ETV Bharat / state

ಮೆರವಣಿಗೆ, ಹಬ್ಬ, ಮದುವೆ ಸಮಾರಂಭಗಳಲ್ಲಿ ಪಟಾಕಿ ಸಿಡಿಸುವುದಕ್ಕೆ ನಿಷೇಧ, ಹಸಿರು ಪಟಾಕಿಗೆ ಅವಕಾಶ: ಸಿಎಂ

author img

By ETV Bharat Karnataka Team

Published : Oct 10, 2023, 4:02 PM IST

Updated : Oct 10, 2023, 9:36 PM IST

Prohibition of bursting firecrackers
Prohibition of bursting firecrackers

ಅತ್ತಿಬೆಲೆ ಪಟಾಕಿ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಲೈಸನ್ಸ್ ಸೇರಿದಂತೆ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದೆ.

ಬೆಂಗಳೂರು: ಮೆರವಣಿಗೆ, ಗಣೇಶೋತ್ಸವ ಸೇರಿದಂತೆ ಇತರೆ ಹಬ್ಬ, ಮದುವೆ ಸಮಾರಂಭಗಳಲ್ಲಿ ಪಟಾಕಿ ಸಿಡಿಸುವುದಕ್ಕೆ ನಿಷೇಧ ಹೇರಲಾಗುವುದು. ಕೇವಲ ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶವಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿಂದು ಅತ್ತಿಬೆಲೆ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ರಾಜ್ಯಾದ್ಯಂತ ಪ್ರತಿಯೊಂದು ಲೈಸನ್ಸ್​ದಾರರ ಸ್ಥಳ ಪರಿಶೀಲನೆ ನಡೆಸಿ, ಲೋಪಗಳಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅತ್ತಿಬೆಲೆ ಪ್ರಕರಣದಲ್ಲಿ ತಹಶೀಲ್ದಾರ್, ಇನ್ಸ್​ಪೆಕ್ಟರ್ ಮತ್ತು ರೀಜನಲ್ ಫೈರ್ ಆಫೀಸರ್ ಅಮಾನತಿಗೆ ಸೂಚನೆ ನೀಡಲಾಗಿದೆ. ಪಟಾಕಿ ಗೋದಾಮಿಗೆ ಲೈಸನ್ಸ್ ನೀಡಿದ ಡಿಸಿ, ಎಸ್​ಪಿಗೆ ನೊಟೀಸ್ ನೀಡಲು ತಿಳಿಸಲಾಗಿದೆ ಎಂದು ಸಿಎಂ ತಿಳಿಸಿದರು.

ಅತ್ತಿಬೆಲೆ ಪಟಾಕಿ ದುರಂತವಾದ ಮಳಿಗೆಗೆ ಸಂಬಂಧಿಸಿದಂತೆ ಸರ್ಕಲ್‌ ಇನ್ಸ್‌ಪೆಕ್ಟರ್‌ ವರದಿ, ಛಾಯಾಚಿತ್ರಗಳೊಂದಿಗೆ ಚಕ್ಕುಬಂದಿ ನಿಗದಿ ಮಾಡಿ ವರದಿ ಸಲ್ಲಿಸಿದ್ದಾರೆ. ಪೊಲೀಸ್‌ ಅಧೀಕ್ಷಕರು, ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ. ಈ ವರದಿಯ ಆಧಾರದಲ್ಲಿ ಜಿಲ್ಲಾಧಿಕಾರಿಗಳು ಪರವಾನಗಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ತಹಶೀಲ್ದಾರರಿಂದಲೂ ವರದಿ ಪಡೆದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದರು.

ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಅಧಿಕಾರಿಗಳು ಎಲ್ಲ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಎಕ್ಸ್‌ಪ್ಲೋಸಿವ್‌ ಆ್ಯಕ್ಟ್​ನಲ್ಲಿ ಲೈಸನ್ಸ್‌ ಕೊಡುವಾಗ ಎಚ್ಚರಿಕೆ ವಹಿಸಬೇಕು. ಹದಿನಾಲ್ಕು ಜನರ ಜೀವಕ್ಕೆ ಯಾರು ಹೊಣೆಗಾರರು?, ಎಲ್ಲ ಮಾನದಂಡಗಳನ್ನು ಪೂರೈಸಿದ್ದಾರೆಯೇ ಎಂದು ನೋಡಬೇಕು. ತಳಹಂತದ ಅಧಿಕಾರಿಗಳು ಸಲ್ಲಿಸಿದ ವರದಿ ಸರಿ ಇದೆಯೇ ಎಂದು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು ಎಂದು ಸಿಎಂ ತಾಕೀತು ಮಾಡಿದರು.

ಅಧಿಕಾರಿಗಳೊಂದಿಗೆ ಸಿಎಂ
ಅಧಿಕಾರಿಗಳೊಂದಿಗೆ ಸಿಎಂ ಸಭೆ

ಇದೇ ವೇಳೆ ಅಲ್ಲಿರುವ ಎಲ್ಲ ಮಳಿಗೆಗಳ ಸುರಕ್ಷತೆಯನ್ನೂ ತಪಾಸಣೆ ಮಾಡಲು ಅಧಿಕಾರಿಗಳಿಗೆ ಸಿಎಂ ಸೂಚಿಸಿದರು. ಇನ್ನು ಮುಂದೆ ಲೈಸನ್ಸ್‌ ನೀಡುವಾಗ ಜಿಲ್ಲಾಧಿಕಾರಿಗಳು, ಪೊಲೀಸ್‌ ಅಧೀಕ್ಷಕರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ತಪಾಸಣಾ ವರದಿ ಸರಿಯಾಗಿದೆಯೇ ಎಂದು ಪರಿಶೀಲಿಸಿಯೇ ಲೈಸನ್ಸ್‌ ನೀಡುವ ಬಗ್ಗೆ ತೀರ್ಮಾನಿಸಬೇಕು. ಈ ಪ್ರಕರಣದಲ್ಲಿ ಗೋಡೌನ್‌ಗೆ ಅನುಮತಿ ನೀಡಿರಲಿಲ್ಲ. ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು ಎಂದು ಸಭೆಯ ಗಮನಕ್ಕೆ ತರಲಾಯಿತು.

ರಾಜ್ಯದೆಲ್ಲೆಡೆ ತಪಾಸಣೆ ನಡೆಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಎಲ್ಲ ಗೋಡೌನ್‌ಗಳು ಹಾಗೂ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವುಗಳ ಪರವಾನಗಿ ರದ್ದುಪಡಿಸಬೇಕು ಎಂದು ಸಿಎಂ ಸೂಚಿಸಿದರು.

ಬೆಂಗಳೂರು ನಗರದಲ್ಲಿ ಎರಡು ರೀತಿಯ ಪರವಾನಗಿಗಳಿವೆ. ಶಾಶ್ವತ ಮಳಿಗೆಗಳು ಹಾಗೂ ತಾತ್ಕಾಲಿಕ ಮಳಿಗೆಗಳಿಗೆ ಪರವಾನಗಿ ನೀಡಲಾಗುತ್ತಿದೆ. ಬಿಬಿಎಂಪಿ, ವಿದ್ಯುತ್‌, ಅಗ್ನಿಶಾಮಕ, ಟ್ರಾಫಿಕ್‌ ಮತ್ತು ಕಾನೂನು, ಸುವ್ಯವಸ್ಥೆ ವಿಭಾಗದ ನಿರಾಕ್ಷೇಪಣಾ ಪತ್ರ ಪಡೆದು ಲೈಸನ್ಸ್‌ ನೀಡಲಾಗುತ್ತದೆ. ಇದು ಐದು ವರ್ಷಕ್ಕೊಮ್ಮೆ ನೀಡಲಾಗುತ್ತಿದೆ. ನವೀಕರಣಕ್ಕೆ ನಿರಾಕ್ಷೇಪಣಾ ಪತ್ರದ ಅಗತ್ಯವಿರುವುದಿಲ್ಲ. ಸ್ಫೋಟಕಗಳ ನಿಯಂತ್ರಕರು ನವೀಕರಿಸುತ್ತಾರೆ. ಈ ಕುರಿತು ನಿಯಮಾವಳಿಗಳ ತಿದ್ದುಪಡಿ ಅಗತ್ಯವಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು. ರಾಜ್ಯಕ್ಕೆ ಅನ್ವಯಿಸುವ ನಿಯಮ ಬದಲಿಸಲು ತಿಳಿಸಿದರು.

ನಿಗದಿ ಮಾನದಂಡ ಪೂರೈಸದಿದ್ದರೂ, ತಪಾಸಣಾ ವರದಿ ನೀಡಿ ಶಿಫಾರಸು ಮಾಡಿದ ಸರ್ಕಲ್‌ ಇನ್ಸ್‌ಪೆಕ್ಟರ್‌, ತಹಶೀಲ್ದಾರ್‌, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳನ್ನು ಅಮಾನತು ಮಾಡಲು ಹೇಳಿದರು. ಅತ್ತಿಬೆಲೆ-ಹೊಸೂರು ಗಡಿ ಭಾಗದಲ್ಲಿ ಬರುವ ಪಟಾಕಿಗಳ ಕುರಿತು ತೀವ್ರ ನಿಗಾ ವಹಿಸಲು ಹೇಳಿದರು. ಈ ಕುರಿತು ನ್ಯಾಯಾಲಯಗಳ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು. ಹಸಿರು ಪಟಾಕಿಗಳ ಮಾರಾಟವನ್ನೂ ಖಾತರಿಪಡಿಸಿಕೊಳ್ಳಬೇಕೆಂದರು.

ಸಭೆಯಲ್ಲಿ ಭಾಗವಹಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ರಾಜಕೀಯ ಸಮಾವೇಶಗಳಲ್ಲಿ ಹಾಗೂ ವಿವಾಹ ಸಮಾರಂಭಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಪಟಾಕಿ ಬಳಕೆಯನ್ನು ನಿಷೇಧಿಸುವಂತೆ ಸಲಹೆ ನೀಡಿದರು. ಇನ್ನು ಮುಂದೆ ಸುಪ್ರೀಂ ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ ಎಂದರು.

ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಡಿಜಿಪಿ ಅಲೋಕ್‌ ಮೋಹನ್‌, ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌, ಬೆಂಗಳೂರು ನಗರ ಜಿಲ್ಲಾಧೀಕಾರಿ ಕೆ.ಎ. ದಯಾನಂದ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ್‌ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್ ಮತ್ತು ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹೆಚ್​ಡಿಕೆ ಮಾತಿಗೆ ಮೂರು ಕಾಸು ಬೆಲೆ ಇದೆಯಾ?: ವಿದ್ಯುತ್ ಕ್ಷಾಮಕ್ಕೆ ಶ್ವೇತ ಪತ್ರ ಹೊರಡಿಸಬೇಕೆಂಬ ಹೆಚ್​ಡಿಕೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ಅವರ ಮಾತಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ತಿಳಿಸಿದರು. ಹಿಂದಿನ ಮೈತ್ರಿ ಸರ್ಕಾರ ಕೆಡವಲು ಡಿಕೆಶಿ ಕಾರಣ ಎಂಬ ಹೆಚ್​ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಹೆಚ್​ಡಿಕೆ ಮಾತಿಗೆ ಮೂರು ಕಾಸು ಬೆಲೆ ಇದೆಯಾ? ಅವರ ಮಾತಿನಲ್ಲಿ ಸತ್ಯ ಇದೆಯಾ? ಅವರಿಗೆ ಭ್ರಮೆ. ಮೈತ್ರಿ ಆದರೆ ನಾನು ಸಿಎಂ ಆಗುತ್ತೇನೆ ಎಂಬ ಭ್ರಮೆ ಇತ್ತು. ಅದು ಆಗಲಿಲ್ಲ. ಕಾಂಗ್ರೆಸ್​ಗೆ ಜನ‌ ಆಶೀರ್ವಾದ ನೀಡಿದ್ದಾರೆ. ಅದಕ್ಕೆ ಅವರಿಗೆ ಚಡಪಡಿಕೆ ಶುರುವಾಗಿದೆ‌. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ : ಠಾಣೆಗೆ ಭೇಟಿ ನೀಡಿದ ಸಿಐಡಿ ಐಜಿ ಪ್ರವೀಣ್ ಮಧುಕರ್ ಪವಾರ್

Last Updated :Oct 10, 2023, 9:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.