ETV Bharat / state

ರಾಜ್ಯ ಸರ್ಕಾರದಿಂದ ಏರ್​ಲೈನ್ಸ್​ ಪ್ರಾರಂಭಿಸುವ ಚಿಂತನೆ: ಸಚಿವ ಎಂ.ಬಿ.ಪಾಟೀಲ್

author img

By ETV Bharat Karnataka Team

Published : Sep 1, 2023, 6:07 PM IST

minister-mb-patil-reaction-on-starting-the-airlines-by-the-state-government-itself
ರಾಜ್ಯ ಸರ್ಕಾರವೇ ಏರ್​ಲೈನ್ಸ್​ ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ: ಸಚಿವ ಎಂ.ಬಿ.ಪಾಟೀಲ್

ರಾಜ್ಯದ ವಿಮಾನ ನಿಲ್ದಾಣಗಳನ್ನು ರಾಜ್ಯ ಸರ್ಕಾರವೇ ನಿರ್ವಹಿಸಲು ಮುಂದಾಗಿದೆ. ಈ ಸಂಬಂಧ ರಾಜ್ಯ ವಿಮಾನ ಪ್ರಾಧಿಕಾರ ರಚಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರು: "ರಾಜ್ಯ ಸರ್ಕಾರದಿಂದಲೇ ಏರ್​ಲೈನ್ಸ್ ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆದಿದೆ" ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು. ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿಂದು ಕೈಪಿಡಿ ಬಿಡುಗಡೆ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಜ್ಯ ಸರ್ಕಾರವೇ ಏರ್​ಲೈನ್ಸ್ ಪ್ರಾರಂಭಿಸುವ ಚಿಂತನೆ ಇದೆ" ಎಂದರು.

"ಈ ಬಗ್ಗೆ ಏರ್​ ಇಂಡಿಯಾದ ಉನ್ನತಾಧಿಕಾರಿಯೊಬ್ಬರ ಜೊತೆ ಚರ್ಚಿಸಿದ್ದು, ಅವರು ಒಂದು ವಿಮಾನಕ್ಕೆ ಸರಾಸರಿ 200 ಕೋಟಿ ರೂ. ವೆಚ್ಚವಾಗಲಿದ್ದು, ರಾಜ್ಯದೊಳಗೆ ಓಡಾಡುವ ವಿಮಾನ ಸೇವೆಯನ್ನು ಆರಂಭಿಸುವ ಬಗ್ಗೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಪ್ರಾಥಮಿಕ ಚರ್ಚೆ ನಡೆದಿದೆ. ಸಮಗ್ರ ಚರ್ಚೆ ನಡೆಸಿ, ಸಾಧಕ-ಬಾಧಕ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.

"ಮುಂದೆ ಎಲ್ಲ ಏರ್​ಪೋರ್ಟ್​ಗಳನ್ನು ನಾವೇ ನಿರ್ವಹಣೆ ಮಾಡುವ ಬಗ್ಗೆ ನಿರ್ಧರಿಸಿದ್ದೇವೆ. ವಿಜಯಪುರ, ಕಾರವಾರ, ಬೀದರ್ ಸೇರಿ ಮುಂದೆ ಎಲ್ಲ ಏರ್‌ಪೋರ್ಟ್‌ಗಳನ್ನು ನಾವೇ ನಿರ್ವಹಣೆ ಮಾಡುತ್ತೇವೆ. ರಾಜ್ಯದ ವಿಮಾನ ನಿಲ್ದಾಣಗಳನ್ನು ರಾಜ್ಯ ಸರ್ಕಾರವೇ ನಿವರ್ಹಿಸಲು ಮುಂದಾಗಿದೆ. ಈ ಸಂಬಂಧ ರಾಜ್ಯ ವಿಮಾನ ಪ್ರಾಧಿಕಾರ ರಚಿಸಲಾಗುವುದು. ಏರ್​ಪೋರ್ಟ್​ಗಳನ್ನು ನಾವು ಈ ಹಿಂದೆ ಏರ್​ಪೋರ್ಟ್ ಅಥಾರಿಟಿಗೆ ನೀಡುತ್ತಿದ್ದೆವು. ಏರ್​ಪೋರ್ಟ್ ಲ್ಯಾಂಡ್ ಕೂಡ ಅಥಾರಿಟಿ ಹೆಸರಿಗೆ ಟ್ರಾನ್ಸ್​ಫರ್ ಆಗ್ತಿತ್ತು. ಅಷ್ಟೆಲ್ಲಾ ಆದ್ರೂ ಕೂಡ ಏರ್​ಪೋರ್ಟ್ ಮೇಲೆ ನಮ್ಮ ಹಿಡಿತ ಇರುತ್ತಿರಲಿಲ್ಲ. ಶಿವಮೊಗ್ಗ ಏರ್​ಪೋರ್ಟ್ ರಾಜ್ಯದಿಂದಲೇ ನಿರ್ವಹಣೆ ಮಾಡ್ತಿರುವ ಏರ್​ರ್ಪೋರ್ಟ್" ಎಂದು ವಿವರಿಸಿದರು.

ನೂರು ದಿನದಲ್ಲಿ ₹60 ಸಾವಿರ ಕೋಟಿ ಹೂಡಿಕೆ ಒಪ್ಪಂದ: "ಹೂಡಿಕೆದಾರರ ನೆಚ್ಚಿನ ತಾಣ ಕರ್ನಾಟಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ನೂರು ದಿನಗಳಲ್ಲಿ ಸುಮಾರು 60 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಫಾಕ್ಸ್​ಕಾನ್, ಟಾಟಾ ಟೆಕ್ನಾಲಜಿ, ಜೆಎಸ್​ಡಬ್ಲ್ಯೂ ಎನರ್ಜಿ, ಸೆಮಿ ಕಂಡಕ್ಟರ್ ಉಪಕರಣ ತಯಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಆಗಿದೆ. ಈ ವರ್ಷ 1 ಲಕ್ಷ ಕೋಟಿ ಬಂಡವಾಳ ಹೂಡಿಕೆ ಸಾಧ್ಯವಾಗುವಂತೆ ಮಾತುಕತೆಗಳು ನಡೆಯುತ್ತಿವೆ. ಉದ್ಯೋಗ ಪೂರಕ ಶಿಕ್ಷಣ ನೀಡುವಂತೆ ಇದರ ಅಂತರ ನೀಗಿಸುವ ಗುರಿ ನಮ್ಮದು" ಎಂದು ತಿಳಿಸಿದರು.

"ಸರ್ಕಾರ ನೂರು ದಿನಗಳ ಪೂರೈಸಿದ ಸಂದರ್ಭ ಇದು. ನೂರು ದಿನಗಳ ನಮ್ಮ ಹೆಜ್ಜೆ ಬಗ್ಗೆ ಹೇಳಲೇಬೇಕು. ನಾವು ಇನ್ನೂ ಬಹುದೂರ ಸಾಗಬೇಕಾಗಿದೆ. ನಾಲ್ಕು ವರ್ಷ ಎಂಟು ತಿಂಗಳಿಗಿಂತ ಹೆಚ್ಚು ಸಾಗುವುದು ಬಾಕಿ ಇದೆ. ನಾವು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನೂರು ದಿನಗಳ ಸಂಭ್ರಮ ಆಚರಣೆ ಮಾಡ್ತಿದ್ದೇವೆ. ಹೊಸ ಕೈಗಾರಿಕೆ ನೀತಿ ತರಲು ಸಿಎಂ ಸೂಚನೆ ನೀಡಿದ್ದಾರೆ. ರಫ್ತು ಉತ್ಪಾದನೆ ಹೆಚ್ಚಳ ಮಾಡುವುದಕ್ಕೆ ಹೆಚ್ಚು ಒತ್ತು ನೀಡಲು ತಿಳಿಸಿದ್ದಾರೆ. ಶೀಘ್ರದಲ್ಲೇ ತಜ್ಞರ ಸಮಿತಿ ಮಾಡಿ ಹೊಸ ಕೈಗಾರಿಕಾ ನೀತಿ ಮಾಡುತ್ತೇವೆ" ಎಂದರು.

"ಒಟ್ಟು 2000 ಎಕರೆ ಪ್ರದೇಶದಲ್ಲಿ ಬೆಂಗಳೂರಿಗೆ ಹತ್ತಿರದಲ್ಲಿ ಮೊದಲ ಹಂತದಲ್ಲಿ 1,000 ಎಕರೆ ವಿಸ್ತೀರ್ಣದಲ್ಲಿ ನಾಲೆಜ್ಡ್​ ಹೆಲ್ತ್ ಇನ್ನೋವೇಷನ್ ರಿಸರ್ಚ್ ಸಿಟಿ ಪಾರ್ಕ್ (Knowledge Health Innovation Research City Park) ಮಾಡ್ತಾ ಇದ್ದೇವೆ. ಶೀಘ್ರದಲ್ಲೇ ಇದನ್ನು ನಿರ್ಮಾಣ ಮಾಡುವ ದೃಷ್ಟಿಯಿಂದ ಕೆಲಸ ಪ್ರಾರಂಭ ಮಾಡಿದ್ದೇವೆ. ವಿಶ್ವ ದರ್ಜೆಯ ಸಂಸ್ಥೆಗಳಿಗೆ ಅಲ್ಲಿ ಅವಕಾಶ ನೀಡಲು ಪ್ಲ್ಯಾನ್ ಮಾಡಲಾಗುತ್ತಿದೆ. ಮಹತ್ವಾಕಾಂಕ್ಷೆ ಹೆಜ್ಜೆಯಾಗಲಿದೆ ಇದು. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನೂರು ದಿನದ ಸಂಭ್ರಮ ಆಚರಣೆ ಮಾಡ್ತಾ ಇದ್ದೇವೆ. ನಾವು ಹೇಳಿದಂತೆ ನಡೆಯುತ್ತೇವೆ. ನುಡಿದಂತೆ ನಡೆದ ಸರ್ಕಾರ ನಮ್ಮದು" ಎಂದರು.

"ಹೊಸ ಕೈಗಾರಿಕಾ ನೀತಿಯನ್ನು ತೆಗೆದುಕೊಂಡು ಬನ್ನಿ ಎಂದು ಸಿಎಂ ಸೂಚನೆ ಕೊಟ್ಟಿದ್ದಾರೆ. ಎಕ್ಸ್ ಪೋರ್ಟ್​ಗೆ ಹೆಚ್ಚಿನ ಒತ್ತು ನೀಡಲು ಹೊಸ ಕೈಗಾರಿಕಾ ನೀತಿ ತರಬೇಕು ಎಂದು ಹೇಳಿದ್ರು. ಅದಕ್ಕೆ ತಕ್ಕಂತೆ ತಜ್ಞರ ಜೊತೆ ಕೆಲಸ ಶುರುವಾಗಿದೆ. ಬೆಂಗಳೂರಿನ ಹೊರ ವಲಯಗಳಲ್ಲಿ ಇರುವ ಇಂಡಸ್ಟ್ರಿಯಲ್ ಏರಿಯಾಗಳ ಅಭಿವೃದ್ಧಿ ಆಗಬೇಕಿದೆ. 190 ಇಂಡಸ್ಟ್ರಿಯಲ್ ಏರಿಯಾಗಳು ರಾಜ್ಯದಲ್ಲಿ ಇವೆ. ಇಂಡಸ್ಟ್ರಿಯಲ್ ಏರಿಯಾಗಳಿಗೆ ಮೂರು ಹಂತಗಳಲ್ಲಿ ಮೂಲಸೌಕರ್ಯ ಒದಗಿಸುವ ಕೆಲಸ ಮಾಡ್ತೇವೆ" ಎಂದು ತಿಳಿಸಿದರು.

ತಪ್ಪು ಮಾಡಿದ್ದರೆ ತನಿಖೆ ಮಾಡುತ್ತೇವೆ: "ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಲೋಕಾಯುಕ್ತ ಕೇಸ್ ಇರೋದು ಗೊತ್ತಿಲ್ಲ. ಹಿಂದಿನ ಸಚಿವರು ತಪ್ಪು ಮಾಡಿದ್ರೂ ತನಿಖೆ ಮಾಡುತ್ತೇವೆ. ಯಾರೇ ತಪ್ಪು ಮಾಡಿದ್ರೂ ಲೀಗಲ್ ಕೇಸ್ ಲಿಸ್ಟ್ ಮಾಡ್ತೇವೆ. ಅದನ್ನೆಲ್ಲಾ ಹೊರಗೆ ತರುತ್ತೇವೆ. ಲೀಗಲ್ ಕೇಸ್​ಗಳನ್ನೆಲ್ಲಾ ಸ್ಟಡಿ ಮಾಡಿದ್ದೇನೆ. ಎಲ್ಲೇ ತಪ್ಪು ಅವ್ಯವಹಾರ ಆಗಿದ್ರೂ ಹೊರಗೆ ತರುತ್ತೇವೆ. ಕೆಲವು ಕೇಸ್​ಗಳ ಬಗ್ಗೆ ಎಜಿ ಜೊತೆಯೂ ಚರ್ಚೆ ಮಾಡಿದ್ದೇನೆ. ಫಿಟ್ ಫಾರ್ ಅಪೀಲ್ ಕೇಸ್​ಗಳ ಬಗ್ಗೆಯೂ ಮಾಹಿತಿ ಕೇಳಿದ್ದೇನೆ" ಎಂದರು.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ ಏನೋ ಗಡಿಬಿಡಿ ಇದೆ, ಅದನ್ನು ಹೇಳುವ ಪರಿಸ್ಥಿತಿಯಲ್ಲಿ ನಾನೂ ಇಲ್ಲ: ಯತ್ನಾಳ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.