ಕಾವೇರಿ 'ತೀರ್ಥೋದ್ಭವ' ವಿಸ್ಮಯಕ್ಕೆ ಮುಹೂರ್ತ ನಿಗದಿ

author img

By

Published : Sep 17, 2022, 7:37 AM IST

kaveri-theerthodbhava-on-october-17th

ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿಯಾಗಿದೆ. ಅಪರೂಪದ ಕ್ಷಣ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಬರುವ ನಿರೀಕ್ಷೆ ಇದ್ದು, ಅಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಕೊಡಗು: ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ದಿನಾಂಕ, ಸಮಯ ನಿಗದಿಯಾಗಿದೆ. ಅಕ್ಟೋಬರ್​ 17ರಂದು ಸೋಮವಾರ ರಾತ್ರಿ 7:21ಕ್ಕೆ ಮೇಷ ಲಗ್ನದ ಶುಭ ಘಳಿಗೆಯಲ್ಲಿ ಪವಿತ್ರ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.‌

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಸಕಲ ಸಿದ್ಧತೆ ನಡೆಯಲಿದೆ. ತಲಕಾವೇರಿಯಲ್ಲಿ ಕಾವೇರಿ ಮಾತೆ ವಿಗ್ರಹದ ಮುಂದೆ ಸೆಪ್ಟೆಂಬರ್​ 27ರ ಮಂಗಳವಾರ 11:05 ಗಂಟೆಗೆ ಪತ್ತಾಯಕ್ಕೆ ಅಕ್ಕಿ ಹಾಕುವ ಕಾರ್ಯಕ್ರಮ ಇರಲಿದೆ. ಅಕ್ಟೋಬರ್‌ 05ರ ಬೆಳಗ್ಗೆ 9:35ರ ಸಮಯದಲ್ಲಿ ಆಜ್ಞ ಮುಹೂರ್ತ ನೆರವೇರಲಿದೆ.

ಅಕ್ಟೋಬರ್ 15ರಂದು 11:45ಕ್ಕೆ ಅಕ್ಷಯ ಪಾತ್ರೆ ಇರಿಸುವುದು ಹಾಗೂ ಸಂಜೆ ಕಾಣಿಕೆ ಡಬ್ಬಿ ಇರಿಸುವ ಕಾರ್ಯ ನಡೆಯಲಿದೆ.‌ ಇಂತಹ ಅಪರೂಪದ ಕ್ಷಣಗಳನ್ನು ನೋಡಲು ಸಾವಿರಾರು ಭಕ್ತರು ಬರುವ ನಿರೀಕ್ಷೆ ಇದ್ದು, ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಭಾಗಮಂಡಲದ ಶ್ರೀ ಭಗಂಡೇಶ್ವರ, ತಲಕಾವೇರಿ ದೇವಾಲಯಗಳಲ್ಲಿ ಅಕ್ಟೋಬರ್ 17ರಂದು ಜರುಗಲಿರುವ ಕಾವೇರಿ ತುಲಾ ಸಂಕ್ರಮಣ ತೀರ್ಥೋದ್ಭವದ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ ಇರಲಿದೆ. ಸುಗಮ ಸಂಚಾರಕ್ಕಾಗಿ ಅಗತ್ಯ ಕ್ರಮ, ತುರ್ತು ಸಂದರ್ಭಗಳನ್ನು ನಿರ್ವಹಿಸಲು ಅಗ್ನಿಶಾಮಕ ದಳ ಹಾಗೂ ಗೃಹರಕ್ಷಕ ದಳ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ.

ಸ್ಥಳೀಯ ಸಂಸ್ಥೆಗಳಿಂದ ಭಾಗಮಂಡಲ-ತಲಕಾವೇರಿಗಳಲ್ಲಿ ಭಕ್ತಾದಿಗಳಿಗೆ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ ಸೌಲಭ್ಯ, ಪಂಚಾಯಿತಿ ವ್ಯಾಪ್ತಿಯಲ್ಲಿ ನೈರ್ಮಲ್ಯ, ಬೀದಿ ದೀಪಗಳ ವ್ಯವಸ್ಥೆ, ಭಾಗಮಂಡಲ ತಲಕಾವೇರಿ ಕಾಲುದಾರಿ ದುರಸ್ತಿ ಹಾಗೂ ಇತರೆ ಕಾರ್ಯ ನಡೆಯಲಿದೆ. ಭಗಂಡೇಶ್ವರ, ತಲಕಾವೇರಿ ಕ್ಷೇತ್ರಗಳಲ್ಲಿ ನೈರ್ಮಲ್ಯ ಕಾಪಾಡಲು ನಗರಸಭೆಯ ವತಿಯಿಂದ ಪೌರಕಾರ್ಮಿಕರನ್ನು ನಿಯೋಜಿಸಲಾಗುತ್ತಿದೆ.

ಇದನ್ನೂ ಓದಿ: ಹಾವೇರಿಯ ಈ ಸ್ಥಳದಲ್ಲಿ ಕೌತುಕ: ಇಬ್ಬರು ಬಸವಣ್ಣರೇ ಇಲ್ಲಿನ ಪೀಠಾಧಿಪತಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.