ETV Bharat / state

ಬಿಜೆಪಿ ಮಾಜಿ ಸಂಸದ ಮಂಜುನಾಥ್ ಕುನ್ನೂರು, ಕೆ.ಆರ್ ಪೇಟೆ ದೇವರಾಜ್ ಕಾಂಗ್ರೆಸ್ ಸೇರ್ಪಡೆ

author img

By

Published : Mar 27, 2023, 2:35 PM IST

Manjunath Kunnur and  KR Pete Devaraj join Congress
ಮಂಜುನಾಥ್ ಕುನ್ನೂರ್, ಕೆ.ಆರ್ ಪೇಟೆ ದೇವರಾಜ್ ಕಾಂಗ್ರೆಸ್ ಸೇರ್ಪಡೆ

ಕೆ.ಆರ್ ಪೇಟೆ ದೇವರಾಜ್ ಹಾಗೂ ಮಾಜಿ ಸಂಸದ ಶಿಗ್ಗಾಂವಿಯ ಮಂಜುನಾಥ್ ಕುನ್ನೂರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಬೆಂಗಳೂರು: ಮಾಜಿ ಸಂಸದ ಶಿಗ್ಗಾಂವಿಯ ಮಂಜುನಾಥ್ ಕುನ್ನೂರು, ಕೆ.ಆರ್ ಪೇಟೆ ಜೆಡಿಎಸ್​ ಮುಖಂಡ ದೇವರಾಜ್ ಹಾಗೂ ಚಿಂತಾಮಣಿ ಕಾಂಗ್ರೆಸ್ ಅಭ್ಯರ್ಥಿ ಡಾ. ಎಂ.ಸಿ ಸುಧಾಕರ್ ಅವರ 100ಕ್ಕೂ ಹೆಚ್ಚು ಬೆಂಬಲಿಗರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಜೆಡಿಎಸ್​ನ 100ಕ್ಕೂ ಹೆಚ್ಚು ಮುಖಂಡರ ಜತೆ ಸುಧಾಕರ್ ಅವರನ್ನು ಬೆಂಬಲಿಸಿ ಕೈ ಹಿಡಿದರು.

2008, 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದ ಎಂ.ಸಿ ಸುಧಾಕರ್ ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಕೆಲ ತಿಂಗಳ ಹಿಂದೆ ಇವರು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಇಂದು ಅವರನ್ನು ಬೆಂಬಲಿಸಿ ಹಲವು ಮುಖಂಡರು ಪಕ್ಷಕ್ಕೆ ಸೇರಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಡಿ ಕೆ ಶಿಕುಮಾರ್​, ಇವರು ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ನಾಯಕತ್ವ ಮೆಚ್ಚಿ ಬಂದಿದ್ದಾರೆ. ಸುಧಾಕರ್​ ಅವರು ಕಳೆದ ಸಾರಿ ನಮ್ಮಿಂದ ದೂರವಾಗಿ ಬೇರೆ ಪಕ್ಷದಿಂದ ಕಣಕ್ಕಿಳಿದಿದ್ದರು. ಈಗ ಹಿಂದಿರುಗಿದ್ದಾರೆ. ಇಂದು ಇವರನ್ನು ಬೆಂಬಲಿಸಿ ಜೆಡಿಎಸ್​ನ 100 ಮುಖಂಡರು ಪಕ್ಷದ ಸಿದ್ಧಾಂತ ಒಪ್ಪಿ ಕಾಂಗ್ರೆಸ್​ಗೆ ಬಂದಿದ್ದಾರೆ. ಇವರೆಲ್ಲರೂ ಈಗಾಗಲೇ ಪಕ್ಷ ಸೇರ್ಪಡೆಯಾಗುವ ಸಂಬಂಧ ಅರ್ಜಿ ಸಲ್ಲಿಸಿದ್ದರು. ಸುಧಾಕರ್ ನಾಲ್ಕಾರು ಸಾರಿ ಭೇಟಿ ಮಾಡಿ ಪಕ್ಷ ಸೇರಲು ಹಲವು ನಾಯಕರು ಸಿದ್ಧವಿದ್ದಾರೆ. ತಾವು ಚಿಂತಾಮಣಿಗೆ ಬರಬೇಕೆಂದು ಮನವಿ ಮಾಡಿದ್ದರು. ಆದರೆ ಪ್ರಜಾಧ್ವನಿ ಯಾತ್ರೆಗೆ ಬರುತ್ತೇವೆ, ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲ ಎಂದಿದ್ದೆ. ಇಂದು ಸಹ ರಾಮನಗರದ ಪ್ರಜಾಧ್ವನಿ ಯಾತ್ರೆ ರದ್ದುಪಡಿಸಿ ಇಲ್ಲಿ ಸಭೆ ನಡೆಸುತ್ತಿದ್ದೇನೆ ಎಂದರು.

ನಮ್ಮ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್​ ಗಾಂಧಿ ಅವರು ದೇಶದ ಪರ ದನಿ ಎತ್ತಿದ್ದಾರೆ. ಇದಕ್ಕಾಗಿ ಅವರ ಸದಸ್ಯತ್ವ ರದ್ದುಪಡಿಸಲಾಗಿದೆ. ಇದಕ್ಕೆ ಪ್ರತಿಧ್ವನಿಯಾಗಿ ನೀವು ನಮಗೆ ಶಕ್ತಿ ತುಂಬಲು ಬಂದಿದ್ದೀರಿ. ನಿಮ್ಮನ್ನೆಲ್ಲ ಪಕ್ಷಕ್ಕೆ ಸ್ವಾಗತಿಸುತ್ತೇನೆ. ನೀವು ನಮ್ಮ ಪಕ್ಷದ ಹಳೆಯ ಮುಖಂಡರು, ಕಾರ್ಯಕರ್ತರ ಜತೆ ಬೆರೆತು ಕೆಲಸ ಮಾಡಬೇಕು. ಈಗಾಗಲೇ ಡಾ. ಎಂ.ಸಿ ಸುಧಾಕರ್​ ಅವರನ್ನು ಚಿಂತಾಮಣಿ ಅಭ್ಯರ್ಥಿ ಎಂದು ಘೋಷಿಸಿದ್ದೇವೆ. ಅವರ ಪರ ಕೆಲಸ ಮಾಡಬೇಕು. ಈಗಿನಿಂದಲೇ ಅವರ ಬಲ ಹೆಚ್ಚಿಸಲು ಇನ್ನಷ್ಟು ಮಂದಿಯನ್ನು ಪಕ್ಷಕ್ಕೆ ಕರೆಸಬೇಕು. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ಪ್ರತಿ ಮನೆಗೆ ತಿಳಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.

ನೂಕು ನುಗ್ಗಲು: ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಯಿತು. ಚಿಂತಾಮಣಿ, ಶಿಗ್ಗಾಂವಿ, ಕೆಆರ್ ಪೇಟೆ ನಾಯಕರ ಕೈ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಚಿಕ್ಕ ಹಾಲ್​ನಲ್ಲಿ ಆಯೋಜನೆ ಮಾಡಲಾಗಿತ್ತು. ಮೂರು ಕ್ಷೇತ್ರಗಳ ನಾಯಕರು, ಕಾರ್ಯಕರ್ತರು ಏಕಕಾಲಕ್ಕೆ ನುಗ್ಗಿದ್ದರಿಂದ ನೂಕು ನುಗ್ಗಲು ಉಂಟಾಯಿತು.

ಮಂಜುನಾಥ್, ದೇವರಾಜ್ ಪಕ್ಷ ಸೇರ್ಪಡೆ: ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್​​ಗೆ ಸೇರ್ಪಡೆಯಾದ ದೇವರಾಜು ಅವರನ್ನು ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಚಲುವರಾಯಸ್ವಾಮಿ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಡಿಕೆಶಿ ಐದಾರು ಮಂದಿ ಕೆ.ಆರ್.ಪೇಟೆಯಲ್ಲಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ದೇವರಾಜ್ ಜೆಡಿಎಸ್ ಬಿಟ್ಟು ಇಲ್ಲಿಗೆ ಬಂದಿದ್ದಾರೆ. ಅಧಿಕೃತವಾಗಿ ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅವರ ಜೊತೆ ನೂರಾರು ಜನ ಸೇರಿದ್ದಾರೆ. ನಾಳೆಯಿಂದ ಎಲ್ಲರೂ ಪಕ್ಷ ಸಂಘಟನೆ ಮಾಡಬೇಕು. ಒಬ್ಬೊಬ್ಬ ಕಾರ್ಯಕರ್ತ 10 ಮಂದಿ ತಲುಪಬೇಕು ಎಂದು ಕರೆಕೊಟ್ಟರು.

ಕುನ್ನೂರು ಬಲ: ಮಾಜಿ ಸಂಸದ ಮಂಜುನಾಥ್ ಕುನ್ನೂರು ಕಾಂಗ್ರೆಸ್​ ಸೇರ್ಪಡೆಯಾದರು. ಆ ಮೂಲಕ ಸಿಎಂ ತವರು ಶಿಗ್ಗಾಂವ್ ಕ್ಷೇತ್ರದ ಹಲವು ಬಿಜೆಪಿ ಮುಖಂಡರು ಕೈ ಹಿಡಿದರು. ರಾಜು ಕುನ್ನೂರು ಸಹ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ ಅವರು, ಮಂಜುನಾಥ್ ಕುನ್ನೂರು ಶಾಸಕರಾಗಿದ್ದವರು, ಸಂಸದರಾಗಿಯೂ ಕೆಲಸ ಮಾಡಿದವರು. ಪಕ್ಷ ಸೇರ್ಪಡೆ ಸಂಬಂಧ ಖರ್ಗೆಯವರ ಜತೆ ಮಾತುಕತೆ ನಡೆಸಿದ್ದರು. ಇದೀಗ ಅವರು ಹಾಗೂ ಅವರ ಪುತ್ರ ಕಾಂಗ್ರೆಸ್ ಸೇರಿದ್ದಾರೆ. ಇವರಿಂದ ಶಿಗ್ಗಾಂವಿಯಲ್ಲಿ ನಮಗೆ ಬಲ ಬಂದಿದೆ. ಮುಖ್ಯಮಂತ್ರಿಗಳ ಕ್ಷೇತ್ರದ ನಾಯಕರೇ ನಮ್ಮ ಪಕ್ಷ ಸೇರುತ್ತಿದ್ದಾರೆ. ಇವರನ್ನ ಸಿಎಂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಇದಕ್ಕೆ ಇವತ್ತಿನ ಸೇರ್ಪಡೆಯೇ ಸಾಕ್ಷಿ. ಮಂಜುನಾಥ್ ಕುನ್ನೂರು, ರಾಜು‌ ಕುನ್ನೂರು ಸೇರ್ಪಡೆ ಆಗಿರುವುದು ಪಕ್ಷಕ್ಕೆ ಬಲ ಬಂದಿದೆ. ಅವರ ಜತೆ ನೂರಾರು ಬಿಜೆಪಿ ಕಾರ್ಯಕರ್ತರು ಸೇರ್ಪಡೆ ಆಗಿರುವುದು ಹೆಮ್ಮೆಯ ವಿಚಾರ. ಗುಬ್ಬಿ ಶ್ರೀನಿವಾಸ್ ಸಹ ತಮ್ಮನ್ನು ಸಂಪರ್ಕಿಸಿ ಮಾತನಾಡಿದ್ದಾರೆ. ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದರು. ಅವರು ಪಕ್ಷ ಸೇರುವ ಬಗ್ಗೆ ಮುಂದೆ ಹೇಳುತ್ತೇವೆ ಎಂದು ಡಿಕೆಶಿ ತಿಳಿಸಿದರು. ಮಾ.31 ರಂದು ತಮ್ಮ ಬೆಂಬಲಿಗರೊಂದಿಗೆ ಗುಬ್ಬಿ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ದಲಿತ ಸಮುದಾಯದ ಪ್ರಮುಖ ನಾಯಕರು ಕಾಂಗ್ರೆಸ್ ಸೇರ್ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.