ETV Bharat / state

ಪ್ರವೀಣ್​ ನೆಟ್ಟಾರು, ಹರ್ಷ ಸೇರಿ ಹಿಂದೂಗಳ ಹತ್ಯೆಯೇ ಪಿಎಫ್ಐ ನಿಷೇಧಕ್ಕೆ ಮೂಲ ಪ್ರೇರಣೆ

author img

By

Published : Sep 30, 2022, 11:31 AM IST

Popular Front of India
ಸಾಂದರ್ಭಿಕ ಚಿತ್ರ

ಬಿಜೆಪಿಯ ಭದ್ರ ಕೋಟೆಗಳಾದ ದಕ್ಷಿಣ ಕನ್ನಡದಲ್ಲಿ ಪ್ರವೀಣ್​ ನೆಟ್ಟಾರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಹರ್ಷ ಹತ್ಯೆಯಾದ ಬಳಿಕ ಮತ್ತು ಇವರ ಕೊಲೆಗೆ ದೇಶವ್ಯಾಪಿ ವ್ಯಕ್ತವಾದ ಆಕ್ರೋಶಕ್ಕೆ ಮಣಿದ ಕೇಂದ್ರ ಸರ್ಕಾರ ಪಿಎಫ್​ಐ ಬಗ್ಗುಬಡಿಯಲು ಸಿದ್ಧತೆ ನಡೆಸುತ್ತಿತ್ತು ಎನ್ನಲಾಗಿದೆ.

ಬೆಂಗಳೂರು: ಕೇಂದ್ರ ಸರ್ಕಾರ ಹಠಾತ್ತನೆ ಪಿಎಫ್​​ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಮತ್ತು 7 ಇತರ ಸಹ ಸಂಘಟನೆ ನಿಷೇಧಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ ನೆಟ್ಟಾರು, ಶಿವಮೊಗ್ಗದ ಹರ್ಷ ಸೇರಿದಂತೆ ಹಿಂದೂ ಕಾರ್ಯಕರ್ತರ ಹತ್ಯೆಯೇ ಪ್ರಮುಖ ಪ್ರೇರಣೆಯಾಗಿದೆ.

ಕರ್ನಾಟಕದಲ್ಲಿ ಹತ್ತು ಹಲವಾರು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದ್ದಾಗ ಪಿಎಫ್​​ಐ ನಿಷೇಧಿಸುವಂತೆ ಬಲವಾದ ಆಗ್ರಹ ಕೇಳಿ ಬಂದಾಗಲೂ ಗಮನಹರಿಸದ ಕೇಂದ್ರದ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಯಾವಾಗ ದಕ್ಷಿಣ ಕನ್ನಡದಲ್ಲಿ ಪ್ರವೀಣ್​ ನೆಟ್ಟಾರು ಮತ್ತು ಶಿವಮೊಗ್ಗದಲ್ಲಿ ಕಟ್ಟಾ ಹಿಂದೂ ಸಂಘಟನೆಗಳವರ ಕೊಲೆಯಾಯಿತೊ ಅದಕ್ಕೆ ಪ್ರತೀಕಾರ ಎಂಬಂತೆ ಪಿಎಫ್​​ಐ ನಂತಹ ಸಂಘಟನೆಗಳನ್ನು ನಿಷೇಧಿಸಿ ಕಠಿಣ ಎಚ್ಚರಿಕೆ ಸಂದೇಶ ರವಾನಿಸಿದೆ.

ರಾಜ್ಯದಲ್ಲಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ಕೈವಾಡವಿರುವ ಶಂಕೆ ವ್ಯಕ್ತಪಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಿಷೇಧಕ್ಕೆ ಹತ್ತಾರು ಬಾರಿ ಆಗ್ರಹಿಸಿದರೂ ಕೇಂದ್ರ ಸರ್ಕಾರ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಪಿಎಫ್​​ಐ ನಿಷೇಧ ಮಾಡುವಂತೆ ಪತ್ರ ಬರೆದಾಗಲೂ ಕೇಂದ್ರದ ಗೃಹ ಇಲಾಖೆ ಗಮನಿಸಿಯೂ ಮೌನವಾಗಿತ್ತು. ರಾಜ್ಯದಲ್ಲಿನ ಬಿಜೆಪಿ ಸಂಸದರಾದ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಪಿಎಫ್​ಐ ನಿಷೇಧಕ್ಕೆ ಮನವಿ ಮಾಡಿದಾಗಲು ಸಕಾರಾತ್ಮಕವಾಗಿ ಸ್ಪಂದನೆ ಬರಲಿಲ್ಲ.

ಬಿಜೆಪಿಯ ಭದ್ರ ಕೋಟೆಗಳಾದ ದಕ್ಷಿಣ ಕನ್ನಡದಲ್ಲಿ ಪ್ರವೀಣ್​ ನೆಟ್ಟಾರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಹರ್ಷ ಹತ್ಯೆಯಾದ ಬಳಿಕ ಮತ್ತು ಇವರ ಕೊಲೆಗೆ ದೇಶವ್ಯಾಪಿ ವ್ಯಕ್ತವಾದ ಆಕ್ರೋಶಕ್ಕೆ ಮಣಿದ ಕೇಂದ್ರ ಸರ್ಕಾರ ಹತ್ಯೆಯ ಬೆನ್ನ ಹಿಂದೆಯೇ ಪಿಎಫ್​ಐ ಬಗ್ಗುಬಡಿಯಲು ಸಿದ್ಧತೆ ನಡೆಸುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಯುಎಪಿಎ ಕಾಯ್ದೆಯಡಿ ಬ್ಯಾನ್​.. ಇಲ್ಲಿದೆ ಸಂಪೂರ್ಣ ವಿವರ

ಅಮಿತ್ ಶಾ ಬೆಂಗಳೂರು ಭೇಟಿಯಲ್ಲಿಯೇ ಸ್ಕೆಚ್: ಪ್ರವೀಣ್​ ನೆಟ್ಟಾರು ಹತ್ಯೆ ಬೆನ್ನಲ್ಲಿಯೇ ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ಹಿಂದೂ ಕಾರ್ಯಕರ್ತರ ಕೊಲೆಗಳ ಗಂಭೀರತೆ ಬಗ್ಗೆ ಮಾಹಿತಿ ಸಂಗ್ರಹಿಸಿ ಪಿಎಫ್​ಐ ನಿಷೇಧಕ್ಕೆ ಸ್ಕೆಚ್ ರೆಡಿ ಆಯಿತು ಎಂದು ಹೇಳಲಾಗಿದೆ. ಪ್ರವೀಣ್​ ನೆಟ್ಟಾರು ಮತ್ತು ಹರ್ಷ ಹತ್ಯೆ ಪ್ರಕರಣಗಳನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದಾಗ ಗಂಭೀರತೆ ಅರಿತ ಅಮಿತ್ ಶಾ ಬೆಂಗಳೂರು ಭೇಟಿಯ ಸಂದರ್ಭದಲ್ಲಿ ಪಡೆದ ವಿವರಗಳ ಪರಿಣಾಮ ಇಂದು ಪಿಎಫ್ಐ ನಿಷೇಧಕ್ಕೊಳಗಾಗಿದೆ.

ಸಾಕ್ಷಾಧಾರ ಸಂಗ್ರಹಿಸಿದ ಎನ್ಐಎ: ಪಿಎಫ್​ಐನ ಕಾರ್ಯ ಚುಟುವಟಿಕೆಗಳು, ದೇಶವಿದ್ರೋಹಿ ಸಂಘಟನೆಗಳ ಜೊತೆ ಪಿಎಫ್​ಐ ಹೊಂದಿರುವ ನಂಟು,ದೇಶವನ್ನು ಇಸ್ಲಾಮೀಕರಣ ಮಾಡುವ ಗುರಿ ಹೊಂದಿದ ಪಿಎಫ್​ಐ ಕಾರ್ಯಕರ್ತರ ಉದ್ದೇಶದ ಬಗ್ಗೆ ಸಮಗ್ರ ಮಾಹಿತಿ, ಸಾಕ್ಷಾಧಾರಗಳನ್ನು ಕೇಂದ್ರದ ಗೃಹ ಇಲಾಖೆ ಸಂಗ್ರಹಿಸಿ ಈಗ ನಿಷೇಧಕ್ಕೆ ಮುನ್ನುಡಿ ಬರೆದಿದೆ.

ಕೇಂದ್ರ ಸರ್ಕಾರದ ಗೃಹ ಇಲಾಖೆಯು ಎನ್ಐಎ ಮೂಲಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧಕ್ಕೂ ಮುನ್ನ ಕರ್ನಾಟಕ ಸೇರಿದಂತೆ ದೇಶದಾದ್ಯಂತ ಪಿಎಫ್​​ಐ ಕಚೇರಿ ಮತ್ತು ಮುಖಂಡರ ಮನೆ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿ ಮತ್ತಷ್ಟು ಸಾಕ್ಷಾಧಾರಗಳನ್ನು ಸಂಗ್ರಹಿಸಿದೆ. ಪಿಎಫ್​ಐ ಮುಖಂಡರು ವಿಚಾರಣೆ ವೇಳೆ ಮತ್ತು ಅವರಲ್ಲಿ ದೊರೆತ ಅಪಾಯಕಾರಿ ಸಾಕ್ಷಾಧಾರಗಳಿಂದ ಭವಿಷ್ಯದಲ್ಲಿ ದೇಶಕ್ಕೆ ಗಂಡಾಂತರ ಇರುವುದನ್ನು ಮನಗಂಡ ಕೇಂದ್ರ ಸರ್ಕಾರ ತಡಮಾಡದೇ ಸಂಘಟನೆ ಬ್ಯಾನ್ ಮಾಡಿದೆ.

ಸಾಕ್ಷಾಧಾರ ಬಹಿರಂಗ ಗೊಳಿಸುವಂತೆ ಆಗ್ರಹ: ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಬಿಜೆಪಿ ಪಕ್ಷ ಸ್ವಾಗತಿಸಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರರನ್ನು ಅಭಿನಂದಿಸಿದರೆ, ಕಾಂಗ್ರೆಸ್ , ಜೆಡಿಎಸ್ ಮುಖಂಡರು ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ. ನಿಷೇಧಕ್ಕೆ ಕಾರಣವಾದ ಪಿಎಫ್​​ಐ ವಿರುದ್ಧದ ಸಾಕ್ಷಾಧಾರಗಳನ್ನು ಬಹಿರಂಗ ಗೊಳಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Big News: ಪಿಎಫ್​ಐಗೆ ಕೇಂದ್ರದ ಅಂಕುಶ.. ಸಂಘಟನೆ ನಿಷೇಧಿಸಿ ಮಹತ್ವದ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.