ETV Bharat / state

ಒಂದು ಸಾವಿರ ಲಂಚ ಪಡೆದ ಕಾರಣ ಪಿಂಚಣಿಗೆ ಕತ್ತರಿ ಹಾಕಿದ್ದ ಸರ್ಕಾರ : ಆದೇಶ ರದ್ದುಗೊಳಿಸಿದ ಹೈಕೋರ್ಟ್​

author img

By

Published : Aug 2, 2020, 1:39 AM IST

ಪಟ್ಟಣದಲ್ಲಿ ರಸ್ತೆ ಅಗೆದ ವ್ಯಕ್ತಿಯಿಂದ ಒಂದು ಸಾವಿರ ರುಪಾಯಿ ಹಣ ಪಡೆದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ 2010ರ ಮಾರ್ಚ್ 30 ರಂದು ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿತ್ತು.

High Court Dismissed the Govt order
ಆದೇಶ ರದ್ದುಗೊಳಿಸಿದ ಹೈಕೋರ್ಟ್​

ಬೆಂಗಳೂರು : 15 ವರ್ಷಗಳ ಹಿಂದೆ ಭ್ರಷ್ಟಾಚಾರ ಎಸಗಿದ ಆರೋಪದಡಿ ನಗರಸಭೆ ಮುಖ್ಯಾಧಿಕಾರಿಯಾಗಿದ್ದ ಏಜಾಝ್ ಹುಸೈನ್ ಎಂಬುವರಿಗೆ ಕಡ್ಡಾಯ ನಿವೃತ್ತಿ ನೀಡಿ, ಪಿಂಚಣಿಯ ಶೇ 40 ರಷ್ಟು ಹಣವನ್ನು ಕಡಿತ ಮಾಡಿದ್ದ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿ ತೀರ್ಪು ನೀಡಿದೆ.

2005 ರಲ್ಲಿ ಯಾದಗಿರಿ ಜಿಲ್ಲೆಯ ಶೋರಾಪುರ ಪುರಸಭೆಯ ಮುಖ್ಯ ನ್ಯಾಯಮೂರ್ತಿಯಾಗಿದ್ದ ಏಜಾಝ್ ಹುಸೈನ್ ಅವರ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಪಟ್ಟಣದಲ್ಲಿ ರಸ್ತೆ ಅಗೆದ ವ್ಯಕ್ತಿಯಿಂದ ಒಂದು ಸಾವಿರ ರುಪಾಯಿ ಹಣ ಪಡೆದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ 2010ರ ಮಾರ್ಚ್ 30 ರಂದು ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿತ್ತು.

ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅದೇ ವರ್ಷ ಲೋಕಾಯುಕ್ತ ಸಂಸ್ಥೆ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ನಲ್ಲಿ ಮೇಲ್ಮನವಿ ವಿಚಾರಣೆ ಹಂತದಲ್ಲಿರುವಾಗಲೇ ಲೋಕಾಯುಕ್ತರು ಇಲಾಖಾ ವಿಚಾರಣೆ ನಡೆಸಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಅದರಂತೆ ಸರ್ಕಾರ 2011ರ ಮಾರ್ಚ್ 21ರಂದು ವಿಚಾರಣೆ ನಡೆಸಲು ಉಪಲೋಕಾಯುಕ್ತರಿಗೆ ಆದೇಶಿಸಿತ್ತು. ಉಪ ಲೋಕಾಯುಕ್ತರಿಂದ ನಿಯೋಜನೆಗೊಂಡಿದ್ದ ವಿಚಾರಣಾಧಿಕಾರಿ ತನಿಖೆ ನಡೆಸಿ ಹುಸೈನ್ ಲಂಚ ಪಡೆದಿರುವುದು ಸಾಬೀತಾಗಿದೆ ಎಂದು 2018ರ ಜೂನ್ 11 ರಂದು ವರದಿ ನೀಡಿದ್ದರು. ವರದಿ ಆಧರಿಸಿ ಸರ್ಕಾರ 2019ರ ಜೂನ್ 14ರಂದು ಹುಸೈನ್ ಅವರಿಗೆ ಕಡ್ಡಾಯ ನಿವೃತ್ತಿ ನೀಡಿತ್ತು. ಜತೆಗೆ ಶೇ.40ರಷ್ಟು ಪಿಂಚಣಿಯನ್ನು ತಡೆಹಿಡಿಯಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿತ ಅಧಿಕಾರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನ್ನ ಅವರಿದ್ದ ಪೀಠ, ಒಂದೇ ಆರೋಪಕ್ಕೆ ಸಂಬಂಧಿಸಿದಂತೆ ಎರಡು ತನಿಖೆ ನಡೆಸುವುದು ನಿಷಿದ್ಧ ಎಂದು ತೀರ್ಪು ನೀಡಿದ್ದು,ಸರ್ಕಾರದ ಆದೇಶವನ್ನು ರದ್ದುಪಡಿಸಿ ತೀರ್ಪು ನೀಡಿದೆ. ಹೈಕೋರ್ಟ್ ತನ್ನ ತೀರ್ಪಿನಲ್ಲಿ ನಿರ್ದಿಷ್ಟ ಪ್ರಕರಣದ ಆರೋಪಗಳು ಬೇರೆ ಬೇರೆ ಆಗಿದ್ದರೆ ವಿಚಾರಣಾ ನ್ಯಾಯಾಲಯದಿಂದ ಆರೋಪಿ ಖುಲಾಸೆಯಾದ ನಂತರವೂ ಇಲಾಖಾ ವಿಚಾರಣೆ ನಡೆಸಲು ಅಡ್ಡಿಯಿರಲಿಲ್ಲ. ಆದರೆ, ಈ ಪ್ರಕರಣದಲ್ಲಿ ಆರೋಪಗಳು, ಸಾಕ್ಷಿಗಳು ಮತ್ತು ದಾಖಲೆಗಳು ಒಂದೇ ಆಗಿವೆ. ಲೋಕಾಯುಕ್ತ ಕೋರ್ಟ್ ಹುಸೈನ್ ರನ್ನು ಖುಲಾಸೆಗೊಳಿಸಿದ ನಂತರ ಅವೇ ಆರೋಪಗಳ ಮೇಲೆ ವಿಚಾರಣಾಧಿಕಾರಿ ದೋಷಾರೋಪ ಹೊರಿಸಿರುವುದು ಕಾನೂನು ಸಮ್ಮತವಲ್ಲ. ಲೋಕಾಯುಕ್ತ ಕೋರ್ಟ್ ಆರೋಪಿತನನ್ನು ಖುಲಾಸೆ ಮಾಡಿದ 13 ವರ್ಷಗಳ ನಂತರ ವಿಚಾರಣಾಧಿಕಾರಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಪ್ರಾಸಿಕ್ಯೂಷನ್ ಆರೋಪಿಯ ಮೇಲಿನ ಆರೋಪಗಳನ್ನು ವಿಚಾರಣಾ ಕೋರ್ಟ್ ನಲ್ಲಿ ಸಾಬೀತು ಮಾಡುವಲ್ಲಿ ವಿಫಲವಾಗಿದೆ. ಹಾಗಿದ್ದೂ ಸರ್ಕಾರ ಹುಸೈನ್ ಅವರಿಗೆ ಕಡ್ಡಾಯ ನಿವೃತ್ತಿ ನೀಡಿ, ಪಿಂಚಣಿಯ ಶೇ 40ರಷ್ಟು ಭಾಗವನ್ನು ನೀಡದಿರುವುದು ನಿಯಮ ಬಾಹಿರ ಎಂದು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಸರ್ಕಾರದ ಆದೇಶ ರದ್ದುಗೊಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.