ETV Bharat / state

ಹತ್ತಿದ ಏಣಿಯನ್ನೇ ಕಾಲಲ್ಲಿ ಒದೆಯುವ ಜಮೀರ್ ಅಹ್ಮದ್ ಮನಸ್ಥಿತಿ ಸರಿಯಲ್ಲ: ಎಂಎಲ್​ಸಿ ಟಿ ಎ ಶರವಣ

author img

By ETV Bharat Karnataka Team

Published : Oct 3, 2023, 1:02 PM IST

Updated : Oct 3, 2023, 1:17 PM IST

mlc-ta-sharavana-reaction-on-minister-zameer-ahmed-khan
ಹತ್ತಿದ ಏಣಿಯನ್ನೆ ಕಾಲಲ್ಲಿ ಒದೆಯುವ ಜಮೀರ್ ಅಹ್ಮದ್ ಮನಸ್ಥಿತಿ ಸರಿಯಲ್ಲ: ಎಂಎಲ್​ಸಿ ಟಿ ಎ ಶರವಣ

ರಾಜಕೀಯವಾಗಿ ಅನಾಮಿಕರಾಗಿದ್ದ ಜಮೀರ್​ ಅವರನ್ನು ಗುರುತಿಸಿ, ಅಸ್ತಿತ್ವ ತಂದು ಕೊಟ್ಟವರು ಹೆಚ್​ ಡಿ ಕುಮಾರಸ್ವಾಮಿ ಎಂದು ವಿಧಾನಪರಿಷತ್ ಸದಸ್ಯ ಟಿ ಎ ಶರವಣ ಹೇಳಿದ್ದಾರೆ.

ಎಂಎಲ್​ಸಿ ಟಿ ಎ ಶರವಣ

ಬೆಂಗಳೂರು: ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಅವರ ಬಗ್ಗೆ ಆಡಿರುವ ಕ್ಷುಲ್ಲಕ ಮಾತುಗಳು ಅವರ ಘನತೆಗೆ ತಕ್ಕದ್ದಲ್ಲ ಎಂದು ಜೆಡಿಎಸ್ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ರಾಜಕೀಯ ಬದುಕಿನ ಆರಂಭದ ಕಾಲದಲ್ಲಿ ಕುಮಾರಸ್ವಾಮಿ ಅವರ ಜೊತೆಗಿದ್ದು, ಅವರಿಂದ ರಾಜಕೀಯ ಲಾಭ ಪಡೆದು, ಏಳಿಗೆಯಾಗಿ ಈಗ ವ್ಯಕ್ತಿಗತವಾಗಿ ನಿಂದಿಸುವ ಮಟ್ಟಕ್ಕೆ ಜಮೀರ್ ಅಹ್ಮದ್ ಹೋಗಿರುವುದು ಅವರ ಮಟ್ಟವನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ರಾಜಕಾರಣ ನಿಂತ ನೀರಲ್ಲ. ಕಾಲಾಂತರದಲ್ಲಿ ಬದಲಾಗುತ್ತದೆ. ಆದರೆ, ಹತ್ತಿದ ಏಣಿಯನ್ನೇ ಕಾಲಲ್ಲಿ ಒದೆಯುವ ಜಮೀರ್ ಅಹ್ಮದ್ ಮನಸ್ಥಿತಿ ಸರಿಯಲ್ಲ. ಇದು ರಾಜಕೀಯ ದ್ರೋಹದ ಮನೋಭಾವ ಎನ್ನದೇ ವಿಧಿಯಿಲ್ಲ ಎಂದು ಟೀಕಿಸಿದರು. ಈ ಹಿಂದೆ ಜಮೀರ್ ರಾಜಕೀಯವಾಗಿ ಇನ್ನೂ ಕಣ್ಣು ಬಿಡುತ್ತಿದ್ದಾಗ, ಯಾವ ಕುಮಾರಣ್ಣ ಅವರನ್ನು ತಮ್ಮದೇ ಬಸ್​ನಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿಕೊಂಡು ಹೋದಾಗ ಯಾವ ಚಡ್ಡಿ ಹಾಕಿದ್ದರೋ, ಈಗಲೂ ಅಂಥದ್ದೇ ಚಡ್ಡಿ ಹಾಕಿದ್ದಾರೆ. ಆಗ ಜಮೀರ್ ಅಹ್ಮದ್ ಅವರಿಗೆ ಪರಿವೆ ಇರಲಿಲ್ಲವೇ?. ಕುಮಾರಣ್ಣ ಯಾವತ್ತೂ ಬದಲಾಗಿಲ್ಲ. ನಂಬಿದ ತತ್ತ್ವ ಸಿದ್ಧಾಂತದಲ್ಲಿ ರಾಜಿ ಮಾಡಿಕೊಂಡು ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ ಎಂದು ಹೇಳಿದರು.

ಜಮೀರ್ ಅಹ್ಮದ್ ಅವರ ನಡೆ ಖಂಡನಾರ್ಹ: ರಾಜಕೀಯವಾಗಿ ಅನಾಮಿಕರಾಗಿದ್ದ ಜಮೀರ್​ ಅವರನ್ನು ಗುರುತಿಸಿ, ಮಂತ್ರಿ ಸ್ಥಾನ ಕೊಟ್ಟು ಅವರಿಗೆ ಅಸ್ತಿತ್ವವನ್ನು ತಂದು ಕೊಟ್ಟವರು ಕುಮಾರಣ್ಣ. ಅವರಿಗೆ ರಾಜಕೀಯ ಬದುಕು ಕೊಟ್ಟಿದ್ದೇ ಜೆಡಿಎಸ್. ಅದನ್ನೇ ಮರೆತು, ಬದುಕು ಕೊಟ್ಟ ಪಕ್ಷ, ನಾಯಕರ ಬಗ್ಗೆ ವಿದ್ರೋಹಿ ಮಾತುಗಳನ್ನು ಆಡುತ್ತಿರುವ ಜಮೀರ್ ಅಹ್ಮದ್ ಅವರ ನಡೆ ಖಂಡನಾರ್ಹ. ಅಲ್ಪ ಸಂಖ್ಯಾತರ ಬಗ್ಗೆ ಕುಮಾರಸ್ವಾಮಿ ಅವರು ಯಾವತ್ತೂ ಆಗೌರವದಿಂದ ಮಾತನಾಡಿಲ್ಲ ಎಂದರು.

ಚನ್ನಪಟ್ಟಣದಲ್ಲಿ ತಾವು ಗೆಲ್ಲಲು ಅಲ್ಪಸಂಖ್ಯಾತರೂ ಕಾರಣ ಎಂದು ಹೇಳಿದ್ದಾರೆ. ಅನಗತ್ಯವಾಗಿ ಅವರ ಹೇಳಿಕೆ ತಿರುಚುವುದು ಬೇಡ. ಅಲ್ಪ ಸಂಖ್ಯಾತರು ತಮ್ಮ ಸ್ವತ್ತು ಎಂದು ತಿಳಿದು, ಅವರನ್ನು ಗುತ್ತಿಗೆ ಪಡೆದವರಂತೆ ವರ್ತಿಸುವುದು ಜಮೀರ್ ಅಹ್ಮದ್ ಅವರಿಗೆ ಘನತೆ ತರುವುದಿಲ್ಲ. ಸರಿಯಲ್ಲ ಎಂದು ಅವರಿಗೆ ನಾನು ತಿಳಿ ಹೇಳುತ್ತೇನೆ ಎಂದು ಶರವಣ ತಿರುಗೇಟು ನೀಡಿದರು.

ಇದನ್ನೂ ಓದಿ: ಜೆಡಿಎಸ್, ಬಿಜೆಪಿ ಮೈತ್ರಿಯಿಂದ ಎರಡೂ ಪಕ್ಷಗಳ ನಾಯಕರು ಕಾಂಗ್ರೆಸ್‌ಗೆ : ಡಿ ಕೆ ಶಿವಕುಮಾರ್

Last Updated :Oct 3, 2023, 1:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.