ETV Bharat / state

ಪ್ಯಾಲೆಸ್ಟೈನ್​ ಪರ ಪ್ರತಿಭಟನೆಗೆ ಅನುಮತಿ ನಿರಾಕರಣೆ; ಸರ್ಕಾರದ ವಿರುದ್ಧ ಪ್ರಗತಿಪರರ ಅಭಿಯಾನ

author img

By ETV Bharat Karnataka Team

Published : Nov 4, 2023, 7:14 AM IST

pro-palestine-protest-online-petition-campaign-against-siddaramaih-govt
ಪ್ಯಾಲೆಸ್ಟೇನ್ ಪರ ಪ್ರತಿಭಟನೆ : ಅನುಮತಿ ನೀಡದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಪ್ರಗತಿಪರರಿಂದ ಆನ್​ಲೈನ್ ಪಿಟಿಷನ್

Online petition against Siddaramaiah govt : ಪ್ಯಾಲೆಸ್ಟೈನ್ ಪರ ಪ್ರತಿಭಟನೆ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಪ್ರಗತಿಪರರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆನ್​ಲೈನ್​ ಪಿಟಿಷನ್​ ಅಭಿಯಾನ ಕೈಗೊಂಡಿದ್ದಾರೆ.

ಬೆಂಗಳೂರು : ಬಿಜೆಪಿ ಜೊತೆಗೆ ಕಾಂಗ್ರೆಸ್ ಸಖ್ಯ ಹೊಂದಿದ್ದು, ರಾಜ್ಯದಲ್ಲಿ ಕೋಮುವಾದ ನಿಗ್ರಹಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇಸ್ರೇಲ್ ಹಾಗೂ ಪ್ಯಾಲೆಸ್ಟೇನ್ ವಿಚಾರವಾಗಿ ಪ್ರತಿಭಟನೆ, ಹೋರಾಟ ಹಾಗೂ ವಿಚಾರಸಂಕಿರಣಗಳನ್ನು ಹಮ್ಮಿಕೊಳ್ಳಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಗತಿಪರ ಬರಹಗಾರರು, ಸಾಹಿತಿಗಳು, ಹೋರಾಟಗಾರರು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಆನ್ ಲೈನ್ ಪಿಟಿಷನ್ ಅಭಿಯಾನ ಕೈಗೊಂಡಿದ್ದಾರೆ.

ಈ ಸಂಬಂಧ Change.org ವೇದಿಕೆಯಲ್ಲಿ ಆನ್‌ಲೈನ್ ಪಿಟಿಷನ್ ಅಭಿಯಾನ ಆರಂಭಿಸಲಾಗಿದ್ದು, ಈ ಮೂಲಕ ಸೋನಿಯಾ ಗಾಂಧಿಗೆ ಮನವಿ ಮಾಡಲಾಗಿದೆ. ನ.2 ರಂದು ಆನ್​ಲೈನ್ ಪಿಟಿಷನ್ ಆರಂಭಿಸಲಾಗಿದ್ದು, ಶುಕ್ರವಾರದವರೆಗೆ ಸುಮಾರು 433 ಸಾಹಿತಿ, ಬರಹಗಾರರು ಹಾಗೂ ಹೋರಾಟಗಾರರು ಸಹಿ ಹಾಕಿದ್ದಾರೆ.

ಆನ್​ಲೈನ್ ಪಿಟಿಷನ್​ನಲ್ಲಿ ಏನಿದೆ ?: ಇಸ್ರೇಲ್- ಪ್ಯಾಲೆಸ್ಟೇನ್ ಯುದ್ಧದಲ್ಲಿ ಅಮಾಯಕ ನಾಗರೀಕರ ಸಾವು ಸಂಬಂಧ ಬೆಂಗಳೂರು, ರಾಜ್ಯದಲ್ಲಿ ಪ್ರತಿಭಟನೆ ನಡೆಸುವುದನ್ನು ರಾಜ್ಯ ಸರ್ಕಾರ ಹತ್ತಿಕ್ಕುತ್ತಿದೆ. ಪ್ರತಿಭಟನೆ ನಡೆಸಿದವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್‌ ದಾಖಲು ಮಾಡುತ್ತಿದ್ದಾರೆ. ವಿಚಾರ ಸಂಕಿರಣಗಳಿಗೆ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ದೂರಿದ್ದಾರೆ.

pro-palestine-protest-online-petition-campaign-against-siddaramaih-govt
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಪ್ರಗತಿಪರರಿಂದ ಆನ್​ಲೈನ್ ಪಿಟಿಷನ್

ಒಂದು ಕಡೆಯಲ್ಲಿ ಕಾಂಗ್ರೆಸ್ ಪ್ಯಾಲೆಸ್ಟೈನ್​ ಪರವಾಗಿ ನಿಲುವು ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ, ಕಾಂಗ್ರೆಸ್ ಅಧಿನಾಯಕಿಯಾದ ಸೋನಿಯಾ ಗಾಂಧಿ ಇಂಗ್ಲಿಷ್ ದೈನಿಕದಲ್ಲಿ ‘ಮಾನವೀಯತೆ ಕಟಕಟೆಯಲ್ಲಿದೆ’ ಎಂಬ ತಲೆ ಬರಹದಲ್ಲಿ ಸುದೀರ್ಘ ಲೇಖನ ಬರೆದಿದ್ದಾರೆ. ಇದರಲ್ಲಿ ಪ್ಯಾಲೆಸ್ಟೈನ್​- ಇಸ್ರೇಲ್‌ ಸಮಸ್ಯೆಯ ಪರಿಣಾಮ ಏನು?. ಎಂದು ವಿವರಿಸಿದ್ದು, ಲೇಖನದಲ್ಲಿ ಪ್ಯಾಲೆಸ್ಟೈನ್ ಪರವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ಯಾಲೆಸ್ಟೈನ್​ ಪರವಾಗಿ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ಏಕೆ ದಾಖಲು ಮಾಡುತ್ತಿದೆ ಎಂದು ಪ್ರಶ್ನಿಸಲಾಗಿದೆ.

ಸರ್ಕಾರ ಕೋಮುವಾದವನ್ನು ನಿಯಂತ್ರಿಸುವ ಪ್ರಯತ್ನ ನಡೆಸುತ್ತಿಲ್ಲ ಹಾಗೂ ಬಿಜೆಪಿಯ ಕೆಲವು ನಾಯಕರ ಜೊತೆಗೆ ಸಖ್ಯ ಇರುವುದರಿಂದ ಅವರ ಆರ್ಥಿಕ ಹಾಗೂ ಧಾರ್ಮಿಕ ಭ್ರಷ್ಟಾಚಾರಗಳನ್ನು ತನಿಖೆಗೆ ಒಳಪಡುತ್ತಿಲ್ಲ ಎಂದೂ ಆರೋಪಿಸಲಾಗಿದೆ. ಬಿಜೆಪಿ ಆಡಳಿತ ಅವಧಿಯಲ್ಲಿ ಕೆಲ ಪ್ರತಿಭಟನೆಗಳಿಗೆ ಅನುಮತಿ ನೀಡುತ್ತಿರಲಿಲ್ಲ‌.‌ ಅದು ಕಾಂಗ್ರೆಸ್ ಸರ್ಕಾರದಲ್ಲೂ ಮುಂದುವರಿದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದರ ಜತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೋಮು ಘಟನೆಗಳನ್ನು ನಿಗ್ರಹಿಸುವಲ್ಲಿ ವಿಫಲವಾಗಿದೆ. ಅಲ್ಪಸಂಖ್ಯಾತರು ಮತ್ತು ದಲಿತರು ಅಸುರಕ್ಷಿತೆಯ ಮನೋಭಾವದಿಂದ ಬದುಕುತ್ತಿದ್ದಾರೆ. ನೈತಿಕ ಪೊಲೀಸ್‌ ಗಿರಿಗೆ ಕಡಿವಾಣ ಹಾಕಿಲ್ಲ. ಇವೆಲ್ಲವೂ ಹಿಂದಿನ ಬಿಜೆಪಿ ಸರ್ಕಾರ ರೀತಿಯಲ್ಲಿ ಮುಂದುವರಿದಿದೆ ಎಂದು ಹೇಳಿದ್ದು, ಸರ್ಕಾರ ಬದಲಾವಣೆ ಆಗಿದೆ ಹೊರತು ನಿಲುವುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಉಲ್ಲೇಖಿಸಲಾಗಿದೆ.

ಅ.16ರಂದು ನೂರಾರು ಜನರು ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಗಾಜಾದಲ್ಲಿನ ಹಿಂಸಾಚಾರ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಆದರೆ ಪೊಲೀಸರು ಅವರಿಗೆ ಅನುಮತಿ ನಿರಾಕರಿಸಿರುವುದರ ಜೊತೆಗೆ ಹಲವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ಪ್ಯಾಲೆಸ್ಟೈನ್​ ಪರ ವಾಟ್ಸ್ ಅಪ್ ಸ್ಟೇಟಸ್ ಹಾಕಿದ ವ್ಯಕ್ತಿಯೋರ್ವನನ್ನು ಅ.12ರಂದು ಪೊಲೀಸರು ಬಂಧಿಸಿದ್ದರು. ಮೈಸೂರು ಹಾಗೂ ತಮಕೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಅವಕಾಶ ನೀಡಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ :ಇಸ್ರೇಲ್​ - ಪ್ಯಾಲೆಸ್ಟೇನ್​ ಹಮಾಸ್ ಸಂಘರ್ಷ : ಹಿಂಸಾಚಾರ ನಿಲ್ಲಿಸುವಂತೆ ವಿಶ್ವಸಂಸ್ಥೆಯಲ್ಲಿ ಭಾರತ​ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.