ಆಸ್ತಿಯ ಮೂಲ ವಿವರಗಳನ್ನು ತಿಳಿಯಲು ಸರ್ಕಾರದಿಂದ 'ದಿಶಾಂಕ್ ಆ್ಯಪ್ ' : ಇದರ ಪ್ರಯೋಜನಗಳೇನು?

author img

By

Published : Jan 11, 2022, 7:54 PM IST

ವಿಧಾನ ಸೌಧ

ಭೂ ನಕ್ಷೆ ಬಗ್ಗೆ ಮಾಹಿತಿ ನೀಡುವ ಸರ್ಕಾರಿ ಆ್ಯಪ್. ಸರ್ವೆ ಇಲಾಖೆಯ ಅತ್ಯುತ್ತಮ ತಂತ್ರಾಂಶ ಇದು. ರಾಜ್ಯದ 30 ಜಿಲ್ಲೆಗಳ ಪ್ರತಿ ಭೂಭಾಗದ ಮಾಹಿತಿ, ಸರ್ವೆ ನಂಬರ್ ಒಳಗೊಂಡಿದೆ. ಇದು ಫ್ರೀ ಆ್ಯಪ್. ಮೊಬೈಲ್ ಫೋನ್​​ನಲ್ಲಿ ಸ್ಥಳದ ವಿವರ ನೀಡಿ ಡೌನ್ ಲೋಡ್ ಮಾಡಬಹುದು.

ಬೆಂಗಳೂರು : ನಿವೇಶನ, ಮನೆ ಮತ್ತಿತರ ಆಸ್ತಿಗಳ ಸರ್ವೇ ನಕ್ಷೆ ಮಾಡಲು ಇನ್ಮುಂದೆ ಸರ್ವೇಯರ್ ಅಗತ್ಯ ಇಲ್ಲ. ಕೇವಲ ದಿಶಾಂಕ್ ಆ್ಯಪ್ ನಲ್ಲಿ ಗ್ರಾಮ ಪಂಚಾಯತ್​ ಅಧಿಕಾರಿಗಳೇ ಸರ್ವೇ ಮಾಡಿ ಇ- ಸ್ವತ್ತು ತಂತ್ರಾಂಶದಲ್ಲಿ ಇ-ಖಾತಾ ನೀಡುವಂತಹ ಹೊಸ ಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಆರಂಭಿಸಿವೆ.

ದಿಶಾಂಕ್‌ ಆ್ಯಪ್‌ ನಲ್ಲಿ ರಾಜ್ಯದ ಎಲ್ಲಾ ಆಸ್ತಿಗಳ ವಿವರ ಹಾಕಲಾಗಿದ್ದು, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗುವ ಈ ಆ್ಯಪ್‌ ಸಾರ್ವಜನಿಕರಿಗೆ ಅತ್ಯಂತ ಅನುಕೂಲಕರವಾಗಿದೆ. ಕಂದಾಯ ಇಲಾಖೆಯ ದಾಖಲೆಗಳಲ್ಲಿನ 1960ರ ಸರ್ವೆ ನಕಾಶೆಗಳ ಆಧಾರದಲ್ಲಿ ಇದನ್ನು ರಚಿಸಲಾಗಿದೆ.

ಒಂದು ನಿವೇಶನ ಖರೀದಿಸಬೇಕಾದರೆ ಅದನ್ನು ಸಾಕಷ್ಟು ಕಡೆಯಿಂದ ಪರಿಶೀಲನೆ ಮಾಡಬೇಕಾಗುತ್ತದೆ. ಸಾಲ ಮಾಡಿ ಭೂಮಿ ಖರೀದಿಸುವ ಕೆಲವರು ಮೋಸ ಹೋದರೆ ಏನು? ಎಂಬ ಚಿಂತೆ ಮಾಡುವ ಅಗತ್ಯವಿಲ್ಲ. ದಿಶಾಂಕ್ ಆ್ಯಪ್ ಮೂಲಕ ರಾಜ್ಯ ಸರ್ಕಾರ ಇದಕ್ಕೆ ಪರಿಹಾರ ರೂಪಿಸಿದೆ.

ಏನಿದು ದಿಶಾಂಕ್ ಆ್ಯಪ್ .. ಭೂ ನಕ್ಷೆ ಬಗ್ಗೆ ಮಾಹಿತಿ ನೀಡುವ ಸರ್ಕಾರಿ ಆ್ಯಪ್. ಸರ್ವೆ ಇಲಾಖೆಯ ಅತ್ಯುತ್ತಮ ತಂತ್ರಾಂಶ ಇದು. ರಾಜ್ಯದ 30 ಜಿಲ್ಲೆಗಳ ಪ್ರತಿ ಭೂಭಾಗದ ಮಾಹಿತಿ, ಸರ್ವೇ ನಂಬರ್ ಒಳಗೊಂಡಿದೆ. ಇದು ಫ್ರೀ ಆ್ಯಪ್. ಮೊಬೈಲ್ ಫೋನ್​​ನಲ್ಲಿ ಸ್ಥಳದ ವಿವರ ನೀಡಿ ಡೌನ್​ಲೋಡ್ ಮಾಡಬಹುದು.

ಗ್ರಾಮ ಠಾಣಾ ಆಸ್ತಿಗಳಿಗೆ ತೆರಿಗೆ ನಿರ್ಧಾರ ಮಾಡಲು ಗ್ರಾಮ ಪಂಚಾಯತ್​ಗಳು ಇ-ಸ್ವತ್ತು ತಂತ್ರಾಂಶದಲ್ಲಿ ನಮೂನೆ -9 ಮತ್ತು 11ಎ, 11ಬಿ ಅನ್ವಯ ಇ-ಖಾತಾ ನೀಡುತ್ತಿವೆ. ಅಸ್ತಿ ಮಾಲೀಕ ಇ-ಖಾತಾಗೆ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದರೆ, ಭೂಮಾಪನ ಇಲಾಖೆ ಸರ್ವೇಯರ್‌ ಬಂದು ನಕ್ಷೆ ಸಿದ್ಧಪಡಿಸಿ ಮೋಜಣಿ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಿ ಆ ಬಳಿಕ ಇ-ಸ್ವತ್ತು ತಂತ್ರಾಂಶದಲ್ಲಿ ಗ್ರಾಮ ಪಂಚಾಯತ್​ ಅಧಿಕಾರಿಗಳು ಇ-ಖಾತಾ ನೀಡುತ್ತಿದ್ದರು.

ಆದರೆ, ಇದೀಗ ಗ್ರಾಮ ಪಂಚಾಯತ್​ ಕಾರ್ಯದರ್ಶಿ ಅಥವಾ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಸ್ಥಳಕ್ಕೆ ತೆರಳಿ ಗ್ರಾಮ ಠಾಣಾ ವ್ಯಾಪ್ತಿಗೆ ಬರುತ್ತದೆಯೇ ಎಂದು ಖಚಿತಪಡಿಸಿಕೊಂಡು, ಅರ್ಜಿದಾರನಿಂದ ಫೋಟೋ, ಐಡಿಕಾರ್ಡ್, ವಿಳಾಸ, ಆಸ್ತಿಯ ಚಕ್ಕುಬಂದಿ, ವಿಸ್ತೀರ್ಣ ದಾಖಲಿಸಬೇಕು. ಈ ಎಲ್ಲ ಅಂಶವನ್ನು ಅರ್ಜಿದಾರನಿಂದ ಖಾತರಿಪಡಿಸಿಕೊಂಡು ಇ-ಸ್ವತ್ತು ತಂತ್ರಾಂಶಕ್ಕೆ ಅಪ್‌ಡೇಟ್ ಮಾಡಿ ದಿಶಾಂಕ್‌ ಆ್ಯಪ್‌ಗೆ ವರ್ಗಾವಣೆ ಮಾಡಬೇಕು.

ನಂತರ ಕಾರ್ಯದರ್ಶಿ ಅಥವಾ ಎಸ್‌ಡಿಎ ಲೆಕ್ಕ ಸಹಾಯಕರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಆಸ್ತಿ ಪ್ರತಿಯೊಂದು ಮೂಲೆಯನ್ನು ಜಿಪಿಎಸ್ ಪರಿಶೀಲನೆ ನಡೆಸಿ ಫೋಟೋ ಸೆರೆಹಿಡಿಯಬೇಕು. ಇದರಿಂದ ಆಸ್ತಿ ಗ್ರಾಮ ಠಾಣಾ ಒಳಗೆ ಅಥವಾ ಹೊರಗೆ ಇದೆಯೇ ಎಂಬುದು ಗೊತ್ತಾಗಲಿದೆ. ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಆಸ್ತಿ ಇದ್ದರೆ ದಿಶಾಂಕ್ ಆ್ಯಪ್ ನಲ್ಲಿ ಲಾಗಿನ್ ಆಗಿ ಸಿಡಿಒ ದೃಢೀಕರಿಸಿ ಇ-ಸ್ವತ್ತು ತಂತ್ರಾಂಶಕ್ಕೆ ವರ್ಗಾವಣೆ ಮಾಡಿಕೊಂಡು ನೀಡಬಹುದು. ಪಂಚಾಯತ್​ನಲ್ಲಿ ಸರ್ವೇ ಮಾಡಿ ದೃಢೀಕರಿಸಿದ ಶೇ.10 ಆಸ್ತಿಗಳನ್ನು ಭೂಮಾಪಕರು ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಪರಿಶೀಲನೆ ನಡೆಸುವ ಮೂಲಕ ನಿಗಾ ವಹಿಸಲಿದ್ದಾರೆ. ಆಸ್ತಿ ಮಾಲೀಕ ಅರ್ಜಿಯೊಂದಿಗೆ 200 ರೂ. ಶುಲ್ಕ ಪಾವತಿಸಬೇಕಾಗುತ್ತದೆ.

ದಿಶಾಂಕ್ ಆ್ಯಪ್ ನ ಪ್ರಯೋಜನಗಳೇನು.. ಯಾವುದಾದರೂ ಆಸ್ತಿಯ ನಿಖರವಾದ ಸರ್ವೇ ನಂಬರ್​ಅನ್ನು ಕುಳಿತಲ್ಲೇ ಹುಡುಕಬಹುದು. ಆಸ್ತಿಯ ಭೂಭಾಗದ ವಿವರ ನೀಡುತ್ತದೆ. ಕೆರೆಕುಂಟೆ, ಸುತ್ತಲಿನ ಪ್ರದೇಶ, ಅಸುಪಾಸಿನ ಆಸ್ತಿಯ ವಿವರ ನೀಡುತ್ತದೆ. ಭೂಮಿ ಒತ್ತುವರಿಯಾಗಿದ್ದರೆ ಸುಲಭದಲ್ಲಿ ಪತ್ತೆ ಮಾಡಬಹುದು. ಭೂಮಿಯ ಸರ್ವೇ ನಂಬರ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬಹುದು.ಭೂ ಮಾಲೀಕರು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಈ ಆ್ಯಪ್ ಉಪಯುಕ್ತವಾಗಿದೆ.

ಈ ಮೊದಲು ಗ್ರಾಮ ಠಾಣಾ ಆಸ್ತಿಗೆ ಇ-ಖಾತಾ ಪಡೆಯಲು ಗ್ರಾಮ ಪಂಚಾಯತ್​ಗೆ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿ ಭೂಮಾಪನ ಇಲಾಖೆಗೆ ವರ್ಗಾವಣೆ ಮಾಡುತ್ತಿದ್ದರು. ತಹಶೀಲ್ದಾರ್ ಅವರಿಂದ ಗ್ರಾಮ ಠಾಣಾ ಒಳಗೆ ಬರಲಿದೆ ಎಂದು ಪ್ರಮಾಣಪತ್ರ ತರುವಂತೆ ಸೂಚಿಸುತ್ತಿದ್ದರು. ಸರ್ವೇಯರ್ ಬಂದು ನಕ್ಷೆ ತಯಾರಿಸಿ ಮೋಜಣಿಗೆ ಅಪ್ಲೋಡ್ ಮಾಡಿದ ಮೇಲೆ ತಂತ್ರಾಂಶದಲ್ಲಿ ಸ್ವೀಕರಿಸಿ ಗ್ರಾಮ ಪಂಚಾಯತ್​ ಅಧಿಕಾರಿಗಳು ಇ-ಖಾತಾ ಕೊಡುತ್ತಿದ್ದರು. ಆದರೆ ದಿಶಾಂಕ್ ಆ್ಯಪ್ ಬಳಕೆಯಿಂದ ಸರ್ವೇಯರ್ ಮತ್ತು ತಹಶೀಲ್ದಾರ್ ಪ್ರಮಾಣಪತ್ರ ಪಡೆಯುವ ಅಗತ್ಯ ಇರುವುದಿಲ್ಲ. ರಾಜ್ಯದ 30 ಜಿಲ್ಲೆಗಳ ಸುಮಾರು 70 ಲಕ್ಷ ಸರ್ವೇ ನಂಬರ್​ಗಳಿಗೆ ಸಂಬಂಧಿಸಿದ ವಿವರಗಳು ದಿಶಾಂಕ್ ಆ್ಯಪ್ ನಲ್ಲಿವೆ. ಹೊಸ ಆಸ್ತಿ ಖರೀದಿ, ಮಾರಾಟದ ವೇಳೆ ಈ ಆ್ಯಪ್ ತುಂಬಾ ಉಪಯುಕ್ತ ಮಾಹಿತಿ ನೀಡಲಿದೆ.

ಗ್ರಾಮದ ವಿಲೇಜ್ ಮ್ಯಾಪ್ ಇದರಲ್ಲಿ ಅಳವಡಿಕೆಯಾಗಿರುತ್ತದೆ. ನೀವು ನಿಂತಿರುವ ಜಾಗದ ಸಮಗ್ರ ಮಾಹಿತಿ ಅದರಲ್ಲಿ ಲಭ್ಯವಿರುತ್ತದೆ. ಸರ್ವೇ ನಂಬರ್ ಸಹಿತ ನಿಮಗೆ ಮಾಹಿತಿ ಸಿಗುತ್ತದೆ. ಆ ಸರ್ವೇ ನಂಬರ್ ಮಾಲೀಕ ಯಾರು ಅನ್ನೋ ಮಾಹಿತಿ ಕೂಡಾ ನಿಮಗೆ ಸಿಗುತ್ತದೆ. ಹಾಗಾಗಿ, ಭೂ ಖರೀದಿದಾರರಿಗೆ ಮೋಸ ಮಾಡಲು ಸಾಧ್ಯವಿಲ್ಲ.

ನೀವು ಒಂದು ಸೈಟ್ ಖರೀದಿಗೆ ಹೋಗುವಾಗ ಆ ಸೈಟಿನ ಜಾಗದಲ್ಲಿ ನಿಂತು ಈ ದಿಶಾಂಕ್ ಆ್ಯಪ್ ಆನ್ ಮಾಡಿ. ಅಲ್ಲೇ ನಿಮಗೆ ಆ ಜಾಗದ ಸಮಸ್ತ ಮಾಹಿತಿ ಸಿಗುತ್ತದೆ. ಸರ್ಕಾರಿ ಖರಾಬು ಇತ್ತಾ ಎಂಬುದು ಗೊತ್ತಾಗುತ್ತದೆ. ಒತ್ತುವರಿಯಾಗಿದೆಯಾ, ರಾಜಾಕಾಲುವೆ ಇದೆಯೇ, ರಸ್ತೆ ಇದೆಯೇ? ಅದು ಮೀಸಲಿಟ್ಟ ಜಾಗವೇ ಎಂಬ ಎಲ್ಲಾ ಮಾಹಿತಿ ನಿಮಗೆ ಸಿಗುತ್ತದೆ.

ಇದೇ ಅಧಿಕೃತವಲ್ಲ, ಮಾಹಿತಿ ಮಾತ್ರ ನೀಡುತ್ತೆ.. ದಿಶಾಂಕ್ ಆ್ಯಪ್ ನೀಡುವ ಮಾಹಿತಿ ಕಾನೂನು ಬದ್ಧ ದಾಖಲೆ ಅಲ್ಲ. ಅದು ಕೇವಲ ಮಾಹಿತಿ ನೀಡುವ ಆ್ಯಪ್ ಅಷ್ಟೇ. ಕಾನೂನುಬದ್ಧ ದಾಖಲೆ ಪಡೆಯಲು ಅಧಿಕೃತ ಕಚೇರಿಗೆ ಹೋಗಬೇಕು. ದಿಶಾಂಕ್ ಆ್ಯಪ್​ನಿಂದ 1960 ರ ಭೂ ನಕಾಶೆ ಸಿಗಲಿದೆ. ಯಾವುದೇ ಆಸ್ತಿಯ ಮೂಲ ವಿವರಗಳನ್ನು ತಿಳಿಯಲು ಇದು ಸಹಕಾರಿಯಾಗಲಿದೆ ಎಂದು ಭೂದಾಖಲೆ ಮತ್ತು ಸರ್ವೇ ಇಲಾಖೆ ಆಯುಕ್ತ ಮನೀಶ್ ಮೌದ್ಗಿಲ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.