ETV Bharat / state

ಮಗುವನ್ನು ಪತಿಯ ಸುಪರ್ದಿಗೆ ನೀಡದ ಪತ್ನಿ : ಹೈಕೋರ್ಟ್​ನಿಂದ ಜಾಮೀನು ರಹಿತ ವಾರಂಟ್​

author img

By

Published : Apr 28, 2023, 8:58 PM IST

ಪತಿಯ ಸುಪರ್ದಿಗೆ ಮಗನನ್ನು ಒಪ್ಪಿಸಲು ಹೊರಡಿಸಿದ್ದ ಆದೇಶ ಪಾಲಿಸದ ಮಹಿಳೆಯೊಬ್ಬರ ವಿರುದ್ಧ ಹೈಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

high-court-issued-a-non-bailable-warrant-to-women-for-disobedience-to-orders
ಆದೇಶ ಪಾಲಿಸದ ಪತ್ನಿಗೆ ಜಾಮೀನು ರಹಿತ ವಾರೆಂಟ್​ ಜಾರಿ ಮಾಡಿದ ಹೈಕೋರ್ಟ್..

ಬೆಂಗಳೂರು: ಪ್ರಿಯಕರ ಜೊತೆಗಿರಲು ಹೆಚ್ಚು ಪ್ರಾಶಸ್ತ್ಯ ನೀಡುವುದನ್ನು ಪರಿಗಣಿಸಿ ಮಗನನ್ನು ಪತಿಯ ಸುಪರ್ದಿಗೆ ಒಪ್ಪಿಸಲು ಹೊರಡಿಸಿದ್ದ ಆದೇಶ ಪಾಲಿಸದ ಮಹಿಳೆಯೊಬ್ಬರ ವಿರುದ್ಧ ಹೈಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿಮಾಡಿದೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿರುವ ಧೋರಣೆ ಆಕ್ಷೇಪಿಸಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಅಪ್ರಾಪ್ತ ಮಗುವನ್ನು ಅರ್ಜಿದಾರ ಪತಿಯ ಸುಪರ್ದಿಗೆ ನೀಡುವಂತೆ 2023ರ ಜನವರಿ 31ರಂದು ನೀಡಿದ ಆದೇಶವನ್ನು ಪತ್ನಿ ಪಾಲಿಸಿಲ್ಲ. ಆ ಮೂಲಕ ಪತ್ನಿ ಕೋರ್ಟ್ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ನಡವಳಿಕೆಯನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದೆ. ಕಠಿಣ ಕ್ರಮ ಕೈಗೊಳ್ಳವರೆಗೂ ನ್ಯಾಯಾಲಯದ ಮುಂದೆ ಆಕೆ ಹಾಜರಾಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಮತ್ತೊಂದೆಡೆ ಪತ್ನಿಯ ಈ ನಡೆ ನ್ಯಾಯಾಂಗ ಪ್ರಕ್ರಿಯೆ ದುರ್ಬಳಕೆ ಆದಂತಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ನಗರ ಪೊಲೀಸ್ ಆಯುಕ್ತರು ಅರ್ಜಿಯ ಮುಂದಿನ ವಿಚಾರಣೆ ವೇಳೆ ಅರ್ಜಿದಾರರ ಪತ್ನಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಈ ವೇಳೆ ಮಗುವೂ ಜೊತೆಯಲ್ಲಿರುವಂತೆ ನೋಡಿಕೊಳ್ಳಬೇಕು. ಒಂದೊಮ್ಮೆ ಈ ನ್ಯಾಯಾಲಯದ ಹೊರಭಾಗದಲ್ಲಿ ಅರ್ಜಿದಾರರ ಪತ್ನಿಯನ್ನು ಬಂಧಿಸಿದರೆ, ಮಗುವನ್ನು ಕೋರ್ಟ್‌ಗೆ ಕರೆತರುವಾಗ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪೊಲೀಸ್ ಪ್ರಾಧಿಕಾರ ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕ ವಿ.ಎಸ್. ಹೆಗ್ಡೆ, ''ನ್ಯಾಯಾಲಯವು ಪ್ರಕರಣ ಸಂಬಂಧ ಮಹಿಳೆಗೆ ಹಿಂದೆ ನೋಟಿಸ್ ನೀಡಿದಾಗ ಅರ್ಜಿದಾರರ ಪತ್ನಿ ರಿಜಿಸ್ಟ್ರಿಯಲ್ಲಿ ಮೆಮೊ ಸಲ್ಲಿಸಿದ್ದಾರೆ. ಇದರಿಂದ ಈ ಪ್ರಕರಣವು ಕೋರ್ಟ್‌ನಲ್ಲಿ ವಿಚಾರಣೆ ಇರುವುದು ಆಕೆ ತಿಳಿದಿರುವುದು ಸ್ಪಷ್ಟವಾಗುತ್ತದೆ. ಆದರೂ ಕೋರ್ಟ್‌ಗೆ ಹಾಜರಾಗುವುದರಿಂದ ಆಕೆ ತಪ್ಪಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಸಾಕಷ್ಟು ಶ್ರಮ ವಹಿಸಿದರೂ ಆಕೆಯನ್ನು ಪತ್ತೆ ಹಚ್ಚಲಾಗಲಿಲ್ಲ. ಅವರು ಮನೆ ಖಾಲಿ ಮಾಡಿದ್ದು, ಕಚೇರಿಯಲ್ಲೂ ಲಭ್ಯವಾಗುತ್ತಿಲ್ಲ. ದೆಹಲಿಯಲ್ಲಿ ನೆಲೆಸಿರುವ ಎಂಬ ಬಗ್ಗೆ ಮಾಹಿತಿಯಿದ್ದು, ನೋಟಿಸ್ ಜಾರಿಗೊಳಿಸಲು ಪ್ರಯತ್ನಿಸಲಾಗಿದೆ. ವಿದೇಶಿ ಪ್ರಾದೇಶಿಕ ನೋಂದಣಿ ಅಧಿಕಾರಿಗೆ ಸಹ ಪ್ರಕರಣದ ಕುರಿತು ಮಾಹಿತಿ ನೀಡಿದ್ದು, ಲುಕ್‌ಔಟ್ ನೋಟಿಸ್ ಸಹ ಜಾರಿಗೊಳಿಸಲಾಗಿದೆ'' ಎಂದು ಗಮನಕ್ಕೆ ತಂದರು.

ಈ ವಾದ ಪರಿಗಣಿಸಿದ ಹೈಕೋರ್ಟ್, ''ಮಹಿಳೆಯ ಕರ್ನಾಟಕ ವ್ಯಾಪ್ತಿಯಿಂದ ಹೊರಗಿದ್ದರೆ ಸಂಬಂಧಪಟ್ಟ ಪೋಲೀಸರು ಅಧಿಕಾರಿಗಳು ನ್ಯಾಯಾಲಯ ಹೊರಡಿಸಿರುವ ಜಾಮೀನು ರಹಿತ ವಾರಂಟ್ ಜಾರಿಗೆ ಸಹಕರಿಸಬೇಕು'' ಎಂದು ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿದೆ.

ಅರ್ಜಿದಾರರು ಮತ್ತವರ ಪತ್ನಿ ನಡುವೆ ಕೌಟುಂಬಿಕ ವ್ಯಾಜ್ಯವಿತ್ತು. ತಾಯಿ ಬಳಿಯಿರುವ ಮಗನನ್ನು ತನ್ನ ಸುಪರ್ದಿಗೆ ಒಪ್ಪಿಸುವಂತೆ ಪತ್ನಿಗೆ ನಿರ್ದೇಶಿಸುವಂತೆ ಕೋರಿ ಅರ್ಜಿದಾರ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ್ದ ನ್ಯಾಯಾಲಯ, ಒಂದು ತಿಂಗಳಲ್ಲಿ ಮಗನನ್ನು ಪತಿಯ ವಶಕ್ಕೆ ನೀಡುವಂತೆ ಪತ್ನಿಗೆ 2023ರ ಮಾರ್ಚ್​​​ 3ರಂದು ನಿರ್ದೇಶಿಸಿತ್ತು. ಆದರೆ, ಮಗವನ್ನು ತನ್ನ ಸುಪರ್ದಿಗೆ ನೀಡದ ಹಿನ್ನೆಲೆಯಲ್ಲಿ ಅಕ್ರಮ ಬಂಧನ ಆರೋಪ ಸಂಬಂಧ ಪತ್ನಿ ವಿರುದ್ಧ ಪತಿ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪತ್ನಿ ಬೇರೆ ವ್ಯಕ್ತಿಯೊಂದಿಗಿನ ಅಕ್ರಮ ಸಂಬಂಧ ಹೊಂದಿರುವ ವಿಚಾರ ತಿಳಿದ ಹೈಕೋರ್ಟ್, ಮಗನ ಯೋಗಕ್ಷೇಮಕ್ಕಿಂತ ಅಕ್ರಮ ಸಂಬಂಧಕ್ಕೆ ಮಹಿಳೆಯು ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದಾರೆ. ಮಗುವಿನ ನೆಮ್ಮದಿ ಮತ್ತು ಭಾವನಾತ್ಮಕತೆಯನ್ನಷ್ಟೇ ಪರಿಗಣಿಸಬಾರದು. ಮಗು ಬೆಳೆಯುವ ವಾತಾವರಣ ಮತ್ತು ಸುತ್ತಲಿನ ಪರಿಸ್ಥಿತಿ ಕಂಡು ಕಲಿಯಬಹುದಾದ ನೈತಿಕ ಮೌಲ್ಯ ಮತ್ತು ಮಗುವಿಗೆ ಸಿಗಬಹುದಾದ ಆರೈಕೆ ಮತ್ತು ವಾತ್ಸಲ್ಯವನ್ನೂ ಪರಿಗಣಿಸಬೇಕಗುತ್ತದೆ ಎಂದು ತಿಳಿಸಿದ್ದ ಹೈಕೋರ್ಟ್, ಮಗುವನ್ನು ಪತಿಯ ಸುಪರ್ದಿಗೆ ನೀಡುವಂತೆ ಆದೇಶಿಸಿತ್ತು.

ಇದನ್ನೂ ಓದಿ:ಮುಂದಿನ ಆರು ತಿಂಗಳಲ್ಲಿ ರಾಜ್ಯದ ಮೂರು ಕಂದಾಯ ವಿಭಾಗಗಳಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯ ಸ್ಥಾಪಿಸಲು ಹೈಕೋರ್ಟ್ ಶಿಫಾರಸು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.