ETV Bharat / state

ಸುಳ್ಳು ದಾಖಲೆ ನೀಡಿ ಹೆಚ್ಚುವರಿ ಪರಿಹಾರ ಕೇಳಿದ ಅರ್ಜಿದಾರನಿಗೆ 1 ಲಕ್ಷ ದಂಡ!

author img

By

Published : Jul 2, 2021, 8:43 PM IST

Updated : Jul 2, 2021, 10:17 PM IST

ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ನೀಡಿರುವ ಆದೇಶ ಪ್ರಶ್ನಿಸಿ ಎಂದು ಬಳ್ಳಾರಿಯ ವೀರಭದ್ರಯ್ಯ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

High-court
ಹೈಕೋರ್ಟ್

ಬೆಂಗಳೂರು: ಮೋಟಾರು ವಾಹನ ಅಪಘಾತ ಪ್ರಕರಣದಲ್ಲಿ ನ್ಯಾಯಮಂಡಳಿ ನೀಡಿರುವ 20 ಸಾವಿರ ರೂಪಾಯಿ ಪರಿಹಾರ ಅತ್ಯಲ್ಪವಾಗಿದ್ದು, ಹೆಚ್ಚುವರಿ ಪರಿಹಾರ ನೀಡಲು ಇನ್ಶೂರೆನ್ಸ್ ಕಂಪನಿಗೆ ಆದೇಶಿಸಬೇಕು ಎಂದು ಕೋರಿ ಸುಳ್ಳು ದಾಖಲೆಗಳನ್ನು ಸಲ್ಲಿಸಿದ್ದ ಅರ್ಜಿದಾರನಿಗೆ ಹೈಕೋರ್ಟ್ 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ನೀಡಿರುವ ಆದೇಶ ಪ್ರಶ್ನಿಸಿ ಎಂದು ಬಳ್ಳಾರಿಯ ವೀರಭದ್ರಯ್ಯ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ತೀರ್ಪಿನ ಸಾರಾಂಶ: ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರ ವ್ಯಕ್ತಿ ಅಪಘಾತದ ಬಳಿಕ ತನಗೆ ತೀವ್ರ ಸ್ವರೂಪದ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದೆ. ದೇಹದ ಹಲವು ಅಂಗಾಂಗಗಳು ವೈಫಲ್ಯವಾಗಿವೆ. ಇದರಿಂದಾಗಿ ತನ್ನ ಜೀವಿತಾವಧಿಯೇ ಕಡಿತಗೊಂಡಿದೆ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 18 ದಾಖಲೆಗಳನ್ನು ಸಲ್ಲಿಸಿದ್ದಾರೆ. ಆದರೆ, ಅರ್ಜಿದಾರರು ಅಪಘಾತದ ಬಳಿಕ ಮೊದಲಿಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆ ಪ್ರಕಾರ ವೈದ್ಯಾಧಿಕಾರಿ ರೇಡಿಯಾಲಾಜಿಕಲ್ ಪರೀಕ್ಷೆಗಳನ್ನು ನಡೆಸಿದ್ದರ ಆಧಾರದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ (injuries are simple in nature) ಎಂದು ವರದಿ ಕೊಟ್ಟಿದ್ದಾರೆ.

ಅಲ್ಲದೇ, ಅರ್ಜಿದಾರ ವೀರಭದ್ರಯ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾಗಿ ಹಾಗೂ ಸುದೀರ್ಘ ಅವಧಿ ಚಿಕಿತ್ಸೆ ಪಡೆದಿದ್ದಾಗಿ ಹೇಳಿದ್ದಾರೆ. ಆದರೆ, ಈ ಮೊದಲೇ ಅಸ್ತಿತ್ವದಲ್ಲಿದ್ದ ಹೃದಯ ಸಂಬಂಧಿ ಕಾಯಿಲೆಯನ್ನು ಮುಚ್ಚಿಟ್ಟಿದ್ದಾರೆ. ಸಾಕ್ಷ್ಯಗಳ ಅಡ್ಡ ಪರೀಕ್ಷೆ ವೇಳೆ ಗಾಯಾಳುವಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಹೃದಯ ಸಂಬಂಧಿ ಕಾಯಿಲೆಗಳು ಥಟ್ಟನೆ ಬರುವಂಥದ್ದಲ್ಲ ಎಂದು ಹೇಳಿದ್ದಾರೆ. ಇನ್ನು, ಅರ್ಜಿದಾರ ಹೃದಯ ಸಂಬಂಧಿ ಕಾಯಿಲೆಗೆ ಸರ್ಕಾರಿ ಯೋಜನೆ ಅಡಿ ಚಿಕಿತ್ಸೆ ಪಡೆದಿದ್ದು, ದಾಖಲೆಗಳನ್ನು ತಿರುಚಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿದಾರನ ಈ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪೀಠ, ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದಕ್ಕೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಲ್ಲದೇ, ಇನ್ಶೂರೆನ್ಸ್ ಸಂಸ್ಥೆಯು ಅರ್ಜಿದಾರನ ವಿರುದ್ಧ ಹಾಗೂ ಅಂಗಾಂಗ ವೈಫಲ್ಯ ಪ್ರಮಾಣಪತ್ರ ನೀಡಿರುವ ವೈದ್ಯನ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ಸ್ವತಂತ್ರವಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಇದೇ ವೇಳೆ ಅರ್ಜಿದಾರನ ಸುಳ್ಳು ದಾಖಲೆಗಳ ಕುರಿತು ಬೆಳಕು ಚೆಲ್ಲಿದ ವಿಮಾ ಸಂಸ್ಥೆಯ ವಕೀಲರ ಕುರಿತೂ ಪ್ರಶಂಸಿಸಿದೆ.

ಪ್ರಕರಣದ ಹಿನ್ನೆಲೆ: 2014ರ ಆಗಸ್ಟ್ 3ರ ಬೆಳಗ್ಗೆ ಅರ್ಜಿದಾರರಾದ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ವೀರಭದ್ರಯ್ಯ ಓಡಿಸುತ್ತಿದ್ದ ಬೈಕ್ ಹಾಗೂ ಅದೇ ಗ್ರಾಮದ ಶಿವಪ್ಪ ಎಂಬುವವರ ಬೈಕ್ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಈ ಸಂಬಂಧ ವೀರಭದ್ರಯ್ಯ ಪರಿಹಾರ ಕೋರಿ ಬೈಕ್ ಓಡಿಸುತ್ತಿದ್ದ ವಿರೂಪಾಕ್ಷಪ್ಪ, ಬೈಕ್ ಮಾಲೀಕ ಶಿವಪ್ಪ ಹಾಗೂ ಓರಿಯಂಟಲ್ ಇನ್ಸ್ಯೂರೆನ್ಸ್ ಕಂಪನಿ ಲಿಮಿಟೆಡ್ ವಿರುದ್ಧ ದಾವೆ ಹೂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಬಳ್ಳಾರಿಯ 2ನೇ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಭಾಗಶಃ ಅರ್ಜಿ ಪುರಸ್ಕರಿಸಿ, ಅರ್ಜಿದಾರರಿಗೆ 20 ಸಾವಿರ ಪರಿಹಾರವನ್ನು ಶೇ 7 ರಷ್ಟು ಬಡ್ಡಿಯೊಂದಿಗೆ ನೀಡುವಂತೆ ವಿಮಾ ಸಂಸ್ಥೆಗೆ 2017ರ ಮಾರ್ಚ್ 3ರಂದು ಆದೇಶಿಸಿತ್ತು. ನ್ಯಾಯಮಂಡಳಿಯ ಈ ಆದೇಶ ಪ್ರಶ್ನಿಸಿದ್ದ ವೀರಭದ್ರಯ್ಯ ತನಗೆ ಹೆಚ್ಚಿನ ಹಾನಿಯಾಗಿದ್ದು, ದೊಡ್ಡಮೊತ್ತದ ಪರಿಹಾರ ಕೊಡಿಸಬೇಕು ಎಂದು ಕೋರಿ ಮೋಟಾರು ವಾಹನ ಕಾಯ್ದೆ 173(1) ಅಡಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದವರಿಗೂ ಪರಿಹಾರ: ಹೈಕೋರ್ಟ್​ಗೆ ಮಾಹಿತಿ ನೀಡಿದ ಸರ್ಕಾರ

Last Updated :Jul 2, 2021, 10:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.