ETV Bharat / state

ವಿಮಾನ ಪ್ರಯಾಣದಷ್ಟೇ ದುಬಾರಿ ಖಾಸಗಿ ಬಸ್​ಗಳ ಟಿಕೆಟ್ ದರ!

author img

By

Published : Oct 23, 2022, 8:27 AM IST

private-bus-ticket-price-hike-passenger-facing-problem
ಖಾಸಗಿ ಬಸ್ ಮಾಲೀಕರಿಂದ ಹಗಲು ದರೋಡೆ

ವಿಮಾನ ಪ್ರಯಾಣದ ಟಿಕೆಟ್ ದರಕ್ಕೆ ಸಮಾನವಾಗಿ ಏಸಿ ಸ್ಲೀಪರ್​ ಬಸ್​ಗಳು ಹಣ ವಸೂಲಿ ಮಾಡುತ್ತಿವೆ. ಸಾರಿಗೆ ಸಚಿವರು ಅಂಥ ಬಸ್‌ಗಳ ಪರ್ಮಿಟ್ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದರೂ, ಖಾಸಗಿ ಬಸ್ ಮಾಲೀಕರು ಗಮನ ಹರಿಸಿಲ್ಲ.

ಬೆಂಗಳೂರು: ದೀಪಾವಳಿ ಹಬ್ಬಕ್ಕೆಂದು ತಮ್ಮೂರುಗಳಿಗೆ ಪ್ರಯಾಣಿಸುತ್ತಿರುವ ಜನರಿಂದ ಖಾಸಗಿ ಬಸ್​ಗಳು ಸುಲಿಗೆಗಿಳಿದಿವೆ. ಸಾರಿಗೆ ಇಲಾಖೆಯ ಎಚ್ಚರಿಕೆಗೂ ಕ್ಯಾರೆನ್ನದ ಬಸ್ ಮಾಲೀಕರು ಮೂರು ಪಟ್ಟು ಹೆಚ್ಚು ಟಿಕೆಟ್ ದರ ವಸೂಲಿ ಮಾಡುತ್ತಿದ್ದಾರೆ.

ಅ.22 ರಂದು 4ನೇ ಶನಿವಾರ ಸೇರಿ ದೀಪಾವಳಿಗೆ ನಿರಂತರ 5 ದಿನ ರಜೆಯಿದೆ. ಶುಕ್ರವಾರ ಸಂಜೆಯಿಂದಲೇ ಬೆಂಗಳೂರಿನಿಂದ ಸಾಕಷ್ಟು ಜನರು ತಮ್ಮೂರುಗಳಿಗೆ ತೆರಳುತ್ತಿದ್ದಾರೆ. ಇದನ್ನೇ ಬಂಡವಾಳವಾಗಿಸಿದ ಖಾಸಗಿ ಬಸ್​ಗಳು ಪ್ರಯಾಣಿಕರಿಂದ ಸಾಮಾನ್ಯ ಟಿಕೆಟ್ ದರಕ್ಕಿಂತ ಎರಡರಿಂದ ಮೂರು ಪಟ್ಟು ಹಣ ವಸೂಲಿ ಮಾಡುತ್ತಿವೆ.

ದುಬಾರಿ ಹಣ ವಸೂಲಿ ಸಂಬಂಧ ಸಾಕಷ್ಟು ದೂರುಗಳು ಸಾರಿಗೆ ಇಲಾಖೆಗೆ ಬಂದಿದ್ದು ಕಳೆದೆರಡು ದಿನಗಳಿಂದ ಅಧಿಕಾರಿಗಳು ಅಂಥ ಖಾಸಗಿ ಬಸ್​ಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. 8 ತಂಡಗಳ ಮೂಲಕ ದೀಪಾವಳಿಗೂ ಹಿಂದಿನ ಬಸ್ ದರಕ್ಕೂ ಈಗಿನ ದರಕ್ಕೂ ಎಷ್ಟು ವ್ಯತ್ಯಾಸವಿದೆ ಎಂದು ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.

ಸಾರಿಗೆ ಸಚಿವ ಶ್ರೀರಾಮುಲು ದುಪ್ಪಟ್ಟು ಹಣ ವಸೂಲಿ ಮಾಡಿದರೆ ಪರ್ಮಿಟ್ ರದ್ದು ಮಾಡಲಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದರೂ ಖಾಸಗಿ ಬಸ್ ಮಾಲೀಕರು ತಮ್ಮ ನಡೆ ಬದಲಿಸಿಲ್ಲ.

ಬೆಂಗಳೂರಿನಿಂದ ಹುಬ್ಬಳ್ಳಿಗೆ ಕೆಲವು ಬಸ್‍ಗಳಲ್ಲಿ ಒಂದು ಸೀಟಿಗೆ 3,000-4,000 ರೂ. ಟಿಕೆಟ್ ದರವಿದೆ. ವಿಮಾನ ದರ ಟಿಕೆಟ್ ದರ 4,800 ರೂ. ಇದೆ. ಬೆಂಗಳೂರಿನಿಂದ ಮಂಗಳೂರಿಗೆ 3,600 ರೂ. ಬಸ್ ಟಿಕೆಟ್ ದರ ವಸೂಲಿ ಮಾಡಲಾಗುತ್ತಿದೆ. ವಿಮಾನ ದರ 3,700 ರೂ. ಇದೆ.

ಬೆಂಗಳೂರು-ಬೆಳಗಾವಿಗೆ ಖಾಸಗಿ ಬಸ್ ಟಿಕೆಟ್ ದರ ಎಸಿ ಸ್ಲೀಪರ್ ಇಂಟರ್ಸಿಟಿ ಸ್ಮಾಟ್ ಬಸ್ 2,700- 4,000 ರೂ. ವರೆಗೆ ಹಾಗೂ ನಾನ್ ಎಸಿ ಸ್ಲೀಪರ್ 1,600 ರೂ. ರಿಂದ 2,600 ರೂ. ವರೆಗೆ ವಸೂಲಿ ಮಾಡುತ್ತಿದ್ದಾರೆ. ಬೆಂಗಳೂರು-ಕಾರವಾರ ನಡುವೆ ಸ್ಲೀಪರ್‌ ಕೋಚ್‌ ಬಸ್‌ಗೆ 4,000 ರೂ. ದರ ನಿಗದಿ ಮಾಡಿದ್ದಾರೆ. ಹೊರ ರಾಜ್ಯಗಳಾದ ಬೆಂಗಳೂರು- ಗೋವಾ ನಡುವೆ 4,200 ರೂ. ಮತ್ತು ಬೆಂಗಳೂರು-ಹೈದರಾಬಾದ್‌ ನಡುವೆ 4,000 ರೂ. ಟಿಕೆಟ್ ದರ ವಸೂಲಿಯಾಗುತ್ತಿದೆ. ಬೆಂಗಳೂರಿನಿಂದ ಹಾವೇರಿಗೆ ಖಾಸಗಿ ಬಸ್ ಪ್ರಯಾಣ ದರ ರೂ. 1,500 ರೂ. ನಿಗದಿಪಡಿಸಿದ್ದಾರೆ.

ಇದನ್ನೂ ಓದಿ: ದೀಪಾವಳಿ ಹಬ್ಬದ ಪ್ರಯುಕ್ತ 1500ಕ್ಕೂ ಹೆಚ್ಚುವರಿ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲಿದೆ ಕೆಎಸ್​ಆರ್​ಟಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.