ETV Bharat / state

ತಾಕತ್ತಿದ್ದರೆ ನಮ್ಮ ಗೆಲುವು ತಡೆಯಿರಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಕಾಂಗ್ರೆಸ್​​ಗೆ ಸಿಎಂ ಸವಾಲು

author img

By

Published : Sep 10, 2022, 4:58 PM IST

Updated : Sep 10, 2022, 5:07 PM IST

ಕಾಂಗ್ರೆಸ್​​ಗೆ ಸಿಎಂ ಸವಾಲು
ಕಾಂಗ್ರೆಸ್​​ಗೆ ಸಿಎಂ ಸವಾಲು

ಕೋಲಾರ ಚಿಕ್ಕಬಳ್ಳಾಪುರಕ್ಕೆ ಎತ್ತಿನ ಹೊಳೆ ನೀರು, ಸರ್ಕಾರದ ಸಾಧನೆಗಳ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ದೊಡ್ಡಬಳ್ಳಾಪುರ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಮಾತನಾಡಿದರು. ಇದೇ ವೇಳೆ, ಕಾಂಗ್ರೆಸ್​ಗೆ ಸವಾಲು ಹಾಕಿದರು.

ಬೆಂಗಳೂರು: ಇಂದು ಆರಂಭಗೊಂಡಿರುವ ನಮ್ಮ ಜನಸ್ಪಂದನ ಸಮಾವೇಶ ವಿಜಯೋತ್ಸವದವರೆಗೂ ಮುಂದುವರೆಯಲಿದೆ. ನಿಮಗೆ ತಾಕತ್ತಿದ್ದರೆ, ಧಮ್ಮಿದ್ದರೆ ನಮ್ಮ ಗೆಲುವನ್ನು ತಡೆಯಿರಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ನೇರ ಸವಾಲೆಸೆದರು.

ದೊಡ್ಡಬಳ್ಳಾಪುರದಲ್ಲಿ ನಡೆದ ಸರ್ಕಾರದ ಮೂರು ವರ್ಷದ ಸಾಧನೆಯ ಜನಸ್ಪಂದನ ಸಮಾವೇಶವನ್ನು ಮಗ್ಗ ನೇಯುವ ಮೂಲಕ ಸಿಎಂ ಉದ್ಘಾಟಿಸಿದರು. ನಂತರ ಮಾತನಾಡಿದ ಸಿಎಂ, ಕೆಂಪೇಗೌಡರ ನಾಡು ಚಿನ್ನದ ಬೀಡು, ರೇಷ್ಮೆ ಹಾಗೂ ಹೈನುಗಾರಿಕೆ ಮಾಡುವ ಶ್ರಮಜೀವಿಗಳ, ರೈತಾಪಿ ಜನಗಳ ನಾಡು, ಬಯಲುಸೀಮೆಯ ಗಂಡುಮೆಟ್ಟಿದ ನಾಡು ಇದು.

ಈ ಮಣ್ಣಿನಲ್ಲಿ ಇಂದು ರಾಜ್ಯಕ್ಕೆ ಕೇಳಿಸುವ ಘೋಷಣೆ ಮಾಡಿದ್ದೇವೆ, 2023 ರಲ್ಲಿ ಮತ್ತೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕಮಲ ಅರಳಲಿದೆ ಎನ್ನುವ ಸಂದೇಶ ಈ ಸಮಾವೇಶದ ಮೂಲಕ ರವಾನೆಯಾಗಿದೆ ಎಂದರು.

ಆಪರೇಷನ್ ಕಮಲ ಸಮರ್ಥನೆ: ತಾವಿಟ್ಟಿರುವ ವಿಶ್ವಾಸ, ಬೆಂಬಲಕ್ಕೆ 2018 ರಲ್ಲಿ ಹೆಚ್ಚು ಸ್ಥಾನ ಬಿಜೆಪಿಗೆ ಬಂತು. ಆದರೆ ಕಾಂಗ್ರೆಸ್ ಕುತಂತ್ರ, ಅಧಿಕಾರ ಲಾಲಸೆಗೆ, ಪ್ರಜಾಪ್ರಭುತ್ವ ವಿರೋಧಿಯಾಗಿ ಸಮ್ಮಿಶ್ರ ಸರ್ಕಾರ ಮಾಡಿ ಬಿಜೆಪಿಯನ್ನು ಹೊರಗಿಟ್ಟರು. ಸಂವಿಧಾನದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಆಗ ಎಲ್ಲಿ ಹೋಗಿದ್ರು? ನಮ್ಮಪ್ಪನಾಣೆ ಕುಮಾರಸ್ವಾಮಿ ಅಧಿಕಾರಕ್ಕೆ ಬರಲ್ಲ ಎಂದು ಅವರನ್ನೇ ಸಿಎಂ ಮಾಡಿದಿರಿ, ಈಗ ಯಾರಿಗೆ ಉಪದೇಶ ಹೇಳುತ್ತೀರಿ?

ನಿಮ್ಮಿಂದ ಪಾಠ ಕಲಿಯಬೇಕಿಲ್ಲ, ಐದು ವರ್ಷ ನಿಮ್ಮ ಕೈಯಲ್ಲಿ ಸಿಲುಕಿ ರಾಜ್ಯ ನಲುಗಬಾರದು ಎಂದು 17 ವೀರರು ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಜನರ ಮುಂದೆ ಹೋಗಿ ಗೆದ್ದು ಬಂದರು. ರಮೇಶ್ ಜಾರಕಿಹೊಳೆ ಸಮೇತ ಎಲ್ಲ ವೀರರು ಎಂದು ಬಿಜೆಪಿ ಸರ್ಕಾರ ರಚನೆಯನ್ನು ಸಮರ್ಥಿಸಿಕೊಂಡರು.

ಜನಸ್ಪಂದನ ಕಾರ್ಯಕ್ರಮದಲ್ಲಿ ಕಾಂಗ್ರೆಸ್​​ಗೆ ಸಿಎಂ ಸವಾಲು

ದುಷ್ಟಕೂಟದ ನಾಟಕಕ್ಕೆ ಕೊನೆ: ನಮ್ಮ ಸರ್ಕಾರ ಬಂದ ಕೂಡಲೇ ಕೋವಿಡ್ ಬಂತು, ಆಗ ಸಮರೋಪಾದಿಯಲ್ಲಿ ಎಲ್ಲ ವ್ಯವಸ್ಥೆ ಮಾಡಿದೆವು, ನೆರವು ನೀಡಿದೆವು, ಲಸಿಕೆ ನೀಡಿದೆವು, 130 ಕೋಟಿ ಜನರಿಗ ಲಸಿಕೆ ನೀಡಿದ ಜಗತ್ತಿನ ಏಕೈಕ ದೇಶ ನಮ್ಮದು. ಅಲ್ಲಿ ಮೋದಿ ಇಲ್ಲಿ ಯಡಿಯೂರಪ್ಪ ಇದ್ದರು. ಕಾಂಗ್ರೆಸ್ ಇದ್ದಿದ್ದರೆ ನಮ್ಮ ಜನರನ್ನು ನರಕಕ್ಕೆ ತಳ್ಳಿಬಿಡುತ್ತಿದ್ದರು.

ಅನ್ನಭಾಗ್ಯ 100 ರೂ.ಗೆ 30 ಕೆಜಿ ಬರುತ್ತಿಲ್ಲ, ಸಿದ್ದರಾಮಯ್ಯ ಬಂದ ನಂತರ 7 ಕೇಜಿಗೆ ಇಳಿಸಿ ನಂತರ ಕಡೆಯ ಎರಡು ವರ್ಷ ನಾಲ್ಕು ಕೆಜಿ ಕೊಟ್ಟಿರಿ, ಕೇಂದ್ರದ ಅಕ್ಕಿಗೆ ಸಿದ್ದು ಫೋಟೋ ಹಾಕಿದ್ದು, ಅನ್ನಭಾಗ್ಯದಲ್ಲೂ ಅಕ್ರಮ ನಡೆಯಿತು. ಇದರ ಬಗ್ಗೆ ತನಿಖೆ ಮಾಡುತ್ತಿದ್ದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಅನುಮಾನಾಸ್ಪದ ಸಾವಾಯಿತು. ಇದು ನಿಮ್ಮ ಸ್ವಚ್ಛ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ದೂರಿದರು.

ಅನ್ನಭಾಗ್ಯಕ್ಕೆ ಕನ್ನ ಹಾಕಿದಿರಿ, ಮರಳು ದಂಧೆ ಮಾಡಿದಿರಿ, ಮರಳು ಸಾಮಾನ್ಯ ಜನರಿಗೆ ಸಿಗದಂತೆ ಮಾಡಿದಿರಿ, 30 ಸಾವಿರ ಬೋರ್ ವೆಲ್​​ಗೆ ಒಂದೇ ದಿನ ಅನುಮತಿ ಕೊಟ್ಟು ಹಗರಣ ಮಾಡಿದಿರಿ, ಎಸ್ಸಿ ಎಸ್ಟಿ ಬೆಡ್ ಶೀಟ್, ದಿಂಬಿನಲ್ಲಿ ಹಗರಣ, ಬಿಡಿಎ ಅರ್ಕಾವತಿ ಬಡಾವಣೆಯಲ್ಲಿ ಹಗರಣ, ಲ್ಯಾಪ್ ಟಾಪ್ ಕೊಡುವಲ್ಲಿ ಹಗರಣ, ಸಣ್ಣ ನೀರಾವರಿಯಲ್ಲಿ ಕೆಲಸ ಮಾಡದೆ 40 ಕೋಟಿ ಬಿಲ್ ತೆಗೆದಿರಿ, ನಿಮ್ಮದು 100 ಪರ್ಸೆಂಟ್ ಭ್ರಷ್ಟಾಚಾರ ಸರ್ಕಾರ.

ನೀವು ನಮ್ಮನ್ನು 40 ಪರ್ಸೆಂಟ್ ಅನ್ನುತ್ತೀರಾ? ಪೊಲೀಸ್ ನೇಮಕಾತಿಯಲ್ಲಿ ಅಕ್ರಮವಾಯಿತು, ನೀವು ಅಕ್ರಮಕ್ಕೆ ಕ್ರಮ ಕೈಗೊಳ್ಳಲಿಲ್ಲ. ಆದರೆ, ನಾವು ಬಂದ ನಂತರ ಕ್ರಮ ಕೈಗೊಂಡಿದ್ದೇವೆ. ಇದು ಬಿಜೆಪಿ ಆಡಳಿತ, ಕಾಂಗ್ರೆಸ್​​ದು ಮುಚ್ಚಿ ಹಾಕುವ ಸರ್ಕಾರ. ನಮ್ಮದು ಪಾರದರ್ಶಕ ಆಡಳಿತ ನೀಡುವ ಸರ್ಕಾರ. ಪಿಯುಸಿಯಲ್ಲೂ ಮೂರು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಯಿತು. ನಿಮ್ಮದು ಹೇಳುತ್ತಾ ಹೋದರೆ ಬೇಕಾದಷ್ಟಿದೆ, ಈ ದುಷ್ಟ ನಾಯಕರ ಆಟ ಕರ್ನಾಟಕದಲ್ಲಿ ನಡೆಯಲ್ಲ ಎಂದು ತೋರಿಸಲು ಇಷ್ಟು ಜನ ಸೇರಿದ್ದೀರಿ, 2023 ಕ್ಕೆ ಈ ದುಷ್ಟಕೂಟದ ನಾಟಕಕ್ಕೆ ಕೊನೆ ಹಾಡಿ ಮುಂದೆ ಹೋಗಬೇಕು ಎಂದರು.

ಸರ್ಕಾರದ ರಿಪೋರ್ಟ್ ಕಾರ್ಡ್: ಯಡಿಯೂರಪ್ಪ ಅವರ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗಿದ್ದೇವೆ, ರೈತರು, ನೇಕಾರ ಕೂಲಿ ಕಾರ್ಮಿಕರ ಮಕ್ಕಳಿಗೆ ಸೇರಿ 1042 ಕೋಟಿ ರೂ.ಗಳ ವಿದ್ಯಾನಿಧಿ ಕೊಡಲಾಗುತ್ತಿದೆ. ನಮ್ಮ ರಾಜ್ಯದ ಬಡ ಮಕ್ಕಳು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ವಿದ್ಯೆ ಮುಖ್ಯ, ಅದನ್ನು ಕೊಡುತ್ತಿದ್ದೇವೆ. ಯಶಸ್ವಿನಿ ಯೋಜನೆ ಮತ್ತೊಮ್ಮೆ ಜಾರಿ ಮಾಡುತ್ತಿದ್ದೇವೆ ಎಂದರು.

ಕ್ಷೀರಾಭಿವೃದ್ಧಿ ಬ್ಯಾಂಕ್ ಮಾಡುತ್ತಿದ್ದೇವೆ. ಎಸ್ಸಿಎಸ್ಟಿ, ಒಬಿಸಿಗೆ 150 ವಸತಿ ನಿಲಯ, 5 ಮೆಗಾ ವಸತಿ ನಿಲಯ ಸ್ಥಾಪನೆ, 75 ಯೂನಿಟ್ ವಿದ್ಯುತ್ ಬಿಪಿಎಲ್ ಎಸ್ಸಿಎಸ್ಟಿ ಜನರಿಗೆ ಕೊಡುತ್ತಿದ್ದೇವೆ, ಮನೆ ಕಟ್ಟಿಕೊಳ್ಳಲು 2 ಲಕ್ಷ ಸಬ್ಸಿಡಿ, 50 ಸಾವಿರ ಎಸ್ಸಿಎಸ್ಟಿ ಮಕ್ಕಳಿಗೆ ಇದೇ ವರ್ಷ ಸ್ವಯಂ ಉದ್ಯೋಗ ಕೊಡಲಿದ್ದೇವೆ, ಮಹಿಳೆಯರಿಗೆ, ಯುವಕರಿಗೆ‌ ಸ್ವಯಂ ಉದ್ಯೋಗ ಸೃಷ್ಟಿ, ಸಮಾಜದ ಎಲ್ಲ ವರ್ಗದವರಿಗೆ ಅವಕಾಶ ಕೊಡಬೇಕು ಎಂದು ಹೊರಟಿದ್ದೇವೆ ಎಂದು ಸಿಎಂ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಈ ವರ್ಷದಲ್ಲೇ ಕೋಲಾರ ಚಿಕ್ಕಬಳ್ಳಾಪುರಕ್ಕೆ ಎತ್ತಿನ ಹೊಳೆ ನೀರು: ನೀರಾವರಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಈ ಭಾಗದ ಎತ್ತಿನಹೊಳೆ ಯೋಜನೆ ನಮ್ಮ ಕಾಲದಲ್ಲಿ ಆರಂಭವಾಯಿತು. ಆದರೆ, ಇವರು ಮಾತನಾಡುತ್ತಾರೆ, ಅವರಿಗೆ ಎತ್ತಿನಹೊಳೆ ಎಲ್ಲಿದೆ ಎಂದೇ ಗೊತ್ತಿಲ್ಲ ಅಂತಾ. ಶಾಶ್ವತ ಕುಡಿಯುವ ನೀರಿಗೆ ಈ ಯೋಜನೆ ನಾವು ಆರಂಭಿಸಿದ್ದು, ನಮ್ಮ ಯೋಜನೆಗೆ ವಿರೋಧ ವ್ಯಕ್ತಪಡಿಸಿದವರೇ ಈಗ ನಾವು ಯೋಜನೆ ಮಾಡಿದೆವು ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, 3 ಸಾವಿರ ಕೋಟಿ ಕೊಟ್ಟು, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಇದೇ ವರ್ಷ ನೀರು ಹರಿಸಲಿದ್ದೇವೆ ಎಂದು ಬೊಮ್ಮಾಯಿ‌ ಘೋಷಣೆ ಮಾಡಿದರು.

ಕೋಲಾರ, ಚಿಕ್ಕಬಳ್ಳಾಪುರಕ್ಕೆ ಹೊಸ ಟೌನ್ ಶಿಪ್ ಮಾಡಿದ್ದೇವೆ. ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿಯಲ್ಲಿ ಸೆಟ್​​ಲೈಟ್ ಟೌನ್ ಮಾಡಲಿದ್ದೇವೆ. ಮೂರು ನಗರಗಳ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದೇವೆ. ಹೊಸ ಶಿಕ್ಷಣ, ಉದ್ಯೋಗ ನೀತಿ, ಆರ್ ಅಂಡ್ ಡಿ ನೀತಿ ಸೇರಿ ಹಲವು ನೀತಿ ಜಾರಿ ಮಾಡುತ್ತಿದ್ದು, ಎಲ್ಲ ವಲಯದಲ್ಲಿಯೂ ರಾಜ್ಯ ಮುಂದುವರೆಯಬೇಕು ಎನ್ನುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದರು.

ಕಾಂಗ್ರೆಸ್ ಹಗರಣ ಬಯಲಿಗೆಳೆಯುತ್ತೇವೆ: ನಿಮ್ಮ ಕನಸು ಕನಸಾಗಿಯೇ ಉಳಿಯಲಿದೆ. ರಾಜ್ಯದ ಜನ ನಿಮ್ಮ ಭ್ರಷ್ಟಾಚಾರ, ದುರಾಡಳಿತ ನೋಡಿದ್ದಾರೆ ಹಾಗಾಗಿ ನಿಮಗೆ ಮತ್ತೆ ಅವಕಾಶ ಸಿಗಲ್ಲ, ದೊಡ್ಡಬಳ್ಳಾಪುರದಿಂದ ಆರಂಭಗೊಂಡಿರುವ ಜನಸ್ಪಂದನ ರಾಜ್ಯಾದ್ಯಂತ ತೆಗೆದುಕೊಂಡು ಹೋಗಲಿದ್ದೇವೆ. ತಾಕ್ಕತ್ತಿದ್ದರೆ, ಧಮ್ಮಿದ್ದರೆ ನಮ್ಮ ಗೆಲುವು ನಿಲ್ಲಿಸಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಸಿಎಂ ನೇರ ಸವಾಲೆಸೆದರು.

ಯಾರಿಗೆ ಅಧಿಕಾರ ಎಂದು ಜನಶಕ್ತಿ ತೀರ್ಮಾನ ಮಾಡಲಿದೆ. ಭ್ರಷ್ಟಾಚಾರದಿಂದ ಕೂಡಿಟ್ಟ ಹಣದಿಂದ ಹಿಂದೆ ಸರ್ಕಾರ ಮಾಡಿದ್ದಿರಿ, ಸ್ವಲ್ಪ ದಿನದಲ್ಲಿ ನಿಮ್ಮ ಬಂಡವಾಳ ಬಯಲಾಗಲಿದೆ, ಎಲ್ಲ ಹಗರಣ, ನಿಮ್ಮ ವಿಕೃತ ಕೆಲಸ ಹೊರ ಬರಲಿದೆ. ನಿಮ್ಮ ನಿಜ ಸ್ವರೂಪವನ್ನು ಜನರ ಮುಂದಿಡಲಿದ್ದೇವೆ, ಆಗ ಜನ ಛೀ ಥೂ ಎನ್ನುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.

ರಾಜ್ಯದಲ್ಲಿ 2023ಕ್ಕೆ ಮತ್ತೆ ಬಿಜೆಪಿ ಸರ್ಕಾರವೇ ಬರಲಿದೆ. ಈಗ ಡಬ್ಬಲ್ ಇಂಜಿನ್ ಸರ್ಕಾರ ಇದೆ. ಕೇಂದ್ರದ ಯೋಜನೆ ಜನರಿಗೆ ಮುಟ್ಟಿಸುತ್ತೇವೆ, ನಾವು ನಮ್ಮ ಸರ್ಕಾರದ ಸಾಧನೆಯ ರಿಪೋರ್ಟ್ ಕಾರ್ಡ್ ಕೊಟ್ಟು ಆಶೀರ್ವಾದ ಕೇಳುತ್ತೇವೆ, ನವ ಕರ್ನಾಟಕ ನಿರ್ಮಾಣ ನಮ್ಮ ಕನಸು, ಜನಸ್ಪಂದನೆ 2023 ರವರೆಗೂ ನಿಲ್ಲಲ್ಲ, ವಿಜಯೋತ್ಸವ ಆಚರಣೆವರೆಗೂ ಮಾಡುತ್ತೇವೆ. ಕರ್ನಾಟಕ ಜನತೆಯ ಅದಮ್ಯ ಸೇವೆ ಮಾಡುವ ಸಂಕಲ್ಪ ಮಾಡುತ್ತಿದ್ದೇನೆ. ನಮಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ನೆಟ್ಟಾರು ಕುಟುಂಬಕ್ಕೆ ಉದ್ಯೋಗ: ದುಷ್ಕರ್ಮಿಕಗಳಿಂದ ಹತ್ಯೆಗೊಳಗಾದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಸ್ಮರಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ‌, ನೆಟ್ಟಾರು ಪತ್ನಿಗೆ ಸಿಎಂ ಕಚೇರಿಯಲ್ಲಿ ಉದ್ಯೋಗ ನೀಡುವುದಾಗಿ ಘೋಷಿಸಿದರು.

(ಇದನ್ನೂ ಓದಿ:ಕಾಂಗ್ರೆಸ್ ಅಧಿಕಾರಕ್ಕೇರಲು ಬಿಡಲ್ಲ, 150 + ಸ್ಥಾನದೊಂದಿಗೆ ಮತ್ತೆ ನಮ್ದೆ ಸರ್ಕಾರ: ಯಡಿಯೂರಪ್ಪ)

Last Updated :Sep 10, 2022, 5:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.