ETV Bharat / state

ಹಾಸ್ಟೆಲ್​ ವಾರ್ಡನ್​ಗಳ ಮುಂಬಡ್ತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ: ಸಚಿವ ಶಿವರಾಜ್ ತಂಗಡಗಿ

author img

By ETV Bharat Karnataka Team

Published : Aug 22, 2023, 10:07 PM IST

minister-shivraj-tandagi-clarification-on-promotion-of-hostel-wardens
ಹಾಸ್ಟೆಲ್​ ವಾರ್ಡನ್​ಗಳ ಮುಂಬಡ್ತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ: ಸಚಿವ ಶಿವರಾಜ್ ತಂಗಡಗಿ

ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಹೆಸರಾಯ್ತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಘೋಷವಾಕ್ಯದೊಂದಿಗೆ ಒಂದು ವರ್ಷ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿಕೆ

ಧಾರವಾಡ: "ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್​ ವಾರ್ಡನ್​ಗಳ ಮುಂಬಡ್ತಿಯಲ್ಲಿ ಯಾವುದೇ ಅವ್ಯವಹಾರ, ಅಕ್ರಮ ನಡೆಯಲು ಸಾಧ್ಯವೇ ಇಲ್ಲ" ಎಂದು ಹಿಂದುಳಿದ ವರ್ಗಗಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು. ಧಾರವಾಡದಲ್ಲಿ ಇಂದು ಮಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್ ವಾರ್ಡನ್ ಬಡ್ತಿ ಅಕ್ರಮ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, "ಅಂತಹ ಅಕ್ರಮ ಮಾಡಲು ನಾವು ಬಿಡುವುದಿಲ್ಲ, 2002ರಲ್ಲಿ ಮಹಿಳಾ ಮತ್ತು ಪುರುಷರ ಮೇಲ್ವಿಚಾರಕರ ನೇಮಕ ಮಾಡಿಕೊಳ್ಳಬೇಕಿತ್ತು. ಆದರೆ ಅದು ಆಗಲಿಲ್ಲ" ಎಂದರು.

"2006ರಲ್ಲಿ ಕೇವಲ‌ ಮಹಿಳೆಯ ಮುಂಬಡ್ತಿಯಾಯ್ತು. ಪುರುಷರ ಮುಂಬಡ್ತಿಗೆ ಅವಕಾಶ ಕೊಡಲಿಲ್ಲ. 2019ರಲ್ಲಿ ಇಲಾಖೆ ರದ್ದಾಗಿತ್ತು. ಅಲ್ಲಿರುವ ಅಧಿಕಾರಿಗಳು ಕೆಎಟಿಗೆ ಹೋದರು. ಕೆಎಟಿ ಪುರುಷರ ಮೇಲ್ವಿಚಾರಕರಿಗೆ ಮುಂಬಡ್ತಿ ಕೊಡಬೇಕು ಎಂದು ಆದೇಶಿಸಿತು. ಕೆಎಟಿಯಿಂದ ಆದೇಶ ಬಂದ ಮೇಲೆ ನಾವು ಕಾನೂನು ಇಲಾಖೆಗೆ ಕಳುಹಿಸಿದ್ದೆವು. ಅದಕ್ಕೆ ಕಾನೂನು ಇಲಾಖೆ ಒಪ್ಪಿಗೆ ಕೊಟ್ಟಿತು. ಅದಾದ ಬಳಿಕ ನಾವು ಮುಂಬಡ್ತಿ ಕೊಟ್ಟಿದ್ದೇವೆ" ಎಂದು ಸ್ಪಷ್ಟಪಡಿಸಿದರು.

"ಇದರಲ್ಲಿ ಯಾವುದೇ ಅವ್ಯವಹಾರ, ಅಕ್ರಮ ಆಗಿಲ್ಲ, ಅವರಿಗೆ ಅನ್ಯಾಯ ಆಗಿತ್ತು. ಅವರ ಜೊತೆಗಿದ್ದ ಮಹಿಳೆಯರಿಗೆ ಮುಂಬಡ್ತಿಯಾಗಿತ್ತು, ಆದರೆ ಅವರಿಗೆ ಮಂಬಡ್ತಿಯಾಗಿರಲಿಲ್ಲ. ಈಗ ಅದು ನಿಯಮಾನುಸಾರ ಆಗಿದೆ. ಕೆಲವೊಂದಿಷ್ಟು ಜನ ನಮಗೂ ಮುಂಬಡ್ತಿ ಸಿಗಲಿ ಎಂದು ಈ ರೀತಿ ಆರೋಪಿಸಿರಬಹುದು. ಕಾನೂನುಬದ್ಧವಾಗಿ ಮುಂಬಡ್ತಿ ಕೊಡುತ್ತೇವೆ" ಎಂದು ತಿಳಿಸಿದರು.

"ಇನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಎಂದು ನಾಮಕರಣ ಮಾಡಿ ಐವತ್ತು ವರ್ಷ ತುಂಬಿದ್ದು ಒಂದು ವರ್ಷ ಕಾರ್ಯಕ್ರಮ ಮಾಡಲಾಗುತ್ತದೆ. ಇದಕ್ಕಾಗಿ ರಾಜ್ಯದ ನಾಲ್ಕು ವಿಭಾಗಗಳಿಂದ ಸಲಹೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಈಗಾಗಲೇ ಬೆಂಗಳೂರು ವಿಭಾಗದಲ್ಲಿ ಸಾಹಿತಿಗಳು, ಕಲಾವಿದರ ಸಭೆಯನ್ನು ಕರೆದು ಸಲಹೆಯನ್ನು ತೆಗೆದುಕೊಂಡಿದ್ದೇನೆ. ಅದೇ ರೀತಿ ಬೆಳಗಾವಿ ವಿಭಾಗದ ಸಭೆ ಕರೆದು ಸಾಹಿತಿಗಳ, ಹಿರಿಯರ, ಕಲಾವಿದರ ಸಲಹೆ ಆಲಿಸಿದ್ದೇನೆ. ಉತ್ತಮವಾದ ಸಲಹೆಗಳು ಬಂದಿವೆ" ಎಂದರು.

"ಇದೇ ತಿಂಗಳ 28ಕ್ಕೆ ಕಲಬುರಗಿ ವಿಭಾಗದ ಸಭೆಯನ್ನು ಕರೆದಿದ್ದೇನೆ. ಸೆ. 4ಕ್ಕೆ ಮೈಸೂರು ವಿಭಾಗದ ಸಭೆ ನಡೆಸಿ ಅಲ್ಲಿಯೂ ಸಲಹೆ ತೆಗೆದುಕೊಂಡು ಎಲ್ಲವನ್ನೂ ಕ್ರೋಢೀಕರಿಸಿ ಈ ಸಂಭ್ರಮವನ್ನು ಯಾವ ರೀತಿ ಮಾಡುತ್ತೇವೆ ಎಂದು ಸೆ. 9 ಅಥವಾ 10ರಂದು ಮಾಧ್ಯಮಗಳ ಮೂಲಕ ಮಾಹಿತಿ ನೀಡುತ್ತೇವೆ‌. ಇನ್ನು 50 ಕಾವ್ಯ ಸಂಪುಟ ಪ್ರಕಟನೆ ಮಾಡಿಬೇಕು. ಕರ್ನಾಟಕದ ನೆಲ, ಜಲಕ್ಕಾಗಿ ದುಡಿದ ಒಬ್ಬರಿಗೆ ಕರ್ನಾಟಕ ಪದ್ಮ ಪ್ರಶಸ್ತಿ ಕೊಡಬೇಕು. 50ವರ್ಷದ ಲೋಗೋ ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ. ನ. 1ರಿಂದ ಮುಂದಿನ ವರ್ಷದ ನ. 1ರವರೆಗೆ ನಿರಂತರವಾಗಿ ಕಾರ್ಯಕ್ರಮ ನಡೆಯಲಿದೆ" ಎಂದು ತಿಳಿಸಿದರು.

ಇದನ್ನೂ ಓದಿ: ಕಾವೇರಿ ನೀರಿನ ವಿಚಾರದಲ್ಲಿ ಜೆಡಿಎಸ್, ಬಿಜೆಪಿ ರಾಜಕೀಯ ಮಾಡಬಾರದು: ಸಚಿವ ಚಲುವರಾಯಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.