ETV Bharat / state

ಕಾವೇರಿ ನೀರಿನ ವಿಚಾರದಲ್ಲಿ ಜೆಡಿಎಸ್, ಬಿಜೆಪಿ ರಾಜಕೀಯ ಮಾಡಬಾರದು: ಸಚಿವ ಚಲುವರಾಯಸ್ವಾಮಿ

author img

By ETV Bharat Karnataka Team

Published : Aug 22, 2023, 6:18 PM IST

ತಮಿಳುನಾಡಿನೊಂದಿಗೆ ರಾಜಕೀಯ ಹೊಂದಾಣಿಕೆ ಇರಬಹುದು. ಆದರೆ ಕಾವೇರಿ ವಿಚಾರದಲ್ಲಿ ನಾವು ಹೋರಾಟ ಮಾಡುತ್ತೇವೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಜೆಡಿಎಸ್​, ಬಿಜೆಪಿ ರಾಜಕೀಯ ಮಾಡಬಾರದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

minister-chaluvaraya-swamy-reaction-on-kaveri-water-protest
ಜೆಡಿಎಸ್,ಬಿಜೆಪಿ ಕಾವೇರಿ ನೀರಿನ ವಿಚಾರದಲ್ಲಿ ರಾಜಕೀಯ ಮಾಡಬಾರದು : ಸಚಿವ ಚಲುವರಾಯಸ್ವಾಮಿ

ಬೆಂಗಳೂರು : ಕಾವೇರಿ ನೀರಿಗಾಗಿ ರೈತರು ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ. ಆದರೆ ಬಿಜೆಪಿಯವರ ಪ್ರತಿಭಟನೆ ಬಗ್ಗೆ ಏನು ಹೇಳ್ಬೇಕೋ ಗೊತ್ತಾಗುತ್ತಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.

ಇಂದು ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಮಿಳುನಾಡು ಕಳೆದ ಎರಡು ತಿಂಗಳಿನಿಂದ ನೀರು ಬೇಕು ಎಂದು ಕೇಳುತ್ತಿದ್ದಾರೆ. ಅಂತಿಮವಾಗಿ 15 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ಹೇಳಿದ್ದರು. ಅದು ಆಗದೇ ಇದ್ದಾಗ 10 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡಲಾಗಿದೆ. ಬಿಜೆಪಿ ಸಂಸದರು ಹಾಗೂ ಹೈಕಮಾಂಡ್ ನಾಯಕರಿಗೆ ತಿಳುವಳಿಕೆ ಇಲ್ಲ. ಜೆಡಿಎಸ್ ಆಗಲಿ, ಬಿಜೆಪಿ ಆಗಲಿ ನೀರಿನ ಮೇಲೆ ರಾಜಕೀಯ ಮಾಡಬಾರದು ಎಂದು ಹೇಳಿದರು.

ಮಳೆ ಇಲ್ಲದೆ ಕಾವೇರಿ ನೀರಿನ ಮಟ್ಟ ಕಡಿಮೆ ಆಗಿದೆ. ನಾಳೆ ಸರ್ವಪಕ್ಷಗಳ ಸಭೆ ಕರೆದಿದ್ದೇವೆ. ಈ ಸಭೆಯಲ್ಲಿ ಅಂತಿಮವಾಗಿ ಏನು ಮಾಡಬೇಕು ಎಂಬ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.

ತಮಿಳುನಾಡಿನ ಪರವಾಗಿ ತೀರ್ಪು ಬಂದರೆ 20 ಸಾವಿರ ಕ್ಯೂಸೆಕ್ ನೀರಿನ ಬಿಡಬೇಕಿತ್ತು. ಹೀಗಾಗಿ 10 ಸಾವಿರ ಕ್ಯೂಸೆಕ್ ಅಷ್ಟೇ ನೀರು ಬಿಟ್ಟಿದ್ದೇವೆ. ಇವರು ಮಹದಾಯಿ ವಿಚಾರವಾಗಿ ಗೋವಾ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇತ್ತಲ್ವಾ?. ಹಾಗಾದರೆ ಮಹದಾಯಿ ಸಮಸ್ಯೆ ಯಾಕೆ ಬಗೆಹರಿಸಿಲ್ಲ ಎಂದು ಪ್ರಶ್ನಿಸಿದರು.

ನೈಸ್ ಅಕ್ರಮದ ಬಗ್ಗೆ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿ, ಕೃಷಿ ಇಲಾಖೆ ಭ್ರಷ್ಟಾಚಾರದ ಆರೋಪ ಪ್ರಕರಣ ಸಂಬಂಧ ಇಬ್ಬರು ಕೃಷಿ ಅಧಿಕಾರಿಗಳನ್ನು ಬಂಧಿಲಾಗಿದೆ. ಇದಕ್ಕೆ ಯಾರು ಕಾರಣ ? ಹಿನ್ನೆಲೆ ಏನು ಗೊತ್ತಿಲ್ಲ. ಆ ಪತ್ರದಲ್ಲಿ ಜೆಡಿಎಸ್ ಹಾಗೂ ಕುಮಾರಸ್ವಾಮಿ ಹೆಸರಿರುವುದು ನಿಮಗೇ ಗೊತ್ತಿದೆ. ಈ ತರಹದ್ದೆಲ್ಲ ಎಷ್ಟು ನಡೆಸುತ್ತಾರೋ ನಡೆಸಲಿ ಎಂದು ವಾಗ್ದಾಳಿ ನಡೆಸಿದರು.

ನೈಸ್ ಯೋಜನೆ ತಂದವರು ಯಾರು?. ಇದನ್ನು ಪ್ರಾರಂಭ ಮಾಡಿದವರು ಯಾರು?. ಈ ಬಗ್ಗೆ ಕೂಡ ಚರ್ಚೆಯಾಗಬೇಕಲ್ಲ. ರಾಜ್ಯದಲ್ಲಿ ಬೇರೆ ಎಲ್ಲ ರಸ್ತೆಗಳಿವೆ, ಟೋಲ್ ವಿಷಯಗಳಿವೆ. ಅವೆಲ್ಲವನ್ನೂ ಬಿಟ್ಟು ನೈಸ್ ರೋಡ್ ಮಾತ್ರ ಯಾಕೆ ಹಿಡಿದುಕೊಂಡಿದ್ದಾರೆ. ನೈಸ್ ವಿಚಾರ ಮಾತ್ರ ಇವರಿಗೆ ಸಾರ್ವಜನಿಕ ಹಿತದೃಷ್ಟಿಯ ವಿಚಾರವಾಯ್ತಾ?. ನಮ್ಮ ಕಾಂಗ್ರೆಸ್ ಸರ್ಕಾರ ನೈಸ್ ಪರವಾಗಿ ಇಲ್ಲ ಎಂದು ತಿಳಿಸಿದರು.

ಮಳೆ ಪ್ರಮಾಣ ಇದೇ ರೀತಿ ಕಡಿಮೆಯಾದರೆ ಆಹಾರ ಉತ್ಪಾದನೆಗೆ ಸಮಸ್ಯೆ ಆಗುತ್ತದೆ. ಕಾವೇರಿ ಕಣಿವೆ ಭಾಗದ ರೈತರಿಗೆ ಹೊಸ ಬೆಳೆ ಹಾಕದಂತೆ ಮನವಿ ಮಾಡಿದ್ದೇವೆ. ತಿಂಗಳಿಗೆ ಹದಿನೈದು ದಿನಕ್ಕೆ ಕಟ್ಟುನೀರು ಬಿಡುತ್ತಿದ್ದೇವೆ. ಮಳೆ ಸಮಸ್ಯೆ ಆದರೆ ಕಟ್ಟುನೀರು ಬಿಡುವುದನ್ನು ಬಂದ್ ಮಾಡಬೇಕಾಗುತ್ತದೆ. ರೈತರು ಎಚ್ಚರಿಕೆಯಿಂದ ಬೆಳೆ ಬಿತ್ತನೆ ಮಾಡಬೇಕು. ಜಿಲ್ಲಾಧಿಕಾರಿಗಳ ಮೂಲಕ ರೈತರಿಗೆ ಮನವಿ ಮಾಡಿಸುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ : ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಿಂದ ಸಾಲ ಪಡೆದ ರೈತರ ಸಮಸ್ಯೆ ಬಗೆಹರಿಸಲು ಸಿಎಂ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.