ETV Bharat / state

ಹಸು ಕೊಲ್ಲಿ ನೋಡೋಣ, ಗೋ ಹತ್ಯೆ ಮಾಡಿದರೆ 7 ವರ್ಷ ಜೈಲು ಶಿಕ್ಷೆ: ಪ್ರಭು ಚವ್ಹಾಣ್​​​

author img

By

Published : Dec 3, 2022, 6:38 PM IST

Updated : Dec 3, 2022, 10:38 PM IST

KN_BNG
ಪ್ರಭು ಚೌಹಾಣ್​

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗೋಹತ್ಯೆ ನಿಷೇಧ ಕಾಯ್ದೆ ಮತ್ತಷ್ಟು ಬಿಗಿ ಮಾಡಿದೆ ಎಂದು ವಿಕಾಸಸೌಧದಲ್ಲಿ ಸಚಿವ ಪ್ರಭು ಚವ್ಹಾಣ್​ ​ ಹೇಳಿದರು.

ಬೆಂಗಳೂರು: ನಮ್ಮ ಸರ್ಕಾರ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ತೆಗೆದು ಹಾಕುತ್ತೇವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಗರಂ ಆದ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್​ ​​ ಅವರು, ನೀ ಯಾರ್ರಪ್ಪ ಗೋ ಹತ್ಯೆ ನಿಷೇಧ ಕಾಯಿದೆ ತೆಗೆಯುವುದಾಗಿ ಹೇಳೋಕೆ?. ತಾಕತ್ ಇದ್ದರೆ ಹಸುವನ್ನು ಕೊಲ್ಲಿ ನೋಡೊಣ, ನಿಮ್ಮನ್ನು ಜೈಲಿಗೆ ಹಾಕಿಸುತ್ತೇನೆ ಎಂದು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸವಾಲು ಹಾಕಿದ್ದಾರೆ.

ಗೋಹತ್ಯೆ ಬಗ್ಗೆ ಪ್ರಭು ಚವ್ಹಾಣ್​​​ ಪ್ರತಿಕ್ರಿಯೆ

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಅಂದಿನ ಕಾಂಗ್ರೆಸ್‌ ಸರ್ಕಾರ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಅವಧಿಯಲ್ಲಿ ಕರ್ನಾಟಕ ಗೋ ವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮ 1964ರಲ್ಲಿ ಜಾರಿಗೆ ತಂದರು. ಕೇವಲ 1000 ರೂ. ದಂಡ ಮತ್ತು 6 ತಿಂಗಳು ಶಿಕ್ಷೆ ವಿಧಿಸಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರಲಿಲ್ಲ. ಇದರಿಂದ ಜಾನುವಾರು ಸಂಖ್ಯೆ ಕ್ರಮೇಣ ಇಳಿಮುಖವಾಗಿತ್ತು.

55 ವರ್ಷಗಳಿಂದ ಅದೇ ರೀತಿ ಇದುದ್ದನ್ನು ಮನಗಂಡ ನಮ್ಮ ಸರ್ಕಾರವು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ಅನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದನ್ನು ಕಡ್ಡಾಯಗೊಳಿಸಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಗೋ ಹತ್ಯೆ ನಿಷೇಧ ಕಾಯ್ದೆ ಮತ್ತಷ್ಟು ಬಿಗಿ ಮಾಡಿದ್ದೇವೆ. ಈಗ ಸದ್ಯ ಗೋ ಹತ್ಯೆ ಮಾಡಿದರೆ 3 ರಿಂದ 7 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರದಿಂದ 1 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ.

ಗೋಹತ್ಯೆ ನಿಷೇಧ ಕಾಯ್ದೆ ಜಾತಿಯಿಂದ ಸರ್ಕಾರಕ್ಕೆ ಯಾವುದೇ ರೀತಿಯ ಆರ್ಥಿಕ ಹೊರೆಯಾಗಿಲ್ಲ. ಸರ್ಕಾರಕ್ಕೆ ಯಾವುದೇ ರೀತಿಯ ನಷ್ಟವಾಗಿಲ್ಲ. ಜನರಿಗೆ ತಪ್ಪು ಮಾಹಿತಿ ನೀಡಿ, ದಿಕ್ಕು ತಪ್ಪಿಸುವುದು ಕಾಂಗ್ರೆಸ್‌ ಕೆಲಸ ಎಂದು ಸಚಿವರು ತಿರುಗೇಟು ನೀಡಿದರು. ಅಲ್ಲದೇ ಗೋ ಶಾಲೆಗಳಿಗೆ ಮೇವು ಪೂರೈಕೆ ಮಾಡಲು ಕಮಿಷನ್ ನೀಡಬೇಕು ಎಂಬ ಕಾಂಗ್ರೆಸ್ ನಾಯಕರ ಆರೋಪದಲ್ಲಿ ಹುರುಳಿಲ್ಲ. ಈ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಕೂಡಾ ಹಾಕಿದರು.

ಕಾಂಗ್ರೆಸ್ ಪಕ್ಷ ನನ್ನ ಹೆಸರಿಗೆ ಕಳಂಕ ತರಲು ಪ್ರಯತ್ನ ನಡೆಸಿದೆ. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಬೇಡ. ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ತನಿಖೆಗೆ ಸಿದ್ದ. ನಾನು ತಪ್ಪು ಮಾಡಿದ್ದರೆ ಈ ಕುರ್ಚಿಯಲ್ಲಿ ಒಂದು ಕ್ಷಣವೂ ಕೂರುವುದಿಲ್ಲ ಎಂದು ಸವಾಲು ಹಾಕಿದರು.

ಹರ್ಷ ಅಸೋಸಿಯೇಟ್ ನನ್ನನ್ನು ಸಂಪರ್ಕಿಸಿಲ್ಲ: ಕಾಂಗ್ರೆಸ್ ನಾಯಕರು ಹೇಳಿದಂತೆ ಹರ್ಷ ಅಸೋಸಿಯೇಟ್ ಸಂಸ್ಥೆಯವರು ನನ್ನನ್ನು ಸಂಪರ್ಕಿಸಿಲ್ಲ. 2018-19ರ ಅವಧಿಯಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಬರಗಾಲದಲ್ಲಿ ಗೋ ಶಾಲೆಗಳನ್ನು ಆರಂಭಿಸಲಾಗಿತ್ತು, ಆಗ ಹರ್ಷ ಅಸೋಸಿಯೇಟ್ ಸಂಸ್ಥೆ ಮೇವು ಪೂರೈಕೆ ಮಾಡಿತ್ತು. ಆ ಹಣ ಪಾವತಿಗೆ ನ್ಯಾಯಾಲಯದ ಮೊರೆ ಹೋಗಿದೆ ಎಂಬ ಮಾಹಿತಿ ಇದೆ. ಗೋ ಶಾಲೆಗಳಿಗೆ ಜಿಲ್ಲಾಧಿಕಾರಿಗಳೇ ಮುಖ್ಯಸ್ಥರಾಗಿದ್ದರು, ಇವು ಕಂದಾಯ ಇಲಾಖೆಯಿಂದ ತೆರೆಯಲಾದ ಗೋ ಶಾಲೆಗಳು. ಇದಕ್ಕೆ ತಮ್ಮ ಇಲಾಖೆಯಿಂದ ಯಾವುದೇ ರೀತಿಯ ಅನುದಾನ ನೀಡಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದೇವೆ. ಈ ಕಾಯ್ದೆ ಜಾರಿ ನಂತರ ಗೋ ಹತ್ಯಾ ಪ್ರಕರಣಗಳು ಕಡಿಮೆಯಾಗಿವೆ. ಆದರೆ, ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಗೋ ಹತ್ಯೆ ಕಾಯ್ದೆ ಸಮರ್ಪಕವಾಗಿ ಜಾರಿಯಾಗಿದೆ. ಇದರಿಂದ ಸರ್ಕಾರಕ್ಕೆ ಯಾವುದೇ ರೀತಿಯ ಆರ್ಥಿಕ ನಷ್ಟ ಆಗಿಲ್ಲ. ಆದರೂ ಕಾಂಗ್ರೆಸ್ ನಾಯಕರು ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರ ದಿಕ್ಕು ತಪ್ಪಿಸುವುದೇ ಕಾಂಗ್ರೆಸ್ ನಾಯಕರ ಕೆಲಸ ಎಂದು ಟೀಕಿಸಿದರು. ಕಾಂಗ್ರೆಸ್ ನಾಯಕರು ಸರಿಯಾಗಿ ಅಧ್ಯಯನ ಮಾಡಿ ಮಾತನಾಡಬೇಕು.

ಭ್ರಷ್ಟಾಚಾರದ ಪಿತಾಮಹಾ ಕಾಂಗ್ರೆಸ್‌ಗೆ ಹಿಂದೂಗಳ ಬಗ್ಗೆ ಅಭಿಮಾನವಿಲ್ಲ. ನನ್ನ ಹೆಸರಿಗೆ ಕಳಂಕ ತರಲು ಕಾಂಗ್ರೆಸ್ ನಾಯಕರು ಪ್ರಯತ್ನ ನಡೆಸಿದ್ದಾರೆ. ಇವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಖಾರವಾಗಿ ಹೇಳಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಶುಸಂಗೋಪನಾ ಇಲಾಖೆಯಲ್ಲಿ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಪಶು ಸಂಜೀವಿನಿ ಆಂಬ್ಯುಲೆನ್ಸ್ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿ ಮಾಡಿದ್ದೇವೆ.

ಹಾಗೆಯೇ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಯಲು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯನ್ನೂ ಸ್ಥಾಪಿಸಲಾಗಿದೆ. ಜೊತೆಗೆ ಜಾನುವಾರುಗಳ ಆರೋಗ್ಯ ಸೇವೆಗೆ ಪ್ರಾಣಿ ಸಹಾಯವಾಣಿಯನ್ನೂ ಆರಂಭಿಸಲಾಗಿದೆ ಎಂದು ವಿವರಿಸಿದರು. ರಾಜ್ಯದಲ್ಲಿ ಪ್ರಥಮವಾಗಿ 15 ಪಶು ಸಂಜೀವಿನಿ ಆಂಬ್ಯುಲೆನ್ಸ್ ಕಲ್ಪಿಸಲಾಗಿದೆ. ಆರೋಗ್ಯ ಸೇವೆಗೆ ಹೊಸ ಅಧ್ಯಾಯ ಬರೆದಿದ್ದನ್ನು ಮನಗಂಡ ಕೇಂದ್ರ ಸರ್ಕಾರವು ಶೇ.100ರಷ್ಟು ಸಹಾಯಧನದಲ್ಲಿ 275 ಪಶು ಸಂಚಾರಿ ಚಿಕಿತ್ಸಾ ವಾಹನಗಳನ್ನು ನೀಡಿದೆ.

ಈ ಯೋಜನೆಗೆ 44 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶೇ.60:40 ಅನುಪಾತದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಸರ್ಕಾರ ನೀಡುವ ಮನೆಗಳಲ್ಲಿ ಶೇ.3 ರಷ್ಟು ದಿವ್ಯಾಂಗರಿಗೆ ಮೀಸಲು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Last Updated :Dec 3, 2022, 10:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.