ETV Bharat / state

ಜ.14ರ ಬಳಿಕ ನಿಗಮ ಮಂಡಳಿ ನೇಮಕ ಮೊದಲ ಪಟ್ಟಿ ಬಿಡುಗಡೆ: ಡಿಸಿಎಂ ಡಿ ಕೆ ಶಿವಕುಮಾರ್

author img

By ETV Bharat Karnataka Team

Published : Jan 10, 2024, 7:55 PM IST

Updated : Jan 10, 2024, 8:34 PM IST

ನಿಗಮ‌ ಮಂಡಳಿಗಳ ನೇಮಕಾತಿಯ ಮೊದಲ ಪಟ್ಟಿ ಜ.14ರ ಬಳಿಕ ಪ್ರಕಟವಾಗಲಿದೆ. ಮಂಡಳಿಗಳ ಅಧ್ಯಕ್ಷರು, ಸದಸ್ಯರುಗಳಿಗೆ ಎರಡು ವರ್ಷಗಳ ಕಾಲಾವಧಿ ನೀಡಲಾಗುತ್ತದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

Etv Bharatdcm-dk-sivakumar-reaction-on-corporation-board-appointed
ಜ.14ರ ಬಳಿಕ ನಿಗಮ ಮಂಡಳಿ ನೇಮಕ ಮೊದಲ ಪಟ್ಟಿ ಬಿಡುಗಡೆ: ಡಿಸಿಎಂ ಡಿ ಕೆ ಶಿವಕುಮಾರ್

ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ

ಬೆಂಗಳೂರು: "ಜ.14ರ ಬಳಿಕ ನಿಗಮ‌ ಮಂಡಳಿಗಳ ನೇಮಕಾತಿಯ ಮೊದಲ ಪಟ್ಟಿ ಪ್ರಕಟಿಸಲಾಗುವುದು" ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು. ಇಂದಿರಾಭವನದಲ್ಲಿ ನಡೆದ ಪಕ್ಷದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು," ಜ.14ರ ಬಳಿಕ ಪಟ್ಟಿ ಪ್ರಕಟವಾಗಲಿದೆ. ನಿಗಮ ಮಂಡಳಿಗಳ ಅಧ್ಯಕ್ಷರು, ಸದಸ್ಯರುಗಳಿಗೆ ಎರಡು ವರ್ಷಗಳ ಕಾಲಾವಧಿ ನೀಡಲಾಗುತ್ತದೆ. ಹೆಚ್ಚಿನ ಕಾರ್ಯಕರ್ತರಿಗೆ ಅವಕಾಶ ನೀಡಲು ಈ ನಿರ್ಧಾರ ಮಾಡಿದ್ದೇವೆ" ಎಂದು ತಿಳಿಸಿದರು.

"ಲೋಕಸಭೆ ಚುನಾವಣೆಯಲ್ಲಿ ಇಡೀ ದೇಶ, ನಮ್ಮ ಪಕ್ಷ ಕರ್ನಾಟಕದ ಮೇಲೆ ಬಹಳ ವಿಶ್ವಾಸ ಇಟ್ಟುಕೊಂಡಿದ್ದು, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಜನರಿಗೆ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ನಮ್ಮ ಕಾರ್ಯಕರ್ತರು ಮತ್ತೆ ಜನರ ಬಳಿಗೆ ಹೋಗಲು ಆತ್ಮವಿಶ್ವಾಸ ತುಂಬಿದ್ದೇವೆ. ಈ ಹಿಂದೆ ದೇಶದಲ್ಲಿ ಯಾವ ಸರ್ಕಾರವೂ ಕೊಟ್ಟ ಮಾತನ್ನು ಏಳೇ ತಿಂಗಳಲ್ಲಿ ಪೂರ್ಣಗೊಳಿಸಿರಲಿಲ್ಲ. ನಾಲ್ಕು ಗ್ಯಾರಂಟಿ ಜನರನ್ನು ತಲುಪಿದ್ದು, ಐದನೇ ಗ್ಯಾರಂಟಿ ಯುವನಿಧಿಗೆ ಇದೇ 12 ರಂದು ವಿವೇಕಾನಂದರ ಜಯಂತಿ ದಿನ ಶಿವಮೊಗ್ಗದಲ್ಲಿ ಚಾಲನೆ ನೀಡಲಿದ್ದೇವೆ" ಎಂದರು.

ಜ.21 ರಾಜ್ಯ ಕಾರ್ಯಕರ್ತರ ಸಮಾವೇಶ: "ಇದೇ 21ರಂದು ರಾಜ್ಯದ ಕಾರ್ಯಕರ್ತರ ಸಮಾವೇಶ ನಡೆಸುವಂತೆ ಎಐಸಿಸಿ ಅಧ್ಯಕ್ಷರು ಸೂಚಿಸಿದ್ದಾರೆ. ಶಾಸಕರು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಮುಖಂಡರು, ಸಹಕಾರ ಸಂಸ್ಥೆಗಳ ಪ್ರತಿನಿಧಿಗಳು, ಪದಾಧಿಕಾರಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದವರು, ಸೋತವರು, ಬೂತ್ ಮಟ್ಟದ ಪ್ರತಿನಿಧಿಗಳನ್ನು ಸೇರಿಸಿ ಈ ಸಮಾವೇಶ ಮಾಡಲು ತಿಳಿಸಿದ್ದು, ಕಾರ್ಯಕ್ರಮ ಸ್ಥಳದ ಬಗ್ಗೆ ಎರಡು ದಿನಗಳಲ್ಲಿ ತಿಳಿಸುತ್ತೇವೆ" ಎಂದು ಹೇಳಿದರು.

"ಇಂದಿನ ಸಭೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ನಮ್ಮ ಪಕ್ಷ ಶಾಸಕರು ಹಾಗೂ ಸಚಿವರಿಗೆ ಕೆಲವು ಸೂಚನೆ ನೀಡಿದ್ದೇವೆ. ಈ ತಿಂಗಳ ಒಳಗಾಗಿ ಆಶ್ರಯ ಸಮಿತಿ, ಆರಾಧನಾ ಸಮಿತಿ, ಇಂಧನ ಇಲಾಖೆ ಉಪಸಮಿತಿ, ನೀರಾವರಿ ಇಲಾಖೆ ಕೆರೆಗಳ ಸಮಿತಿ, ಕೆಡಿಪಿ ಸೇರಿದಂತೆ ಎಲ್ಲ ಸಮಿತಿಗಳಿಗೆ ನಾಮನಿರ್ದೇಶನ ಮಾಡಬೇಕು. ಜಿಲ್ಲಾಧ್ಯಕ್ಷರು ಹಾಗೂ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ತಿಂಗಳ ಒಳಗಾಗಿ ಜಿಲ್ಲಾ ಮಂತ್ರಿಗಳು ನಾಮನಿರ್ದೇಶನ ಮಾಡಿ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು" ಎಂದರು.

"ಲೋಕಸಭೆ ಚುನಾವಣೆ ದೃಷ್ಟಿಯಿಂದ ಪ್ರತಿ ಜಿಲ್ಲೆಗೂ ಓರ್ವ ಸಚಿವರಿಗೆ ಜವಾಬ್ದಾರಿ ನೀಡಿದ್ದೇವೆ. ಅವರ ಕೈಕೆಳಗೆ ಉಪಾಧ್ಯಕ್ಷರು, ಪ್ರಧಾನಕಾರ್ಯದರ್ಶಿಗಳು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ನಿಯೋಜಿಸಿದ್ದೇವೆ. ಬ್ಲಾಕ್ ಮಟ್ಟದಲ್ಲಿ ಜವಾಬ್ದಾರಿ ಹಂಚಿಕೆ ಮಾಡಿ ಮತದಾರರ ಪಟ್ಟಿ ಪರಿಷ್ಕರಣೆ, ಬಿಎಲ್ಎಗಳ ನೇಮಕ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪಕ್ಷದ ಸಂಘಟನೆಗಳು, ಬ್ಲಾಕ್ ಮಟ್ಟದಲ್ಲಿ ಬದಲಾವಣೆ ಮಾಡಿ ಆದಷ್ಟು ಬೇಗ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದೇವೆ. ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ನನಗೆ ಬಂದಿರುವ ವರದಿಗಳು ತೃಪ್ತಿಕರವಾಗಿಲ್ಲ. ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮುಖ್ಯಮಂತ್ರಿಗಳು, ನಾನು ಹಾಗೂ ಎಐಸಿಸಿ ಸಮೀಕ್ಷೆ ನಡೆಸುತ್ತಿದ್ದೇವೆ" ಎಂದು ಹೇಳಿದರು.

ಇದನ್ನೂ ಓದಿ: ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿಗಳ ರಚನೆ: ಸಿಎಂ ಸಿದ್ದರಾಮಯ್ಯ

Last Updated : Jan 10, 2024, 8:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.