಳಾಗಿವೆ ಎಂದು ಅಭಿಪ್ರಾಯಪಟ್ಟರು.

ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಮಾಜಿ ವಿಜ್ಞಾನಿ, ವೇದ ಪಂಡಿತರಾದ ಆರ್ ಎನ್ ಸ್ವಾಮಿ ಮಾತನಾಡಿ, ಸ್ವಾಮಿ ಅರಬಿಂದೋ ಅವರು ವೇದಗಳ ಬಗೆಗಿನ ಚಿಂತನೆಯ ಪುನರುತ್ಥಾನಕ್ಕೆ ಮತ್ತು ಜನರಲ್ಲಿ ಅಧ್ಯಾತ್ಮ ಚಿಂತೆಗಳ ಕುರಿತು ಜಾಗೃತಿ ಮೂಡಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಅವರು ಈ ಜಾಗೃತಿಯ ಕಾರ್ಯದಲ್ಲಿ ಸಾಕಷ್ಟು ಅಡೆತಡೆಗಳನ್ನು ಮತ್ತು ವಿರೋಧಗಳನ್ನು ಸಹ ಎದುರಿಸಬೇಕಾಯಿತು ಎಂದು ಹೇಳಿದರು.

ವೇದಗಳು ಸುಮಾರು 8 ಸಾವಿರದಿಂದ 10 ಸಾವಿರ ವರ್ಷಗಳ ಹಿಂದೆ ರಚಿಸಲ್ಪಟ್ಟಿವೆ ಎಂದು ಹೇಳಲಾಗುತ್ತದೆ. ಆದರೆ, ಅದರ ರಚನಾಕಾರರ ಬಗ್ಗೆ ಅಥವಾ ರಚನೆಯ ಸಮಯದ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಐರೋಪ್ಯರ ಪ್ರಕಾರ ಅದು 3 ಸಾವಿರ ವರ್ಷಗಳ ಹಿಂದೆ ರಚಿಸಲ್ಪಟ್ಟಿವೆ ಎನ್ನುವುದಾಗಿದೆ. ಆದರೆ, ಅವುಗಳ ರಚನೆ ಮತ್ತು ಪ್ರಸ್ತುತತೆ ಸಮಯ ಮತ್ತು ತರ್ಕಕ್ಕೆ ಮೀರಿದ್ದಾಗಿದೆ ಎಂದು ಬಣ್ಣಿಸಿದರು.

ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಮಕರಂದ್ ಪರಂಜಪೆ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತ ಮಾತನಾಡಿ, ವೇದಗಳ ಬಗ್ಗೆ ಕೂಲಂಕಷವಾದ ಅಧ್ಯಯನದ ಅವಶ್ಯಕತೆಯಿದೆ. ರಾಮಕೃಷ್ಣ ಮಠ ಮತ್ತು ಅರಬಿಂದೋ ವೇದ ಸಂಸ್ಕೃತಿ ಸಂಸ್ಥೆಗಳು ಈ ನಿಟ್ಟಿನಲ್ಲಿ ಹಲವು ದಶಕಗಳಿಂದ ಕಾರ್ಯೋನ್ಮುಖವಾಗಿವೆ. ವೇದ ನಿಷ್ಠ ವ್ಯಕ್ತಿಗಳು ಮತ್ತು ಸಂಸ್ಥೆಗಳು ಇನ್ನಷ್ಟು ಒಗ್ಗಟ್ಟಿನಿಂದ ಕೆಲಸ ಮಾಡಿ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ : ಉತ್ತರ ಕರ್ನಾಟಕದ ಏಕೈಕ ಸಂಸ್ಕೃತ ವೇದ ಪಾಠ ಶಾಲೆಗೆ ಪ್ರವೇಶ ಪಡೆಯಲು ಮುಕ್ತ ಅವಕಾಶ !

ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಭರತ್ ಲಾಲ್ ಮೀನಾ, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಕೆ ಆರ್ ವೇಣುಗೋಪಾಲ್, ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದರೆ ಹಲವು ಗಣ್ಯರು, ವೇದಾಸಕ್ತರು ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.