ಕಾವೇರಿ ನದಿ ಪಾತ್ರ ಹಾಗೂ ಇತರ ಹಳ್ಳಗಳಲ್ಲಿ ಮರಳು ಗಣಿಗಾರಿಕೆ ನಿಷೇಧ: ಸಚಿವ ಹಾಲಪ್ಪ ಆಚಾರ್

author img

By

Published : Sep 16, 2022, 4:57 PM IST

ಗಣಿ ಇಲಾಖೆ ಸಚಿವ ಹಾಲಪ್ಪ ಆಚಾರ್

ಕಾವೇರಿ ನದಿ ಪಾತ್ರದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬುದನ್ನು ಸದಸ್ಯರು ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ಗಣಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರು ತಿಳಿಸಿದ್ದಾರೆ.

ಬೆಂಗಳೂರು: ಕಾವೇರಿ ನದಿ ಪಾತ್ರ ಹಾಗೂ ಇತರ ಹಳ್ಳಗಳಲ್ಲಿ ಮರಳು ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ. ಯಾರಾದರೂ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಸಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರು ವಿಧಾನಸಭೆಯಲ್ಲಿ ತಿಳಿಸಿದರು.

ಗಣಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರು ಮಾತನಾಡಿರುವುದು

ಇಂದು ಪ್ರಶ್ನೋತ್ತರ ವೇಳೆ ಜೆಡಿಎಸ್‌ ಸದಸ್ಯ ಡಾ. ಅನ್ನದಾನಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನದಿ ನೀರಿನಲ್ಲಿ ಮರಳು ಗಣಿಗಾರಿಕೆಯಿಂದ ನದಿ ಪಾತ್ರಕ್ಕೆ ಆಗಬಹುದಾದ ಹಾನಿ ಕುರಿತ ಪ್ರಕರಣದ ಸುಪ್ರೀಂಕೋರ್ಟ್​ನ ತೀರ್ಪಿನಂತೆ ಕೇಂದ್ರದ ಪರಿಸರ ಇಲಾಖೆ ಸುಸ್ಥಿರ ಮರಳು ಗಣಿಗಾರಿಕೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರಂತೆ ನದಿ ನೀರಿನ ಪಾತ್ರದಲ್ಲಿ ಮರಳು ಗಣಿಗಾರಿಕೆ ನಿಷೇಧಿಸಿರುತ್ತದೆ. ಹಾಗಾಗಿ ರಾಜ್ಯ ಸರ್ಕಾರವೂ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳಿಗೆ ತಿದ್ದುಪಡಿ ತಂದು ಮರಳು ಗಣಿಗಾರಿಕೆ ನಡೆಸುವುದನ್ನು ನಿಷೇಧಿಸಿ ನಿಯಮ ರೂಪಿಸಿರುತ್ತದೆ ಎಂದು ಹೇಳಿದರು.

ಈ ನಿಯಮದಂತೆ ನದಿ ಪಾತ್ರಗಳು ಮತ್ತು ಇತರ ಹಳ್ಳ ಪಾತ್ರಗಳಲ್ಲಿ ಗಣಿಗಾರಿಕೆಗೆ ಅವಕಾಶ ಇರುವುದಿಲ್ಲ. ನದಿ ಹಳ್ಳಗಳ ಪಾತ್ರಗಳಲ್ಲಿ ಯಾವುದೇ ಮರಳು ಬ್ಲಾಕ್‌ಗಳನ್ನು ಗುರುತಿಸುವುದಿಲ್ಲ ಎಂದು ಮಾಹಿತಿ ನೀಡಿದರು. ಕಾವೇರಿ ನದಿ ಪಾತ್ರದಲ್ಲಿ ಅಕ್ರಮವಾಗಿ ಗಣಿ ನಡೆಯುತ್ತಿದೆ ಎಂಬುದನ್ನು ಸದಸ್ಯರು ತಮ್ಮ ಗಮನಕ್ಕೆ ತಂದಿದ್ದಾರೆ. ನಾಳೆಯೇ ತಂಡವೊಂದನ್ನು ಕಳುಹಿಸಿ ಸ್ಥಳ ಪರಿಶೀಲನೆ ನಡೆಸಿ ಅನಧಿಕೃತವಾಗಿ ಗಣಿಗಾರಿಕೆ ನಡೆಯುತ್ತಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಓದಿ: ಮತಾಂತರ ನಿಷೇಧ ಕಾಯ್ದೆಯಿಂದ ಧರ್ಮ ಒಡೆಯುವುದಕ್ಕೆ ಕಡಿವಾಣ: ಸಚಿವ ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.