ETV Bharat / state

ರಾಜ್ಯದಲ್ಲಿ ಭರ್ಜರಿ ಮಳೆ: ತಮಿಳುನಾಡಿಗೆ ನಿಗದಿಗಿಂತ 4 ಪಟ್ಟು ಅಧಿಕ ಕಾವೇರಿ ನೀರು ಬಿಡುಗಡೆ

author img

By

Published : Sep 19, 2022, 10:07 AM IST

ಕರ್ನಾಟಕ ರಾಜ್ಯವು ಈ ಬಾರಿ ನಿರೀಕ್ಷೆಗೂ ಮೀರಿದ ನೀರು ಬಿಡುಗಡೆ ಮಾಡಿದೆ. ಪ್ರತಿ ವರ್ಷ ಹೆಚ್ಚಿನ ಕಾವೇರಿ ನೀರು ಬಿಡುಗಡೆಗಾಗಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಮೂಲಕ ಒತ್ತಡ ಹೇರುತ್ತಿದ್ದ ತಮಿಳುನಾಡು ಸರ್ಕಾರವು ಈ ವರ್ಷ ನೀರು ಬಿಡುಗಡೆ ಸಂಬಂಧ ಯಾವುದೇ ಧ್ವನಿ ಎತ್ತದೇ ಮೌನವಾಗಿದೆ.

karnataka-released-excess-cauvery-water-to-tamil-nadu
ರಾಜ್ಯದಲ್ಲಿ ಭರ್ಜರಿ ಮಳೆ: ತಮಿಳುನಾಡಿಗೆ ನಿಗದಿಗಿಂತ ನಾಲ್ಕು ಪಟ್ಟು ಅಧಿಕ ಕಾವೇರಿ ನೀರು ಬಿಡುಗಡೆ

ಬೆಂಗಳೂರು: ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಆಗುತ್ತಿರುವ ಸಮೃದ್ಧ ಮಳೆಯಿಂದಾಗಿ ತಮಿಳುನಾಡಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಕಾವೇರಿ ನೀರು ಹರಿಸಲಾಗಿದೆ. ಐತೀರ್ಪನ್ನು ಮಾರ್ಪಡಿಸಿದ ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಸಕ್ತ ಜಲ ವರ್ಷದಲ್ಲಿ ಸೆಪ್ಟೆಂಬರ್ ತಿಂಗಳವರೆಗೆ ಹರಿಸಬೇಕಾಗಿದ್ದ 101 ಟಿಎಂಸಿ ನೀರಿನ ಬದಲು ನಾಲ್ಕು ಪಟ್ಟು ಹೆಚ್ಚಿನ ಪ್ರಮಾಣದ ಅಂದರೆ 416 ಟಿಎಂಸಿ ನೀರನ್ನು ಹರಿಬಿಡಲಾಗಿದೆ.

ಕರ್ನಾಟಕ ರಾಜ್ಯವು ನಿರೀಕ್ಷೆಗೂ ಮೀರಿದ ನೀರು ಬಿಟ್ಟಿದ್ದರಿಂದ ಪ್ರತಿ ವರ್ಷ ಹೆಚ್ಚಿನ ಕಾವೇರಿ ನೀರು ಬಿಡುಗಡೆಗಾಗಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್
ಮೂಲಕ ಒತ್ತಡ ಹೇರುತ್ತಿದ್ದ ತಮಿಳುನಾಡು ಸರ್ಕಾರವು ಈ ವರ್ಷ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಧ್ವನಿ ಎತ್ತದೇ ಮೌನವಾಗಿದೆ.

ನ್ಯಾಯಾಲಯದ ಆದೇಶ: ಕಾವೇರಿ ನ್ಯಾಯಾಧಿಕರಣದ ಐತೀರ್ಪನ್ನು ಸುಪ್ರೀಂ ಕೋರ್ಟ್ ಮಾರ್ಪಡಿಸಿ ನೀಡಿದ ಆದೇಶದಂತೆ ಕರ್ನಾಟಕವು ಪ್ರತಿ ಸಾಮಾನ್ಯ ಜಲವರ್ಷದಲ್ಲಿ (ಜೂನ್ 1ರಿಂದ ಮೇ 31ರವರೆಗೆ) 177.25 ಟಿಎಂಸಿ ನೀರನ್ನು ತಮಿಳುನಾಡಿನ ಬಿಳಿಗುಂಡ್ಲು ಜಲಾಶಯಕ್ಕೆ ನೀರು ಸೇರುವಂತೆ ಹರಿಸಬೆಕು. ಯಾವ ಯಾವ ತಿಂಗಳಲ್ಲಿ ಎಷ್ಟು ನೀರು ಬಿಡಬೇಕು ಎನ್ನುವುದನ್ನೂ ಸಹ ನ್ಯಾಯಾಲಯ ತನ್ನ ಆದೇಶದಲ್ಲಿ ನಿಗದಿಪಡಿಸಿದೆ. ಅಷ್ಟೇ ಅಲ್ಲ, ಕಾವೇರಿ ನೀರು ನಿರ್ವಹಣೆಗಾಗಿ ಕೇಂದ್ರ ಸರ್ಕಾರದ ಸಾರಥ್ಯದಲ್ಲಿ ನೀರು ನಿರ್ವಹಣೆ ಪ್ರಾಧಿಕಾರ ರಚಿಸಿದೆ.

ಹೆಚ್ಚುವರಿ ಕಾವೇರಿ ನೀರು ಬಿಡುಗಡೆ: ಪ್ರತಿ ತಿಂಗಳು ಕನಿಷ್ಠ ಪ್ರಮಾಣದಲ್ಲಿ ಇಂತಿಷ್ಟೇ ನೀರು ಬಿಡಬೇಕು ಎನ್ನುವುದು ನಿಗದಿಯಾಗಿದೆ. ಆ ಪ್ರಕಾರ ಜೂನ್​​ನಿಂದ ಸೆಪ್ಟೆಂಬರ್ ಎರಡನೇ ವಾರದ ಅಂತ್ಯಕ್ಕೆ 101 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಆದರೆ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿಂದ 416 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ನಿಗದಿಗಿಂತಲೂ 315 ಟಿಎಂಸಿಯಷ್ಟು ನೀರನ್ನು ಹೆಚ್ಚುವರಿಯಾಗಿ ಹರಿಸಲಾಗಿದೆ.

ಇದನ್ನೂ ಓದಿ: ಕಾವೇರಿ ನದಿ ಪಾತ್ರ ಹಾಗೂ ಇತರ ಹಳ್ಳಗಳಲ್ಲಿ ಮರಳು ಗಣಿಗಾರಿಕೆ ನಿಷೇಧ: ಸಚಿವ ಹಾಲಪ್ಪ ಆಚಾರ್

ಸಂಪೂರ್ಣ ಜಲ ವರ್ಷದಲ್ಲಿ ಜೂನ್ 1ರಿಂದ ಮೇ ತಿಂಗಳ 31ರ ಒಳಗೆ ಹರಿಸಬೆಕಾಗಿದ್ದ 177.25 ಟಿಎಂಸಿ ನೀರನ್ನು ಕರ್ನಾಟಕ ರಾಜ್ಯವು ಕಳೆದ ಆಗಸ್ಟ್ ತಿಂಗಳೊಂದರಲ್ಲಿಯೇ 226 ಟಿಎಂಸಿಯಷ್ಟು ನೀರನ್ನು ಬಿಡುಗಡೆಮಾಡಿರುವುದು ವಿಶೇಷವಾಗಿದೆ.

ಸರ್ವೋನ್ನತ ನ್ಯಾಯಾಲಯದ ಆದೇಶದಂತೆ ಕರ್ನಾಟಕ ರಾಜ್ಯವು ಜೂನ್ ತಿಂಗಳಿನಲ್ಲಿ 9.19 ಟಿಎಂಸಿ, ಜುಲೈನಲ್ಲಿ 31.24 ಟಿಎಂಸಿ ಆಗಸ್ಟ್​​ನಲ್ಲಿ 45.95 ಟಿಎಂಸಿ, ಸೆಪ್ಟೆಂಬರ್ ಎರಡನೇ ವಾರದ ಅಂತ್ಯಕ್ಕೆ 14.70 ಟಿಎಂಸಿ ನೀರನ್ನು ತಮಿಳುನಾಡಿನ ಬಿಳಿಗುಂಡ್ಲು ಜಲಾಶಯಕ್ಕೆ ಬಿಡುಗಡೆ ಮಾಡಬೇಕು.

ಇದನ್ನೂ ಓದಿ: ಕಾವೇರಿ 'ತೀರ್ಥೋದ್ಭವ' ವಿಸ್ಮಯಕ್ಕೆ ಮುಹೂರ್ತ ನಿಗದಿ

ರಾಜ್ಯವು ಮಾಹೆವಾರು ಇದನ್ನು ಪಾಲಿಸುತ್ತ ನಿಗದಿಪಡಿಸಿದ ಪ್ರಮಾಣಕ್ಕಿಂತಲೂ ಅಧಿಕ ನೀರನ್ನು ತಮಿಳುನಾಡಿಗೆ ಬಿಟ್ಟಿದೆ. ಜೂನ್ ತಿಂಗಳಿನಲ್ಲಿ 16.46 ಟಿಎಂಸಿ (7.27 ಟಿಎಂಸಿ ಅಧಿಕ ನೀರು), ಜುಲೈ ತಿಂಗಳಲ್ಲಿ 106.93 ಟಿಎಂಸಿ (75.69 ಟಿಎಂಸಿ ಅಧಿಕ ನೀರು), ಆಗಸ್ಟ್ ತಿಂಗಳಲ್ಲಿ 223.57 ಟಿಎಂಸಿ (177.62 ಟಿಎಂಸಿ ಅಧಿಕ ನೀರು) ಹಾಗೂ ಸೆಪ್ಟೆಂಬರ್ ಎರಡನೇ ವಾರದ ಅಂತ್ಯಕ್ಕೆ 69.69 ಟಿಎಂಸಿ (54.99 ಟಿಎಂಸಿ ಹೆಚ್ಚುವರಿ ನೀರು) ಕಾವೇರಿ ನೀರು ಬಿಡುಗಡೆ ಮಾಡಲಾಗಿದೆ.

ತಲೆದೋರದ ಜಲವಿವಾದ: ಸುಪ್ರೀಂ ಕೋರ್ಟ್ 2018ರ ಫೆಬ್ರವರಿ 17ರಂದು ನೀಡಿದ ಆದೇಶದಲ್ಲಿ ಕಾವೇರಿ ಐತೀರ್ಪುನ್ನು ಮಾರ್ಪಡಿಸಿ ಒಂದು ಜಲವರ್ಷದಲ್ಲಿ ಕರ್ನಾಟಕವು 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವುದನ್ನು ನಿಗದಿಪಡಿಸಿದೆ. ಆ ಪ್ರಕಾರ ನಿಗದಿಗಿಂತಲೂ ಅತಿ ಹೆಚ್ಚು ನೀರನ್ನು ಈಗಾಗಲೇ ರಾಜ್ಯವು ತಮಿಳುನಾಡಿಗೆ ಬಿಟ್ಟಿರುವುದರಿಂದ ಈ ವರ್ಷ ತಮಿಳುನಾಡು ಕಾವೇರಿ ನೀರು ಬಿಡುಗಡೆಗಾಗಿ ಯಾವುದೇ ಜಲವಿವಾದ ಎತ್ತುವ ಅವಕಾಶಗಳಿಲ್ಲ.

ಪ್ರತಿ ವರ್ಷ ಜೂನ್​​ನಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಕಾವೇರಿ ನೀರು ಬಿಡುಗಡೆಗಾಗಿ ತಮಿಳುನಾಡು ರಾಜ್ಯವು ವಿವಾದ ಸೃಷ್ಟಿಸಿ ಬೇಡಿಕೆ ಮುಂದಿಡುತ್ತಿತ್ತು. ಮಳೆ ಬೀಳದ ಸಂಕಷ್ಟ ಕಾಲದಲ್ಲಿ ನೀರಿನ ರಾಜಕೀಯ ಮಾಡಿ ಕರ್ನಾಟಕವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ತಮಿಳುನಾಡು ಸರ್ಕಾರಕ್ಕೆ ಕಾವೇರಿ ಜಲವಿವಾದದ ಬಗ್ಗೆ ಈ ವರ್ಷ ಸೊಲ್ಲೆತ್ತದಂತೆ ಭಾರಿ ಪ್ರಮಾಣದಲ್ಲಿ ನೀರು ಹರಿಸಿ ರಾಜ್ಯ ಸರ್ಕಾರ ಬಾಯಿ ಮುಚ್ಚಿಸಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಉತ್ತಮ ಮಳೆ: ರಾಜ್ಯದ ಭೀಮಾನದಿ ತೀರದಲ್ಲಿ ಪ್ರವಾಹ ಭೀತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.