ETV Bharat / state

ಸಚಿವ ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ ಹೆಗಲಿಗೆ ಕೈ ಹಾಕಿಕೊಂಡು ಸಂಪುಟ ಸಭೆಗೆ ಬಂದ ಡಿಕೆಶಿ

author img

By ETV Bharat Karnataka Team

Published : Nov 10, 2023, 6:46 AM IST

ಸಂಪುಟ ಸಭೆಗೆ ಬಂದ ಡಿ.ಕೆ ಶಿವಕುಮಾರ್​
ಸಂಪುಟ ಸಭೆಗೆ ಬಂದ ಡಿ.ಕೆ ಶಿವಕುಮಾರ್​

ಅತೃಪ್ತ ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಅವರ ಭಿನ್ನಮತ ಶಮನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್​ ಕಸರತ್ತು ನಡೆಸುತ್ತಿದ್ದಾರೆ.

ಬೆಂಗಳೂರು: ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಕೆಂಗಲ್ ಗೇಟ್ ಮೂಲಕ ಆಗಮಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಹೆಗಲಿಗೆ ಕೈ ಹಾಕುತ್ತಾ ಬಂದು ಗಮನ ಸೆಳೆದರು. ಇತ್ತೀಚೆಗೆ ಕೆ.ಎನ್.ರಾಜಣ್ಣ ಲೋಕಸಭೆ ಚುನಾವಣೆಯ ದೃಷ್ಟಿಯಿಂದ ರಾಜ್ಯದಲ್ಲಿ ಮೂರು ಡಿಸಿಎಂ ಆಗಬೇಕು ಎಂದು ಹೈಕಮಾಂಡ್ ನಾಯಕರನ್ನು ಒತ್ತಾಯಿಸಿದ್ದರು. ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕೆಂಬ ಅಪೇಕ್ಷೆ ಇದೆ ಎಂದಿದ್ದರು. ಸಿಎಂ ಸ್ಥಾನಕ್ಕೆ ಡಾ.ಜಿ.ಪರಮೇಶ್ವರ್ ಪರ ಬೆಂಬಲ ಇದೆ ಎಂಬ ಹೇಳಿಕೆಗಳನ್ನೂ ನೀಡಿ ಡಿ.ಕೆ.ಶಿವಕುಮಾರ್​ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದರು.

ಇನ್ನೊಂದೆಡೆ, ಸತೀಶ್ ಜಾರಕಿಹೊಳಿ ಅವರಿಗೆ ಬೆಳಗಾವಿ ರಾಜಕೀಯದಲ್ಲಿ ಡಿಕೆಶಿ ಹಸ್ತಕ್ಷೇಪದ ಸಿಟ್ಟು ಬಂದಿತ್ತು. ವರ್ಗಾವಣೆ ವಿಚಾರದಲ್ಲೂ ಡಿಕೆಶಿ ವಿರುದ್ಧ ಮುನಿಸಿಕೊಂಡಿದ್ದರು ಇದೇ ಹಿನ್ನೆಲೆಯಲ್ಲಿ ತಮ್ಮ ಬೆಂಬಲಿಗ ಶಾಸಕರೊಂದಿಗೆ ವಿದೇಶ ಪ್ರವಾಸ ಕೈಗೊಳ್ಳಲು ಮುಂದಾಗಿದ್ದರು. ಡಿ.ಕೆ.ಶಿವಕುಮಾರ್ ಮೊನ್ನೆಯಷ್ಟೇ ಸತೀಶ್ ಜಾರಕಿಹೊಳಿ ಸರ್ಕಾರಿ ಮನೆಗೆ ತೆರಳಿ ಮಾತುಕತೆ ನಡೆಸಿದ್ದರು. ಈ ಮೂಲಕ ಭಿನ್ನಮತ ಶಮನಕ್ಕೆ ಯತ್ನಿಸಿದ್ದರು.

ನಿನ್ನೆ ಸಂಪುಟ ಸಭೆಗೆ ತೆರಳುವಾಗ ವಿಧಾನಸೌಧದ ಕೆಂಗಲ್ ಗೇಟ್ ಬಳಿ ಮೂವರು ಮುಖಾಮುಖಿಯಾದರು. ಈ ಸಂದರ್ಭದಲ್ಲಿ ಡಿಕೆಶಿ ಮಧ್ಯದಲ್ಲಿ ನಿಂತು ಕೆ.ಎನ್.ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಹೆಗಲಿಗೆ ಕೈ ಹಾಕಿ ನಗುತ್ತಲೇ ಮಾತನಾಡುತ್ತಾ ವಿಧಾನಸೌಧದೊಳಗೆ ಹೆಜ್ಜೆ ಹಾಕಿದರು. ಇದರೊಂದಿಗೆ ಡಿ.ಕೆ.ಶಿವಕುಮಾರ್ ಡ್ಯಾಮೇಜ್ ಕಂಟ್ರೋಲ್​ ಮೊರೆ ಹೋದರು. ನಾವೆಲ್ಲರೂ ಒಂದಾಗಿದ್ದು, ಒಗ್ಗಟ್ಟಾಗಿದ್ದೇವೆಂಬ ಸಂದೇಶ ರವಾನಿಸಲು ಯತ್ನಿಸಿದರು.

ಸಚಿವ ಸಂಪುಟ ತೀರ್ಮಾನಗಳು:

  • ಕೃಷಿ ಹೊಂಡ ನಿರ್ಮಾಣ, ಹೊಂಡದಿಂದ‌ ನೀರೆತ್ತಲು ಪಂಪ್‌ಸೆಟ್, ಲಘು ನೀರಾವರಿ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳುವ ಕೃಷಿ ಭಾಗ್ಯ ಯೋಜನೆ ಮತ್ತೆ ಆರಂಭಕ್ಕೆ ನಿರ್ಧಾರ. 106 ತಾಲೂಕಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನಕ್ಕೆ ಅನುಮೋದನೆ
  • ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 5 ತಾಲೂಕಿನಲ್ಲಿ ಜಾರಿಗೆ ಅಸ್ತು. 2025-26 ಸಾಲಿನ‌ ಅವಧಿಯಲ್ಲಿ 15,000 ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಟಾನ.‌ ಒಟ್ಟು 38 ಕೋಟಿ ರೂ. ವೆಚ್ಚದ ಯೋಜನೆಗೆ ಶೇ.60:40 ಅನುಪಾತದಲ್ಲಿ ರಾಜ್ಯ ಸರ್ಕಾರ 15.25 ಕೋಟಿ ರೂ. ವೆಚ್ಚ ಭರಿಸಲಿದೆ.
  • ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಗೆ ಕ್ಲಸ್ಟರ್ ವಿಮಾ ಕಂಪನಿ ನಿಗದಿ ಮಾಡಲು ಘಟನೋತ್ತರ ಅನುಮೋದನೆ. ಈಗಾಗಲೇ 10 ಕ್ಲಸ್ಟರ್​ಗಳನ್ನು ಮಾಡಲಾಗಿದೆ. ರೈತರಿಗೆ ವಿಮೆ ಸರಿಯಾಗಿ ತಲುಪುತ್ತಿಲ್ಲ ಎಂದು ಶಾಸಕರಿಂದ ಆಕ್ಷೇಪ ಇತ್ತು. ಸರ್ವೇಯನ್ನು ರೈತರು ಒಪ್ಪುತ್ತಿಲ್ಲ. ಈ ಸಂಬಂಧ ಡಿಸಿಗೆ ಸರ್ವೇ ಮೇಲೆ ನಿಗಾ ಇಡಲು ಸೂಚನೆ
  • ಕೃಷಿಯಂತ್ರಧಾರೆ ಕೇಂದ್ರ ಬಲಪಡಿಸಲು ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆ. 300 ಹೈಟೆಕ್ ಹಾರ್ವೆಸ್ಟ್‌ ಹಬ್​ಗಳನ್ನು ಹಂತ ಹಂತವಾಗಿ ಸ್ಥಾಪನೆಗೆ ತೀರ್ಮಾನ. ಹಬ್​ಗಳಿಗೆ 1 ಕೋಟಿ ರೂ. ಗ್ರಾಂಟ್ ಅನ್ನು ಕೊಡಲು ತೀರ್ಮಾನ.
  • ರಾಜ್ಯಪಾಲರ ಸಚಿವಾಲಯದ ಸರ್ಜನ್ ಹುದ್ದೆಗೆ ಡಾ. ನವೀನ್ ಕುಮಾರ್ ನೇಮಕ ಒಂದು ವರ್ಷ ಅವಧಿಗೆ ಗುತ್ತಿಗೆ ಆಧಾರದಲ್ಲಿ ಮುಂದುವರಿಸಲು ನಿರ್ಧಾರ.
  • ಕನಕಪುರ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ತೀರ್ಮಾನ. ಇನ್ಫೊಸಿಸ್ ಸಂಸ್ಥೆ ಸಿಎಸ್​ಆರ್‌ನಡಿ ಬೃಹತ್ ಕಟ್ಟಡ ನಿರ್ಮಿಸಿದ್ದಾರೆ. ಇದಕ್ಕಾಗಿ ಒಟ್ಟು 10.38 ಕೋಟಿ ರೂ. ವೆಚ್ಚ ಭರಿಸಲು ಆಡಳಿತಾತ್ಮಕ ಅನುಮೋದನೆ.
  • ಲೋಕಾಯುಕ್ತ ಟ್ರಾಪ್​ಗೆ ಒಳಗಾಗಿದ್ದ ಆರೋಗ್ಯ ಇಲಾಖೆಯ ಡಾ. ನಾಗಮಣಿಗೆ ಕಡ್ಡಾಯ ಸೇವಾ ನಿವೃತ್ತಿಗೆ ತೀರ್ಮಾನ
  • ಮಹತ್ವಾಕಾಂಕ್ಷೆ ತಾಲೂಕುಗಳ 73 ಕೆಪಿಎಸ್ ಶಾಲೆಗಳು ಹಾಗೂ 50 ಆದರ್ಶ ಶಾಲೆಗಳಲ್ಲಿ 20 ಕೋಟಿ ವೆಚ್ಚದಲ್ಲಿ ಆವಿಷ್ಕಾರ ಇನ್ನೋವೇಟಿವ್ ಲ್ಯಾಬ್​ಗಳ ಸ್ಥಾಪನೆಗೆ ಅಸ್ತು.
  • ನ.26ರ ರಂದು ಸಂವಿಧಾನ ದಿನಾಚರಣೆ ಮತ್ತು ರಾಷ್ಟ್ರೀಯ ಏಕತೆ ಸಮಾವೇಶವಾಗಿ ಆಚರಿಸಲು ಸಮಾಜ ಕಲ್ಯಾಣ ಇಲಾಖೆಗೆ 18 ಕೋಟಿ ರೂ. ನೀಡಲು ಒಪ್ಪಿಗೆ
  • ವಾಯುವ್ಯ ಸಾರಿಗೆಯಲ್ಲಿ 4 ಡೀಸೆಲ್ ಎಸಿ ಬಸ್ ಹಾಗೂ 20 ವ್ಹೀಲ್ ಬೇಸ್ ಡಿಸೆಲ್ ವಾಹನ ಖರೀದಿಗಾಗಿ 16.20 ಕೋಟಿ ವೆಚ್ಚದಲ್ಲಿ ಬಸ್​ಗಳ ಖರೀದಿ
  • ಹುಬ್ಬಳ್ಳಿ ಬಿಆರ್​ಟಿಗೆ 45 ಕೋಟಿ ರೂ. ವೆಚ್ಚದಲ್ಲಿ 100 ಬಸ್ ಖರೀದಿಗೆ ಒಪ್ಪಿಗೆ
  • ಪೋಷಣ್ ಅಭಿಯಾನಕ್ಕೆ 26.60 ಕೋಟಿ ರೂ. ವೆಚ್ಚದಲ್ಲಿ ಉಪಕರಣಗಳ ಖರೀದಿ.
  • ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಬಾಗಲಕೋಟೆಯ ರನ್ನ ಕಾರ್ಖಾನೆ ಕಬ್ಬು ಅರೆಯುವ ಕಾರ್ಯ ಆರಂಭಿಸಲು ಬಿಡಿಸಿಸಿ ಅಥವ ಅಪೆಕ್ಸ್ ಬ್ಯಾಂಕ್​ನಿಂದ 40 ಕೋಟಿ ಸಾಲ ಪಡೆಯಲು ಸರ್ಕಾರದ ಖಾತರಿ ಕೊಡಲು ಒಪ್ಪಿಗೆ.

ಇದನ್ನೂ ಓದಿ: ಬರ ಪರಿಹಾರದ ಬಗ್ಗೆ ಕೇಂದ್ರದ ಮಲತಾಯಿ ಧೋರಣೆಗೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಕಳವಳ: ಹೆಚ್​ ಕೆ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.