ETV Bharat / state

ಕೆ.ಜೆ ಹಳ್ಳಿ ಡಿ.ಜೆ ಹಳ್ಳಿ ಗಲಭೆ: ಆರೋಪಿಗಳ ವಿರುದ್ಧದ ಆದೇಶ ರದ್ದತಿಗೆ ಹೈಕೋರ್ಟ್ ನಿರಾಕರಣೆ

author img

By

Published : Apr 12, 2023, 3:18 PM IST

ಬೆಂಗಳೂರಿನ ಕೆ.ಜೆ ಹಳ್ಳಿ ಮತ್ತು ಡಿ.ಜೆ ಹಳ್ಳಿ ಗಲಭೆ ಪ್ರಕರಣ: 25ನೇ ಆರೋಪಿ ಮೊಹಮ್ಮದ್ ಶರೀಫ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

high court
ಹೈಕೋರ್ಟ್

ಬೆಂಗಳೂರು: ನಗರದ ಕೆ.ಜೆ ಹಳ್ಳಿ ಮತ್ತು ಡಿ.ಜೆ ಹಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯಿದೆ (ಯುಎಪಿಎ), ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯಿದೆ ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ) ವಿವಿಧ ಸೆಕ್ಷನ್‌ಗಳಡಿ ವಿಚಾರಣೆಗೆ ಪರಿಗಣಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ವಿಶೇಷ ನ್ಯಾಯಾಲಯ ನೀಡಿದ ಆದೇಶವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ತನ್ನ ವಿರುದ್ಧ ಯುಎಪಿಎ ಕಾಯಿದೆಯಡಿ ಸಂಜ್ಞೆ ಪರಿಗಣಿಸಿರುವ ಕ್ರಮವನ್ನು ಪ್ರಶ್ನಿಸಿ ಬೆಂಗಳೂರಿನ ನಿವಾಸಿ ಹಾಗೂ ಪ್ರಕರಣದ 25ನೇ ಆರೋಪಿಯಾಗಿರುವ ಮೊಹಮ್ಮದ್ ಶರೀಫ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಅರ್ಜಿ ತಿರಸ್ಕರಿಸಿದೆ. ಅಲ್ಲದೇ ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿಯಲ್ಲಿ ನಡೆದ ಘಟನೆಯಲ್ಲಿ ಸ್ಫೋಟಕಗಳು ಮತ್ತು ದಹಿಸಬಲ್ಲ ವಸ್ತುಗಳಿಂದ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಸಾರ್ವಜನಿಕ ಆಸ್ತಿಗೆ ಹಾನಿ ಅಥವಾ ನಷ್ಟ ಉಂಟು ಮಾಡಲಾಗಿದೆ. ಶಾಂತಿ ಭಂಗ ಉಂಟು ಮಾಡಲಾಗಿದೆ ಎಂಬ ಆರೋಪವಿದೆ. ಇದು ಯುಎಪಿಎ ಸೆಕ್ಷನ್ 15ರ ವ್ಯಾಪ್ತಿಗೆ ಒಳಪಡಲಿದೆ. ಪ್ರಸ್ತುತ ಪ್ರಕರಣ ವಿಚಾರಣಾ ಹಂತದಲ್ಲಿದೆ ಈ ಸಂದರ್ಭದಲ್ಲಿ ಅರ್ಜಿದಾರರ ಪಾತ್ರದ ಬಗ್ಗೆ ತಿಳಿಸುವುದರಿಂದ ವಿಚಾರಣಾ ನ್ಯಾಯಾಲಯದಲ್ಲಿನ ಪ್ರಕರಣದ ಮೇಲೆ ಪೂರ್ವಾಗ್ರಹ ಉಂಟಾಗಲಿದೆ. ಹೀಗಾಗಿ ಅರ್ಜಿ ವಜಾಗೊಳಿಸುತ್ತಿರುವುದಾಗಿ ನ್ಯಾಯಪೀಠ ತಿಳಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರವಾದ ಮಂಡಿಸಿದ್ದ ವಕೀಲರು, ಎನ್ಐಎ ಕಾಯಿದೆ ಅಡಿ ಬರುವಂಥ ಯಾವುದೇ ತೆರನಾದ ಆರೋಪಗಳು ಅರ್ಜಿದಾರರ ವಿರುದ್ಧ ಇಲ್ಲ. ಹೀಗಾಗಿ ಕಾಯಿದೆ ಅಡಿ ಅವರ ವಿರುದ್ಧ ಯಾವುದೇ ಆರೋಪ ಮಾಡಲಾಗದು. ಐಪಿಸಿ ಅಡಿ ಆರೋಪಗಳನ್ನು ಅರ್ಜಿದಾರರ ವಿರುದ್ಧ ಮಾಡಬಹುದಾಗಿದ್ದು, ವ್ಯಾಪ್ತಿ ಹೊಂದಿದ ನ್ಯಾಯಾಲಯದಲ್ಲಿ ಅವರ ವಿರುದ್ಧ ವಿಚಾರಣೆ ನಡೆಸಬಹುದಾಗಿದೆ. ಮ್ಯಾಜಿಸ್ಟ್ರೇಟ್ ಅಥವಾ ಸತ್ರ ನ್ಯಾಯಾಧೀಶರು ವಿಚಾರಣೆ ನಡೆಸಬಹುದಾಗಿದೆ. ಎನ್ಐಎ ನ್ಯಾಯಾಲಯ ವಿಚಾರಣೆ ನಡೆಸುವುದು ಕಾನೂನಿಗೆ ವಿರುದ್ಧವಾಗಿದೆ. ಈ ನೆಲೆಯಲ್ಲಿ ಎನ್ಐಎ ನ್ಯಾಯಾಲಯದಲ್ಲಿನ ಪ್ರಕ್ರಿಯೆ ವಜಾ ಮಾಡಬೇಕು ಎದು ವಾದಿಸಿದ್ದರು.

ಎನ್ಐಎ ಪರ ವಕೀಲರು, ಯುಎಪಿಎ ಕಾಯಿದೆಯ ಸೆಕ್ಷನ್ 15ರ ಅಡಿ ಉಲ್ಲೇಖಿಸಿರುವಂತೆ ಅರ್ಜಿದಾರರು ಸೇರಿದಂತೆ ಇತರೆ ಆರೋಪಿಗಳ ವಿರುದ್ಧದ ಆರೋಪಗಳು ಭಯೋತ್ಪಾದನಾ ಕೃತ್ಯ ವ್ಯಾಖ್ಯಾನದ ಅಡಿ ಬರುತ್ತವೆ. ಅರ್ಜಿದಾರರು ಯಾವ ಪಾತ್ರ ನಿಭಾಯಿಸಿದ್ದಾರೆ ಎಂಬುದು ಆರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿದ್ದು, ಅದರ ಸಂಜ್ಞೆಯನ್ನು ವಿಶೇಷ ನ್ಯಾಯಾಲಯ ತೆಗೆದುಕೊಂಡಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿಯೊಬ್ಬರು ಫೇಸ್ಬುಕ್ನಲ್ಲಿ ಒಂದು ವರ್ಗದ ಧಾರ್ಮಿಕ ಮುಖಂಡರ ವಿರುದ್ಧ ಅವಹೇಳನಕಾರಿ ಅಂಶ ಪ್ರಕಟ ಮಾಡಿದ್ದರು. ಇದನ್ನು ಖಂಡಿಸಿ ಅವರನ್ನು ಬಂಧಿಸಬೇಕು ಎಂದು ಮುಸ್ಲಿಂ ಸಮುದಾಯದ ಹಲವರು ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದರು. ಪೊಲೀಸರು ಮನವಿಯ ಹೊರತಾಗಿಯೂ ಉದ್ರಿಕ್ತರ ಗುಂಪು ಚದುರದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಉದ್ರಿಕ್ತರು ಠಾಣೆಗಳ ಮೇಲೆ ಕಲ್ಲು ಮತ್ತು ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು. ಘಟನೆಯಲ್ಲಿ ಪೊಲೀಸರು ಸೇರಿದಂತೆ ಹಲವು ನಾಗರಿಕರು ಗಾಯಗೊಂಡಿದ್ದರು. ಉದ್ರಿಕ್ತರ ಗುಂಪು ಠಾಣೆಯ ಎದುರು ಇದ್ದ ವಾಹನಗಳನ್ನು ದಹಿಸಿತ್ತು. ಹೀಗಾಗಿ, ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿ ಠಾಣೆಗಳಲ್ಲಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದ್ದವು. ಬಳಿಕ ಪ್ರಕರಣವನ್ನು ಎನ್ಐಎಗೆ ವಹಿಸಲಾಗಿತ್ತು.

ಇದನ್ನೂಓದಿ: ಐಎಂಎ ಪ್ರಕರಣದಲ್ಲಿ ಆರೋಪ: ಚರ್ಚೆಗೆ ಗ್ರಾಸವಾದ ಮಾಜಿ ಕೆಎಎಸ್ ಅಧಿಕಾರಿಗೆ ಬಿಜೆಪಿ‌ ಟಿಕೆಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.