ETV Bharat / state

ಜೆಡಿಎಸ್​ ಮುಖಂಡ ಪ್ರಭಾಕರ್​ ರೆಡ್ಡಿಗೆ ಶಾಕ್​ ನೀಡಿದ ಐಟಿ ಅಧಿಕಾರಿಗಳು: ಕುಮಾರಸ್ವಾಮಿ ಪ್ರತಿಕ್ರಿಯೆ

author img

By

Published : Feb 15, 2023, 12:58 PM IST

Updated : Feb 15, 2023, 6:38 PM IST

ಜೆಡಿಎಸ್​ ಮುಖಂಡ ಪ್ರಭಾಕರ್​ ರೆಡ್ಡಿಗೆ ಶಾಕ್​ ನೀಡಿರುವ ಐಟಿ ಅಧಿಕಾರಿಗಳು ಮೂರು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳ್ಳಂಬೆಳಗ್ಗೆ ಜೆಡಿಎಸ್​ ಮುಖಂಡ ಪ್ರಭಾಕರ್​ ರೆಡ್ಡಿಗೆ ಶಾಕ್​ ನೀಡಿದ ಐಟಿ ಅಧಿಕಾರಿಗಳು
ಬೆಳ್ಳಂಬೆಳಗ್ಗೆ ಜೆಡಿಎಸ್​ ಮುಖಂಡ ಪ್ರಭಾಕರ್​ ರೆಡ್ಡಿಗೆ ಶಾಕ್​ ನೀಡಿದ ಐಟಿ ಅಧಿಕಾರಿಗಳು

ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

ಬೆಂಗಳೂರು: ಇಂದು ಜೆಡಿಎಸ್ ಮುಖಂಡ ಪ್ರಭಾಕರ್​ ರೆಡ್ಡಿಗೆ ಐಟಿ ಅಧಿಕಾರಿಗಳು ಶಾಕ್​ ನೀಡಿದ್ದು, ಏಕಕಾಲದಲ್ಲಿ ಪ್ರಭಾಕರ್ ರೆಡ್ಡಿಗೆ ಸಂಬಂಧಿಸಿದ ಮೂರು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಭಾಕರ್ ರೆಡ್ಡಿ ಅವರ ಮೈಲಸಂದ್ರದ ಮನೆ, ಕಚೇರಿ, ಕೋಣನಕುಂಟೆಯ ಅಪಾರ್ಟ್ಮೆಂಟ್ ಮೇಲೆ ತೆರಿಗೆ ವಂಚನೆ ಆರೋಪದಡಿ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು ಕಡತಗಳ ಪರಿಶೀಲನೆ ಕೈಗೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಕುಮಾರಸ್ವಾಮಿ ಪ್ರತಿಕ್ರಿಯೆ: ಪ್ರತಿಪಕ್ಷದ ನಾಯಕರ ಮೇಲೆ ಇನ್ನೂ ಎರಡು ತಿಂಗಳುಗಳ ಕಾಲ ಐಟಿ ದಾಳಿ ಸಾಮಾನ್ಯ.‌ ಇದು ಯಾಕೆ ಅಂತಲೂ ಎಲ್ಲರಿಗೂ ಗೊತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಮನೆ ಮೇಲೆ ಇಂದು (ಬುಧವಾರ) ನಡೆದ ಐಟಿ ದಾಳಿ ವಿಚಾರ ಕುರಿತು ಹುಬ್ಬಳ್ಳಿ ತಾಲೂಕಿನ ಹೆಬಸೂರನಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರಭಾಕರ್ ರೆಡ್ಡಿ ಒಬ್ಬ ಉದ್ಯಮಿ. ಇಂತಹ ಐಟಿ ದಾಳಿ ಸಾಮಾನ್ಯ. ಇನ್ನೂ ಎರಡಡ್ಮೂರು ತಿಂಗಳು ಇಂತಹ ಐಟಿ ದಾಳಿಗಳು ಪ್ರತಿಪಕ್ಷದ ನಾಯಕರ ಮೇಲೆ ನಡೆಯುತ್ತವೆ. ಇದು ಯಾಕೆ ಅಂತ ಎಲ್ಲರಿಗೂ ಗೊತ್ತು. ಈ ಬಗ್ಗೆ ಜಾಸ್ತಿ ಮಾತನಾಡುವ ಅವಶ್ಯಕತೆಯಿಲ್ಲ ಎಂದರು.

ಕಾಂಗ್ರೆಸ್ ಮತ್ತು ಬಿಜೆಪಿ ಭ್ರಷ್ಟಾಚಾರದ ಬಗ್ಗೆ ವಿಧಾನಸಭಾ ಕಲಾಪದಲ್ಲಿ ಚರ್ಚೆಯು ತೌಡು ಕುಟ್ಟುವ ಕೆಲಸವಾಗುತ್ತಿದೆ. ಚರ್ಚೆಯಿಂದ ಏನು ಸಾಧ್ಯಯಿಲ್ಲ. ಎಲ್ಲಾ ಭ್ರಷ್ಟಾಚಾರ ಆರೋಪಗಳಿಗೆ ದಾಖಲೆ ಒದಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರ ಆರೋಪ ಭೂತದ ಬಾಯಿಯಲ್ಲಿ ಭಗವದ್ಗೀತೆ ಕೇಳಿದಂತೆ. ಬಿಜೆಪಿಯವರು ಅವರ ಆತ್ಮಸಾಕ್ಷಿಗೆ ಉತ್ತರ ಕೊಡಬೇಕು. ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಸಾಮಾನ್ಯ. ಇದಕ್ಕೆ ದಾಖಲೆ ನೀಡಲ್ಲ. ನಾನು ಈ ಹಿಂದೆ ಭ್ರಷ್ಟಾಚಾರದ ಆರೋಪಗಳಿಗೆ ದಾಖಲೆ ನೀಡಿದ್ದೆ.

ಆದರೆ, ಆ ದಾಖಲೆಗಳಿಂದ ಕಾಂಗ್ರೆಸ್ ಅನುಕೂಲ ಮಾಡಿಕೊಂಡಿತು. ಕಾಂಗ್ರೆಸ್ ನಂಬಿದರೆ ಅಕ್ಕಿನೂ ಸಿಗಲ್ಲ, ಹಕ್ಕಿನೂ ಸಿಗಲ್ಲ. ಜನಾರ್ದನ ರೆಡ್ಡಿಯವರ ಪ್ರಾದೇಶಿಕ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿಗೆ ಹೊಡೆತ ನೀಡಬಹುದು. ಆದರೆ, ಕೆಪಿಪಿಯಿಂದ ಜೆಡಿಎಸ್​ಗೆ ಏನು ಆಗಲ್ಲ ಎಂದರು. ಇನ್ನು ನಟಿ, ಮಾಜಿ ಸಂಸದೆ ರಮ್ಯಾ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ನನ್ನ ವಿರುದ್ಧ ರಮ್ಯಾ ಸ್ಪರ್ಧೆ ಮಾಡಿದರೆ ಬೇಡ ಅನ್ನುವುದಕ್ಕೆ ಆಗುತ್ತಾ? ನಿಂತುಕೊಳ್ಳಲಿ. ಆ ಸಹೋದರಿಗೂ ಒಳ್ಳೆಯದಾಗಲಿ ಎಂದು ಹರಸಿದರು.

ಅಭ್ಯರ್ಥಿಗಳ ಎರಡನೇ ಪಟ್ಟಿ: ನವಲಗುಂದಲ್ಲಿ ಪಂಚರತ್ನ ರಥಯಾತ್ರೆ ಯಶಸ್ವಿಯಾಗಿ ನಡೆದಿದೆ. ಇಂದು ಹಾವೇರಿ ಮತ್ತು ರಾಣೆಬೆನ್ನೂರು ಸೇರಿದಂತೆ ಕೆಲವು ಹಳ್ಳಿಯಲ್ಲಿ ಈ ಯಾತ್ರೆ ನಡೆಯಲಿದೆ. ನಮ್ಮ ಅಭ್ಯರ್ಥಿಗಳ ಎರಡನೇ ಪಟ್ಟಿ ಸಿದ್ಧಗೊಂಡ ಬಳಿಕ ಮತ್ತೆ ಹುಬ್ಬಳ್ಳಿ-ಧಾರವಾಡದಲ್ಲಿ ಎರಡನೇ ಬಾರಿ ಪಂಚರತ್ನ ರಥಯಾತ್ರೆ ನಡೆಸಲಾಗುತ್ತದೆ ಎಂದು ಇದೇ ವೇಳೆ ಹೇಳಿದರು.

ಇಡಿ ದಾಳಿ ಕುರಿತಂತೆ ಕೊಮ್ಮನಹಳ್ಳಿ ಜೆಡಿಎಸ್ ಯುವ ಮುಖಂಡ ಅನಂತ್ ಮಾತನಾಡಿ, 'ಎರಡು ತಿಂಗಳ ಮುಂಚೆಯೇ ಈ ದಾಳಿಯನ್ನ ನಿರೀಕ್ಷಿಸಲಾಗಿತ್ತು. ಬೆಂಗಳೂರು ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಇತ್ತೀಚೆಗಿನ ಕುಮಾರಸ್ವಾಮಿ ಪಂಚರತ್ನ ಯಾತ್ರೆ ಪ್ರಭಾವ ಬೀರುತ್ತಿರುವುದನ್ನು ಮನಗಂಡು ಬಿಜೆಪಿ - ಕಾಂಗ್ರೆಸ್ ಪ್ರೇರಿತ ಐಟಿ ದಾಳಿ ನಡೆಸುವ ಮುಖಾಂತರ ಜೆಡಿಎಸ್ ಅಭ್ಯರ್ಥಿಯನ್ನು ಕುಗ್ಗಿಸುವ ಪ್ರಯತ್ನಗಳು ಈ ರೀತಿ ಎಗ್ಗಿಲ್ಲದೆ ನಡೆಯುತ್ತಿವೆ' ಎಂದು ಆರೋಪಿಸಿದ್ದಾರೆ.

ಓದಿ: ಬಾಂಬ್​ ಸ್ಫೋಟ ಪ್ರಕರಣ: ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಎನ್​ಐಎ ಮಿಂಚಿನ ದಾಳಿ

Last Updated :Feb 15, 2023, 6:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.