ETV Bharat / state

ವಿಶ್ವಕರ್ಮ ಅಧ್ಯಯನ ಕೇಂದ್ರ ಸ್ಥಾಪನೆಗೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

author img

By ETV Bharat Karnataka Team

Published : Sep 18, 2023, 6:48 AM IST

CM Siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡು ಮಾತನಾಡಿದರು.

ಬೆಂಗಳೂರು: ರಾಜ್ಯದಲ್ಲಿ ವಿಶ್ವಕರ್ಮ ಅಧ್ಯಯನ ಕೇಂದ್ರ ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದ ಅವರು, ಹಿಂದುಳಿದವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ಇರಬೇಕು. ಕರಕುಶಲಕರ್ಮಿಗಳಿಗೆ ಇಲಾಖೆ ರಚಿಸಬೇಕು ಎಂಬ ಬೇಡಿಕೆಯ ಬಗ್ಗೆ ಪರಿಶೀಲಿಸಲಾಗುವುದು. ನೇಕಾರರಿಗೆ ಇರುವ ಸೌಲಭ್ಯಗಳ ಮಾದರಿಯಲ್ಲಿ ಸೌಲಭ್ಯಗಳು ಹಾಗೂ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂಬ ಬೇಡಿಕೆ ಇದ್ದು, ಅನುದಾನ ಹೆಚ್ಚು ಮಾಡಲಾಗುವುದು ಎಂದು ಭರವಸೆ ನೀಡಿದರು.

ನಾವು ಸಮಾಜದಲ್ಲಿ ಹುಟ್ಟಿದ ಮೇಲೆ ಸಮಾಜದ ಋಣ ತೀರಿಸಬೇಕು. ಹಾಗೆ ಮಾಡುವುದೇ ನಮ್ಮೆಲ್ಲರ ಕರ್ತವ್ಯ. ನಾವು ಎಷ್ಟು ದಿನ ಬದುಕಿರುತ್ತೇವೆ ಎನ್ನುವುದು ಮುಖ್ಯ ಅಲ್ಲ. ರಾಷ್ಟ್ರಕವಿ ಕುವೆಂಪು ಹೇಳುವಂತೆ ಎಲ್ಲರೂ ವಿಶ್ವಮಾನವರಾಗಿಯೇ ಹುಟ್ಟಿದರೂ, ಬೆಳೆಯುವಾಗ ಅಲ್ಪ ಮಾನವರಾಗುತ್ತಾರೆ. ನಾವು ವಿಶ್ವಮಾನವರಾಗಲು ಪ್ರಯತ್ನ ಮಾಡುವುದೇ ಸಮಾಜಕ್ಕೆ ಕೊಡುವ ಕೊಡುಗೆ. ನಾವು ಮನುಷ್ಯರಾಗಿ ಬಾಳುವ ಪ್ರಯತ್ನ ಮಾಡಬೇಕು. ಧರ್ಮ-ಧರ್ಮಗಳ ನಡುವೆ ಸಂಘರ್ಷ, ಜಾತಿ- ಜಾತಿಗಳ ನಡುವೆ ಸಂಘರ್ಷ ಉಂಟು ಮಾಡುತ್ತಿದ್ದಾರೆ. ಧರ್ಮ ಬದುಕಿನ ಮಾರ್ಗ. ಮನುಷ್ಯನ ಬದುಕಿಗಾಗಿ ಧರ್ಮವಿದೆ. ಯಾವ ಧರ್ಮ ಮನುಷ್ಯನನ್ನು ದ್ವೇಷಿಸುತ್ತದೆಯೋ ಅದನ್ನು ಧರ್ಮ ಎಂದು ಕರೆಯಲಾಗುವುದಿಲ್ಲ. ಬಸವಣ್ಣ ಹೇಳಿದಂತೆ ದಯೆಯೇ ಧರ್ಮದ ಮೂಲ. ಎಲ್ಲ ಧರ್ಮಗಳಿಗಿಂತ ಮನುಷ್ಯ ಧರ್ಮ ಮಿಗಿಲು. ಮನುಷ್ಯರಾಗಲು ಪ್ರಯತ್ನಿಸೋಣ. ನಾವು ಸಮಾಜದ ಋಣ ತೀರಿಸುವ ಕೆಲಸ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.

ಆಯಾ ಜಾತಿಯವರೇ ತಮ್ಮ ಜಯಂತಿಗಳನ್ನು ಆಚರಣೆ ಮಾಡಿದರೆ ಜಾತಿ ಬಣ್ಣ ಬರುತ್ತದೆ. ಸರ್ಕಾರ ಮಾಡಿದರೆ ಜಾತಿ ಬಣ್ಣ ಬರುವುದಿಲ್ಲ. ನಾವು ಸರ್ವರನ್ನೂ ಒಳಗೊಂಡ ಸಮಾಜ ನಿರ್ಮಾಣ ಮಾಡುವುದರಲ್ಲಿ ನಂಬಿಕೆವುಳ್ಳವರು. ಕೆಲವೇ ಜಾತಿಗಳ ಸಮಾಜ ನಿರ್ಮಾಣವಾಗಬಾರದು. ನಮ್ಮಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ. ಅನಾದಿ ಕಾಲದಿಂದಲೂ ನೈಪುಣ್ಯತೆ, ಕೌಶಲ್ಯವಿದ್ದರೂ ಆರ್ಥಿಕವಾಗಿ ಸಬಲರಲ್ಲ. ಸಬಲರಾಗಲು ಆರ್ಥಿಕ, ಸಾಮಾಜಿಕ ರಾಜಕೀಯ ಅವಕಾಶಗಳು ಸಿಗಬೇಕು. ಇಲ್ಲದಿದ್ದರೆ ಯಾವ ಜಾತಿಯೂ ಮೇಲೆ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಸಾರ್ಥಕವಾಗಲು, ರಾಜಕೀಯ ಪ್ರಜಾಪ್ರಭುತ್ವ ಇದ್ದರೆ ಸಾಲದು, ಆರ್ಥಿಕ ಸಾಮಾಜಿಕ ಪ್ರಜಾಪ್ರಭುತ್ವ ಇರಬೇಕು ಎಂದು ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಾಗ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ. ಸ್ವಾತಂತ್ರ್ಯ ಗಳಿಸಿ 76 ವರ್ಷಗಳಾಗಿದ್ದರೂ ಸಾಮಾಜಿಕ, ಆರ್ಥಿಕ ಅಸಮಾನತೆ ಇದೆ. ಸಂವಿಧಾನದಲ್ಲಿ ಎಲ್ಲರೂ ಸಮಾನರು. ಸಂವಿಧಾನದ ಧ್ಯೇಯೋದ್ದೇಶಗಳನ್ನು ಜಾರಿ ಮಾಡುವ ಬದ್ಧತೆ ಇರುವವರ ಬಳಿ ಅಧಿಕಾರ ಇದ್ದರೆ ಸಮಾನತೆ ತರಲು ಸಾಧ್ಯ ಎಂದು ತಿಳಿಸಿದರು.

ನಿಮ್ಮ ಧರ್ಮ ಪ್ರೀತಿಸಿ, ಇನ್ನೊಂದು ಧರ್ಮವನ್ನು ದ್ವೇಷಿಸದಿರಿ: ಪ್ರತಿಯೊಬ್ಬರೂ ನಮ್ಮ ನಮ್ಮ ಧರ್ಮ ಪ್ರೀತಿಸಿ, ಗೌರವಿಸಿ. ಆದರೆ ಇನ್ನೊಂದು ಧರ್ಮವನ್ನು ದ್ವೇಷಿಸಬಾರದು. ಅವರನ್ನೂ ಪ್ರೀತಿ ಗೌರವದಿಂದ ಕಂಡಾಗ ಮಾತ್ರ ನಾವು ಮನುಷ್ಯರಾಗಲು ಸಾಧ್ಯ. ಕಾಂಗ್ರೆಸ್ ಅನೇಕ ಜನರಿಗೆ ರಾಜ್ಯಸಭಾ, ವಿಧಾನಪರಿಷತ್ ಸದಸ್ಯರಾಗುವ ಅವಕಾಶ ನೀಡಿದ್ದೇವೆ. ಬಿಂಬಾ ನಾಯ್ಕರ್, ರಘು ಆಚಾರ್ಯ ಅವರನ್ನು ಕಾಂಗ್ರೆಸ್ ಸರ್ಕಾರ ನೇಮಿಸಿದ್ದು. ಅವಕಾಶ ದೊರೆತಾಗ ರಾಜಕೀಯ ಶಕ್ತಿ ತುಂಬುವ ಕೆಲಸ ಮಾಡಲಾಗಿದೆ. ರಾಜಕೀಯ ಅಧಿಕಾರವಿಲ್ಲದಿದ್ದರೆ, ನಿಮ್ಮ ಪರವಾಗಿ ಧ್ವನಿ ಎತ್ತುವವರು ಇರುವುದಿಲ್ಲ ಎಂದರು.

ಸರ್ಕಾರ ಆಚರಿಸುವ ಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಾನು ಹಿಂದೇಟು ಹಾಕುವುದಿಲ್ಲ. ಸರ್ಕಾರದ ವತಿಯಿಂದ ಜನಾಂಗದ ಕಾರ್ಯಕ್ರಮ ಆಚರಿಸಿದರೆ ಹೆಚ್ಚು ಮಹತ್ವ ಇರುತ್ತದೆ. ಹಾಗಾಗಿ ಸರ್ಕಾರವೇ ಅನೇಕ ಹಿಂದುಳಿದ ಜಯಂತ್ಯೋತ್ಸವವನ್ನು ಆಚರಣೆ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ನಾನು ನಾನೇ, ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.