ETV Bharat / state

ಜಯನಗರದ ಹೊಸ ವಾಣಿಜ್ಯ ಸಂಕೀರ್ಣದ ಮಳಿಗೆ ಹಂಚಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ: ಎನ್ ಆರ್ ರಮೇಶ್

author img

By

Published : Feb 27, 2023, 5:22 PM IST

ಬಿಜೆಪಿ ವಕ್ತಾರ ಎನ್ ಆರ್ ರಮೇಶ್
ಬಿಜೆಪಿ ವಕ್ತಾರ ಎನ್ ಆರ್ ರಮೇಶ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾರುಕಟ್ಟೆ ವಿಭಾಗದ ಅಧಿಕಾರಿಗಳಿಂದ ನಿಯಮ ಉಲ್ಲಂಘನೆ-ಹೆಚ್ಚುವರಿ ಮಳಿಗೆಗಳನ್ನು ನಿರ್ಮಿಸಿ ಸಿಕ್ಕ ಸಿಕ್ಕವರಿಗೆ ಮಾರಾಟ- ಬಿಜೆಪಿ ವಕ್ತಾರ ಎನ್ ಆರ್ ರಮೇಶ್ ಆರೋಪ

ಬಿಜೆಪಿ ವಕ್ತಾರ ಎನ್ ಆರ್ ರಮೇಶ್ ಅವರಿಂದ ಭ್ರಷ್ಟಾಚಾರ ಆರೋಪ

ಬೆಂಗಳೂರು : ಜಯನಗರದ ಹೊಸ ವಾಣಿಜ್ಯ ಸಂಕೀರ್ಣದಲ್ಲಿ ನೂರಾರು ಅಕ್ರಮ ಮಳಿಗೆಗಳನ್ನು ನಿರ್ಮಿಸಿ, ಕಾನೂನು ಬಾಹಿರವಾಗಿ ಹಂಚಿಕೆ ಮಾಡಿ ಹತ್ತಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ ಎಂದು ಪಾಲಿಕೆಯ ಮಾಜಿ ನಾಯಕ, ಬಿಜೆಪಿ ವಕ್ತಾರ ಎನ್ ಆರ್ ರಮೇಶ್ ತಿಳಿಸಿದರು.

ಲೋಕಾಯುಕ್ತರಿಗೆ ದೂರು ನೀಡಿ ಪಾಲಿಕೆಯ ಕೇಂದ್ರ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮೊದಲು ಇದ್ದ ಮಳಿಗೆಗಳ ಮಾಲೀಕರಿಗೆ ಮಾತ್ರವೇ ಹೊಸದಾಗಿ ನಿರ್ಮಿಸಲಾದ ಕಟ್ಟಡದಲ್ಲಿ ಮಳಿಗೆಗಳನ್ನು ಹಂಚಿಕೆ ಮಾಡುವ ಪ್ರಸ್ತಾವನೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾರುಕಟ್ಟೆ ವಿಭಾಗದಲ್ಲಿ ಮೊದಲು ಅನುಮೋದನೆಯಾಗಿತ್ತು. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾರುಕಟ್ಟೆ ವಿಭಾಗದ ಅಧಿಕಾರಿಗಳು ಮತ್ತು ದಕ್ಷಿಣ ವಲಯದ ಜಂಟಿ ಆಯುಕ್ತರು ಸ್ಥಳೀಯ ಜನಪ್ರತಿನಿಧಿಗಳ ಪ್ರಭಾವಕ್ಕೆ ಮಣಿದು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚುವರಿ ಮಳಿಗೆಗಳನ್ನು ನಿರ್ಮಿಸಿ ಸಿಕ್ಕ ಸಿಕ್ಕವರಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.

ಜಯನಗರ ವಾಣಿಜ್ಯ ಸಂಕೀರ್ಣದಲ್ಲಿರುವ 312 ಮಳಿಗೆಗಳನ್ನು ಕಾನೂನುಬಾಹಿರವಾಗಿ ಹಂಚಿಕೆ ಮಾಡಲಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ. ಸರ್ಕಾರ ಈ ಕೂಡಲೇ ಹಗರಣದ ಬಗ್ಗೆ ಸಿಐಡಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಳೆ ಕಟ್ಟಡದಲ್ಲಿದ್ದ ಮಾಲೀಕರಿಗೆ ಮಳಿಗೆ ಹಂಚಿಕೆ ನಿಯಮ: ಜಯನಗರ ವಾಣಿಜ್ಯ ಸಂಕೀರ್ಣದಲ್ಲಿ ಈ ಹಿಂದೆ ಇದ್ದಂತಹ ವಾಣಿಜ್ಯ ಮಳಿಗೆಗಳಿದ್ದ ಹಳೆಯ ಕಟ್ಟಡವನ್ನು ತೆರವುಗೊಳಿಸಿ, ಬಿಬಿಎಂಪಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಹೊಸ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ. ಹಳೆ ಕಟ್ಟಡದಲ್ಲಿದ್ದ 132 ವ್ಯಾಪಾರಿಗಳಿಗೆ ಮಾತ್ರ ಹೊಸ ಮಳಿಗೆ ಹಂಚಿಕೆ ಮಾಡಬೇಕು ಎಂಬ ನಿಯಮವಿದ್ದರೂ ಬಿಬಿಎಂಪಿ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳ ಪ್ರಭಾವಕ್ಕೆ ಒಳಗಾಗಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಬೃಹತ್ ಹಗರಣ ನಡೆಸಿದ್ದಾರೆ ಎಂದು ರಮೇಶ್ ದೂರಿದರು.

ಹೈಕೋರ್ಟ್ ಆದೇಶ: ವಾಣಿಜ್ಯ ಸಂಕೀರ್ಣದಲ್ಲಿ 312 ಅಕ್ರಮ ಮಳಿಗೆಗಳನ್ನು ನಿರ್ಮಿಸಿ, ಕಾನೂನು ಬಾಹಿರವಾಗಿ ಹಂಚಿಕೆ ಮಾಡಿ ಹತ್ತಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಲಾಗಿದೆ. 2013ರಲ್ಲಿ ಹೈಕೋರ್ಟ್ ಎಲ್ಲ ಮಳಿಗೆಗಳನ್ನ ನಿಯಮಾನುಸಾರ ಟೆಂಡರ್ ಆಹ್ವಾನಿಸಿ ಅರ್ಹತೆ ಇರುವ ಅರ್ಜಿದಾರರಿಗೆ ಮಾತ್ರ ಹಂಚಿಕೆ ಮಾಡುವಂತೆ ಆದೇಶಿಸಿತ್ತು. ಆದರೂ 312 ಮಳಿಗೆಗಳನ್ನು ಹೆಚ್ಚುವರಿಯಾಗಿ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಿಸಿ ತಮಗಿಷ್ಟ ಬಂದವರಿಗೆ ಹಂಚಿಕೆ ಮಾಡಿರುವ ಪಾಲಿಕೆಯ ಮಾರುಕಟ್ಟೆ ವಿಭಾಗದ ಅಧಿಕಾರಿಗಳು ಕರ್ಮಕಾಂಡ ನಡೆಸಿದ್ದಾರೆ ಎಂದು ಹೇಳಿದರು.

ಹೆಚ್ಚುವರಿ ಹಣ ವಸೂಲಿ: ಒಂದೊಂದು ಮಳಿಗೆಗೆ 25 ರಿಂದ 30 ಲಕ್ಷ ಹಣ ವಸೂಲಿ ಮಾಡಲಾಗಿದೆ. ಮಾಜಿ ನಗರಸಭೆ ಸದಸ್ಯೆ ಲತಾ ವೆಂಕಟೇಶ್, ಪತಿ ವೆಂಕಟೇಶ್ ಮತ್ತು ಅವರ ಕುಟುಂಬದ ಸದಸ್ಯರ ಹೆಸರುಗಳಲ್ಲಿ ಒಟ್ಟು 13 ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು.

ಪ್ರಭಾವಿ ರಾಜಕಾರಣಿಯ ಶಿಫಾರಸ್ಸು ಪತ್ರ: ಪ್ರಭಾವಿ ರಾಜಕಾರಣಿಯೊಬ್ಬರ ಶಿಫಾರಸ್ಸು ಪತ್ರಕ್ಕೆ ಸ್ಪಂದಿಸಿ, ಉಮೇಶ್ ಎಂಬ ಒಬ್ಬನೇ ವ್ಯಕ್ತಿಯ ಹೆಸರಿಗೆ 4 ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ದೂರಿದರು.

ಸಿಐಡಿ ತನಿಖೆಗೆ ಆಗ್ರಹ: ಈ ಬೃಹತ್‌ ಹಗರಣವನ್ನು ಸಿಐಡಿ ತನಿಖೆಗೆ ವಹಿಸಬೇಕೆಂದು ಎಂದು ಮುಖ್ಯಮಂತ್ರಿಗಳನ್ನು ಕೇಳಿಕೊಂಡಿದ್ದೇನೆ. ಹತ್ತಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿರುವ ಈ ಹಗರಣಕ್ಕೆ ಸಂಬಂಧಿಸಿದಂತೆ, ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಎನ್​ ಆರ್​ ರಮೇಶ್​ ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ : ರಾಜ್ಯದ ವಿಚಾರದಲ್ಲಿ ಸುಳ್ಳು ಹೇಳಿರುವ ಮೋದಿ ಕ್ಷಮೆಯಾಚಿಸಬೇಕು: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.