ETV Bharat / state

ಕ್ರೀಡಾ ಕ್ಷೇತ್ರಕ್ಕೆ ಬಜೆಟ್​​​ನಲ್ಲಿ ಹೆಚ್ಚಿನ ಅನುದಾನ: ಸಿಎಂ ಬೊಮ್ಮಾಯಿ

author img

By

Published : Sep 3, 2021, 4:50 PM IST

CM Basavaraj Bommai
ಸಿಎಂ ಬೊಮ್ಮಾಯಿ

ಈ ಬಾರಿ ನಡೆದ ಟೋಕಿಯೋ ಒಲಿಂಪಿಕ್ಸ್​​​ನಲ್ಲಿ ಭಾರತದ ಕ್ರೀಡಾಪಟುಗಳು ಭಾಗವಹಿಸಿ ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮುಂದಿನ ಬಜೆಟ್​ನಲ್ಲಿ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಸಿಎಂ ಭರವಸೆ ನೀಡಿದರು.

ಬೆಂಗಳೂರು: ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಲು ನಮ್ಮ ಸರ್ಕಾರ ಬದ್ಧವಾಗಿದ್ದು, ಮುಂದಿನ ಬಜೆಟ್​​​​ನಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿಯೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಿಸುವ ಇಚ್ಚೆಯೊಂದಿಗೆ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ

ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಟೋಕಿಯೋ ಒಲಿಂಪಿಕ್ಸ್​​​ನಲ್ಲಿ ಪಾಲ್ಗೊಂಡ ರಾಜ್ಯದ ಕ್ರೀಡಾಪಟುಗಳನ್ನು ಸನ್ಮಾನಿಸಿ ಪ್ರೋತ್ಸಾಹಧನ ವಿತರಣೆ ಮಾಡಲಾಯಿತು. ಮೂವರು ಕ್ರೀಡಾಪಟುಗಳು ಮತ್ತು ಒಬ್ಬರು ಮಹಿಳಾ ಹಾಕಿ ಕೋಚ್‌ರನ್ನು​ ಸನ್ಮಾನಿಸಿ ತಲಾ 1 ಲಕ್ಷ ರೂ. ಪ್ರೋತ್ಸಾಹ ಧನದ ಚೆಕ್‌ ಅನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿತರಿಸಿದರು.

Elite honoured an Athlete
ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ಚೆಕ್ ವಿತರಣೆ

ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿಎಂ ಬೊಮ್ಮಾಯಿ ಮಾತನಾಡಿ, ಟೋಕಿಯೋ ಒಲಿಂಪಿಕ್ಸ್​​​ಗೆ ತೆರಳಿದ ರಾಜ್ಯದ ಕ್ರೀಡಾಪಟುಗಳಿಗೆ ನಾವು ಈಗಾಗಲೇ ಪ್ರೋತ್ಸಾಹಧನ ನೀಡಿದ್ದೇವೆ. ಆದರೆ ಯಾವುದೇ ನಿರೀಕ್ಷೆ ಇಲ್ಲದೆ ರಾಜಭವನದಿಂದ ಕೂಡ ಈಗ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸಿಗುತ್ತಿರುವುದು ನಮಗೆ ಬಹಳ ದೊಡ್ಡ ಪ್ರೇರಣೆಯಾಗಿದೆ. ರಾಜ್ಯಪಾಲರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಿಎಂ, ಕ್ರೀಡಾಪಟುಗಳ ಬಗ್ಗೆ ರಾಜ್ಯಪಾಲರು ತೋರಿರುವ ಕಾಳಜಿ ಅಭಿನಂದನಾರ್ಹ ಎಂದರು.

Elite honoured an Athlete
ಕ್ರೀಡಾಪಟುಗಳಿಗೆ ಪ್ರೋತ್ಸಾಹಧನದ ಚೆಕ್ ವಿತರಣೆ

ಕ್ರೀಡಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಮ್ಮ ರಾಜ್ಯ ಸರ್ಕಾರ ಆದ್ಯತೆ ಕೊಡಲಿದೆ. ಎಲ್ಲಾ ಮಾದರಿಯ ಕ್ರೀಡೆಗಳಿಗೂ ಪ್ರಾಮುಖ್ಯತೆ ಕೊಡುತ್ತೇವೆ. ಗ್ರಾಮ ಮತ್ತು ತಾಲೂಕು ಮಟ್ಟದಲ್ಲಿ ಕ್ರೀಡಾ ಕ್ಷೇತ್ರದ ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಡಲಿದ್ದೇವೆ. ಪ್ರತಿಯೊಂದು ಜಿಲ್ಲೆಯಲ್ಲಿಯೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನು ಮಾಡುವುದು ನಮ್ಮ ಇಚ್ಛೆಯಾಗಿದೆ. ಅದಕ್ಕಾಗಿ ಈಗಾಗಲೇ ಇರುವ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸಲು ಉನ್ನತೀಕರಿಸಲು ವಿಶೇಷವಾದ ಗಮನ ಹರಿಸಲಿದ್ದೇವೆ ಎಂದರು.

ದೇಶದ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯದ ಕ್ರೀಡಾಪಟುಗಳು ಮಿಂಚಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಅಗತ್ಯ ಪ್ರೋತ್ಸಾಹ ನೀಡಲು ಸಿದ್ದರಿದ್ದೇವೆ. ಮುಂದಿನ ಬಾರಿಯ ನಮ್ಮ ಬಜೆಟ್​​​​ನಲ್ಲಿ ಕ್ರೀಡೆಗೆ ಹೆಚ್ಚಿನ ಅನುದಾನ ನೀಡಲಿದ್ದೇವೆ ಎಂದು ಸಿಎಂ ಭರವಸೆ ನೀಡಿದರು.

ಇದನ್ನೂ ಓದಿ: ಪ್ರತ್ಯೇಕ ಧರ್ಮಕ್ಕೆ ಕೈ ಹಾಕಿ ಕಾಂಗ್ರೆಸ್ ಮೂತಿಯನ್ನೇ ಸುಟ್ಟುಕೊಂಡಿದೆ : ಸಚಿವ ಆರ್ ಅಶೋಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.