ETV Bharat / state

ಆಂಧ್ರದ ಶ್ರೀಶೈಲಂನ ಕರ್ನಾಟಕ ಭವನ ನಿರ್ಮಾಣಕ್ಕಾಗಿ ಹೆಚ್ಚಿನ ಅನುದಾನಕ್ಕೆ ಮನವಿ: ಸಚಿವೆ ಶಶಿಕಲಾ ಜೊಲ್ಲೆ

author img

By

Published : Feb 21, 2022, 5:32 PM IST

ವಿಧಾನಸಭೆಯಲ್ಲಿ ಕಾಂಗ್ರೆಸ್​ ಸದಸ್ಯರ ಪ್ರತಿಭಟನೆಯ ನಡುವೆಯೇ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರಶ್ನೋತ್ತರ ನಡೆಸಿದರು. ಈ ವೇಳೆ, ಪ್ರತಿಪಕ್ಷದ ನಾಯಕರು ಹೇಳಿದ ಪ್ರಶ್ನೆಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಉತ್ತರಿಸಿದರು.

Minister Shashikala jolle speak about the housing facilities issue in Shree Shaila in session
ವಿಧಾನಸಭೆಯಲ್ಲಿ ಶ್ರೀಶೈಲಂನಲ್ಲಿನ ಸಮಸ್ಯೆ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿಕೆ

ಬೆಂಗಳೂರು: ಆಂಧ್ರಪ್ರದೇಶದ ಶ್ರೀ ಕ್ಷೇತ್ರ ಶ್ರೀಶೈಲಂಗೆ ರಾಜ್ಯದಿಂದ ತೆರಳುವ ಭಕ್ತರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ನಿರ್ಮಾಣ ಮಾಡುತ್ತಿರುವ ಕರ್ನಾಟಕ ಭವನಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುವುದಾಗಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ವಿಧಾನಸಭೆಯಲ್ಲಿ ತಿಳಿಸಿದರು.

ವಿಧಾನಸಭೆಯಲ್ಲಿ ಶ್ರೀಶೈಲಂನಲ್ಲಿನ ಸಮಸ್ಯೆ ಬಗ್ಗೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿಕೆ

ಇಂದು ಪ್ರಶ್ನೋತ್ತರ ವೇಳೆ ಬಸವರಾಜ ಮತ್ತಿಮೋಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಶ್ರೀಶೈಲಂನ ಶ್ರೀಬ್ರಹ್ಮಾರಂಭ ಸ್ವಾಮಿ ದೇವಾಲಯದ ಬಳಿ 300x 300 ಅಡಿ ಜಾಗದಲ್ಲಿ ಛತ್ರವನ್ನು ನಿರ್ಮಿಸುತ್ತಿದ್ದೇವೆ. ನೆಲಮಹಡಿ ಮತ್ತು ಮೊದಲ ಮಹಡಿಯಲ್ಲಿ ಒಟ್ಟು 16 ಕೊಠಡಿಗಳು, ನೆಲಮಹಡಿಯಲ್ಲಿ 8 ಕೊಠಡಿಗಳು ಹಾಗೂ ಭೋಜನ ಶಾಲೆಗಳನ್ನು ಆರಂಭಿಸುತ್ತೇವೆ. ಇದಕ್ಕೆ ಹೆಚ್ಚಿನ ಅನುದಾನವನ್ನು ಬಜೆಟ್‍ನಲ್ಲಿ ಘೋಷಣೆ ಮಾಡುವಂತೆ ಸಿಎಂಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ಒಂದಿಷ್ಟು ಜಾಗದ ಸಮಸ್ಯೆಯೂ ಇದೆ. ಆಂಧ್ರಪ್ರದೇಶ ಸರ್ಕಾರದ ಅಧಿಕಾರಿಗಳ ಜೊತೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು ಚರ್ಚಿಸಿ ಇದನ್ನು ಪರಿಹರಿಸಿಕೊಡಬೇಕೆಂದು ಮನವಿ ಮಾಡಿದರು.

ಶ್ರೀಶೈಲಂನಲ್ಲಿ ಛತ್ರ ಶಿಥಿಲಾವಸ್ಥೆಯಲ್ಲಿದ್ದು, ರಾಜ್ಯದಿಂದ ತೆರಳುವ ಭಕ್ತರಿಗೆ ಊಟ, ವಸತಿ ಮತ್ತು ವಾಸ್ತವ್ಯಕ್ಕೆ ತೊಂದರೆಯಾಗುತ್ತದೆ. ಇದನ್ನು ನವೀಕರಣ ಮಾಡುವ ಕೆಲಸವೂ ಸಹ ಮುಂದುವರೆದಿದೆ. ಯಾತ್ರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಕುರಿಗಳಿಗೆ ಹೆಚ್ಚಿನ ಪರಿಹಾರ ನೀಡಿ :

ಕುರಿಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಆಗ್ರಹಿಸಿದ ಜೆಡಿಎಸ್ ಉಪ ನಾಯಕ ಬಂಡೆಪ್ಪ ಕಾಶಂಪುರ್

ಪ್ರಶ್ನೋತ್ತರ ವೇಳೆ ಜೆಡಿಎಸ್ ಉಪ ನಾಯಕ ಬಂಡೆಪ್ಪ ಕಾಶಂಪುರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಒಂದು ಕುರಿ ಅನಾರೋಗ್ಯ ಇಲ್ಲವೇ ಬೇರೆ ಕಾರಣಗಳಿಂದ ಸತ್ತರೆ ಅದಕ್ಕೆ 3 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಈ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಎಂದು ಸಿಎಂಗೆ ಮನವಿ ಮಾಡಲಾಗುವುದು. ಮುಂಬರುವ ಬಜೆಟ್‍ನಲ್ಲಿ ಇದು ಹೆಚ್ಚಳವಾಗುತ್ತದೆ ಎಂಬ ವಿಶ್ವಾಸವನ್ನು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಬಂಡೆಪ್ಪ ಕಾಶಂಪುರ್, ಒಂದು ಕುರಿ ಸತ್ತರೆ ಕೇವಲ 3 ಸಾವಿರ ಪರಿಹಾರ ನೀಡಲಾಗುತ್ತಿದೆ. ಈ ಮೊತ್ತ ಸಾಲದು. ಹೀಗಾಗಿ ಕನಿಷ್ಠ ಒಂದು ಕುರಿಗೆ 10 ಸಾವಿರ ರೂ. ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಕುರಿಗಳಿಗೆ ಪರಿಹಾರವನ್ನೇ ಒದಗಿಸಿಲ್ಲ. ಅಷ್ಟಕ್ಕೂ ಕುರಿಗಳನ್ನು ಹಾಲು ಮತದವರು, ಪರಿಶಿಷ್ಟ ಜಾತಿ/ವರ್ಗದವರು, ಬಡವರು ಸಾಕುತ್ತಾರೆ. ಅವರಿಗೆ ಸಕಾಲಕ್ಕೆ ಸರಿಯಾಗಿ ಪರಿಹಾರ ಕೊಡದಿದ್ದರೆ ಜೀವನ ನಿರ್ವಹಣೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.

ಇದಕ್ಕೆ ದನಿಗೂಡಿಸಿದ ಬಿಜೆಪಿ ಶಾಸಕ ರಾಜುಗೌಡ, ಬಂಡೆಪ್ಪ ಕಾಶಂಪೂರ್ ಕುರುಬ ಸಮುದಾಯದವರು. ಆದರೆ, ನಾನು ವೃತ್ತಿಯಲ್ಲಿ ಕುರುಬ. ನಾನು 7 ಸಾವಿರ ಕುರಿಗಳನ್ನು ಸಾಕಿದ್ದೇನೆ. ಇದರಲ್ಲಿ 1400 ಕುರಿಗಳು ಬೇರೆ ಬೇರೆ ಕಾರಣಗಳಿಂದ ಸಾವನ್ನಪ್ಪಿದ್ದವು. ಬಡವರಿಗೆ ಪರಿಹಾರದ ಮೊತ್ತವನ್ನು ನೀಡದಿದ್ದರೆ ಹೇಗೆ ಜೀವನ ನಿರ್ವಹಣೆ ಮಾಡಲು ಸಾಧ್ಯ, ಕೂಡಲೇ ಕುರಿ ಸತ್ತರೆ 10 ಸಾವಿರ ರೂ. ಹೆಚ್ಚಳ ಮಾಡುವ ಆದೇಶವನ್ನು ಹೊರಡಿಸಿ ನಿಮ್ಮ ಅಧಿಕಾರಿಗಳಿಗೆ ಸೂಚನೆ ಕೊಡಿ ಎಂದು ಮನವಿ ಮಾಡಿದರು.

ಮಾರ್ಚ್ ಒಳಗೆ ಪೂರ್ಣ: ಸದಸ್ಯ ಐಹೊಳೆ ಡಿ. ಮಹಾಲಿಂಗಪ್ಪ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಭು ಚವ್ಹಾಣ್ ಅವರು, ಬೆಳಗಾವಿ ಜಿಲ್ಲೆಯ ರಾಯಭಾಗ ಮತ್ತು ಚಿಕ್ಕೋಡಿ ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಶು ಚಿಕಿತ್ಸಾ ಕೇಂದ್ರಗಳು ಮತ್ತು ಕಟ್ಟಡಗಳ ಕಾಮಗಾರಿ ಮಾರ್ಚ್ ತಿಂಗಳೊಳಗೆ ಸೇವೆಗೆ ಲಭ್ಯವಾಗಲಿದೆ ಎಂದರು.

ಚಿಕ್ಕೋಡಿ ತಾಲೂಕಿನಲ್ಲಿ - 6, ರಾಯಭಾಗ ತಾಲೂಕಿನಲ್ಲಿ -7 ಪಶುವೈದ್ಯಕೀಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಕೆಲವು ಆಸ್ಪತ್ರೆಗಳು ಶಿಥಿಲೀಕರಣಗೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ಆದಷ್ಟು ಶೀಘ್ರ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ: ಸದನದಲ್ಲಿ ಮುಂದುವರಿದ ಗದ್ದಲ.. ಪರಿಷತ್ ಕಲಾಪ ನಾಳೆಗೆ ಮುಂದೂಡಿಕೆ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.