ETV Bharat / state

ನಾನು ನಾನೇ, ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Sep 17, 2023, 10:52 PM IST

ಅರಸು, ಇಂದಿರಾಗಾಂಧಿ, ನೆಹರೂ ಎಲ್ಲರೂ ಭಿನ್ನವಾಗಿದ್ದರು. ಆದರೆ, ಇವರೆಲ್ಲರ ಸಾಮಾಜಿಕ ಕೊಡುಗೆಗಳು ಅಪಾರ. ಯಾರ ಕೊಡುಗೆಗಳನ್ನೂ ಅಲ್ಲಗಳೆಯಲಾಗದು. ಒಬ್ಬರು ಇನ್ನೊಬ್ಬರಾಗಲು ಸಾಧ್ಯವಿಲ್ಲ. ಹಾಗೆಯೇ ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

I am myself, I cannot be devaraj urs says Cm siddaramaiah
ನಾನು ನಾನೇ, ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನನ್ನನ್ನು ಎಲ್ಲರೂ ಎರಡನೇ ದೇವರಾಜ ಅರಸು ಅಂತಾರೆ. ಆದರೆ, ದೇವರಾಜ ಅರಸು ದೇವರಾಜ ಅರಸುನೇ ಸಿದ್ದರಾಮಯ್ಯ ಸಿದ್ದರಾಮಯ್ಯನೇ. ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರರು.

ಕೆಲವರು ನನ್ನನ್ನು ಎರಡನೇ ದೇವರಾಜು ಅರಸು ಅಂತಾರೆ. ಅದು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಪಪಡಿಸಿದರು. ಇತ್ತೀಚೆಗೆ ವಿಧಾನ ಪರಿಷತ್ ಬಿ ಕೆ ಹರಿಪ್ರಸಾದ್ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡುತ್ತಾ, ದೇವರಾಜ ಅರಸು ಕಾರಿನಲ್ಲಿ ಕುಳಿತರೆ ನೀವು ದೇವರಾಜ ಅರಸು ಆಗೋದಿಲ್ಲ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದರು. ದೇವರಾಜ ಅರಸು ಚಿಂತನೆ ಇರಬೇಕು ಎಂದು ಹೆಸರು ಹೇಳದೆ ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಈ ಹೇಳಿಕೆ ಕುತೂಹಲ ಮೂಡಿಸಿದೆ.

ನಾನು ಅರಸು ಆಗಲು ಸಾಧ್ಯವಿಲ್ಲ. ಅರಸು, ಇಂದಿರಾಗಾಂಧಿ, ನೆಹರೂ ಎಲ್ಲರೂ ಭಿನ್ನವಾಗಿದ್ದರು. ಆದರೆ, ಇವರೆಲ್ಲರ ಸಾಮಾಜಿಕ ಕೊಡುಗೆಗಳು ಅಪಾರ. ಯಾರ ಕೊಡುಗೆಗಳನ್ನೂ ಅಲ್ಲಗಳೆಯಲಾಗದು. ಒಬ್ಬರು ಇನ್ನೊಬ್ಬರಾಗಲು ಸಾಧ್ಯವಿಲ್ಲ. ಹಾಗೆಯೇ ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ. ನಾವು ರೂಪಿಸುವ ಕಾಳಜಿ ಮತ್ತು ಕಾರ್ಯಕ್ರಮಗಳಲ್ಲಿ ಸಾಮಾಜಿಕ ನ್ಯಾಯ ಇರುತ್ತದೆ. ಎಲ್ಲಾ ಹಿಂದುಳಿದ ಜಾತಿ, ಸಮುದಾಯಗಳು ಸಮಾನ ಅವಕಾಶಗಳನ್ನು ಪಡೆದುಕೊಂಡು ಮುಂದುವರೆದಾಗ ಮಾತ್ರ ಇಡೀ ಸಮಾಜ ಮುಂದುವರೆಯುತ್ತದೆ. ಕೆಲವೇ ಜಾತಿ-ಸಮುದಾಯಗಳು ಅವಕಾಶಗಳನ್ನು ಪಡೆದುಕೊಂಡು ಉಳಿದವುಗಳು ಅವಕಾಶ ವಂಚಿತರಾಗುತ್ತಿದ್ದರೆ ಅದನ್ನು ಪ್ರಗತಿ ಪಥದಲ್ಲಿರುವ ಸಮಾಜ ಎಂದು ಕರೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಬಿಂಬಾರಾಯ್ಕರ್, ರಘು ಆಚಾರ್ಯ ಸೇರಿ ವಿಶ್ವಕರ್ಮ ಸಮುದಾಯದ ಹಲವರಿಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಅಧಿಕಾರವನ್ನು ಒದಗಿಸಿಕೊಟ್ಟಿದೆ. ರಘು ಆಚಾರ್ಯ ದುಡುಕಿ ನಮ್ಮನ್ನೆಲ್ಲಾ ಬಿಟ್ಟು ಕಾಂಗ್ರೆಸ್ ತೊರೆದರು. ನಾನು ಎಷ್ಟು ಹೇಳಿದರೂ ಕೇಳಲಿಲ್ಲ. ಕಾಂಗ್ರೆಸ್ ಪ್ರತಿಯೊಂದು ಜಾತಿ, ಸಮುದಾಯಗಳಿಗೂ ಅವಕಾಶ ಮತ್ತು ಅಧಿಕಾರವನ್ನು ನಿರಂತರವಾಗಿ ಒದಗಿಸುತ್ತಲೇ ಬಂದಿದೆ. ಆ ಮೂಲಕ ಹಿಂದುಳಿದ ಸಮುದಾಯಗಳಿಗೆ, ದಲಿತ ಸಮುದಾಯಗಳಿಗೂ ಶಕ್ತಿ ತುಂಬುತ್ತಿದೆ. ಒಂದು ಕೋಟಿ ರೂಪಾಯಿವರೆಗಿನ ಕಾಂಟ್ರಾಕ್ಟ್ ಕೆಲಸಗಳಿಗೆ ಮೀಸಲಾತಿ ಒದಗಿಸಿದ್ದು ನಾವೆ ತಾನೇ ಎಂದು ನೆನಪಿಸಿದ ಮುಖ್ಯಮಂತ್ರಿಗಳು ನನಗೆ ಅಧಿಕಾರ ಎನ್ನುವುದು ಸಾಮಾಜಿಕ ನ್ಯಾಯವನ್ನು ಆಚರಿಸುವ, ಪಾಲಿಸುವ ಒಂದು ಸಾಧನ ಎಂದು ವಿವರಿಸಿದರು.

ವಿಶ್ವಕರ್ಮ ಸಮುದಾಯದ ಮಕ್ಕಳಿಗೆ ಶಾಲೆ, ಹಾಸ್ಟೆಲ್​ಗಳನ್ನು ನಿರ್ಮಿಸುವ ಕಾರಣಕ್ಕೆ ಸರ್ಕಾರದಿಂದ ಜಾಗ ಕೇಳಿದ್ದೀರಿ. ಎಲ್ಲ ಸಮುದಾಯಗಳೂ ಜಾಗ ಪಡೆದುಕೊಂಡಿವೆ. ನೀವೂ ಪಡೆದುಕೊಳ್ಳಿ. ನಮ್ಮ ಸರ್ಕಾರ ನಿಮಗೂ ಜಾಗ ಒದಗಿಸುತ್ತದೆ ಮಕ್ಕಳನ್ನು ಹೆಚ್ಚೆಚ್ಚು ಶಿಕ್ಷಿತರನ್ನಾಗಿ ಮಾಡಿ. ವಿಶ್ವಕರ್ಮ ನಿಗಮಕ್ಕೆ ಮೊದಲಿನಿಂದಲೂ ಹೆಚ್ಚು ಅನುದಾನ ಕೊಡುತ್ತಾ ಬಂದಿರುವವರು ನಾವೇ. ಈಗ ಇನ್ನಷ್ಟು ಹೆಚ್ಚಿಸಬೇಕು ಎನ್ನುವ ಬೇಡಿಕೆ ಇದೆ. ಆ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ಚುನಾವಣೆ ಬಂದಾಗ ಭಾಷಣಗಳಲ್ಲಿ ಕಾಳಜಿಗಳು ಕೇಳಿಸುತ್ತವೆ. ಆದರೆ, ಯಾರಿಗೆ-ಯಾವ ಪಕ್ಷಕ್ಕೆ ನಿಜವಾದ ಬದ್ಧತೆ ಇದೆ ಎನ್ನುವುದನ್ನು ಗುರುತಿಸಿ ತೀರ್ಮಾನ ತೆಗೆದುಕೊಳ್ಳಿ. ಕಾಳಜಿ, ಬದ್ಧತೆ ಇಲ್ಲದವರ ಕೈಗೆ ಅಧಿಕಾರ ಕೊಟ್ಟು ಸಮಾಜಕ್ಕೆ ಒಳ್ಳೆಯದು ಆಗಬೇಕು ಎಂದು ತಲೆ ಚಚ್ಚಿಕೊಂಡರೆ ಸಾಧ್ಯವಿಲ್ಲದ ಮಾತು. ಆದ್ದರಿಂದ ಸಾಮಾಜಿಕ ನ್ಯಾಯವನ್ನು ಯಾರು, ಯಾವ ಪಕ್ಷದವರು ಪಾಲಿಸುತ್ತಿದ್ದಾರೆ ಎನ್ನುವುದನ್ನು ಪ್ರಾಮಾಣಿಕವಾಗಿ ಗ್ರಹಿಸಿ ಎಂದು ಕರೆ ನೀಡಿದರು.

ಇದನ್ನೂ ಓದಿ: ಮೂರು ಡಿಸಿಎಂ ಸ್ಥಾನ ವಿಚಾರ; ಹೈಕಮಾಂಡ್ ತೀರ್ಮಾನದಂತೆ ನಾನು ನಡೆದುಕೊಳ್ತೇನೆ- ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.