ETV Bharat / state

ಎಸ್ಸಿ ಎಸ್ಟಿ ಮೀಸಲು ಹೆಚ್ಚಳ ಜಾರಿಗೆ ಕೇವಲ ಒಂದು ಸರ್ಕಾರಿ ಆದೇಶ ಸಾಕು: ನ್ಯಾ ನಾಗಮೋಹನದಾಸ್

author img

By

Published : Oct 12, 2022, 11:04 PM IST

Updated : Oct 13, 2022, 1:45 PM IST

ನ್ಯಾ ನಾಗಮೋಹನದಾಸ್
ನ್ಯಾ ನಾಗಮೋಹನದಾಸ್

ಎಸ್ಸಿ ಎಸ್ಟಿ ಮೀಸಲು ಹೆಚ್ಚಳ ಬಗ್ಗೆ ರಾಜ್ಯ ಸರ್ಕಾರದ ಸಚಿವ ಸಂಪುಟವು ತಾವು ನೀಡಿದ್ದ ವರದಿ ಒಪ್ಪಿಕೊಂಡ ಬಗ್ಗೆ ''ಈ ಟಿವಿ ಭಾರತಕ್ಕೆ '' ನೀಡಿದ ಎಕ್ಸ್​ಕ್ಲೂಸಿವ್​ ಸಂದರ್ಶನದಲ್ಲಿ ನಿವೃತ್ತ ನ್ಯಾಯಮೂರ್ತಿ ಹೆಚ್​ ಎನ್​ ನಾಗಮೋಹನದಾಸ್ ಸಂತಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಬಗ್ಗೆ ಸಚಿವ ಸಂಪುಟ ತೆಗೆದುಕೊಂಡ ತೀರ್ಮಾನವನ್ನು ಕೇವಲ ಒಂದು ಸರ್ಕಾರಿ ಆದೇಶ ಪ್ರಕಟಿಸುವ ಮೂಲಕ ರಾಜ್ಯ ಸರ್ಕಾರವು ತುರ್ತಾಗಿ ಅನುಷ್ಟಾನಕ್ಕೆ ತರಬಹುದಾಗಿದೆ ಎಂದು ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರಣೆ ಆಯೋಗದ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನದಾಸ್ ತಿಳಿಸಿದ್ದಾರೆ.

ಎಸ್ಸಿ ಎಸ್ಟಿ ಮೀಸಲು ಹೆಚ್ಚಳ ಬಗ್ಗೆ ರಾಜ್ಯ ಸರ್ಕಾರದ ಸಚಿವ ಸಂಪುಟವು ತಾವು ನೀಡಿದ್ದ ವರದಿ ಒಪ್ಪಿಕೊಂಡ ಬಗ್ಗೆ ''ಈ ಟಿವಿ ಭಾರತಕ್ಕೆ '' ನೀಡಿದ ಎಕ್ಸ್​ಕ್ಲೂಸಿವ್​ ಸಂದರ್ಶನದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಜಾರಿಗೆ ತರಲು ಸರ್ವ ಪಕ್ಷಗಳ ಸಭೆ ಕರೆದು ನಿರ್ಧಾರ ತಗೆದುಕೊಂಡಿದ್ದಕ್ಕೆ ನ್ಯಾ. ನಾಗಮೋಹನದಾಸ್ ಕೃತಜ್ಞತೆ ಸಲ್ಲಿದ್ದಾರೆ.

ನ್ಯಾ ನಾಗಮೋಹನದಾಸ್ ಸಂದರ್ಶನ

ಮೀಸಲಾತಿ ಹೆಚ್ಚಳ ಆದೇಶ ಜಾರಿಗೆ ತರುವ ಕುರಿತು ರಾಜ್ಯ ಸರ್ಕಾರವು ಯಾವುದಕ್ಕೂ ಕಾಯಬೇಕಾಗಿಲ್ಲ. ಸರ್ಕಾರಿ ಆದೇಶ ಪ್ರಕಟಿಸುವ ಮೂಲಕ ಈ ಕ್ಷಣವೇ ಅನುಷ್ಟಾನಕ್ಕೆ ತರಬಹುದಾಗಿದೆ. ಎಲ್ಲರೂ ಭಾವಿಸಿದಂತೆ ಕೇಂದ್ರ ಸರ್ಕಾರವು ಸಂಸತ್ತಿನ ಅಧಿವೇಶನದಲ್ಲಿ 9 ನೇ ಶೆಡ್ಯೂಲ್ ನಲ್ಲಿ ಮೀಸಲಾತಿ ಹೆಚ್ಚಳವನ್ನು ಸೇರಿಸಿದ ಬಳಿಕವೇ ಮೀಸಲಾತಿ ಹೆಚ್ಚಳ ಜಾರಿಗೆ ತರಬೇಕೆಂದೇನೂ ಇಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.

ಮೂರು ರೀತಿಯಲ್ಲಿ ಮೀಸಲಾತಿ ಹೆಚ್ಚಳ: ರಾಜ್ಯ ಸರ್ಕಾರವು ಮೂರು ರೀತಿಯಲ್ಲಿ ಮೀಸಲಾತಿ ಹೆಚ್ಚಳ ಆದೇಶ ಜಾರಿಗೆ ತರಬಹುದಾಗಿದೆ. ಮೊದಲನೆಯದಾಗಿ ಸರಕಾರಿ ಆದೇಶ ಪ್ರಕಟಿಸುವುದು. ಎರಡನೇಯದಾಗಿ ವಿಧಾನಸಭೆ ಅಧಿವೇಶನದಲ್ಲಿ ಎಸ್ಸಿ ಎಸ್ಟಿ ಮೀಸಲು ಹೆಚ್ಚಳ ಬಗ್ಗೆ ಮಸೂದೆ ಮಂಡಿಸಿ ವಿಧೇಯಕಕ್ಕೆ ಅಂಗೀಕಾರ ಪಡೆಯುವುದು. ನಂತರ ಅದನ್ನು ರಾಷ್ಟ್ರಪತಿಗಳ ಅಂಕಿತ ಪಡೆದು ಜಾರಿಗೊಳಿಸುವುದು. ಮೂರನೆಯದಾಗಿ ರಾಷ್ಟ್ರಪತಿಗಳ ಅಂಕಿತ ಪಡೆದ ವಿಧೇಯಕವನ್ನು ಕೇಂದ್ರ ಸರಕಾರಕ್ಕೆ ಕಳಿಸಿ ಲೋಕಸಭೆಯಲ್ಲಿ ಅನುಮೋದನೆ ಪಡೆದು 9 ನೇ ಶೆಡ್ಯೂಲ್ ನಲ್ಲಿ ಸೇರಿಸುವ ಮೂಲಕ ಮೀಸಲಾತಿ ಹೆಚ್ಚಳವನ್ನು ಕಾರ್ಯಗತಗೊಳಿಸಬಹುದಾಗಿದೆ.

9ನೇ ಶೆಡ್ಯೂಲ್ ನಲ್ಲಿ ಸೇರಿಸಿದರೂ ಹೋರಾಟ ಮಾಡಬಹುದು: 9ನೇ ಶೆಡ್ಯೂಲ್ ನಲ್ಲಿ ಸೇರಿಸಿದಾಕ್ಷಣ ಮೀಸಲಾತಿ ಹೆಚ್ಚಳಕ್ಕೆ ಯಾವುದೇ ಕಾನೂನು ಅಡಚಣೆಗಳು ಎದುರಾಗುವುದಿಲ್ಲವೆಂದು ಭಾವಿಸುವುದು ತಪ್ಪು. ಇತ್ತೀಚೆಗಿನ ಹಲವಾರು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ 9ನೇ ಶೆಡ್ಯೂಲ್ ನಲ್ಲಿ ಸೇರಿಸಿದ ಅಂಶಗಳನ್ನೂ ಸಹ ಸಂವಿಧಾನಕ್ಕೆ ವಿರುದ್ಧವಾಗಿದ್ದರೆ ರದ್ದುಪಡಿಸಿದ ನಿದರ್ಶನಗಳು ಇದ್ದಾವೆ ಎಂದು ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮೀಸಲಾತಿ ಪ್ರಮಾಣವು ಶೇಕಡ 50ನ್ನು ಮೀರಬಾರದೆಂದು ಸುಪ್ರೀಂಕೋರ್ಟ್​ ಇಂದಿರಾ ಸಹಾನಿ ಪ್ರಕರಣದಲ್ಲಿ ತೀರ್ಪು ನೀಡಿದೆ. ಈ ಬಗ್ಗೆ ಆಯೋಗವು ಗಂಭೀರವಾಗಿ ಪರಿಶೀಲನೆ ನಡೆಸಿ ಎಸ್ಸಿ ಮೀಸಲಾತಿಯನ್ನು ಶೇ. 15 ರಿಂದ 17ಕ್ಕೆ ಮತ್ತು ಎಸ್ಟಿ ಮೀಸಲಾತಿಯನ್ನು ಶೇ. 3 ರಿಂದ 7ಕ್ಕೆ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಮೀಸಲು ಪ್ರಮಾಣ ಶೇ.50 ಮೀರಬಾರದೆಂದು ಹೇಳಿರುವ ಇಂದಿರಾ ಸಹಾನಿ ಪ್ರಕರಣದಲ್ಲಿಯೇ ವಿಶೇಷ ಸಂದರ್ಭಗಳಲ್ಲಿ ಶೇಕಡ 50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಬಹುದೆಂದು ಸ್ಪಷ್ಟಪಡಿಸಿದೆ ಎಂದು ನ್ಯಾ. ನಾಗಮೋಹನದಾಸ್ ಅವರು ಹೇಳಿದ್ದಾರೆ.

ನ್ಯಾ ನಾಗಮೋಹನದಾಸ್ ಸಂದರ್ಶನ

9 ರಾಜ್ಯಗಳಲ್ಲಿ ಮೀಸಲಾತಿ ಶೇ 50 ನ್ನು ಮೀರಿದೆ: ಈಗಾಗಲೇ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಉತ್ತರಪ್ರದೇಶ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ 9 ರಾಜ್ಯಗಳಲ್ಲಿ ಮೀಸಲಾತಿ ಶೇಕಡ 50ನ್ನೂ ಮೀರಿದ ನಿದರ್ಶನಗಳು ಸಾಕಷ್ಟು ಇದ್ದಾವೆ ಇದು ನಮ್ಮ ರಾಜ್ಯದಲ್ಲಿ ನೆರವಿಗೆ ಬರಲಿದೆ. ಹಾಗೆಯೇ ಕೇಂದ್ರ ಸರಕಾರವು ಮೇಲ್ವರ್ಗದ ಕಡುಬಡವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ರಷ್ಟು ಮೀಸಲಾತಿ ಜಾರಿಗೆ ತಂದಿದೆ. ಹೀಗಿರುವಾಗ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.50 ರಷ್ಟನ್ನು ಮೀರಿದರೆ ಅದು ತಪ್ಪಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸಂದರ್ಶನದಲ್ಲಿ ನ್ಯಾಯಮೂರ್ತಿಗಳು ಮೀಸಲಾತಿ ಹೆಚ್ಚಳವನ್ನು ಮತ್ತು ಮೀಸಲು ಪ್ರಮಾಣ ಏರಿಕೆ ಮಾಡುವ ಅಗತ್ಯತೆಯನ್ನು ಅಂಕಿ ಅಂಶಗಳನ್ನು ಆಧರಿಸಿ ಪ್ರತಿಪಾದಿಸಿದ್ದು, ವಿವರವಾದ ಮಾಹಿತಿ ಇಲ್ಲಿದೆ.

ಓದಿ: ಎಸ್ಸಿ ಎಸ್ಟಿ ಮೀಸಲು ಹೆಚ್ಚಳ ಆದೇಶ ಜಾರಿಗೆ ಯಾವುದೇ ಕಾನೂನು ತೊಡಕುಗಳಿಲ್ಲ: ನ್ಯಾ ನಾಗಮೋಹನದಾಸ್

Last Updated :Oct 13, 2022, 1:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.