ETV Bharat / state

ಸಾರ್ವಜನಿಕರ ಕುಂದು ಕೊರತೆ ಪರಿಹಾರ ಸಂಬಂಧ ಹೊಸ ಟ್ವಿಟರ್​ ಖಾತೆ ತೆರೆದ ಸಿಎಂ

author img

By

Published : Jul 10, 2023, 10:49 PM IST

ಮುಖ್ಯಮಂತ್ರಿಗಳ ಕಚೇರಿಯಿಂದ ಹೊಸದಾಗಿ ಟ್ವಿಟರ್​ ಖಾತೆಯನ್ನು ತೆರೆಯಲಾಗಿದ್ದು, ಇದರಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಟ್ಯಾಗ್ ಮಾಡಬಹುದಾಗಿದೆ.

ವಿಧಾನಸೌಧ
ವಿಧಾನಸೌಧ

ಬೆಂಗಳೂರು: ಸಾರ್ವಜನಿಕರ ಕುಂದು ಕೊರತೆಗಳನ್ನು ನೇರವಾಗಿ ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಗಮನಕ್ಕೆ ತರಲು ಮಾಧ್ಯಮ ಮತ್ತು ಸಾರ್ವಜನಿಕರಿಗೆ ನೆರವಾಗುವ ಉದ್ದೇಶದಿಂದ ಹೊಸ ಟ್ವಿಟರ್ ಖಾತೆಯನ್ನು ತೆರೆಯಲಾಗಿದೆ.

https://twitter.com/osd_cmkarnataka ಹೆಸರಿನ ಟ್ವಿಟರ್ ಖಾತೆಗೆ ಸಾರ್ವಜನಿಕರು ಮತ್ತು ಮಾಧ್ಯಮದವರು ತಮ್ಮ ಸಾರ್ವಜನಿಕ ಕುಂದು ಕೊರತೆಗಳ ಕುರಿತಾದ ಸಮಸ್ಯೆಗಳನ್ನು ಟ್ಯಾಗ್ ಮಾಡಬಹುದು. ಎಲ್ಲವನ್ನೂ ಕಚೇರಿಯ ಸಿಬ್ಬಂದಿ ಮತ್ತು ಅಧಿಕಾರಿಗಳು ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆಗಳ ಸಿಬ್ಬಂದಿಯ ಗಮನಕ್ಕೆ ತರುವ ಮೂಲಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗುತ್ತಿದೆ.
ಸಾರ್ವಜನಿಕ ಕುಂದುಕೊರತೆಗಳನ್ನು ಮಾತ್ರ ಮುಖ್ಯಮಂತ್ರಿಗಳ ಕಚೇರಿಯ ಈ ಖಾತೆಗೆ ಟ್ಯಾಗ್ ಮಾಡಬಹುದಾಗಿದ್ದು, ವೈಯುಕ್ತಿಕ ಸಮಸ್ಯೆಗಳನ್ನು ಈ ಖಾತೆಗೆ ಟ್ಯಾಗ್ ಮಾಡದೇ ಅವುಗಳನ್ನು ನೇರವಾಗಿ ಸಂಬಂಧಪಟ್ಟವರ ಗಮನಕ್ಕೆ ತರಬಹುದಾಗಿದೆ.

ಇಡೀ ದೇಶಕ್ಕೆ ಸಂದೇಶ ರವಾನೆಯಾಗುತ್ತಿದೆ: ಇನ್ನೊಂದೆಡೆ ಇಂದು ಅನ್ನಭಾಗ್ಯ ಭರವಸೆ ಜಾರಿ ಮೂಲಕ ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಸಂದೇಶ ರವಾನೆಯಾಗುತ್ತಿದೆ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಅನ್ನಭಾಗ್ಯ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದ ದಿನವೇ ಬಸವ ಜಯಂತಿಯಂದು ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದನ್ನು ಈ ದಿನ ಸ್ಮರಿಸುತ್ತೇನೆ ಎಂದು ಹೇಳಿದರು.

ನಮ್ಮ ಸರ್ಕಾರ ಆ ಯೋಜನೆಯಲ್ಲಿ ಅಕ್ಕಿಯ ಪ್ರಮಾಣವನ್ನು 7 ಕೆಜಿಗೆ ಹೆಚ್ಚಳ ಮಾಡಿತ್ತು. ನಂತರದ ಸರ್ಕಾರ ಅದನ್ನು 5 ಕೆಜಿಗೆ ಇಳಿಸಿತ್ತು. ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ನೀಡುವುದಾಗಿ, ಐದು ಗ್ಯಾರಂಟಿ ಯೋಜನೆಗಳಲ್ಲಿ ಸೇರಿಸಿದ್ದೆವು. ನಮ್ಮ ಈ ಯೋಜನೆಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಅದರ ಜೊತೆಗೆ ರಾಜಕೀಯ ಕೂಡ ನಡೆಯುತ್ತಿದೆ. ಈ ಯೋಜನೆಗೆ ಅಗತ್ಯವಿರುವ ಅಕ್ಕಿಯನ್ನು ನೀಡಿ ಕೇಂದ್ರ ಸರ್ಕಾರ ತನ್ನ ಹೃದಯ ಶ್ರೀಮಂತಿಕೆ ಮೆರೆಯಬಹುದಿತ್ತು. ಆದರೆ ಅವರು ಅದನ್ನು ಮಾಡಲಿಲ್ಲ ಎಂದು ಅವರು ಟೀಕಿಸಿದರು.

ಸಂವಿಧಾನದ ಹಕ್ಕಾಗಿ ತಂದಿದ್ದನ್ನು ನೆನಪಿಸಿಕೊಳ್ಳಬೇಕು: ಈ ಸಂದರ್ಭದಲ್ಲಿ ಬಿಜೆಪಿ ಸ್ನೇಹಿತರಿಗೆ ಒಂದು ಮಾತು ಹೇಳ ಬಯಸುತ್ತೇನೆ. ಆಹಾರ ಭದ್ರತೆ ಕಾಯ್ದೆ ತಂದವರು ಯಾರು?. ಏಕೆ ತಂದರು ಎಂಬುದನ್ನು ಅರಿಯಬೇಕು. ದೇಶವನ್ನು ಹಸಿವುಮುಕ್ತ ಮಾಡುವ ಉದ್ದೇಶದಿಂದ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿ ಬಡ ಜನರಿಗೆ ಆಹಾರ ಧಾನ್ಯ ನೀಡುವುದನ್ನು ಸಂವಿಧಾನದ ಹಕ್ಕಾಗಿ ತಂದಿದ್ದನ್ನು ನೆನಪಿಸಿಕೊಳ್ಳಬೇಕು. ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷೆಯಾಗಿ, ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿ ಆಗಿದ್ದಾಗ ಇದನ್ನು ಜಾರಿಗೆ ತರಲಾಗಿತ್ತು. ಆದರೆ ಬಿಜೆಪಿಯ ಕೇಂದ್ರ ಸರ್ಕಾರ ಬಡವರಿಗೆ ಅಕ್ಕಿ ಯೋಜನೆ ಜಾರಿ ಮಾಡಿದೆ ಎಂದು ಕೆಲವರು ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಗ್ಯಾರಂಟಿಗಳಿಂದ ಪ್ರತಿ ಕುಟುಂಬಕ್ಕೆ 4 ರಿಂದ 5 ಸಾವಿರ ರೂಪಾಯಿ ನೆರವಾಗಲಿದೆ: ಡಿ.ಕೆ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.