ETV Bharat / state

ಅಕ್ರಮ ಗಣಿಗಾರಿಕೆ: ಕಂಪನಿ ಮಾಜಿ ಉದ್ಯೋಗಿಗೆ ಸಾಕ್ಷಿಯಾಗಲು ನೀಡಿದ್ದ ಅನುಮತಿ ಎತ್ತಿ ಹಿಡಿದ ಹೈಕೋರ್ಟ್

author img

By

Published : Jun 19, 2023, 8:23 PM IST

Etv Bharathigh-court-verdict-regarding-illegal-mining-case-of-shri-mallikarjun-shipping-private-limited
ಅಕ್ರಮ ಗಣಿಗಾರಿಕೆ ಪ್ರಕರಣ: ಕಂಪನಿಯ ಮಾಜಿ ಉದ್ಯೋಗಿಗೆ ಸಾಕ್ಷಿಯಾಗಲು ನೀಡಿದ್ದ ಅನುಮತಿ ಎತ್ತಿ ಹಿಡಿದ ಹೈಕೋರ್ಟ್

ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ವಿರುದ್ಧದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಾಕ್ಷಿಯಾಗಲು ಕಂಪನಿಯ ಮಾಜಿ ಉದ್ಯೋಗಿಗೆ ಅನುಮತಿ ನೀಡಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಬೆಂಗಳೂರು: ಕಾರವಾರ ಶಾಸಕ ಸತೀಶ್ ಸೈಲ್ ಹಾಗೂ ಅವರು ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ವಿರುದ್ಧದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಾಕ್ಷಿಯಾಗಲು (ಅಪ್ರೂವರ್) ಕಂಪೆನಿಯ ಮಾಜಿ ಉದ್ಯೋಗಿಯೂ ಆದ ಪ್ರಕರಣದ ನಾಲ್ಕನೇ ಆರೋಪಿ ಸುಶೀಲ್ ಕುಮಾರ್ ವಲೇಚಾಗೆ ಅನುಮತಿ ನೀಡಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಶಾಸಕ ಸತೀಶ್ ಸೈಲ್ ಹೈಕೋರ್ಟ್​ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿಯ ವಜಾಗೊಳಿಸಿ ಆದೇಶಿಸಿದೆ.
ಅಲ್ಲದೆ, ಪ್ರಕರಣದ ಸತ್ಯಾಸತ್ಯತೆ ತಿಳಿಯುತ್ತದೆ ಎನ್ನುವ ಸಂದರ್ಭದಲ್ಲಿ ಆರೋಪಿಗೆ ಕ್ಷಮಾದಾನ ನೀಡಿ ಸಾಕ್ಷಿಯಾಗಲು ಅನುಮತಿ ನೀಡಲು ಸಂಬಂಧಪಟ್ಟ ನ್ಯಾಯಾಲಯಕ್ಕೆ ಅವಕಾಶವಿದೆ. ಅದರಂತೆ ನ್ಯಾಯಾಲಯವು ತನ್ನ ಅಧಿಕಾರ ಬಳಸಿ ಆರೋಪಿಯನ್ನು ಸಾಕ್ಷಿಯಾಗಲು ಅನುಮತಿ ನೀಡಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸಲು ಎಲ್ಲಾ ಪ್ರಯತ್ನ ನಡಸುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಇದೇ ವೇಳೆ ನಿರ್ದೇಶನ ನೀಡಿದೆ.

ಏನಿದು ಪ್ರಕರಣ?: ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಆರೋಪ ಸಂಬಂಧ ಸತೀಶ್ ಸೈಲ್ ಮತ್ತವರು ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀ ಮಲ್ಲಿಕಾಜುರ್ನ ಶಿಪ್ಪಿಂಗ್ ಪ್ರೈ.ಲಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಪ್ರಕರಣ ಸಂಬಂಧ ಸತೀಶ್ ಸೈಲ್ ಬಂಧನಕ್ಕೆ ಒಳಗಾಗಿ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಸಿಬಿಐ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಹಲವು ಆರೋಪಿಗಳು ತಮ್ಮ ವಿರುದ್ಧದ ಆರೋಪ ಕೈ ಬಿಡುವಂತೆ ಕೋರಿ ಅರ್ಜಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಗಳನ್ನು ಸಿಬಿಐ ಕೋರ್ಟ್ ತಿರಸ್ಕರಿಸಿತ್ತು. ಹಲವು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ನಿಗದಿಪಡಿಸಿತ್ತು. ಈ ಹಂತದಲ್ಲಿ ಪ್ರಕರಣದ ನಾಲ್ಕನೇ ಆರೋಪಿಯಾಗಿದ್ದ ಶ್ರೀ ಮಲ್ಲಿಕಾಜುನ್ ಶಿಪ್ಪಿಂಗ್ ಕಂಪನಿಯ ಮಾಜಿ ಉದ್ಯೋಗಿಯೂ ಆದ ನವದೆಹಲಿ ಮೂಲದ ಶ್ರೀ ಲಾಲ್ ಮಹಲ್ ಲಿಮಿಟೆಡ್ ಕಂಪನಿ ನಿರ್ದೇಶಕ ಸುನೀಲ್ ಕುಮಾರ್ ವಲೇಚ ತಪ್ಪೊಪ್ಪಿಕೊಂಡು ಸಾಕ್ಷಿಯಾಗಲು ಅನುಮತಿ ಕೋರಿದ್ದರು.

ತಾನು ಕೇವಲ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿಯ ಉದ್ಯೋಗಿಯಾಗಿದ್ದೆ. ಸದ್ಯ ಪ್ರಕರಣದಲ್ಲಿ ಸಾಕ್ಷಿಯಾಗಲು ಬಯಸಿದ್ದು, ಅದಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಆ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಪುರಸ್ಕರಿಸಿ 2021ರ ಅ.27ರಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಶಾಸಕ ಸತೀಶ್ ಸೈಲ್ ಮತ್ತವರ ಕಂಪನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಹೆಚ್.​ಡಿ. ಕುಮಾರಸ್ವಾಮಿ, ಸಂಬಂಧಿಕರಿಂದ ಒತ್ತುವರಿ ಜಮೀನು ವಶಕ್ಕೆ ಪಡೆದ ವರದಿ ಸಲ್ಲಿಕೆಗೆ ಸರ್ಕಾರಕ್ಕೆ ಕಾಲಾಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.