ETV Bharat / state

ದೇಶದ ಬೆಳವಣಿಗೆಗೆ ಸರ್ಕಾರಿ ಶಿಕ್ಷಣ ವ್ಯವಸ್ಥೆ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ: ಸಚಿವೆ ನಿರ್ಮಲಾ

author img

By

Published : Apr 7, 2023, 5:45 PM IST

RV Educational Institutions Golden Jubilee Ceremony
ಆರ್. ವಿ ಶಿಕ್ಷಣ ಸಂಸ್ಥೆಗಳ ಸುವರ್ಣ ಮಹೋತ್ಸವ ಸಮಾರಂಭ

ದೇಶದ ಅಭಿವೃದ್ದಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶಂಸಿಸಿದ್ದಾರೆ.

ಬೆಂಗಳೂರು : ದೇಶದ ಬೆಳವಣಿಗೆಯಲ್ಲಿ ಸರ್ಕಾರದ ಶಿಕ್ಷಣ ವ್ಯವಸ್ಥೆಯ ಜೊತೆ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಕೂಡ ಅಪಾರ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಆರ್.ವಿ ಶಿಕ್ಷಣ ಸಂಸ್ಥೆಗಳ ಸುವರ್ಣ ಮಹೋತ್ಸವ ಸಮಾರಂಭ ಇಂದು ಜಯನಗರದ ಎನ್.ಎಂ. ಕೆ. ಆರ್. ವಿ ಸಂಸ್ಥೆಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಶಿಕ್ಷಣ ಸಂಸ್ಥೆಗಳನ್ನು ನೈತಿಕವಾಗಿ ಹಲವು ವರ್ಷಗಳ ಕಾಲ ನಡೆಸುವುದು ಸುಲಭದ ಸಂಗತಿಯಲ್ಲ. 1950 ರ ಆಸುಪಾಸಿನಲ್ಲಿ ಸ್ಥಾಪಿತವಾದ ಆರ್. ವಿ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣವನ್ನು ಕೈಗೆಟಕುವ ಬೆಲೆಯಲ್ಲಿ ಸರ್ವರಿಗೂ ನೀಡಿದೆ. ಹಲವು ಶಿಕ್ಷಣ ಸಂಸ್ಥೆಗಳನ್ನು, ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಸುಮಾರು 70 ವರ್ಷ ಗಳ ಕಾಲ ಕೊಡ ಮಾಡಿರುವುದು ಸಾಮಾನ್ಯ ಸಂಗತಿಯಲ್ಲ. ಸರ್ಕಾರದ ಸರಿ ಸಮಾನವಾಗಿ ಸ್ವಂತ ಶಕ್ತಿಯಿಂದ ಗುಣಮಟ್ಟದ ಶಿಕ್ಷಣವನ್ನು ಉಣಬಡಿಸಿ ಹಲವು ವಿದ್ಯಾರ್ಥಿಗಳ ಜೀವನಕ್ಕೆ ದಾರಿ ದೀಪವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡಿರುವುದು ಕೆಲಸ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಖಾಸಗಿ ಶಿಕ್ಷಣ ವ್ಯವಸ್ಥೆ ಅತ್ಯಂತ ವೇಗವಾಗಿ ಬೆಳೆದರೂ ಹಣದ ವ್ಯವಸ್ಥೆ ಮಾಡುವುದು ಸುಲಭವಾಗಿ ಇರುವುದಿಲ್ಲ. ಒಳ್ಳೆಯ ರೀತಿಯಲ್ಲಿ ಬೆಳವಣಿಗೆ ಹೊಂದಿ ತಮ್ಮ ಎಲ್ಲ ಶಿಕ್ಷಕರು, ಸಿಬ್ಬಂದಿಗಳಿಗೆ ಉತ್ತಮವಾದ ಸಂಬಳ ನೀಡುವುದು ಸವಾಲಿನ ಕೆಲಸ. ಭಾರತೀಯ ಕಾನೂನೂ ವ್ಯವಸ್ಥೆಯಲ್ಲಿ ಲಾಭರಹಿತ ಸಂಸ್ಥೆಗಳಾಗಿ ವರ್ಗೀಕರಿಸಲಾಗಿತ್ತು. ಅವುಗಳು ಸ್ವಯಂ ಸೇವಾ ಸಂಸ್ಥೆಗಳ ರೀತಿಯಲ್ಲಿ ಯವುದೇ ಲಾಭಕ್ಕೆ ಕೆಲಸ ಮಾಡುತ್ತಿಲ್ಲ ಎಂದು ಸಂವಿಧಾನದಲ್ಲೇ ಉಲ್ಲೇಖಿಸಲಾಗಿತ್ತು. ಆದರೆ ತಮ್ಮ ಸಿಬ್ಬಂದಿಗಳ ಸರಿಸಮಾನ ವೇತನಕ್ಕಾಗಿ, ಉತ್ತಮ ಕಟ್ಟಡಗಳನ್ನು ನಿರ್ಮಿಸಲು, ಮೂಲಭೂತ ಸೌಕರ್ಯ ಉತ್ತಮ ಪಡಿಸಲು ಅದನ್ನು ಲಾಭದಾಯಕ ಸಂಸ್ಥೆಯಾಗಿ ಮಾರ್ಪಡಾಗಬೇಕಿದೆ ಈ ಕುರಿತು ಸಾಕಷ್ಟು ಚರ್ಚೆಗಳು ಸಹ ನಡೆಯುತ್ತಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ದೇಶದಲ್ಲಿ ಹಲವಾರು ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಸರ್ಕಾರದ ಶಿಕ್ಷಣ ವ್ಯವಸ್ಥೆಯಲ್ಲಿ ವಿಶ್ವವಿದ್ಯಾನಿಲಯದ ರೀತಿಯಲ್ಲೇ ಉತ್ತಮ ಸೇವೆ ಸಲ್ಲಿಸಿವೆ. ನನ್ನ ಕಾಲೇಜು ಕೂಡ ತಾಲೂಕು ಮಟ್ಟದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು. ನಂತರ ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಕ್ಕೆ ಉನ್ನತ ಶಿಕ್ಷಣ ಪೂರೈಸಿದೆ. ನನ್ನ ಸ್ವಂತ ಅನುಭವದಲ್ಲಿ ಎಂದೂ ನನಗೆ ಸಣ್ಣ ನಗರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಮಾಡಿದೆ ಎನ್ನುವ ಅನಿಸಿಕೆ ಬಂದಿಲ್ಲ ಎಂದು ಅಭಿಪ್ರಾಯಪಟ್ಟರು.

ಸರ್ಕಾರ ಇಂದು ಕಡು ಬಡವರ ಶಿಕ್ಷಣಕ್ಕಾಗಿ ತನ್ನ ವ್ಯವಸ್ಥೆಯನ್ನು ಮುಂದುವರೆಸಬೇಕಿದೆ. ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ಸರಕಾರಿ ಶಿಕ್ಷಣ ಸಂಸ್ಥೆಗಳು ಸೇವೆಯನ್ನು ಒದಗಿಸುವ ಕೆಲಸ ಮಾಡುತ್ತಿದ್ದು ಮುಂದೆಯೂ ಮಾಡಲಿವೆ. ಆದರೆ ಇದರ ಜೊತೆ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿವೆ. ಈ ನಿಟ್ಟಿನಲ್ಲಿ ಆರ್.ವಿ ಶಿಕ್ಷಣ ಸಂಸ್ಥೆ ಕೂಡ ಕೆಲಸ ಮಾಡಿ ತೋರಿಸಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್,​ ಸುವರ್ಣ ಮಹೋತ್ಸವದ ಈ ಸಮಾರಂಭದಲ್ಲಿ ನಾನಿರುವುದು ಸೌಭಾಗ್ಯ. ನಮ್ಮ ತನ ನಮಗೆ ಶಕ್ತಿಯಾಗಿದೆ. ಕನಸನ್ನು ನನಸು ಮಾಡಲು ಶಿಕ್ಷಣ ಬೇಕು. ಈ ನಿಟ್ಟಿನಲ್ಲಿ ಸಮಾಜ, ದೇಶದ ಸಮಸ್ಯೆ ಬಗೆಹರಿಸಲು ಆರ್. ವಿ ಸಂಸ್ಥೆ ಶಿಕ್ಷಣದ ಮೂಲಕ ಸೇವೆ ಸಲ್ಲಿಸಿದೆ ಎಂದು ಹೇಳಿದರು.

21 ನೆಯ ಶತಮಾನದಲ್ಲಿ ಬುದ್ದಿಮ್ಮತ್ತೆ ಆರ್ಥಿಕತೆಯನ್ನು ಮುನ್ನಡೆಸುತ್ತಿದೆ. ಪ್ರಧಾನಿಮಂತ್ರಿ ನರೇಂದ್ರ ಮೋದಿ ಕೂಡ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ನಮ್ಮ ಹೊಸ ಶಿಕ್ಷಣ ನೀತಿ 100 ರಷ್ಟು ಮೊದಲಿಗಿಂತ ಉತ್ತಮವಾಗಿ ಹೊರ ಬಂದಿದೆ. ಸ್ಕಿಲ್ ಮತ್ತು ಸರ್ಟಿಫಿಕೇಟ್ ಎರಡೂ ಮುಖ್ಯವಾಗಿದೆ. ವಿದ್ಯಾರ್ಥಿಗಳು ಹಾಗು ಪ್ರಾಧ್ಯಾಪಕರ ಮೇಲೆ ಗುಣಮಟ್ಟದ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಜನರ ಭವಿಷ್ಯ ನಿರ್ಣಯ ಮಾಡಬೇಕಾದರೆ ಗುಣಮಟ್ಟದ ಶಿಕ್ಷಣ ಬೇಕಿದೆ ಎಂದು ಅಶ್ವಥ್ ನಾರಾಯಣ್​ ತಿಳಿಸಿದರು.

ಕೇಂದ್ರ ವಿತ್ತ ಸಚಿವೆ ರಾಜ್ಯದ ಅರ್ಥಿಕ ಸಮಸ್ಯೆ ಬಗೆಹರಿಸಲು ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆಯನ್ನು ನಡೆಸಿ ಶಿಕ್ಷಣಕ್ಕೆ ಹೆಚ್ಚು ಅರ್ಥಿಕ ಸಹಾಯ ಒದಗಿಸಿದ್ದಾರೆ. ಭಾರತದ ಉದ್ಯಮಗಳು ಇಂದು ವಿಶ್ವದ ಗುಣಮಟ್ಟದಲ್ಲಿ ಪೈಪೋಟಿ ನೀಡಲು ಬೆಂಗಳೂರು ಮಹಾನಗರದ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ. ವಿದ್ಯಾರ್ಥಿಗಳ, ಮಹಿಳೆಯರ ಸಬಲೀಕರಣಕ್ಕೆ ಆರ್. ವಿ ಶಿಕ್ಷಣ ಸಂಸ್ಥೆಯ ಕೊಡುಗೆ ಕೂಡ ಅಪಾರ ಎಂದು ಅಶ್ವಥ್ ನಾರಾಯಣ್​ ನುಡಿದರು. ಇನ್ನು ಈ ಕಾರ್ಯಕ್ರಮದಲ್ಲಿ ಆರ್. ವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ. ಪಿ ಶ್ಯಾಮ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ : ಟಿಕೆಟ್​ಗಾಗಿ ಒತ್ತಡವಿದೆ, ಗೆಲ್ಲುವ ಸಾಧ್ಯತೆ ನೋಡಿ​ ಹಂಚಿಕೆ: ಆದಷ್ಟು ಬೇಗ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಎಂದ ಬಿಎಸ್​ವೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.