ETV Bharat / state

ದಾವಣಗೆರೆ ಜಿಲ್ಲೆಯಲ್ಲಿ ಖರಾಬು ಜಮೀನು ಒತ್ತುವರಿ ಆರೋಪ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್

author img

By ETV Bharat Karnataka Team

Published : Dec 4, 2023, 8:45 PM IST

ಹೈಕೋರ್ಟ್‌
ಹೈಕೋರ್ಟ್‌

ದಾವಣಗೆರೆಯ ತಾಯಿಟೋಣಿ ಗ್ರಾಮಸ್ಥರು ಸಲ್ಲಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ಎತ್ತಿ ಹಿಡಿದಿದ್ದು, ಸರ್ಕಾರಕ್ಕೆ ನೋಟಿಸ್ ನೀಡಿದೆ.

ಬೆಂಗಳೂರು : ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತಾಯಿಟೋಣಿ ಗ್ರಾಮದ ಸರ್ಕಾರಿ ಕೆರೆಗೆ ಮತ್ತು ಖರಾಬು ಜಮೀನಿಗೆ ಸೇರಿದ ಸುಮಾರು 28 ಎಕರೆ ಜಾಗವನ್ನು ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಈ ಸಂಬಂಧ ಎಂ.ಟಿ ಬಾಬು ಸೇರಿದಂತೆ ತಾಯಿಟೋಣಿ ಗ್ರಾಮದ 10 ಮಂದಿ ನಿವಾಸಿಗಳು ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠ ನೋಟಿಸ್​ ಜಾರಿ ಮಾಡಿದೆ. ಪ್ರಕರಣದಲ್ಲಿ ಪ್ರತಿವಾದಿಗಳಾದ ರಾಜ್ಯ ಕಂದಾಯ ಇಲಾಖೆ ಕಾರ್ಯದರ್ಶಿ, ಸಣ್ಣ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ, ದಾವಣಗೆರೆ ನಗರ ಕಾರ್ಯಕಾರಿ ಎಂಜಿನಿಯರ್‌, ಜಿಲ್ಲಾಧಿಕಾರಿ, ಉಪ ವಲಯದ ಉಪ ವಿಭಾಗಾಧಿಕಾರಿ ಮತ್ತು ಒತ್ತುವರಿದಾರರು ಎನ್ನಲಾದ ಹನುಮಂತ ರೆಡ್ಡಿ, ಬಾಬುರೆಡ್ಡಿ, ರಾಜಶೇಖರ ರೆಡ್ಡಿ ಮತ್ತು ಪ್ರಹ್ಲಾದ್ ರೆಡ್ಡಿ ಅವರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎ.ನಾಗರಾಜಪ್ಪ ಅವರು ವಾದ ಮಂಡಿಸಿ, ತಾಯಿತೋಣಿ ಗ್ರಾಮದ ಸರ್ಕಾರಿ ಕೆರೆಗೆ ಸೇರಿದ ಸರ್ವೇ ನಂ.6ರಲ್ಲಿನ 10 ಎಕರೆ 21 ಗುಂಟೆ, ಸರ್ವೇ ನಂಬರ್‌ 27ರಲ್ಲಿನ 6 ಎಕರೆ ಮತ್ತು ಗ್ರಾಮದ 12 ಎಕರೆ 32 ಗುಂಟೆ ಖರಾಬು (ಬಂಜರು) ಜಮೀನನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ. ಜತೆಗೆ, ಕೃಷಿ ಮತ್ತು ಪಶುಸಂಗೋಪನೆ ಚಟುವಟಿಕೆಗೆ ಗ್ರಾಮಸ್ಥರು ಸರ್ಕಾರಿ ಕೆರೆಯನ್ನು ಆಧರಿಸಿದ್ದಾರೆ. ಈ ಜಾಗದ ಸಂರಕ್ಷಣೆಗೆ ಕೋರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಒತ್ತುವರಿ ತೆರವುಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.

ಈ ವಾದವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಸರ್ಕಾರದ ಜಾಗದ ಒತ್ತುವರಿಯನ್ನು ಒಪ್ಪಲಾಗದು. ಕೆರೆ ಮತ್ತು ಖರಾಬು ಜಮೀನನ್ನು ಸಂರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟು ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.

ಇದನ್ನೂ ಓದಿ : ಹೈಕೋರ್ಟ್ ಕಟ್ಟಡ ಸ್ಥಳಾಂತರಿಸಲು ಕೋರಿರುವ ಅರ್ಜಿ: ಕಾಲಾವಕಾಶ ಕೋರಿದ ಆಡಳಿತ ವಿಭಾಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.