ETV Bharat / state

ರಾಜ್ಯದಲ್ಲಿ ವನ್ಯಜೀವಿ ಉತ್ಪನ್ನ ಮಾರಾಟಕ್ಕೆ ತಡೆ: ಉನ್ನತ ಮಟ್ಟದ ಸಮಿತಿ ರಚನೆ

author img

By ETV Bharat Karnataka Team

Published : Oct 25, 2023, 9:27 PM IST

ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ
ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ

ರಾಜ್ಯದಲ್ಲಿ ವನ್ಯಜೀವಿ ಉತ್ಪನ್ನ ಮಾರಾಟ ತಡೆಗೆ ಸರ್ಕಾರವು ಉನ್ನತ ಮಟ್ಟದ ಸಮಿತಿ ರಚಿಸಿದೆ.

ಬೆಂಗಳೂರು: ಹುಲಿ ಉಗುರು, ಹುಲಿ ಹಲ್ಲು ಸೇರಿದಂತೆ ವನ್ಯಜೀವಿಗಳ ಯಾವುದೇ ಅಂಗಾಂಗದಿಂದ ಮಾಡಿದ ಉತ್ಪನ್ನ ಮತ್ತು ವಸ್ತುಗಳ ಮಾರಾಟ ತಡೆಗೆ ಜನಜಾಗೃತಿ ಮೂಡಿಸಲು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ವರದಿ ಸಲ್ಲಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಅರಣ್ಯ, ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಈ ಸಂಬಂಧ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸ್ಪಷ್ಟ ಸೂಚನೆ ನೀಡಿದ್ದು, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ-ಎಪಿಸಿಸಿಎಫ್ (ವನ್ಯಜೀವಿ) ನೇತೃತ್ವದಲ್ಲಿ ಸಮಿತಿ ರಚಿಸುವಂತೆ ನಿರ್ದೇಶಿಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯಿದೆ ಜಾರಿಗೆ ಬಂದಾಗಿನಿಂದ ದಾಖಲಾಗಿರುವ (ದೂರು) ಪ್ರಕರಣಗಳು, ಕಾನೂನಿನಡಿಯಲ್ಲಿ ಕೈಗೊಂಡಿರುವ ಕ್ರಮ ಹಾಗೂ ಹಾಲಿ ದಾಖಲಾಗಿರುವ ಮತ್ತು ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಒಂದು ವಾರದೊಳಗೆ ವರದಿ ಸಲ್ಲಿಸಲು ಸಮಿತಿಗೆ ತಿಳಿಸಲಾಗಿದೆ.

ಬಿಗ್​ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಹುಲಿ ಉಗುರು ಇರುವ ಲಾಕೆಟ್ ಧರಿಸಿದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಅವರನ್ನು ಬಂಧಿಸಿದ್ದರು. ಆ ನಂತರ ಹಲವು ಗಣ್ಯರ ಬಳಿಯೂ ಹುಲಿ ಉಗುರಿನ ಸರ ಇದೆ ಎಂಬ ಬಗ್ಗೆ ದೂರುಗಳು ಬರುತ್ತಿದ್ದು, ರಾಜ್ಯದಾದ್ಯಂತ ವನ್ಯಜೀವಿಗಳ ಯಾವುದೇ ಅಂಗಾಂಗ ಹೊಂದಿದ ವಸ್ತುಗಳ ಸಂಗ್ರಹಣೆ, ಮಾರಾಟ, ದಾಸ್ತಾನನ್ನು ಸಂಪೂರ್ಣ ನಿಯಂತ್ರಿಸಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಗಳೂ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸಚಿವರು ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಈ ನೆಲದ ಕಾನೂನಿನ ಮುಂದೆ ಎಲ್ಲರೂ ಸಮಾನರು. ವನ್ಯ ಜೀವಿಯ ಯಾವುದೇ ಅಂಗಾಂಗದ ಉತ್ಪನ್ನಗಳನ್ನು ಅಕ್ರಮವಾಗಿ ಹೊಂದುವುದು ಅಪರಾಧವಾಗುತ್ತದೆ. ಈ ಬಗ್ಗೆ ದೂರು ಬಂದರೆ ಇಲಾಖೆ, ಪರಿಶೀಲನೆ ನಡೆಸಿ ಕ್ರಮ ಜರುಗಿಸುತ್ತದೆ ಎಂದು ಅವರು ಬೀದರ್​ನಲ್ಲಿ ಹೇಳಿದ್ದರು.

ಇದನ್ನೂ ಓದಿ: ಹುಲಿ ಉಗುರು ಪೆಂಡೆಂಟ್ ಹೊಂದಿರುವ ಆರೋಪ: ದರ್ಶನ್, ರಾಕ್​ಲೈನ್ ವೆಂಕಟೇಶ್‌ ಮನೆಯಲ್ಲಿ ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.