ETV Bharat / state

ಸುರಿಯುವ ಮಳೆ ನಡುವೆ ಯಶವಂತಪುರ ಕ್ಷೇತ್ರದಲ್ಲಿ ನಡ್ಡಾ ರೋಡ್ ಶೋ..!

author img

By

Published : May 1, 2023, 11:02 PM IST

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ

ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಗೇರಿಯಲ್ಲಿ ಸುರಿಯುವ ಮಳೆ ನಡುವೆಯೂ ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಪರ ಮತಪ್ರಚಾರ ನಡೆಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ

ಬೆಂಗಳೂರು : ರಾಜಕೀಯ ಲಾಭಕ್ಕಾಗಿ ಸಿದ್ಧಾಂತವನ್ನು ಅಡವಿಡುವ ಜೆಡಿಎಸ್ ನಾಯಕರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಮೋದಿ ನೇತೃತ್ವದ ಸಶಕ್ತ ಹಾಗೂ ಡಬಲ್ ಇಂಜಿನ್ ಸರ್ಕಾರಕ್ಕೆ ಬೆಂಬಲ ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಹೇಳಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಗೇರಿಯಲ್ಲಿ ಸುರಿಯುವ ಮಳೆ ನಡುವೆಯೂ ಬಿಜೆಪಿ ಅಭ್ಯರ್ಥಿ ಎಸ್. ಟಿ ಸೋಮಶೇಖರ್ ಪರ ಮತಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ರಾಜಕೀಯ ಲಾಭಕ್ಕಾಗಿ ಯಾರ ಜೊತೆ ಬೇಕಾದರೂ ಕೈಜೋಡಿಸುತ್ತಾರೆ. ಇಂತವರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವೇ? ಎಂದು ಟೀಕಿಸಿದರು.

2014ರ ನಂತರ ದೇಶವು ಹಲವು ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಿದೆ. ಆಟೋಮೊಬೈಲ್, ಸಾಫ್ಟ್‌ವೇರ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಿದೆ. ಮತ್ತೆ ವಿರೋಧ ಪಕ್ಷಗಳಿಗೆ ಅಧಿಕಾರ ವರ್ಗಾವಣೆ ಆದರೆ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುವುದು ನಿಶ್ಚಿತ ಎಂದರು.

ಕಾಂಗ್ರೆಸ್​ನ ಹಲವು ನಾಯಕರು ಬೇಲ್ ಮೇಲೆ ಇದ್ದಾರೆ. ಉಳಿದವರು ಜೈಲಿನಲ್ಲಿದ್ದಾರೆ. ಇಂತಹ ನಾಯಕರು ಬಿಜೆಪಿ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅರ್ಕಾವತಿ ರಿಡೂ ಪ್ರಕರಣ, ಪೊಲೀಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೂರಾರು ಕೋಟಿ ಭ್ರಷ್ಟಾಚಾರವೆಸಗಿದ್ದಾರೆ. ಎಸ್ ಟಿ ಸೋಮಶೇಖರ್ ಅವರನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಕನಸನ್ನು ಭಂಗಗೊಳಿಸಬೇಕು ಎಂದು ಕರೆಕೊಟ್ಟರು.

ಯಶವಂತಪುರ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ: ಯಶವಂತಪುರ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದೆ. ಎರಡು ವರ್ಷಗಳ ಕೋವಿಡ್ ನಡುವೆಯೂ ಕ್ಷೇತ್ರದಲ್ಲಿ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಪ್ರತಿನಿತ್ಯ ಕ್ಷೇತ್ರದ ಜನತೆ ಜೊತೆ ನಿಂತು ಕೆಲಸ ಮಾಡುವ ನನ್ನ ಪರ ಮತದಾರರ ಒಲವಿದೆಯೇ ವಿನಃ 5 ವರ್ಷಕ್ಕೆ ಅಳುತ್ತ ಬರುವ ವ್ಯಕ್ತಿಗಲ್ಲ ಎಂದು ಸಹಕಾರ ಸಚಿವರು ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಟಿ ಸೋಮಶೇಖರ್ ಅವರು ಹೇಳಿದರು.

ಕೆಂಗೇರಿಯಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ನನ್ನನ್ನು ಆಯ್ಕೆ ಮಾಡಿ ಕಳುಹಿಸಿದ ಜನರ ಋಣ ತೀರಿಸುವ ಕೆಲಸ ಮಾಡಿದ್ದೇನೆ.‌ ಶೇ. 80ರಷ್ಟು ಕಾಮಗಾರಿ ಮುಕ್ತಾಯವಾಗಿದ್ದು ಕೆಲವೇ ಕಾಮಗಾರಿ ಬಾಕಿಯಿದೆ. ಕೋವಿಡ್ ಇರದಿದ್ದರೆ ಎಲ್ಲವೂ ಸುಸೂತ್ರವಾಗಿ ನೆರವೇರುತ್ತಿತ್ತು ಎಂದು ಹೇಳಿದರು.

ಯಶವಂತಪುರದ ಜನತೆ ಯಾರು ಕೆಲಸ ಮಾಡುತ್ತಾರೆ? ಕಷ್ಟಕ್ಕೆ ಯಾರು ಸ್ಪಂದಿಸುತ್ತಾರೆ? ಎಂಬುದನ್ನು ಗಮನಿಸಿ ಮತ ನೀಡುತ್ತಾರೆ. ಕೇವಲ ಕಣ್ಣೀರಾಕಿದಾಕ್ಷಣ ಮತದಾರರು ಕರಗುವುದಿಲ್ಲ. ಅವರು ಬುದ್ಧಿವಂತರಿದ್ದಾರೆ ಎಂದರು. ಜೆಡಿಎಸ್ ಅಭ್ಯರ್ಥಿ ಐದು ವರ್ಷದಲ್ಲಿ ಕೇವಲ ಎರಡು ತಿಂಗಳು ಮಾತ್ರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅದೂ ಚುನಾವಣೆ ಘೋಷಣೆಯಾಗುವಾಗ. ಉಳಿದ ದಿನಗಳಲ್ಲಿ ಕ್ಷೇತ್ರದ ಜನರು ನೆನಪಾಗುವುದಿಲ್ಲವೇ? ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಸೋಲು ಗೆಲ್ಲುವು ಸಾಮಾನ್ಯ. ಸೋತಾಕ್ಷಣ ಕ್ಷೇತ್ರದಲ್ಲಿ ಕಣ್ಮರೆಯಾಗಿ ಈಗ ಬಂದು ಕಣ್ಣೀರು ಹಾಕಿದರೆ ಜನ ಕರಗುತ್ತಾರೆಯೇ? ಕೋವಿಡ್ ಸಮಯದಲ್ಲಿ ಜನ ಕಣ್ಣೀರಾಕುವಾಗ ಎಲ್ಲಿ ಹೋಗಿದ್ದರು? ಎಂದು ಪ್ರಶ್ನಿಸಿದರು.

ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಒಳಚರಂಡಿ ಕಾಮಗಾರಿ ಬಹುತೇಕ ಮುಕ್ತಾಯವಾಗಿದೆ. ಮೂಲ ಸೌಕರ್ಯ ಕಲ್ಪಿಸಲಾಗಿದೆ. ಕೋವಿಡ್ ಸಮಯದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿದ್ದೇನೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕೆಂದು ಸ್ತ್ರೀ ಶಕ್ತಿ ಸಂಘಗಳನ್ನು ಉಚಿತವಾಗಿ ನೋಂದಾಯಿಸಿ, ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಜೆಡಿಎಸ್ ಅಭ್ಯರ್ಥಿ ಯಾವುದಾದರೂ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿದ್ದರೆ ತಿಳಿಸಿ ಎಂದು ಪ್ರಶ್ನಿಸಿದರು.

ಸಂಸದರಾದ ಡಿ ವಿ ಸದಾನಂದಗೌಡ, ರಾಜಸ್ಥಾನದ ಶಾಸಕರಾದ ಅವಿನಾಶ್ ಗೆಹ್ಲೋಟ್, ಜಾರ್ಖಂಡ್ ಶಾಸಕರಾದ ಮನೀಶ್ ಜೈಸ್ವಾಲ್ ಸೇರಿದಂತೆ ನಗರ, ಗ್ರಾಮಾಂತರ ಮಂಡಲದ ಅಧ್ಯಕ್ಷರು ಜೊತೆಯಲ್ಲಿದ್ದರು.

ಇದನ್ನೂ ಓದಿ: ಎಲ್ಲವೂ ಉಚಿತವೆಂದ್ರೆ ಖಜಾನೆ ಖಾಲಿ, ನಮ್ಮದು ಜನರನ್ನು ಸಬಲೀಕರಣಗೊಳಿಸುವ ಪ್ರಣಾಳಿಕೆ: ಸಚಿವ ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.