ETV Bharat / state

ಜಮೀನು ಅಳತೆ ಮಾಡಲು ದಿಶಾಂಕ್​ ಆ್ಯಪ್​: ಮೊಬೈಲಿನಲ್ಲೇ ಜಮೀನುಗಳ ಮಾಹಿತಿ ಲಭ್ಯ

author img

By

Published : Jan 25, 2023, 5:42 PM IST

dishank-survey-app-to-measure-land
ಜಮೀನು ಅಳತೆ ಮಾಡಲು ದಿಶಾಂಕ್​ ಆ್ಯಪ್​ : ಮೊಬೈಲಿನಲ್ಲೇ ಜಮೀನಿಗಳ ಮಾಹಿತಿ ಲಭ್ಯ

ಮೊಬೈಲ್​ನಲ್ಲೇ ಜಮೀನುಗಳ ಅಳೆಯುವ ಕಾರ್ಯ - ದಿಶಾಂಕ್​ ಆ್ಯಪ್​ ಮೂಲಕ ಜಮೀನು ಅಳತೆ - ಜಮೀನಿನ ಬಗ್ಗೆ ಎಲ್ಲ ಮಾಹಿತಿ ಲಭ್ಯ

ಬೆಂಗಳೂರು : ಹಿಂದಿನಿಂದಲೂ ಜಮೀನು ಅಳತೆ ಮಾಡಲು ಸರಪಳಿ ಬಳಸುವುದು ವಾಡಿಕೆ. ಜಮೀನು ಅಳತೆ ಮಾಡಿಸಬೇಕಾದರೆ, ಜಮೀನು ಮಾಲೀಕ ಸರ್ವೆ ಇಲಾಖೆಗೆ ಅರ್ಜಿ ಸಲ್ಲಿಸಿ ನಂತರ ಅಧಿಕಾರಿಗಳು ಬಂದು ಜಮೀನು ಸರ್ವೆ ಮಾಡುತ್ತಾರೆ. ಆದರೆ, ಇದೀಗ ಯಾರ ಸಹಾಯವೂ ಇಲ್ಲದೆ ನಿಮ್ಮ ಮೊಬೈಲ್ ನಿಂದಲೇ ಜಮೀನಿನ ಅಳತೆ ಮಾಡಬಹುದು.

ಮೊಬೈಲ್ ನಿಂದ ಜಮೀನು ಅಳತೆ ಮಾಡುವುದು ಹೇಗೆ ? : ಕಂದಾಯ ಇಲಾಖೆಯು ರೈತರಿಗೆ ಹಾಗೂ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ 'ದಿಶಾಂಕ್ ' ಎಂಬ ಹೊಸ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದೆ. ಈ ದಿಶಾಂಕ್ ಆ್ಯಪ್ ಮೂಲಕ ರೈತರು ಕ್ಷಣದಲ್ಲೇ ಜಮೀನಿನ ಅಳತೆ ಮಾಡಬಹುದು. ಕಂದಾಯ ಇಲಾಖೆಯಲ್ಲಿ ಲಭ್ಯವಿರುವ 1960ರ ಸರ್ವೆ ನಕಾಶೆಗಳ ಆಧಾರದಲ್ಲಿ ದಿಶಾಂಕ್ ಆ್ಯಪ್ ನ್ನು ಅಭಿವೃದ್ಧಿಪಡಿಸಲಾಗಿದೆ. ಈ ದಿಶಾಂಕ್ ಆ್ಯಪ್ ರಾಜ್ಯದ 30 ಜಿಲ್ಲೆಗಳ ಪ್ರತಿ ಭೂ ಭಾಗದ ಮಾಹಿತಿಯನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಮೀನು ಅಳತೆ ಮಾಡಲು ದಿಶಾಂಕ್ ಆ್ಯಪ್​ : ಜಮೀನಿನ ಸುತ್ತಮುತ್ತಲಿರುವ ಕೆರೆ-ಕುಂಟೆಗಳ ಪ್ರದೇಶ, ಭೂ ಭಾಗದ ವಿವರ, ಆಸ್ತಿಯ ಅಕ್ಕ ಪಕ್ಕದಲ್ಲಿರುವ ಇತರ ಜಮೀನಿನ ಮಾಹಿತಿ ಹಾಗೂ ಜಮೀನು ಒತ್ತುವರಿಯಾಗಿದೆಯೇ ಎಂಬ ಮಾಹಿತಿಯನ್ನು ಈ ದಿಶಾಂಕ್ ಆ್ಯಪ್ ಸಹಾಯದಿಂದ ಪಡೆದುಕೊಳ್ಳಬಹುದು. ಹೊಸ ಜಮೀನು ಖರೀದಿಸುವಾಗ ಹಾಗೂ ಜಮೀನಿನ ಅಳತೆ ಮಾಡಲು ಈ ಆ್ಯಪ್ ಬಳಸಬಹುದು. ಭೂಮಿ ಖಾತೆ ವಿವರದಲ್ಲಿ ನಮೂದಿಸಿರುವ ಸರ್ವೆ ನಂಬರ್ ಸರಿಯಾಗಿದೆಯೇ ಎಂಬುದರ ಮಾಹಿತಿಯನ್ನು ಕೂಡ ನೋಡಬಹುದು. ನೀವು ನೋಡುವ ಸರ್ವೆ ನಂಬರ್ ನಲ್ಲಿ ಸರ್ಕಾರದ ಯಾವುದಾದರೂ ಆಸ್ತಿಗಳಿವೆಯೇ? ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಅಂದರೆ, ಕೆರೆ, ಕಟ್ಟೆ, ಹಳ್ಳ, ಜಮೀನು, ರಾಜಕಾಲುವೆ, ಖರಾಬು ಜಮೀನು ಸೇರಿದಂತೆ ಮತ್ತಿತರ ಸರ್ಕಾರದ ಆಸ್ತಿಗಳಿದ್ದರೆ ಇದರ ಮಾಹಿತಿ ಇಲ್ಲಿ ಸಿಗುತ್ತದೆ. ಇನ್ನು ನೀವು ಯಾವ ಸ್ಥಳದಲ್ಲಿ ನಿಂತಿರುತ್ತೀರೋ ಅದೇ ಸ್ಥಳದ ಮಾಹಿತಿಯೂ ಅಲ್ಲೇ ಸಿಗುತ್ತದೆ.

ಆ್ಯಪ್ ಇನ್ಸ್ ಟಾಲ್ ಮಾಡಿಕೊಳ್ಳುವುದೇಗೆ ? : ಮೊಬೈಲ್ ನಲ್ಲಿ ದಿಶಾಂಕ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು https://play.google.com/store/apps/details?id=com.ksrsac.sslr&hl=en_IN ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಅಥವಾ ನಿಮ್ಮ ಮೊಬೈಲ್ ನಲ್ಲಿರುವ Google play store ನಲ್ಲಿ Dishank Survey app ಎಂದು ಟೈಪ್ ಮಾಡಿ ದಿಶಾಂಕ್ ಆ್ಯಪ್ ಇನ್​ಸ್ಟಾಲ್​ ಮಾಡಿಕೊಳ್ಳಬೇಕು.

ನಂತರ ಅಲೋ ದಿಶಾಂಕ್ ಟು ಅಕ್ಸೈಸ್ ದಿಸ್ ಡಿವೈಸ್ ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ಯಾವ ಭಾಷೆಯಲ್ಲಿ ವೀಕ್ಷಿಸಬೇಕೆಂದು ಅಂದು ಕೊಂಡಿದ್ದೀರೋ ಅಲ್ಲಿ ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ಜಿಪಿಎಸ್​ನ್ನು ಕೂಡ ಆನ್ ಮಾಡಿಕೊಂಡಿರಬೇಕು. ನಂತರ ನೀವು ಇದ್ದ ಸ್ಥಳದ ಮಾಹಿತಿ ಅಲ್ಲಿ ಕಾಣುತ್ತದೆ. ಅಂದರೆ ಯಾವ ಸರ್ವೆ ನಂಬರ್ ನಲ್ಲಿರುತ್ತೀರೋ ಪಾಯಿಂಟ್ ಕಾಣುತ್ತದೆ. ಆ ಪಾಯಿಂಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನೀವು ನಿಂತಿರುವ ಸರ್ವೆ ನಂಬರ್ ಕಾಣುತ್ತದೆ.

ಹೆಚ್ಚಿನ ವಿವರಗಳು ಮೇಲೆ ಕ್ಲಿಕ್ ಮಾಡಿದರೆ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಮಾಲೀಕರ ವಿವರಗಳು ಸಿಗುತ್ತದೆ. ಇದಕ್ಕೆ ಕ್ಲಿಕ್ ಮಾಡಿದರೆ ಸರ್ವೋಕ್ ಸಂಖ್ಯೆ ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಂಡರೆ ಮಾಲೀಕರು ಮೇಲೆ ಕ್ಲಿಕ್ ಮಾಡಿದರೆ ಸಾಕು ಆ ಜಮೀನಿನ ಮಾಲೀಕರು ಯಾರು, ಜಮೀನಿನ ವಿಸ್ತೀರ್ಣದೊಂದಿಗೆ ಅಕ್ಕಪಕ್ಕದ ಮಾಲೀಕರ ಹೆಸರು ಸಹ ಕಾಣುತ್ತದೆ. ಒಂದು ವೇಳೆ ನಿಮ್ಮ ಮೊಬೈಲ್ ನಲ್ಲಿ ನೇರವಾಗಿ ಪಾಯಿಂಟ್ ಕಾಣದಿದ್ದರೆ ಸರ್ವೆ ನಂಬರ್ ಹುಡುಕಿ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ, ಜಿಲ್ಲೆ, ತಾಲೂಕು, ಹೋಬಳಿ , ಗ್ರಾಮ ಆಯ್ಕೆ ಸರ್ವೆ ನಂಬರ್ ನಮೂದಿಸಿದರೆ ನೀವು ನಿಂತ ಸ್ಥಳ ತೋರಿಸುತ್ತದೆ. ಆ ಸ್ಥಳಕ್ಕೆ ರಸ್ತೆ ಮಾರ್ಗವಿದೆಯೇ ಎಂಬ ಮಾಹಿತಿಯನ್ನು ಕೂಡ ಪಡೆಯಬಹುದು.

ಇನ್ನು ಮಾಪನ ಸಾಧನಗಳು ಮೇಲೆ ಕ್ಲಿಕ್ ಮಾಡಿದರೆ ಲೈನ್ ಆಯ್ಕೆ ಮಾಡಿಕೊಂಡು ಸರ್ವೆ ನಂಬರ್ ಗುರುತಿನ ನಾಲ್ಕು ದಿಕ್ಕು ಆಯ್ಕೆ ಮಾಡಿಕೊಳ್ಳಬೇಕು. ಮೀಟರ್ ನಲ್ಲಿ ನೋಡಬೇಕೆಂದುಕೊಂಡರೆ ಮೀಟರ್ ಆಯ್ಕೆ ಮಾಡಿಕೊಳ್ಳಬೇಕು. ಫೀಟ್ ನಲ್ಲಿ ನೋಡಬೇಕೆಂದುಕೊಂಡರೆ ಫೀಟ್ ಆಯ್ಕೆ ಮಾಡಿಕೊಳ್ಳಬೇಕು. ಆಗ ಜಮೀನಿನ ಸುತ್ತಳತೆ ತೋರಿಸುತ್ತದೆ. ಬಲಗಡೆಯಿರುವ ನಾಲ್ಕು ಲೈನ್ ಮೇಲೆ ಕ್ಲಿಕ್ ಮಾಡಿದರೆ ನಕ್ಷೆ ಸೂಚಿ ಇನ್ನೊಂದು ಪರದೆ ತೆರೆದುಕೊಳ್ಳುತ್ತದೆ. ಅಲ್ಲಿ ರಾಜ್ಯದ ಗಡಿ, ಜಿಲ್ಲೆಯ, ತಾಲೂಕು ಗ್ರಾಮದ ಗಡಿ, ಬೆಟ್ಟ, ನದಿ, ರಸ್ತೆ, ರೈಲು ಮಾರ್ಗಗಳಿದ್ದರೆ ಅಲ್ಲಿ ಕಾಣುತ್ತದೆ. ದಿಶಾಂಕ್​ ಆ್ಯಪ್ ನಲ್ಲಿ ಸಿಗುವ ಮಾಹಿತಿ ಕಾನೂನು ಬದ್ಧವಾಗಿರುವುದಿಲ್ಲ. ಅದು ಕೇವಲ ಮಾಹಿತಿ ನೀಡುವ ಆ್ಯಪ್ ಆಗಿದೆ. ಕಾನೂನುಬದ್ಧ ದಾಖಲೆ ಅಧಿಕೃತವಾಗಿ ಪಡೆಯಲು ಸಂಬಂಧಿಸಿದ ಕಚೇರಿಗೆ ಹೋಗಿ ಪಡೆಯಬೇಕಾಗುತ್ತದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಇದನ್ನೂ ಓದಿ : ಆಸ್ತಿಯ ಮೂಲ ವಿವರಗಳನ್ನು ತಿಳಿಯಲು ಸರ್ಕಾರದಿಂದ 'ದಿಶಾಂಕ್ ಆ್ಯಪ್ ' : ಇದರ ಪ್ರಯೋಜನಗಳೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.